ಬುಧವಾರ, ಜೂನ್ 16, 2021
23 °C

ವಿನಯ ಅಖಾಡಕ್ಕೆ: ಬದಲಾದ ರಾಜಕೀಯ ಲೆಕ್ಕಾಚಾರ

ಪ್ರಜಾವಾಣಿ ವಾರ್ತೆ/ ಮನೋಜ್‌ ಕುಮಾರ್‌ ಗುದ್ದಿ Updated:

ಅಕ್ಷರ ಗಾತ್ರ : | |

ಧಾರವಾಡ: ಹದಿನೆಂಟು ವರ್ಷಗಳ ಸಂಸತ್‌ ಸದಸ್ಯತ್ವದ ವನವಾಸದಿಂದ ಮುಕ್ತಿ ಪಡೆಯುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇಟ್ಟಿರುವ ಕಾಂಗ್ರೆಸ್‌, ಧಾರ­ವಾಡ ಕ್ಷೇತ್ರದ ಹಾಲಿ ಶಾಸಕ ವಿನಯ ಕುಲಕರ್ಣಿ ಅವರನ್ನು ಕಣಕ್ಕಿಳಿಸುವ ಮೂಲಕ ರಾಜಕೀಯ ಲೆಕ್ಕಾಚಾರವನ್ನು ಬುಡಮೇಲು ಮಾಡುವ ಯತ್ನದಲ್ಲಿದೆ.ಈ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಕಳೆದ 15 ದಿನಗಳಿಂದ ಸತತವಾಗಿ ವಿನಯ ಕುಲಕರ್ಣಿ ಅವ­ರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಒತ್ತಾಯಿಸುತ್ತಲೇ ಬಂದಿತ್ತು. ಆದರೆ, ಮಂಜು­ನಾಥ ಕುನ್ನೂರ, ಅಜ್ಜಂಪೀರ್‌ ಖಾದ್ರಿ, ಡಾ.­ಮಹೇಶ ನಾಲವಾಡ ಅವರೂ ಟಿಕೆಟ್‌ಗೆ ಭಾರಿ ಪೈಪೋಟಿ ನಡೆಸಿದ್ದ ಹಿನ್ನೆಲೆಯಲ್ಲಿ ವಿನಯ ಪಕ್ಷದ ಆಹ್ವಾನವನ್ನು ನಿರಾಕರಿಸುತ್ತಲೇ ಬಂದಿದ್ದರು.ಆದರೆ, ಹೇಗಾದರೂ ಮಾಡಿ ಕ್ಷೇತ್ರವನ್ನು ’ಕೈ’ ವಶ ಮಾಡಿಕೊಳ್ಳುವ ನಿಟ್ಟಿನಲ್ಲಿ ಸ್ವತಃ ಮುಖ್ಯ­ಮಂತ್ರಿ ಸಿದ್ದರಾಮಯ್ಯನವರೇ ವಿನಯ ಅವರನ್ನು ಬುಧವಾರ ಬೆಂಗಳೂರಿಗೆ ಕರೆಸಿ ಸ್ಪರ್ಧೆಗಿಳಿ­ಯು­ವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ಸ್ವತಃ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರೇ ಯುವ ಮುಖಂಡರೊಬ್ಬರನ್ನು ಈ ಕ್ಷೇತ್ರ­ದಿಂದ ನಿಲ್ಲಿಸುವಂತೆಯೂ ಕೆಪಿಸಿಸಿಗೆ ಸೂಚನೆ ನೀಡಿದ್ದರು.

ಹಾಗಾಗಿ ಹೈಕಮಾಂಡ್‌ ಹೇಳಿದ್ದನ್ನು ಚಾಚೂ­ತಪ್ಪದೇ ಪಾಲಿಸುವ ಪರಂಪರೆ ಹೊಂದಿರುವ ಕಾಂಗ್ರೆಸ್‌ನ ರಾಜ್ಯ ನಾಯಕತ್ವ ಶಾಸಕರನ್ನು ‘ಸಂಸದ’ರನ್ನಾಗಿ ಮಾಡುವ ಮೊದಲ ಹೆಜ್ಜೆಯಾಗಿ ಅವರನ್ನು ಸ್ಪರ್ಧೆಗೆ ಅಣಿಗೊಳಿಸಿದೆ.ವಿನಯ ಅಖಾಡಕ್ಕೆ ಇಳಿಯುವುದರಿಂದಾಗಿ ಬಿಜೆಪಿ ಪಾಳೆಯದಲ್ಲಿ ಸಣ್ಣಗೆ ನಡುಕ ಶುರುವಾಗಿ­ರುವ ಮುನ್ಸೂಚನೆ ದೊರೆತಿದೆ. ಬಿಜೆಪಿ ಮೂಲಗಳ ಪ್ರಕಾರ, ಟಿಕೆಟ್‌ ಈ ಬಾರಿಯೂ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಮಂಜುನಾಥ ಕುನ್ನೂರ ಅವರಿಗೇ ದೊರೆಯಲಿದ್ದು, ಪ್ರಹ್ಲಾದ ಜೋಶಿ ಅವರ ಗೆಲುವಿನ ನಾಗಾಲೋಟ ಈ ಬಾರಿಯೂ ಮುಂದುವರೆಯಲಿದೆ ಎಂದೇ ಭಾವಿಸಲಾಗಿತ್ತು.ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತವಿದ್ದು, ಧಾರವಾಡ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಶಾಸಕರು (ವಿನಯ ಸೇರಿದಂತೆ) ಕಾಂಗ್ರೆಸ್‌ನವರು. ಅಲ್ಲದೇ, ವಿನಯ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿರುವುದು ಮತ್ತು ನವಲಗುಂದ, ಧಾರವಾಡ ಹಾಗೂ ಹು–ಧಾ ಪಶ್ಚಿಮ ಕ್ಷೇತ್ರದ ಜನರೊಂದಿಗೆ ಒಡನಾಟ ಹೊಂದಿರುವುದು ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂಬುದು ಕಾಂಗ್ರೆಸ್ಸಿನವರ ಲೆಕ್ಕಾಚಾರ.ಜೊತೆಗೆ ಜಿಲ್ಲೆಯ ಕುರುಬ ಸಮುದಾಯದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿನಯ ಕುಲಕರ್ಣಿ ಅವರ ಪರ ಪ್ರಚಾರ ಕೈಗೊಳ್ಳುವ ಮೂಲಕ ಆ ಸಮುದಾಯದ ಮತಗಳು ಧೃವೀ­ಕರಣ­­ವಾಗಲಿವೆ ಎಂಬ ಆಸೆಯಲ್ಲಿ ಕಾಂಗ್ರೆಸ್‌ ನಾಯ­ಕ­ರಿದ್ದಾರೆ. ಜೊತೆಗೆ, ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಪಕ್ಷದ ಅಭ್ಯರ್ಥಿಯ ಕೈಬಿಡುವುದಿಲ್ಲ ಎಂಬ ಲೆಕ್ಕಾಚಾರದಿಂದಾಗಿಯೇ ಹೈಕಮಾಂಡ್ ಯುವ ಶಾಸಕನಿಗೆ ಟಿಕೆಟ್‌ ನೀಡಲು ಮುಂದಾಗಿದೆ ಎನ್ನಲಾಗುತ್ತಿದೆ.ಟಿಕೆಟ್‌ ವಿನಯ ಕುಲಕರ್ಣಿ ಅವರಿಗೆ ದೊರೆ­ಯಲಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಮೈಕೊಡವಿ­ಕೊಂಡು ಪ್ರಚಾರಕ್ಕೆ ಮುಂದಾಗಿದ್ದಾರೆ. ಗುರು­ವಾರ ಬೆಳಿಗ್ಗೆಯೇ ಧಾರವಾಡಕ್ಕೆ ಬಂದ ಅವರು ವಾಯು­ವಿಹಾರಿಗಳನ್ನು ಭೇಟಿ ಮಾಡಿ ಮತ­ಯಾಚಿಸಿದರು. ಶುಕ್ರವಾರವೂ ನಗರದಲ್ಲಿ ಬಹಿ­ರಂಗ ಸಭೆಯನ್ನು ನಡೆಸಲಿದ್ದು, ಪ್ರಮುಖ ಗಣ್ಯರನ್ನು ಭೇಟಿ ಮಾಡಲಿದ್ದಾರೆ. ಟಿಕೆಟ್‌ ತಮಗೆ ದೊರೆತ ಹಿನ್ನೆಲೆ­ಯಲ್ಲಿ ‘ಪ್ರಜಾ­ವಾಣಿ’­ಯೊಂದಿಗೆ ಅನಿಸಿಕೆ ಹಂಚಿ­ಕೊಂಡ ವಿನಯ ಕುಲ­ಕರ್ಣಿ, ‘ಪಕ್ಷದ ಹಿರಿಯ ನಾಯಕರಿಗೆ ಟಿಕೆಟ್‌ ಸಿಗಲಿ ಎಂಬ ಉದ್ದೇಶದಿಂದ ನಾನು ಸುಮ್ಮ­ನಿದ್ದೆ. ಆದರೆ, ನನ್ನನ್ನೇ ಆಯ್ಕೆ ಮಾಡುವ ಬಗ್ಗೆ ಹೈಕಮಾಂಡ್‌ ನಿರ್ಣಯ ಕೈಗೊಂ­ಡಿದೆ. ಇದನ್ನು ಮುಖ್ಯಮಂತ್ರಿಗಳು ಮನವರಿಕೆ ಮಾಡಿ­ಕೊಟ್ಟರು.  ಸಮರ್ಥ­ವಾಗಿ ಚುನಾವಣೆ ಎದುರಿಸ­ಲಿದ್ದೇವೆ. ಎಲ್ಲ ಶಾಸ­ಕರೂ ಒಕ್ಕ­ಟ್ಟಾಗಿ ಚುನಾವಣೆ­ಯಲ್ಲಿ ದುಡಿಯಲಿದ್ದಾರೆ’ ಎಂದರು.ಆದರೆ, ಮೊದಲಿನಿಂದಲೂ ಕಲಘಟಗಿ ಶಾಸಕ ಸಂತೋಷ್‌ ಲಾಡ್‌ ಅವರಿಗೂ ವಿನಯ ಅವರಿಗೂ ಅಷ್ಟಕಷ್ಟೇ ಇದೆ ಎಂಬ ಗುಸು ಗುಸು ಪಕ್ಷದಲ್ಲಿ ಕೇಳಿಬರುತ್ತಿದೆ. ಜೊತೆಗೆ, ಟಿಕೆಟ್‌ಗಾಗಿ ಪ್ರಯತ್ನಿಸಿ ವಿಫಲರಾದ ಪಕ್ಷದ ಮಹಾನಗರ ಜಿಲ್ಲಾ ಅಧ್ಯಕ್ಷ ಎ.ಎಂ.­ಹಿಂಡಸಗೇರಿ, ಮುಖಂಡರಾದ ಮಂಜು­ನಾಥ ಕುನ್ನೂರ, ಡಾ.ಮಹೇಶ ನಾಲ­ವಾಡ, ಧಾರವಾಡ­ದವರೇ ಆದ ಡಾ.­ಲೋಹಿತ್‌ ನಾಯ್ಕರ್‌ ಅವರ ಬೆಂಬಲ ಎಷ್ಟರ ಮಟ್ಟಿಗೆ ದೊರೆ­ಯಲಿದೆ ಎಂಬುದರ ಮೇಲೆ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವು ನಿರ್ಧಾರವಾಗಲಿದೆ.ಆದರೆ, ಒಂದು ಮಾತಂತೂ ಸತ್ಯ. ಕಳೆದ ಎರಡು ಚುನಾವಣೆಯಲ್ಲಿ ಇಲ್ಲದ ‘ರಾಜಕೀಯದ ರಂಗು’ ಈ ಬಾರಿ ದಟ್ಟವಾಗಿಯೇ ಕಾಣಿಸಿಕೊಳ್ಳಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.