ಶನಿವಾರ, ಏಪ್ರಿಲ್ 10, 2021
33 °C

ವಿವಿಧೆಡೆ ಕ್ವಿಟ್ ಇಂಡಿಯಾ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: `ಇಂದಿನ ವಿದ್ಯಾರ್ಥಿಗಳು ಗಟ್ಟಿ ನಿರ್ಧಾರ ಕೈಗೊಂಡರೆ ಮಾತ್ರ ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಸಾಧ್ಯ~ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಆರ್. ಸತ್ಯನಾರಾಯಣ ನುಡಿದರು.ಕ್ವಿಟ್ ಇಂಡಿಯಾ ದಿನಾಚರಣೆ ಅಂಗವಾಗಿ ನಗರದ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರೊ. ಸಿ.ಎನ್. ಲೋಕಪ್ಪಗೌಡ ಅವರ `ಭಾರತದ ಸ್ವಾತಂತ್ರ್ಯ ಚಳುವಳಿ~ ಗ್ರಂಥವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.`ಭ್ರಷ್ಟಾಚಾರ ತಡೆಗೆ ನಮ್ಮ ಮನೆಯಿಂದಲೇ ನಾಂದಿ ಹಾಡಬೇಕು. ಪೋಷಕರು ಭ್ರಷ್ಟ ಹಾದಿಯಿಂದ ಹಣ ಸಂಪಾದಿಸಿ ಮನೆಗೆ ಬಂದರೆ ಮಕ್ಕಳೇ ಅದನ್ನು ವಿರೋಧಿಸಬೇಕು. ಉಪವಾಸ ಮಾಡುವ ಮೂಲಕ ಅವರನ್ನು ಸರಿಹಾದಿಗೆ ತರುವ ಕಾರ್ಯ ಮಾಡಬೇಕು. ಹೀಗಾದರೆ ಮಾತ್ರ ಭಷ್ಟಾಚಾರ ನಿರ್ಮೂಲನೆ ಸಾಧ್ಯ ಎಂದರು.`ಹಿಂದಿನವರು ತ್ಯಾಗ-ಬಲಿದಾನದಿಂದ ಸಂಪಾದಿಸಿರುವ ಸ್ವಾತಂತ್ರ್ಯ ಇಂದು ಕೆಲವರಿಗೆ ಸ್ವೇಚ್ಛಾಚಾರವಾಗಿದೆ. ಹಿಂದೆ ಬ್ರಿಟೀಷರು ನಮ್ಮ ಸಂಪನ್ಮೂಲ ಲೂಟಿ ಮಾಡಿದ್ದರೆ, ಇಂದು ನಮ್ಮವರೇ ಆ ಕೆಲಸ ಮಾಡುತ್ತಿದ್ದಾರೆ. ನಮ್ಮ ಖನಿಜ ವಸ್ತು, ಅದಿರುಗಳನ್ನು ನಮ್ಮವರೇ ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಅದರ ಬದಲು ನಮ್ಮಲ್ಲೇ ಕೆಲವು ಕಾರ್ಖಾನೆಗಳನ್ನು ಸ್ಥಾಪಿಸಿದ್ದರೆ ನಮ್ಮವರಿಗೆ ಸಾಕಷ್ಟು ಉದ್ಯೋಗ ಲಭಿಸುತ್ತಿತ್ತು~ ಎಂದರು.ಮುಖ್ಯ ಅತಿಥಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ, `ಹೆಣ್ಣು  ಮಕ್ಕಳು ಮನಸ್ಸು ಮಾಡಿದರೆ ದೇಶದ ಚಿತ್ರಣವನ್ನೇ ಬದಲಿಸಬಹುದು. ಇಂದಿನ ಹೆಣ್ಣುಮಕ್ಕಳು ಕೆಲವು ಗುರಿ ಇಟ್ಟುಕೊಂಡು ಕೆಲಸ ಮಾಡಬೇಕು~ ಎಂದರು.`ಪತಿ ಆದಾಯಕ್ಕಿಂತ ಹೆಚ್ಚಿನ ಹಣವನ್ನು ಮನೆಗೆ ತಂದರೆ ಅದನ್ನು ಧಿಕ್ಕರಿಸುವ ಧೈರ್ಯವನ್ನು ಮಹಿಳೆಯರು ಪ್ರದರ್ಶಿಸಬೇಕು. ಇರುವ ಆದಾಯದಲ್ಲೇ ಜೀವನ ಸಾಗಿಸುವ ಧೈರ್ಯ ಯನ್ನು ಅವರು ಪ್ರದರ್ಶಿಸಬೇಕು~ ಎಂದರು.ಐತಿಹಾಸಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವಂತೆ ಮಕ್ಕಳಿಗೆ ಸಲಹೆ ನೀಡಿದ ಮುದ್ದೇಗೌಡರು, `ಸ್ವಾತಂತ್ರ್ಯ ಚಳವಳಿಯಲ್ಲಿ ವಿದ್ಯಾರ್ಥಿಗಳು ಮಹತ್ವದ ಪಾತ್ರ ವಹಿಸಿದ್ದರು. ವಿದ್ಯಾರ್ಥಿಗಳಿಂದ ಮಾತ್ರ ಅದನ್ನು ಉಳಿಸಲು ಸಾಧ್ಯ. ಸ್ವಾತಂತ್ರ್ಯ ಹೋರಾಟದಲ್ಲಿ ಹಾಸನದ ಅನೇಕ ಮಹನೀಯರು ತ್ಯಾಗ- ಬಲಿದಾನ ಮಾಡಿದ್ದಾರೆ. ಆದರೆ ನಮ್ಮವರಿಗೆ ಅವರ ಬಗ್ಗೆ ಮಾಹಿತಿ ಇಲ್ಲ. ಇಂಥವರ ಬಗ್ಗೆ ಮಾಹಿತಿ ನೀಡುವ ಪುಸ್ತಕಗಳನ್ನು ಪ್ರಕಟಿಸಿ~ ಎಂದು ಲೋಕಪ್ಪಗೌಡ ಅವರಿಗೆ ಸಲಹೆ ನೀಡಿದರು.ಕಾಲೇಜಿನ ಪ್ರಾಚಾರ್ಯ ಪ್ರೊ. ವಿ. ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.  ಪ್ರೊ. ಸಿ.ಎನ್. ಲೋಕಪ್ಪಗೌಡ ಪ್ರಾಸ್ತಾವಿಕ ಮಾತನಾಡಿದರು. ಯೋಗೇಶ್ ಅವರು ಕೃತಿಯ ಬಗ್ಗೆ ಮಾತನಾಡಿದರು.`ಮಹನೀಯರ ತ್ಯಾಗ ಬಲಿದಾನ ಸ್ಮರಣೆ ಅಗತ್ಯ~

ಹಾಸನ: `ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ವಿಟ್ ಇಂಡಿಯಾ ಚಳವಳಿ ಅತಿ ಮಹತ್ವದ ಘಟ್ಟ. ಈ ಹೋರಾಟದಿಂದ ಸ್ವಾತಂತ್ರ್ಯ ಚಳುವಳಿ ಕಳೆಗಟ್ಟಿತು. ಕ್ಷಿಪ್ರವಾಗಿ ದೇಶಾದ್ಯಂತ ವ್ಯಾಪಿಸಿದ ಈ ಚಳವಳಿಯಿಂದಾಗಿ 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು~ ಎಂದು ಮಾನವೀಯ ಮಹಿಳಾ ಅಧ್ಯಯನ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷೆ ಕೆ.ಟಿ. ಜಯಶ್ರೀ ನುಡಿದರು.ಸರ್ಕಾರಿ ಕಲಾ ಕಾಲೇಜಿನ ಹೊಯ್ಸಳ ಇತಿಹಾಸ ವೇದಿಕೆ ಹಾಗೂ ಮಾನವೀಯ ಮಹಿಳಾ ಅಧ್ಯಯನ ಕೇಂದ್ರಗಳ ಸಹಯೋಗದಲ್ಲಿ ಗುರುವಾರ ಕಲಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ `ಕ್ವಿಟ್ ಇಂಡಿಯಾ~ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ವಿಭಾಗದ ಮುಖ್ಯಸ್ಥ ಶಿವಣ್ಣ ಗೌಡ ಹಾಗೂ ಡಾ. ಎಚ್.ಎನ್. ವಿದ್ಯಾ ಅವರು ಕ್ವಿಟ್ ಇಂಡಿಯಾ ಕಳವಳಿಯ ಮಹತ್ವ ಹಾಗೂ ಇತರ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಅಧ್ಯಕ್ಷತೆ ವಹಿಸಿದ್ದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಅಣ್ಣಯ್ಯ, `ವಿದ್ಯಾರ್ಥಿಗಳು ಇಂಥ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇಶ ಸ್ವತಂತ್ರವಾಗಲು ನಮ್ಮ ಹಿರಿಯರು ಮಾಡಿರುವ ತ್ಯಾಗ ಬಲಿದಾನಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಪಡೆದುಕೊಳ್ಳಬೇಕು ಮತ್ತು ಆ ಮೂಲಕ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು~ ಎಂದರು.ವಿದ್ಯಾರ್ಥಿಗಳಾದ ಮನು ಮತ್ತು ಶರತ್ ಕುಮಾರ್  ಚಳವಳಿಯ ವಿವಿಧ ಹಂತದ ಬಗ್ಗೆ ಮಾತನಾಡಿದರು. ಅನಿಲ್ ಮತ್ತು ದಿಲೀಪ್ ಸುಭಾಸ್‌ಚಂದ್ರ ಬೋಸ್ ಹಾಗೂ ಗಾಂಧೀಜಿ ಅವರ ಏಕಪಾತ್ರಾಭಿನಯ ಮಾಡಿದರು.ಲತಾ ಹಾಗೂ ಅಶ್ವಿನಿ ಪ್ರಾರ್ಥನಾ ಗೀತೆ ಹಾಡಿದರು. ಜಯಂತ್  ಮತ್ತು ಹರೀಶ್ ದೇಶಭಕ್ತಿ ಗೀತೆಗಳನ್ನು ಹಾಡಿದರು. ವಿದ್ಯಾರ್ಥಿ ಮಣಿಕಂಠ ಸಂಪಾದಕತ್ವದ ಕ್ವಿಟ್ ಇಂಡಿಯಾ ಚಳವಳಿ ಬಗ್ಗೆ ಮಾಹಿತಿ ಇರುವ ಗೋಡೆಬರಹದ ಪತ್ರಿಕೆಯನ್ನು ಇದೇ ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು.ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಬಹುಮಾನ ಗೆದ್ದ ವಿದ್ಯಾರ್ಥಿಗಳಿಗೆ ಕೆ.ಟಿ. ಜಯಶ್ರೀ ಬಹುಮಾನ ವಿತರಿಸಿದರು.ಕೊನೆಯಲ್ಲಿ ದೇಶಭಕ್ತಿ ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.`ಸ್ಮಾರಕ ರಕ್ಷಣೆ ಎಲ್ಲರ ಹೊಣೆ~

ಬಾಣಾವರ: ಪೂರ್ವಜರ ಜೀವನ ವಿಧಾನ ತಿಳಿಯಲು ಇತಿಹಾಸದ ಅಧ್ಯಯನ ಅಗತ್ಯ ಎಂದು ಬಾಣಾ ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಿ.ಮಂಜುನಾಥ್ ತಿಳಿಸಿದರು.   ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವೇದಿಕೆ ವತಿಯಿಂದ ಗುರುವಾರ ಆಯೋಜಿ ಸಿದ್ದ ಕ್ವಿಟ್ ಇಂಡಿಯಾ ದಿನ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಸ್ಮಾರಕಗಳನ್ನು ರಕ್ಷಣೆ ಎಲ್ಲರ ಹೊಣೆ ಎಂದರು.   ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾ ಪಕ ಜಿ.ಮಹೇಶ್ವರಪ್ಪ ಮಾತನಾಡಿ, ಭಾರತ ಸಂಪದ್ಭರಿತ ದೇಶವಾಗಿದ್ದ ರಿಂದಲೇ ವಿದೇಶಿಯರು ಆಕ್ರಮಣಕ್ಕೆ ಪ್ರಮುಖ ಕಾರಣ. ವ್ಯಾಪರಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು ಪರಿ ಸ್ಥಿತಿಯ ಅನುಕೂಲ ಪಡೆದು ಇಲ್ಲೇ ನೆಲೆಯೂರಿದ್ದರು. ಅಸಹಕಾರ, ಕಾನೂನು ಭಂಗ, ಉಪ್ಪಿನ ಸತ್ಯಾಗ್ರಹ ಗಳನ್ನು ಕೈಗೊಂಡು ಬ್ರಿಟಿಷರನ್ನು ಹೊಡೆದೊಡಿ ಸಲಾಯಿತು. ಸ್ವಾತಂತ್ರಕ್ಕಾಗಿ ತ್ಯಾಗಬಲಿದಾನ ಮಾಡಿದವರನ್ನು ನೆನೆಯುವುದು ಗೌರವಿಸುವುದು ಆದ್ಯ ಕರ್ತವ್ಯ ಎಂದರು. ಪ್ರಾಂಶುಪಾಲ ಡಿ.ಎಲ್.ಹರೀಶ್ ಅಧ್ಯಕ್ಷತೆ ವಹಿಸಿದ್ದರು. ನಂದಿನಿ ವಂದಿಸಿ, ಪೂಜಾ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.