ಗುರುವಾರ , ಮೇ 13, 2021
38 °C

ವಿಶೇಷ ನೀರಾವರಿ ಅಧಿವೇಶನಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ದಕ್ಷಿಣ ಬಯಲು ಸೀಮೆಯ ಆರು ಜಿಲ್ಲೆಗಳ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ `ಪಿನಾಕಿನಿ- ಪಾಲಾರ್ ನದಿ' ಕಣಿವೆ ನೀರಾವರಿ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಇದೇ ಬುಧವಾರ (ಜೂನ್ 5) `ವಿಶೇಷ ನೀರಾವರಿ ಅಧಿವೇಶನ' ಕರೆಯಬೇಕು' ಎಂದು ಪಿನಾಕಿನಿ- ಪಾಲಾರ್ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಸಂಚಾಲಕ ಚೌಡಪ್ಪ ಒತ್ತಾಯಿಸಿದರು.ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿನಾಕಿನಿ- ಪಾಲಾರ್ ನೀರಾವರಿ ಯೋಜನೆ ಜಾರಿಯಾದರೆ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಿಗೆ ನೀರು ಒದಗಿಸಬಹುದು ಎಂದರು.ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಈ ಜಿಲ್ಲೆಗಳಲ್ಲಿ ಸಾವಿರ ಅಡಿ ಬೋರ್‌ವೆಲ್ ಕೊರೆದರೂ ನೀರು ಸಿಗುತ್ತಿಲ್ಲ. ಲಭ್ಯವಾಗುವ ನೀರು ಪ್ಲೋರೈಡ್‌ಯುಕ್ತವಾಗಿದ್ದು ಬಳಕೆಗೆ ಯೋಗ್ಯವಾಗಿಲ್ಲ. ಆದ್ದರಿಂದ ಈ ಭಾಗದ ನೀರಿನ ಸಮಸ್ಯೆ ಪರಿಹರಿಸಲು ಈ ಯೋಜನೆ ಜಾರಿಯ ಅಗತ್ಯವಿದೆ ಎಂದು ಹೇಳಿದರು.ಯೋಜನೆ ಜಾರಿಯಾದರೆ 334.578 ಟಿ.ಎಂ.ಸಿ. ನೀರು ಲಭ್ಯವಾಗಲಿದೆ. ಆರು ಜಿಲ್ಲೆಗಳ 7,824 ಗ್ರಾಮಗಳ 26,76,674 ಎಕರೆ ಕೃಷಿ ಭೂಮಿಗೆ ನೀರು ಒದಗಿಸಬಹುದು. ಬರದಿಂದ ನೀರಿಲ್ಲದೆ ಬರಿದಾಗಿರುವ ಆರು ಜಿಲ್ಲೆಗಳ 8,299 ಕೆರೆಗಳು ಮತ್ತು ಮರಳು ಗಣಿಗಾರಿಕೆಯಿಂದ ಬರಡಾಗಿರುವ ಈ ಭಾಗದ 18 ನದಿಗಳು ಪುನಶ್ಚೇನಗೊಳ್ಳಲಿವೆ ಎಂದರು.ಅಲ್ಲದೆ ಮಂಡ್ಯ, ಹಾಸನ ಜಿಲ್ಲೆಗಳಿಗೂ ನೀರು ಒದಗಿಸಬಹುದು. ಆದ್ದರಿಂದ `ಪಿನಾಕಿನಿ- ಪಾಲಾರ್ ನದಿ' ಕಣಿವೆ ನೀರಾವರಿ ಯೋಜನೆಯನ್ನು ಜಾರಿಗೊಳಿಸಲು ಪರಮಶಿವಯ್ಯನವರು ನೀಡಿರುವ ವರದಿಯ ಜಾರಿ ಕುರಿತು ಚರ್ಚಿಸಲು `ವಿಶೇಷ ನೀರಾವರಿ ಅಧಿವೇಶನ' ಕರೆಯಬೇಕು. 12ನೇ ಪಂಚವಾರ್ಷಿಕ ಯೋಜನೆಯಲ್ಲಿ ರಾಷ್ಟ್ರೀಯ ನೀರಾವರಿ ಯೋಜನೆಯನ್ನಾಗಿ ಜಾರಿಗೋಳಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಮನವಿ ಮಾಡಿದರು.  

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.