ಸೋಮವಾರ, ಮಾರ್ಚ್ 1, 2021
24 °C

ವಿಪ್ರೊ ಲಾಭ ರೂ 1,623 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಪ್ರೊ ಲಾಭ ರೂ 1,623 ಕೋಟಿ

ನವದೆಹಲಿ (ಪಿಟಿಐ): ಜೂನ್ 30ಕ್ಕೆ ಕೊನೆಗೊಂಡ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಪ್ರಮುಖ ಐ.ಟಿ ಕಂಪೆನಿ ವಿಪ್ರೊ ರೂ1,623 ಕೋಟಿ ನಿವ್ವಳ ಲಾಭ ಗಳಿಸಿದೆ.2012-13ನೇ ಸಾಲಿನ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ರೂ1,580 ಕೋಟಿ ನಿವ್ವಳ ಲಾಭವಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಲಾಭ ಗಳಿಕೆ ಯಲ್ಲಿ ಶೇ 2.7ರಷ್ಟು ಏರಿಕೆಯಾಗಿದೆ.ಪ್ರಸಕ್ತ ಅವಧಿಯಲ್ಲಿ ಕಂಪೆನಿ ಒಟ್ಟಾರೆ ಮಾರಾಟ ಶೇ 5ರಷ್ಟು ಹೆಚ್ಚಿದ್ದು ರೂ9,733 ಕೋಟಿಗಳಷ್ಟಾಗಿದೆ.ಪ್ರಸಕ್ತ ಹಣಕಾಸು ವರ್ಷದ ಎರಡನೆಯ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಕಂಪೆನಿ 162 ಕೋಟಿಯಿಂದ 165 ಕೋಟಿ ಡಾಲರ್‌ನಷ್ಟು ವರಮಾನ ಅಂದಾಜು ಮಾಡಿದೆ.ವರಮಾನದಲ್ಲಿ ಹಿಂದೆ

ಪ್ರತಿಸ್ಪರ್ಧಿ ಕಂಪೆನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಮತ್ತು ಇನ್ಫೊಸಿಸ್‌ಗೆ ಹೋಲಿಸಿದರೆ ವಿಪ್ರೊ ವರಮಾನ ಪ್ರಗತಿಯಲ್ಲಿ ಹಿಂದಿದೆ. ಈ ಎರಡೂ ಕಂಪೆನಿಗಳು ಮೊದಲ ತ್ರೈಮಾಸಿಕದಲ್ಲಿ ಕ್ರಮವಾಗಿ ಶೇ 21 ಮತ್ತು ಶೇ 17ರಷ್ಟು ಪ್ರಗತಿ ದಾಖಲಿಸಿವೆ. `ಟಿಸಿಎಸ್' ನಿವ್ವಳ ಲಾಭ ಶೇ 16ರಷ್ಟು ಏರಿಕೆ ಕಂಡಿದ್ದರೆ, ಇನ್ಫೊಸಿಸ್ ಲಾಭ ಶೇ 3.7ರಷ್ಟು ಹೆಚ್ಚಿದೆ. ಆದರೆ, ವಿಪ್ರೊ ನಿವ್ವಳ ಲಾಭ ಕೇವಲ ಶೇ 2.7ರಷ್ಟು ಏರಿಕೆ ಕಂಡಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಕಂಪೆನಿಯ ಒಟ್ಟಾರೆ ವರಮಾನ ಶೇ 11ರಷ್ಟು ಹೆಚ್ಚಿದ್ದು 2730 ಕೋಟಿ ಡಾಲರ್‌ಗಳಷ್ಟಾಗಿದೆ. ಐ.ಟಿ ಸೇವೆ ವರಮಾನ ಶೇ 4.9ರಷ್ಟು ಏರಿಕೆಯಾಗಿ, ರೂ8,936 ಕೋಟಿಯಷ್ಟಾಗಿದೆ. ಮುಂದಿನ ವಾರ್ಷಿಕ ಮಹಾ ಸಭೆಗಿಂತ ಮುನ್ನ ಕಂಪೆನಿ ಆಡಳಿತ ಮಂಡಳಿಗೆ ಹೊಸದಾಗಿ `ನಿರ್ದೇಶಕಿ'ಯೊಬ್ಬರು ಸೇರ್ಪಡೆಯಾಗಲಿದ್ದಾರೆ ಎಂದು ಪ್ರೇಮ್‌ಜಿ ಇದೇ ವೇಳೆ ಪ್ರಕಟಿಸಿದರು.

ಪ್ರೇಮ್‌ಜಿ ವಿಶ್ವಾಸ

`ಅಮೆರಿಕ ಸೇರಿದಂತೆ ಒಟ್ಟಾರೆ ಜಾಗತಿಕ ಅರ್ಥವ್ಯವಸ್ಥೆ ಚೇತರಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ತ್ರೈಮಾಸಿಕಗಳಲ್ಲಿ ಇನ್ನಷ್ಟು ಗ್ರಾಹಕ ಸಂಸ್ಥೆಗಳು ಸೇರ್ಪಡೆಯಾಗುವ ನಿರೀಕ್ಷೆ ಇದ್ದು, ಮುಂದಿನ ಅವಧಿಗೆ ಎರಡಂಕಿ ಪ್ರಗತಿ ದಾಖಲಿಸಲಿದ್ದೇವೆ' ಎಂದು ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ ವಿಶ್ವಾಸ ವ್ಯಕ್ತಪಡಿಸಿದರು.ಶುಕ್ರವಾರ ಇಲ್ಲಿ ವಾರ್ಷಿಕ ಮಹಾ ಸಭೆಯಲ್ಲಿ(ಎಜಿಎಂ) ಮಾತನಾಡಿದ ಅವರು, 3-4 ತಿಂಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ, ಈಗ ಅಮೆರಿಕ ಮಾರುಕಟ್ಟೆ ಸಾಕಷ್ಟು ಚೇತರಿಸಿದೆ. ಗ್ರಾಹಕರ ವಿಶ್ವಾಸ ಹೆಚ್ಚಿದೆ. ಷೇರುಪೇಟೆಗಳಲ್ಲಿ ಸಹ ಇದರ ಫಲಿತಾಂಶ ಕಂಡುಬರತೊಡಗಿದೆ ಎಂದರು.`ದೇಶದ ಕೈಗಾರಿಕಾ ಪ್ರಗತಿ ಇನ್ನೂ ನಿರಾಶಾದಾಯಕವಾಗಿದೆ. ಬೃಹತ್ ಯೋಜನೆಗಳು ಜಾರಿಯಾಗದೆ ವಿಳಂಬವಾಗುತ್ತಿವೆ' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಶುಕ್ರವಾರ ಮುಂಬೈ ಷೇರುಪೇಟೆಯಲ್ಲಿ ವಿಪ್ರೊ ಷೇರು ಮೌಲ್ಯ ಶೇ 1.74ರಷ್ಟು ಏರಿಕೆ ಕಂಡು ರೂ 382.80ರಲ್ಲಿ ವಹಿವಾಟು ನಡೆಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.