ಶುಕ್ರವಾರ, ಏಪ್ರಿಲ್ 16, 2021
31 °C

ವಿಳಂಬ ಧೋರಣೆಗೆ ಆರೆಸ್ಸೆಸ್ ಅತೃಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಬಿಕ್ಕಟ್ಟು ಶಮನಕ್ಕೆ ತಕ್ಷಣವೇ ಪ್ರಯತ್ನಿಸದ ಪಕ್ಷದ ಹೈಕಮಾಂಡ್ ವಿರುದ್ಧ ಆರ್‌ಎಸ್‌ಎಸ್ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ.ಭಾನುವಾರ ತಮ್ಮನ್ನು ಭೇಟಿಯಾದ ಪಕ್ಷದ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರಿಗೆ ನೇರವಾಗಿ ತಮ್ಮ ಅಭಿಪ್ರಾಯ ತಿಳಿಸಿರುವ ಅವರು, `ಬಿಜೆಪಿಯಲ್ಲಿ ಬಿಕ್ಕಟ್ಟು ಉಲ್ಬಣಿಸಲು ಹೈಕಮಾಂಡ್ ವಿಳಂಬ ಧೋರಣೆಯೇ ಕಾರಣ~ ಎಂದು ಬೆರಳು ತೋರಿಸಿದ್ದಾರೆ.ಪ್ರಧಾನ್ ಬೆಳಿಗ್ಗೆ `ಕೇಶವಕೃಪಾ~ದಲ್ಲಿ ಆರ್‌ಎಸ್‌ಎಸ್ ಮುಖಂಡರಾದ ಮೈ.ಚ.ಜಯದೇವ, ಎಂ.ಪಿ.ಕುಮಾರ್, ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಜಂಟಿ ಕಾರ್ಯದರ್ಶಿ ಸತೀಶ್ ಅವರೊಂದಿಗೆ ಚರ್ಚೆ ನಡೆಸಿದರು. `ಬಿಕ್ಕಟ್ಟು ತಾರಕಕ್ಕೆ ಏರಲು ಪಕ್ಷದ ವರಿಷ್ಠರೇ ಕಾರಣ. ಭಿನ್ನಮತವನ್ನು ಮೊಳಕೆಯಲ್ಲೇ ಚಿವುಟಿ ಹಾಕಿದ್ದರೆ ಇಂತಹ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ವಿಳಂಬ ಧೋರಣೆಯಿಂದ ಪಕ್ಷದ ಮಾನ ಹರಾಜು ಆಗಿದೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.`ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ, ಸ್ವಜನಪಕ್ಷಪಾತದ ಆರೋಪಗಳು ಕೇಳಿಬಂದಾಗಲೇ ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷದ ಹಿತದೃಷ್ಟಿಯಿಂದ ಕಠಿಣ ತೀರ್ಮಾನಗಳನ್ನು ತೆಗೆದುಕೊಳ್ಳಿ ಎಂದು ಸೂಚಿಸಲಾಗಿತ್ತು. ಆದರೆ ಪಕ್ಷದ ವರಿಷ್ಠರು ಇದಕ್ಕೆ ಕಿವಿಗೊಡಲಿಲ್ಲ~ ಎಂದು ನೆನಪಿಸಿದ್ದಾರೆ.

`ಕಳೆದ ನಾಲ್ಕು ವರ್ಷಗಳಿಂದ ಪದೇ ಪದೇ ಬಿಕ್ಕಟ್ಟು ಉದ್ಭವಿಸುತ್ತಲೇ ಇದೆ.ಈ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ಮನಸ್ಸು ಹೈಕಮಾಂಡ್‌ಗೆ ಇದ್ದಂತೆ ಇಲ್ಲ. ಹೀಗಿರುವಾಗ ಸಲಹೆ, ಸೂಚನೆಗಳನ್ನು ಕೊಟ್ಟರೆ ಏನು ಪ್ರಯೋಜನ? ಬೀದಿ ಜಗಳದಲ್ಲಿ ನಾವು ಭಾಗಿಯಾಗುವುದಿಲ್ಲ. ನಿಮಗೆ ತೋಚಿದಂತೆ ಮಾಡಿಕೊಳ್ಳಿ, ಯಡಿಯೂರಪ್ಪ ಸೇರಿದಂತೆ ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ಯಾವ ನಾಯಕರೂ ಆರ್‌ಎಸ್‌ಎಸ್ ಕಚೇರಿಗೆ ಬರುವ ಅಗತ್ಯವಿಲ್ಲ~ ಎಂದು ಖಾರವಾಗಿ ಹೇಳಿದರು ಎನ್ನಲಾಗಿದೆ.15 ದಿನದಲ್ಲಿ ನಿವಾರಣೆ: ಪ್ರಧಾನ್ ಅವರು ಉಭಯ ಬಣಗಳ ಮುಖಂಡರೊಂದಿಗೆ ಚರ್ಚೆ ನಡೆಸಿ ನವದೆಹಲಿಗೆ ವಾಪಸಾಗಿದ್ದಾರೆ. ಸಚಿವರು, ಶಾಸಕರ ಅಭಿಪ್ರಾಯಗಳನ್ನು ವರಿಷ್ಠರ ಗಮನಕ್ಕೆ ತರಲಿದ್ದಾರೆ. ವಾರದಲ್ಲಿ ಬಿಕ್ಕಟ್ಟು ನಿವಾರಣೆಯಾಗಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದರು.

ಸ್ವಾರ್ಥ ಸಾಧನೆಗೆ ನಮ್ಮನ್ನು ಕರೆಯಬೇಡಿ...!

ಬೆಂಗಳೂರು: `ಪದೇ ಪದೇ ನೀವು ಸಭೆ ಕರೆಯುವುದು... ಕ್ಷೇತ್ರದ ಕೆಲಸ ಬಿಟ್ಟು ನಾವು ಇಲ್ಲಿಗೆ ಓಡೋಡಿ ಬರುವುದು... ಎಂದಿನಂತೆ ಎರಡು ದಿನ ಸಭೆ ನಡೆಸಿ, ಮಾಧ್ಯಮಗಳಿಗೆ ಒಂದಿಷ್ಟು ಹೇಳಿಕೆ ನೀಡಿ ವಾಪಸಾಗುವುದು...ಈ ಕೆಲಸ ಇನ್ನು ಸಾಕು, ನಿಮ್ಮ ಸ್ವಾರ್ಥ ಸಾಧನೆಗಾಗಿ ಇನ್ನು ನಮ್ಮನ್ನು ಕರೆಯಬೇಡಿ...~

ಮತ್ತೆ ಮತ್ತೆ ಬಂಡಾಯದ ಬಾವುಟ ಹಾರಿಸುವುದು, ಒಂದಾದ ನಂತರ ಇನ್ನೊಂದರಂತೆ ಗಡುವು ವಿಧಿಸುವ ಕ್ರಮದ ಬಗ್ಗೆ ಬಿಜೆಪಿ ಶಾಸಕರೊಬ್ಬರು ಭಿನ್ನಮತೀಯ ಬಣದ ಮುಖಂಡರಿಗೆ ಭಾನುವಾರ ಹೀಗೆ ಖಡಕ್ ಆಗಿ ಹೇಳಿದ್ದಾರೆ ಎಂದು ಗೊತ್ತಾಗಿದೆ.ರಾಜ್ಯ ಬಿಜೆಪಿ ಸರ್ಕಾರದ ನಾಯಕತ್ವ ಬದಲಾವಣೆಗೆ ಆಗ್ರಹಿಸಿ, ಸಚಿವ ಜಗದೀಶ ಶೆಟ್ಟರ್ ನಿವಾಸದಲ್ಲಿ ನಡೆದ ಸಭೆಯ ವೇಳೆ, ಈ ಶಾಸಕರು, `ನೀವು ಆಯೋಜಿಸುತ್ತಿರುವ ಸಭೆಗಳಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ. ಆದರೆ ಸಭೆಗಳು ಮಾತ್ರ ನಡೆಯುತ್ತಲೇ ಇವೆ. ಹೀಗೇ ಆದರೆ ಕ್ಷೇತ್ರದ ಜನರಿಂದ ನಾವು ದೂರವಾಗುತ್ತೇವೆ.ನಾಯಕರ ಸ್ವಾರ್ಥ ಸಾಧನೆಗಾಗಿ ಪದೇ ಪದೇ ಸಭೆ ಕರೆಯಲಾಗುತ್ತಿದೆ~ ಎಂದು ಅಸಮಾಧಾನ ಹೊರಹಾಕಿದರು ಎನ್ನಲಾಗಿದೆ. ಸಚಿವ ಸಿ.ಎಂ. ಉದಾಸಿ ನಿವಾಸದಲ್ಲಿ ಇತ್ತೀಚೆಗೆ ಸಭೆ ಸೇರಿದ್ದ ಸಂದರ್ಭದಲ್ಲೂ, ಬೆಂಗಳೂರು ಭಾಗದ ಶಾಸಕರೊಬ್ಬರು ಮುಖಂಡರಿಗೆ ಇದೇ ಮಾತು ಹೇಳಿದ್ದರು ಎಂದು ತಿಳಿದುಬಂದಿದೆ.

 

`ಬೇಕೆಂದಲ್ಲಿ ಅಂಗಡಿ ಹಾಕಬಹುದು...~

ಬೆಂಗಳೂರು: `ಜಾತ್ರೆ ನಡೆಯುತ್ತಿದೆ. ಬೇಕೆಂದಲ್ಲಿ ಅಂಗಡಿ ಹಾಕ್ಕೋತೀವಿ. ನಾವು ವ್ಯಾಪಾರಿಗಳು, ಇಂದು ಇಲ್ಲಿ, ನಾಳೆ ಇನ್ನೆಲ್ಲೋ... ಬಿಜೆಪಿ ಸರ್ಕಾರ ಈಗಾಗಲೇ ನಾಲ್ಕು ವರ್ಷ ಪೂರೈಸಿದೆ. ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಭರವಸೆ ಇಲ್ಲ. ನಮಗೆ ಎಲ್ಲಿ ಅನುಕೂಲವೋ ಅಲ್ಲಿಗೆ ಹೋಗುತ್ತೇವೆ~ ಎಂದು `ಆಪರೇಷನ್ ಕಮಲ~ದ ಮೂಲಕ ಬಿಜೆಪಿಗೆ ಬಂದ ಸಚಿವರೊಬ್ಬರು ಮಾತಿನ ದಾಳ ಎಸೆದರು. ಸಚಿವ ಜಗದೀಶ ಶೆಟ್ಟರ್ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪುನಃ ಪಕ್ಷಾಂತರ ಮಾಡುವ ಸೂಚನೆಯನ್ನು ಈ ಮೂಲಕ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.