ಬುಧವಾರ, ಮಾರ್ಚ್ 3, 2021
19 °C

ವಿಧಾನಸೌಧದಲ್ಲಿ ಹೆಜ್ಜೇನು ದಾಳಿ: ಹಲವರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಧಾನಸೌಧದಲ್ಲಿ ಹೆಜ್ಜೇನು ದಾಳಿ: ಹಲವರಿಗೆ ಗಾಯ

ಬೆಂಗಳೂರು: ವಿಧಾನಸೌಧದ ಕೆಂಗಲ್‌ ಹನುಮಂತಯ್ಯ ಪ್ರವೇಶ ದ್ವಾರದಲ್ಲಿ ಗುರುವಾರ ಬೆಳಿಗ್ಗೆ ಜೇನು ನೊಣಗಳು ಹಲವರನ್ನು ಕಚ್ಚಿ ಗಾಯ­ಗೊಳಿಸಿದವು. ಅಲ್ಲಿದ್ದ ಪೊಲೀಸರು, ವಿಧಾನಸೌಧ ಉದ್ಯಾನ ನಿರ್ವಹಣೆ ಸಿಬ್ಬಂದಿ ಜೇನು­ನೊಣ­ಗಳಿಂದ ತಪ್ಪಿಸಿಕೊಳ್ಳಲು ಹರ­ಸಾಹಸಪಟ್ಟರು.ವಿಧಾನಸೌಧದ ಚಾವಣಿಯಲ್ಲಿ ಗೂಡು ಕಟ್ಟಿಕೊಂಡಿರುವ ಹೆಜ್ಜೇನು ನೊಣಗಳು ದಿಢೀರನೆ ಅಲ್ಲಿದ್ದ ಜನರ ಮೇಲೆ ದಾಳಿ ನಡೆಸಿದವು. ಸಂಪುಟ ಸಭೆಗೆ ಬರುವ ಮುಖ್ಯಮಂತ್ರಿ, ಸಚಿವರನ್ನು ಸ್ವಾಗತಿಸಲು ಕಾದಿದ್ದ ಪೊಲೀಸರು ಜೇನು ನೊಣಗಳ ದಾಳಿಗೆ ಹೆದರಿ ದಿಕ್ಕಾಪಾಲಾಗಿ ಓಡುವಂತಾ­ಯಿತು. ಉದ್ಯಾನದಲ್ಲಿದ್ದ ಸಿಬ್ಬಂದಿಯೂ ದಾಳಿಗೆ ತುತ್ತಾದರು.ಪ್ರವೇಶ ದ್ವಾರದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನಾಗ­ರಾಜು, ಕಾನ್‌ಸ್ಟೆಬಲ್‌ ಅಂಜನಪ್ಪ, ಗೃಹ ರಕ್ಷಕ ದಳದ ಸುಧಾ, ವಿಧಾನಸೌಧದ ಸಿಬ್ಬಂದಿ ಲೋಕೇಶ್‌, ಉದ್ಯಾನ ನಿರ್ವ­ಹಣಾ ಸಿಬ್ಬಂದಿ ಪದ್ಮಮ್ಮ ಮತ್ತಿತರರನ್ನು ಜೇನು ನೊಣಗಳು ಕಚ್ಚಿ ಗಾಯ­ಗೊಳಿಸಿದವು. ವಿಧಾನಸೌಧದಲ್ಲಿನ ಆಸ್ಪತ್ರೆಗೆ ತೆರಳಿ ಅವರೆಲ್ಲರೂ ಚಿಕಿತ್ಸೆ ಪಡೆದರು.ಗೂಡಿನಿಂದ ಹಾರಿದ ಜೇನು ನೊಣಗಳು ಕೆಲ ನಿಮಿಷಗಳ ಕಾಲ ಅಲ್ಲಿ­ದ್ದ­­ವರನ್ನು ಅಟ್ಟಿಸಿಕೊಂಡು ಬಂದವು. ನಂತರ ಗೂಡಿಗೆ ಮರಳಿ­ದವು. ಮುಖ್ಯಮಂತ್ರಿ ಮತ್ತು ಸಚಿವರು ಬರುವ ವೇಳೆಗೆ ಪರಿಸ್ಥಿತಿ ತಿಳಿಯಾಗಿತ್ತು. ‘ಒಂದು ವಾರದ ಹಿಂದೆ ಎಲ್ಲಿಂದಲೋ ಹಾರಿಬಂದ ಜೇನು ನೊಣ­ಗಳು ವಿಧಾನಸೌಧದ ಚಾವಣಿ­ಯಲ್ಲಿ ಬೀಡುಬಿಟ್ಟಿವೆ. ಜೇನು ನೊಣ­ಗಳನ್ನು ಇಲ್ಲಿಂದ ಓಡಿಸಲು ಕ್ರಮ ಕೈಗೊಳ್ಳು­ವಂತೆ ಲೋಕೋ­ಪ­ಯೋಗಿ ಇಲಾಖೆಗೆ ಮನವಿ ಮಾಡಲಾಗಿದೆ’ ಎಂದು ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್‌ ಸಿಬ್ಬಂದಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.