ಬುಧವಾರ, ಏಪ್ರಿಲ್ 14, 2021
23 °C

ವಿಶೇಷ ಪೊಲೀಸ್ ತಂಡ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಚಾರ ನಿಯಮಗಳ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಲು ಸಹಾಯಕ ಸಂಚಾರ ಪೊಲೀಸ್ ಕಮಿಷನರ್ ಕಚೇರಿ (ಎಸಿಪಿ) ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿಯ ವಿಶೇಷ ತಂಡಗಳನ್ನು ರಚಿಸಲು ನಗರ ಪೊಲೀಸ್ ಕಮಿಷನರ್ ಶಂಕರ ಬಿದರಿ ನಿರ್ಧರಿಸಿದ್ದಾರೆ.

ಸಂಚಾರ ಪೊಲೀಸ್ ಸಿಬ್ಬಂದಿ ಮತ್ತು ಟ್ರಾಫಿಕ್ ವಾರ್ಡನ್‌ಗಳನ್ನು ಒಳಗೊಂಡ ಈ ವಿಶೇಷ ತಂಡಗಳು ಶಾಲೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಿವೆ.‘ಟ್ರಾಫಿಕ್ ಎಜುಕೇಶನ್’ ಹೆಸರಿನ ಈ ತಂಡ ತಲಾ ಮೂರು ಮಂದಿ ಸಂಚಾರ ಪೊಲೀಸರು ಮತ್ತು ಟ್ರಾಫಿಕ್ ವಾರ್ಡನ್‌ಗಳನ್ನು ಒಳಗೊಂಡಿರುತ್ತದೆ. ಮೊದಲೇ ಗುರುತಿಸಿದ ಶಾಲೆಗಳಿಗೆ ತೆರಳುವ ಈ ತಂಡ ಮಕ್ಕಳಿಗೆ ಸಂಚಾರ ನಿಯಮಗಳ ಬಗ್ಗೆ ಶಿಕ್ಷಣ ನೀಡಲಿದೆ.

 ಎಲ್ಲ ವಿದ್ಯಾರ್ಥಿಗಳಿಗೆ ಕೈಪಿಡಿಯನ್ನೂ ವಿತರಿಸಲಾಗುತ್ತದೆ. ಪವರ್ ಪಾಯಿಂಟ್ ಮೂಲಕ ವಿವರಣೆಯನ್ನು ಕೊಡಲಾಗುತ್ತದೆ. ನಿಯಮಗಳ ಬಗ್ಗೆ ಏನಾದರೂ ಅನುಮಾನಗಳಿದ್ದರೆ ವಿದ್ಯಾರ್ಥಿಗಳು ಪ್ರಶ್ನೆ ಕೇಳಿ ಅದಕ್ಕೆ ಉತ್ತರ ಪಡೆಯಬಹುದು.‘ಈ ಹಿಂದೆ ಉಪ ಪೊಲೀಸ್ ಕಮಿಷನರ್ ಕಚೇರಿ ವ್ಯಾಪ್ತಿಯಲ್ಲಿ ತಂಡ ರಚಿಸಲಾಗಿತ್ತು. ಮಕ್ಕಳಿಗೆ ಸಂಚಾರದ ಬಗ್ಗೆ ಶಿಕ್ಷಣ ನೀಡುವ ಅಗತ್ಯ ಹೆಚ್ಚಿರುವುದರಿಂದ ಏಳು ಎಸಿಪಿ ಕಚೇರಿ ವ್ಯಾಪ್ತಿಯಲ್ಲಿ ತಂಡ ರಚಿಸಲಾಗುತ್ತದೆ.

 ಹೀಗೆ ಮಾಡುವುದರಿಂದ ಹೆಚ್ಚು ಶಾಲೆಗಳಿಗೆ ಭೇಟಿ ನೀಡಿ ಅರಿವು ಮೂಡಿಸಬಹುದು’ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂಚಾರ ನಿಯಮಗಳ ಮಾಹಿತಿ ಒಳಗೊಂಡ ಒಟ್ಟು ಒಂದು ಲಕ್ಷ ಕೈಪಿಡಿಗಳನ್ನು ಹಿಂದಿನ ವರ್ಷ ವಿತರಿಸಲಾಗಿದೆ. ಈ ವರ್ಷ ಅದನ್ನು ಎರಡು ಲಕ್ಷಕ್ಕೆ ಹೆಚ್ಚಿಸುವ ಗುರಿ ಇದೆ. ಪುಟ್ಟ ಪುಸ್ತಕದ ಮಾದರಿಯ ಈ ಕೈಪಿಡಿ ಮಕ್ಕಳಿಗೆ ಮಾತ್ರವಲ್ಲ ಹಿರಿಯರಿಗೂ ಉಪಯುಕ್ತ. ಸಿ.ಡಿ ಗಳನ್ನೂ ನೀಡುವ ಉದ್ದೇಶ ಇದೆ’ ಎಂದು ಅವರು ಹೇಳಿದರು.

‘ಬೆಂಗಳೂರಿನ ಸಂಚಾರ ನಿರ್ವಹಣೆ ಸವಾಲಿನ ಮತ್ತು ಸೂಕ್ಷ್ಮ ಕೆಲಸವಾಗಿದೆ. ಸಂಚಾರ ನಿರ್ವಹಣೆ ಉತ್ತಮವಾಗಿದ್ದರೆ ಮಾತ್ರ ಜನರ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಸಂಚಾರದ ಬಗ್ಗೆ ಮೊದಲಿನಿಂದಲೂ ವಿಶೇಷ ಗಮನ ನೀಡಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಟ್ರಾಫಿಕ್ ಎಜುಕೇಶನ್ ಟೀಮ್ ರಚಿಸಲು ತೀರ್ಮಾನಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಶಂಕರ ಬಿದರಿ ಹೇಳಿದರು.

‘ಮಕ್ಕಳು ಭವಿಷ್ಯದ ವಾಹನ ಚಾಲಕರು, ಆದ್ದರಿಂದ ಚಿಕ್ಕ ವಯಸ್ಸಿನಲ್ಲೇ ಅವರಿಗೆ ಸಂಚಾರ ನಿಯಮಗಳ ಬಗ್ಗೆ ಶಿಕ್ಷಣ ನೀಡಿದರೆ ಉಪಯೋಗವಾಗಲಿದೆ. ಎಲ್ಲರೂ ನಿಯಮಗಳನ್ನು ಪಾಲಿಸಿ ವಾಹನ ಚಾಲನೆ ಮಾಡಿದರೆ ಅಪಘಾತಗಳು ಕಡಿಮೆಯಾಗಲಿವೆ’ ಎಂದು ಅವರು ಅಭಿಪ್ರಾಯಪಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.