ಸೋಮವಾರ, ಏಪ್ರಿಲ್ 19, 2021
31 °C

ವಿಧಾನಸಭಾ ಕ್ಷೇತ್ರದ 5 ಸಾವಿರ ರೈತರಿಗೆ ನೆರವು.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಐದು ಸಾವಿರ ರೈತರಿಗೆ ನೇರವಾಗಿ ಹಣಕಾಸಿನ ನೆರವು, ಹಾಗೆಯೇ ಪ್ರತಿ ಕ್ಷೇತ್ರದಲ್ಲಿರೂ 5 ಕೋಟಿ ವೆಚ್ಚದಲ್ಲಿ 25 ಕೆರೆಗಳ ಅಭಿವೃದ್ಧಿ ಹಾಗೂ ಜಿಲ್ಲೆಯ 4ರಿಂದ 5 ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೊನಿ ಅಭಿವೃದ್ಧಿಗೆ ರೂ1 ಕೋಟಿ ನೀಡುವ ಯೋಜನೆಗಳಿಗೆ ಇನ್ನೊಂದು ವಾರದಲ್ಲಿ ಚಾಲನೆ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿ.ಪಂ. ಸಭಾಂಗಣದಲ್ಲಿ ಭಾನುವಾರ 2010-11ನೇ ಸಾಲಿನ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಈ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಆದೇಶಿಸಿದರು.ಪ್ರಸಕ್ತ ಹಣಕಾಸು ವರ್ಷ ಇದೇ ತಿಂಗಳು ಮುಗಿಯುವುದರಿಂದ ನಿಧಾನಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗಳನ್ನು ಚುರುಕುಗೊಳಿಸಿ, ಹಣದ ಸಮಸ್ಯೆ ಇಲ್ಲ. ಯಾವುದೇ ಕಾರಣಕ್ಕೂ ಬಂದ ಹಣವನ್ನು ಖರ್ಚು ಮಾಡದೆ ಹಿಂತಿರುಗಿಸಬೇಡಿ. ಈ ತಿಂಗಳು ಯುದ್ಧೋಪಾದಿಯಲ್ಲಿ ಕೆಲಸ ಮಾಡಿ ಎಂದು ಸೂಚಿಸಿದರು.

ಸರ್ಕಾರಿ ಜಾಗ ತೆರವುಗೊಳಿಸಿ: ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಒತ್ತುವರಿಯಾದ ಸರ್ಕಾರಿ ಜಾಗದ ಪಟ್ಟಿ ಮಾಡಿ, ಅವುಗಳನ್ನು ಹಂತ-ಹಂತವಾಗಿ ತೆರವುಗೊಳಿಸಲು ಯೋಜನೆ ರೂಪಿಸಿ ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಈಗ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಜಾಗದ ಸಮಸ್ಯೆ ಎದುರಾಗಿದೆ. ಈ ದೃಷ್ಟಿಯಿಂದ ಈಗಾಗಲೇ ಒತ್ತುವರಿಯಾದ ಸರ್ಕಾರಿ ಜಾಗವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಿ ಎಂದರು.ಶಿವಮೊಗ್ಗ ನಗರದ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ನಿಲ್ದಾಣದಲ್ಲಿ ಎಲ್ಲಿಯೂ ಆಟೋ ಮತ್ತು ಟ್ಯಾಕ್ಸಿ ನಿಲ್ದಾಣಕ್ಕೆ ಜಾಗ ನಿಗದಿಪಡಿಸಿಲ್ಲ ಎಂದು ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ, ಎರಡೂ ನಿಲ್ದಾಣಗಳು ಒಟ್ಟಿಗೆ ಇರಲಿ ಎಂದು ಹೋರಾಡಿ ಮಾಡಿಸಿದರೂ ಅಲ್ಲಿ ಆಟೋ ಮತ್ತು ಟ್ಯಾಕ್ಸಿ ನಿಲ್ದಾಣಕ್ಕೆ ಜಾಗ ಮಾಡಿಕೊಡಲು ಸಾಧ್ಯವಾಗಿಲ್ಲ ಎಂದರೆ ಏನು ಅರ್ಥ ಎಂದು ರೇಗಿದ ಅವರು, ಮೊದಲು ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿ ಒತ್ತುವರಿಯಾಗಿರುವ ಜಾಗವನ್ನು ಬಿಡಿಸಿ ನಿಲ್ದಾಣಕ್ಕೆ ಸ್ಥಳಾವಕಾಶ ಮಾಡಿ ಎಂದರು.ನಗರದ ದುರ್ಗಿಗುಡಿ ರಸ್ತೆಯನ್ನು 35 ಅಡಿ ವಿಸ್ತರಣೆ ಮಾಡಿ, ಕಾಂಕ್ರಿಟ್ ರಸ್ತೆ ಮಾಡಲು ಲೋಕೋಪಯೋಗಿ ಇಲಾಖೆ ಸಿದ್ಧತೆ ನಡೆಸಿದೆ. ಆದರೆ, ಈಗಿರುವ ವಿಸ್ತೀರ್ಣದಲ್ಲಿ ಕಾಂಕ್ರಿಟ್ ರಸ್ತೆ ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದಾಗ, ಈ ಬಗ್ಗೆ ಇನ್ನೊಮ್ಮೆ ಚರ್ಚೆ ಮಾಡಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.ಶಿವಮೊಗ್ಗದ ಮುಖ್ಯರಸ್ತೆ ಒಂದೇ ಅಲ್ಲ; ಒಳರಸ್ತೆಗಳೂ ಅಭಿವೃದ್ಧಿಯಾಗಬೇಕು. ನಾವು, ನೀವು, ಸಂಸದರು, ಈಶ್ವರಪ್ಪನವರು ಎಲ್ಲರೂ ಸೇರಿ ನಗರದಲ್ಲಿ ವಾಕಿಂಗ್ ಹೋಗೋಣ ಜನ ರಸ್ತೆಯ ಗುಂಡಿಗಳ ಬಗ್ಗೆ ಯಾವ ರೀತಿ ಮಾತನಾಡುತ್ತಾರೆ, ಅವರ ಅಭಿಪ್ರಾಯ ಕೇಳೋಣ ಎಂದು ನಗರಸಭೆ ಅಧ್ಯಕ್ಷ ಕೆ.ಎಸ್. ಗಂಗಾಧರಪ್ಪ ಹೇಳಿದರು.ಎರಡು ಲಾಂಚ್: ಶರಾವತಿ ಹಿನ್ನೀರಿನ ಪ್ರದೇಶಗಳಾದ ಸಾಗರದ ಕಳಸವಳ್ಳಿ ಮತ್ತು ಹೊಸನಗರದ ಬಿಸ್ವಾರ ಗ್ರಾಮಸ್ಥರು ಓಡಾಡಲು ಎರಡು ಲಾಂಚ್ ವ್ಯವಸ್ಥೆ ಮಾಡಬೇಕು ಎಂದು ಶಾಸಕರಾದ ಹರತಾಳು ಹಾಲಪ್ಪ ಮತ್ತು ಕಿಮ್ಮನೆ ರತ್ನಾಕರ ಮನವಿ ಮಾಡಿದರು. ಇದಕ್ಕೆ ತಕ್ಷಣ ಸ್ಪಂದಿಸಿದ ಯಡಿಯೂರಪ್ಪ, ತಲಾ ರೂ1 ಕೋಟಿ ವೆಚ್ಚದಲ್ಲಿ ಲಾಂಚ್ ನೀಡುವುದಾಗಿ ಭರವಸೆ ನೀಡಿದರು.ಉದ್ಯೋಗ ಖಾತ್ರಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಯೋಜನೆಗಳನ್ನು ರೂಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಈ ವರ್ಷ ಮಲೆನಾಡಿನಲ್ಲಿ ಉತ್ತಮ ಮಳೆಯಾಗಿದೆ. ಕುಡಿಯುವ ನೀರಿಗೆ ಕೆರೆ-ಕಟ್ಟೆಗಳನ್ನು ಆಶ್ರಯಿಸಿ, ಅನಗತ್ಯವಾಗಿ ಬೋರೆವೆಲ್‌ಗಳನ್ನು ಕೊರೆಯಬೇಡಿ ಎಂದರು.ಸಭೆಯಲ್ಲಿ ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ, ಸಂಸದ ಬಿ.ವೈ. ರಾಘವೇಂದ್ರ, ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ, ಉಪಾಧ್ಯಕ್ಷ ಎಚ್.ಬಿ. ಗಂಗಾಧರಪ್ಪ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಜಿಲ್ಲಾಧಿಕಾರಿ ವಿ. ಪೊನ್ನುರಾಜ್, ಜಿ.ಪಂ. ಉಪ ಕಾರ್ಯದರ್ಶಿ ಹನುಮನರಸಯ್ಯ ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.