ಗುರುವಾರ , ಮಾರ್ಚ್ 30, 2023
24 °C

ವಿದ್ಯಾವಂತ ಅಜ್ಞಾನಿಗಳಿಂದ ಅನಾಹುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ದೇಶಕ್ಕೆ ಬಹುದೊಡ್ಡ ಅಪಾಯಕಾರಿಗಳು ಯಾರು? ಈ ಪ್ರಶ್ನೆಗೆ ಉತ್ತರ ಅಕ್ಷರದ ಅರಿವುಳ್ಳವರು ಎನ್ನುವುದು. ಇವತ್ತು ಅಕ್ಷರಜ್ಞಾನಿಗಳೇ ಹೆಚ್ಚು ವಂಚಿಸುತ್ತಿರುವುದು ಹಗಲಿನಷ್ಟೇ ಸತ್ಯವಾಗಿದೆ. ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಆಡಳಿತಾತ್ಮಕ, ಧಾರ್ಮಿಕ ಹೀಗೆ ವಿವಿಧ ಕ್ಷೇತ್ರದ ಹಗರಣಗಳಿಗೆ ಕಾರಣರಾದ ಜನರು ಅನಕ್ಷರಸ್ಥಲ್ಲ; ಅಕ್ಷರಸ್ಥರು. ಇವರು ತಮ್ಮ ವಿದ್ಯೆಯ ಬಲದಿಂದ ಹತ್ತು ಹಲವು ರೀತಿಯಲ್ಲಿ ವಂಚನೆಯ ಜಾಲ ಬೀಸುತ್ತಿರುವರು. ‘ಬಾಯಲ್ಲಿ ಬೆಣ್ಣೆ, ಬಗಲಲ್ಲಿ ದೊಣ್ಣೆ’ ಎನ್ನುವ ನೀತಿ ಇವರದು. ಈ ಜಾಣರು ಜನರನ್ನು ಅಜ್ಞಾನದಲ್ಲಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳಲು ಏನೆಲ್ಲ ತಂತ್ರ, ಪ್ರತಿತಂತ್ರ ಹೂಡುವರು. ಇವರೊಂದಿಗೆ ಪೂಜಾರಿ, ಪುರೋಹಿತರ, ಧರ್ಮಾಧಿಕಾರಿಗಳ ನಂಟಿನ ಗಂಟಾದರೆ ಯಾರು ತಾನೆ ಈ ನಾಡನ್ನು ಉದ್ಧಾರ ಮಾಡಲು ಸಾಧ್ಯ?ಅಕ್ಷರ ಅರಿವನ್ನು ಮೂಡಿಸಿ, ವಿವೇಕ ಬೆಳಸಿ, ಆಚಾರ ಸಂಪನ್ನರಾಗಿಸಬೇಕು. ಆದರೆ ಇಂದು ಹಾಗಾಗುತ್ತಿಲ್ಲ. ಅಕ್ಷರ ಬಲ್ಲವರು ಬುದ್ಧಿಯ ಬಲ ಹೆಚ್ಚಿಸಿಕೊಂಡರೇ ಹೊರತು ಬುದ್ಧಿ, ಹೃದಯ ಮತ್ತು ಭಾವನೆಗಳ ಬೆಸುಗೆ ಮಾಡಿಕೊಳ್ಳಲಿಲ್ಲ. ವ್ಯಕ್ತಿತ್ವ ವಿಕಾಸವಾಗುವುದು ಕೇವಲ ಬುದ್ಧಿಯಿಂದ ಅಲ್ಲ. ಬುದ್ಧಿಯ ಜೊತೆಗೆ ಹೃದಯ ಮತ್ತು ಭಾವನೆಗಳ ಸಮ್ಮಿಲನವಾದರೆ ಅವಿವೇಕದ ಕಾರ್ಯಗಳು ಕಡಿಮೆಯಾಗುವವು. ನಮ್ಮಲ್ಲಿ ವಿವೇಕದ ಬದಲು ಕೆಲವರು ಕೇವಲ ಬುದ್ಧಿಗೆ, ಇನ್ನು ಕೆಲವರು ಕೇವಲ ಭಾವನೆಗೆ ಒತ್ತು ಕೊಟ್ಟರು. ಇವರಿಬ್ಬರೂ ತುಂಬಾ ಅಪಾಯಕಾರಿಗಳು. ಪೂಜಾರಿ, ಪುರೋಹಿತರಂತೂ ಎಂದಿಗೂ ವಿವೇಕಕ್ಕೆ ಬೆಲೆ ಕೊಟ್ಟವರಲ್ಲ. ಬದಲಾಗಿ ಜನರ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡು ಅವರನ್ನು ಅಜ್ಞಾನದ ಕೂಪದಲ್ಲಿಟ್ಟು ಮೂಢನಂಬಿಕೆಗಳ ಕೆಸರಿನಲ್ಲಿ ಹೂತು ಹಾಕುವರು. ಈ ಗುಂಪಿಗೆ ಸೇರಲು ಕೆಲವು ಮಠಾಧೀಶರೂ ಸ್ಪರ್ಧೆ ನಡೆಸಿದಂತೆ ಕಾಣುವುದು.ನಮ್ಮ ಅಭಿಪ್ರಾಯಕ್ಕೆ ತಾಜಾ ಉದಾಹರಣೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ‘ಮಡೆಸ್ನಾನ’. ಏನಿದು ಮಡೆಸ್ನಾನ? ವಿಷಯ ತಿಳಿದರೆ ಅಸಹ್ಯವೆನ್ನಿಸುವುದು. ಭಕ್ತರು (ಬ್ರಾಹ್ಮಣರು) ಉಂಡು ಬಿಸಾಕಿದ ಬಾಳೆ ಎಲೆಯಮೇಲೆ ಉರುಳು ಸೇವೆ ಸಲ್ಲಿಸುವುದು. ಇದರಿಂದ ಆರೋಗ್ಯ ವೃದ್ಧಿಸಿ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ ಎನ್ನುವ ಕುರುಡುನಂಬಿಕೆಯನ್ನು ಹುಲುಸಾಗಿ ಬಿತ್ತಿದ್ದಾರೆ ಪಟ್ಟಭದ್ರರು ಮತ್ತು ಪೂಜಾರಿ ಪುರೋಹಿತರು. ‘ಜನ ಮರುಳೋ ಜಾತ್ರೆ ಮರುಳೋ’ ಎನ್ನುವಂತೆ ಈ ವರ್ಷ ಉರುಳು ಸೇವೆ ಮಾಡಿದವರಲ್ಲಿ ನಿವೃತ್ತ ನ್ಯಾಯಾಧೀಶರು, ಎಂಜಿನಿಯರ್‌ಗಳು, ವೈದ್ಯರು, ಪೊಲೀಸರೂ ಸೇರಿರುವುದು ವಿಶೇಷ. ಇದನ್ನು ಗಮನಿಸಿದರೆ ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಆಗಿದೆ. ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕಾದ ವೈದ್ಯರೇ ಮೌಢ್ಯದ ಮಂಕು ತುಂಬಿಕೊಂಡರೆ, ನ್ಯಾಯ ಹೇಳುವ ನ್ಯಾಯಾಧೀಶರೇ ಕಂದಾಚಾರಿಗಳಾದರೆ, ವಿಜ್ಞಾನ ಓದಿದ ಎಂಜಿನಿಯರ್‌ಗಳೇ ಅಜ್ಞಾನಿಗಳಾದರೆ, ರಕ್ಷಣೆ ನೀಡಬೇಕಾದ ಪೊಲೀಸರೇ ಭಕ್ಷಕರಾದರೆ ಜನಸಾಮಾನ್ಯರ ಗತಿ ಏನು? ಅಕ್ಷರ ಬಲ್ಲ ಈ ಜನರ ತಲೆಯಲ್ಲಿ ಏನು ತುಂಬಿದೆ ಎಂದು ಹೇಳುವುದು?ಎಂಜಲು ಎಲೆಯ ಮೇಲೆ ಉರುಳುಸೇವೆ ಮಾಡುವುದು ಯಾವ ದೇವರಿಗೆ ಪ್ರಿಯವೋ? ನಿಜಕ್ಕೂ ಇದೊಂದು ಅನಾಗರಿಕತೆಯ ಲಕ್ಷಣ. ನಾಗರಿಕ ಸಮಾಜವೇ ತಲೆ ತಗ್ಗಿಸುವ ವಿಚಾರ. ಇದರಿಂದ ಯಾವ ರೋಗ ನಿರೋಧಕ ಶಕ್ತಿಯೂ ಬರುವುದಿಲ್ಲ. ಬದಲಾಗಿ ಏನಾದರೂ ರೋಗ ಇದ್ದರೆ ಅದು ಇನ್ನಷ್ಟು ಉಲ್ಬಣಗೊಂಡು ಚರ್ಮ ಮತ್ತಿತರ ರೋಗಗಳಿಗೆ ಆಹ್ವಾನವಿತ್ತಂತೆ ಆಗಬಹುದು. ಹೀಗೆ ಎಂಜಲೆಲೆಯ ಮೇಲೆ ಉರುಳುವುದರಿಂದ ರೋಗನಿರೋಧಕ ಶಕ್ತಿ ಬರುವಂತಿದ್ದರೆ ಮೆಡಿಕಲ್ ಕಾಲೇಜುಗಳು, ವೈದ್ಯರು, ಆಸ್ಪತ್ರೆಗಳು, ಔಷಧಿಯ ಅಂಗಡಿಗಳಾದರೂ ಏಕೆ ಬೇಕು? ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾತ್ರವಲ್ಲ, ಅನೇಕ ದೇವಸ್ಥಾನ, ಮಠಗಳಲ್ಲೂ ಇಂಥ ಮೌಢ್ಯದ ವಿವಿಧ ಆಚರಣೆಗಳಿಗೆ ಪುರಸ್ಕಾರ ನೀಡುತ್ತಿದ್ದಾರೆ. ವಾಸ್ತವವಾಗಿ ಇದೊಂದು ಸಮೂಹ ಸನ್ನಿಯಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯವರು ನಿಜಕ್ಕೂ ವಿವೇಕವುಳ್ಳವರಾಗಿದ್ದರೆ, ಜನಪರ ಕಾಳಜಿ ಇದ್ದರೆ ಇಂಥ ಅರ್ಥಹೀನ, ಗೊಡ್ಡು ಆಚರಣೆಗಳನ್ನು ಇನ್ನು ಮುಂದಾದರೂ ನಿಷೇಧಿಸುವ ಕಾರ್ಯ ಮಾಡಬೇಕು.ಧರ್ಮಶ್ರದ್ಧೆ ಎಂದರೆ ಮೌಢ್ಯಗಳ ವೈಭವೀಕರಣ ಅಲ್ಲ. ಸುಜ್ಞಾನ, ಸದಾಚಾರ, ಸತ್‌ಕ್ರಿಯೆಗಳನ್ನು ಬೆಳೆಸುವುದು. ಸಮಾನತೆಗೆ ಒತ್ತು ಕೊಡುವುದು. ಮನಸ್ಸಿನ ಕಲ್ಮಶಗಳನ್ನು ಕಳೆದು ಮನೋವಿಕಾಸ ಮಾಡುವುದು. ಇದನ್ನು ಮಾಡದೆ ಮಠ, ದೇವಸ್ಥಾನ, ಶಾಸ್ತ್ರ, ಹೊತ್ತಿಗೆಯ ಗುತ್ತಿಗೆ ಹಿಡಿದಿರುವವರು ತಮ್ಮ ತಲೆಯ ಕಸವನ್ನು ಸಮಾಜದಲ್ಲಿ ಚೆಲ್ಲುವ ಹೀನಕಾರ್ಯ ಮಾಡಬಾರದು. ಪಟ್ಟಭದ್ರರ ಮತ್ತು ಪುರೋಹಿತಶಾಹಿಯ ಹಿಕ್ಮತ್ತನ್ನು ಅರ್ಥ ಮಾಡಿಕೊಳ್ಳಲು ಇನ್ನೂ ಎಷ್ಟು ಕಾಲ ಕಾಯಬೇಕು? ಬಸವಣ್ಣನವರು 12ನೆಯ ಶತಮಾನದಲ್ಲೇ ಅಜ್ಞಾನ, ಮೂಢನಂಬಿಕೆ, ವೈದಿಕ ಪರಂಪರೆಯ ವಿರುದ್ಧ ದೊಡ್ಡ ಹೋರಾಟವನ್ನೇ ಮಾಡಿದರು. ಆದರೆ ಈ ವೈದಿಕ ಪರಂಪರೆಯ ಜಾಣ ಜನರು ಎಲ್ಲ ಹೋರಾಟಗಳನ್ನು ಬುಡಮೇಲು ಮಾಡುವಂತೆ ಆಗಾಗ ಹೊಸ ಹೊಸ ತಂತ್ರಗಳ ಮೂಲಕ ಸಮಾಜದ ಜನರನ್ನು ಅಜ್ಞಾನದಲ್ಲಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುವ ಕುತಂತ್ರವನ್ನು ವ್ಯವಸ್ಥಿತವಾಗಿಯೇ ಮಾಡಿಕೊಂಡು ಬರುತ್ತಿದ್ದಾರೆ. ಕಂಪ್ಯೂಟರ್ ಯುಗದಲ್ಲಿಯೂ ಗೊಡ್ಡು ನಂಬಿಕೆಗಳನ್ನು ಬೇರುಸಮೇತ ಕಿತ್ತುಹಾಕಲು ಸಾಧ್ಯವಾಗುತ್ತಿಲ್ಲ ಎಂದರೆ ಅವುಗಳ ಬೇರು ಎಷ್ಟು ಆಳವಾಗಿವೆ ಎಂದು ಯೋಚಿಸಬೇಕು.ದೇವರು, ಮಠ, ಸ್ವಾಮಿಗಳು, ಹೊತ್ತಿಗೆ, ಶಾಸ್ತ್ರ, ಜ್ಯೋತಿಷ, ಪೂಜಾರಿ-ಪುರೋಹಿತರ ಮಾತು ಅನೇಕರಿಗೆ ವೇದವಾಕ್ಯ. ಈ ಜನರು ಇದನ್ನೇ ಬಂಡವಾಳ ಮಾಡಿಕೊಳ್ಳುವ ಬದಲು ಸುಧಾರಣೆ ತರುವ ಕಾರ್ಯಕ್ಕೆ ಮುಂದೆ ಬಂದರೆ ಎಲ್ಲರೀತಿಯ ಅಜ್ಞಾನ, ಮೌಢ್ಯಗಳಿಗೆ ಸುಲಭವಾಗಿ ಬೆಂಕಿ ಇಟ್ಟು ಬೂದಿ ಮಾಡಬಹುದು. ಆದರೆ ಪಟ್ಟಭದ್ರರು ಇಂಥ ಪುಣ್ಯದ ಸತ್ಕಾರ್ಯ ಮಾಡದೆ ಅಜ್ಞಾನ, ಮೂಢನಂಬಿಕೆಗಳನ್ನೇ ಭೂತಗನ್ನಡಿಯಲ್ಲಿ ತೋರಿಸುತ್ತ ಬಂದಿದ್ದಾರೆ.  ಶತ-ಶತಮಾನಗಳಿಂದ ಅಂಧಾಚರಣೆ ಎನ್ನುವ ಅಜ್ಞಾನವನ್ನು ವೈದಿಕ  ಪರಂಪರೆಯವರು ತಮ್ಮ ಬಂಡವಾಳ ಮಾಡಿಕೊಂಡು ಅನೇಕ ಅನಿಷ್ಟ ಪದ್ಧತಿಗಳನ್ನು ಈಗಲೂ ಜಾರಿಯಲ್ಲಿ ತರುತ್ತಿದ್ದಾರೆ.ನಾಡಿನ ವಿಚಾರವಂತರು, ವಿವೇಕಿಗಳು ಬಾಯಿ ಮುಚ್ಚಿಕೊಳ್ಳದೆ ಪ್ರತಿಭಟನೆಯ ಮೂಲಕ ಅಜ್ಞಾನದ ಪರದೆಯನ್ನು ಕಿತ್ತೆಸೆಯುವ ಸಂಕಲ್ಪ ಮಾಡಬೇಕು. ಅರ್ಥಹೀನ, ಅವೈಜ್ಞಾನಿಕ ಕುರುಡು ನಂಬಿಕೆಗಳಂಥ ಮೌಢ್ಯವನ್ನೇ ಬಿತ್ತಿ ಬೆಳೆಯುವುದು ಅಪರಾಧ ಎಂದು ಅದಕ್ಕೆ ಕಾರಣರಾದವರನ್ನು ಶಿಕ್ಷಿಸುವ ಕಾನೂನು ಜಾರಿಯಲ್ಲಿ ಬರಬೇಕು. ಆಗ ಮಾತ್ರ ಸಾಮಾಜಿಕ ಬದಲಾವಣೆ ತರಲು ಸಾಧ್ಯವಾಗುವುದು. ಅದರಲ್ಲೂ ಧಾರ್ಮಿಕ ಮೌಢ್ಯಗಳು ತುಂಬಾ ದಿಕ್ಕುತಪ್ಪಿಸುತ್ತಿವೆ. ನಮ್ಮ ಮಠಾಧೀಶರು, ವಿವಿಧ ದೇವಸ್ಥಾನದ ಪ್ರಮುಖರು, ವಿಚಾರವಂತರು ಇಂತಹ ಮೌಢ್ಯಗಳನ್ನು ಬಿಂಬಿಸುವ ಅನಿಷ್ಟ ಪದ್ಧತಿಗಳ ವಿರುದ್ಧ ತಮ್ಮ ತಮ್ಮ ಮಿತಿಯಲ್ಲಾದರೂ ಬಂಡಾಯವೆದ್ದು ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು. ಇಲ್ಲದಿದ್ದರೆ ಅವರೂ ವಿದ್ಯಾವಂತ ಅಜ್ಞಾನಿಗಳ ಗುಂಪಿಗೆ ಸೇರಬೇಕಾಗುವುದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.