ಗುರುವಾರ , ಫೆಬ್ರವರಿ 25, 2021
27 °C
ವಿಜ್ಞಾನ ವಿಶೇಷ

ವಿಶ್ವ ವಿಸ್ಮಯದ ಎರಡು ಪ್ರಶ್ನೆಗಳು

ಎನ್‌. ವಾಸುದೇವ್‌ Updated:

ಅಕ್ಷರ ಗಾತ್ರ : | |

ವಿಶ್ವ ವಿಸ್ಮಯದ ಎರಡು ಪ್ರಶ್ನೆಗಳು

1. ವಿಶ್ವದ ಅತ್ಯಂತ ಬೃಹತ್‌ ಗ್ಯಾಲಕ್ಸಿ ಯಾವುದು?

ಅದರ ಹೆಸರು ‘ಐ.ಸಿ. 1101’ ಈವರೆಗೆ ತಿಳಿದಿರುವ ಸಕಲ ಗ್ಯಾಲಕ್ಸಿಗಳಲ್ಲೂ ಸರ್ವವಿಧ ಲಕ್ಷಣಗಳಲ್ಲೂ ಈ ಗ್ಯಾಲಕ್ಸಿಯದೇ ಗರಿಷ್ಠ ಅಳತೆಗಳ ವಿಶ್ವದಾಖಲೆ. ಹಾಗೆಂದರೆ ಉದ್ದ–ಅಗಲ–ವಿಸ್ತಾರಗಳಲ್ಲಿ, ಒಟ್ಟು ದ್ರವ್ಯರಾಶಿಯಲ್ಲಿ, ನಕ್ಷತ್ರ ಸಂಖ್ಯೆಯಲ್ಲಿ... ಹಾಗೆಲ್ಲ ಪ್ರತಿಯೊಂದು ಅಂಶದಲ್ಲೂ ಈ ಗ್ಯಾಲಕ್ಸಿಗೆ ಇನ್ನಾವ ಗ್ಯಾಲಕ್ಸಿಯೂ ಸಾಟಿ ಇಲ್ಲ!ನಿಮಗೇ ತಿಳಿದಂತೆ ವಿಶ್ವದಲ್ಲಿ ಒಂದು ಲಕ್ಷ–ಕೋಟಿ–ಕೋಟಿ (10ರ ಘಾತ 19) ಗ್ಯಾಲಕ್ಸಿಗಳಿವೆ. ನಮ್ಮ ‘ಕ್ಷೀರಪಥ’ ಮತ್ತು ಅದರ ಆಸುಪಾಸಿನ ಗ್ಯಾಲಕ್ಸಿಗಳೂ ಸೇರಿ (ಚಿತ್ರ 1 ರಿಂದ 7) ಪ್ರತಿ ಗ್ಯಾಲಕ್ಸಿಯಲ್ಲೂ ಸರಾಸರಿ ಹತ್ತು ಸಾವಿರ ಕೋಟಿ (10 ಘಾತ 11) ನಕ್ಷತ್ರಗಳಿವೆ. ಒಂದರಿಂದ ಮತ್ತೊಂದು ಲಕ್ಷಾಂತರ ಜ್ಯೋತಿರ್ವರ್ಷ ದೂರದಲ್ಲಿರುವ ಈ ಗ್ಯಾಲಕ್ಸಿಗಳು ಹಾಗಿದ್ದೂ ವಿಶ್ವದ ‘ಅನಂತ’ ವಿಸ್ತಾರದಲ್ಲಿ ಅಲ್ಲಲ್ಲಿ ಗುಂಪು ಗುಂಪಾಗಿವೆ.‘ಗ್ಯಾಲಕ್ಸಿಯ ಗುಚ್ಛ’ಗಳೆಂದೇ ಕರೆಯಲ್ಪಡುವ ಅಂತಹ ಗುಂಪುಗಳಲ್ಲಿ ಹರಡಿರುವ ಗ್ಯಾಲಕ್ಸಿಗಳಲ್ಲಿ ಪ್ರಧಾನವಾಗಿ ಮೂರು ವಿಧಗಳಿವೆ: ‘ಸುರುಳಿ ಗ್ಯಾಲಕ್ಸಿ, ಎಲಿಪ್ಸೀಯ ಗ್ಯಾಲಕ್ಸಿ ಮತ್ತು ಅನಿಯತ ಗ್ಯಾಲಕ್ಸಿ.’ ನಮ್ಮ ಕ್ಷೀರಪಥ ಗ್ಯಾಲಕ್ಸಿ (ಚಿತ್ರ 1), ಆ್ಯಂಡ್ರೋಮೇಡಾ ಗ್ಯಾಲಕ್ಸಿ (ಚಿತ್ರ 2) ಮತ್ತಿತರ ಕೆಲ ಸುರುಳಿ ಗ್ಯಾಲಕ್ಸಿಗಳನ್ನು ಚಿತ್ರ 4,6,7 ರಲ್ಲೂ, ಒಂದು ಅನಿಯತ ಗ್ಯಾಲಕ್ಸಿಯನ್ನು ಚಿತ್ರ 4 ರಲ್ಲೂ ಗಮನಿಸಿ.ದೈತ್ಯ ಗಾತ್ರದಲ್ಲಿ ವಿಶ್ವ ವಿಕ್ರಮ ಸ್ಥಾಪಿಸಿರುವ ಐ.ಸಿ. 1101 ಎಲಿಪ್ಸಿಯ ಗ್ಯಾಲಕ್ಸಿ ವರ್ಗಕ್ಕೆ ಸೇರಿದೆ. ಲಕ್ಷಾಂತರ ಗ್ಯಾಲಕ್ಸಿಗಳಿಂದ ಕೂಡಿರುವ ‘ಎಬೆಲ್‌ 2029’ ಎಂಬ ಗ್ಯಾಲಕ್ಸಿಯ ಗುಚ್ಛದ ಕೇಂದ್ರ ಭಾಗದಲ್ಲಿ ಈ ಸೂಪರ್‌ ದೈತ್ಯ ಗ್ಯಾಲಕ್ಸಿ ನೆಲೆಗೊಂಡಿದೆ.ರಾಶಿ ನಕ್ಷತ್ರ ಪುಂಜಗಳಲ್ಲೊಂದಾದ ‘ಕನ್ಯಾ ರಾಶಿ’ಯಲ್ಲಿರುವ ಈ ಪರಮ ಬೃಹತ್‌ ಗ್ಯಾಲಕ್ಸಿ ನಮ್ಮಿಂದ ಒಂದು ಶತಕೋಟಿ ಜ್ಯೋತಿರ್ವರ್ಷ ದೂರದಲ್ಲಿದೆ! (ಹಾಗೆಂದರೆ ‘ಬೆಳಕಿನ ವೇಗ’ದಲ್ಲಿ ಯಾನ ಕೈಗೊಂಡರೆ ಭೂಮಿಯಿಂದ ಹೊರಟು ಐಸಿ 1101 ಗ್ಯಾಲಕ್ಸಿಯನ್ನು ತಲುಪಲು ಒಂದು ನೂರು ಕೋಟಿ ವರ್ಷ ಬೇಕು!)ಐಸಿ 1101 ಗ್ಯಾಲಕ್ಸಿಯ ಗರಿಷ್ಠ ವ್ಯಾಸ ಮೂರು ದಶಲಕ್ಷ ಜ್ಯೋತಿರ್ವರ್ಷ! ನಮ್ಮ ಕ್ಷೀರಪಥದ ವ್ಯಾಸ ಒಂದು ಲಕ್ಷ ಜ್ಯೋತಿರ್ವರ್ಷ. ಹಾಗೆಂದರೆ ಐಸಿ 1101 ಗ್ಯಾಲಕ್ಸಿಯ ಉದ್ದ ಮುವ್ವತ್ತು ಕ್ಷೀರಪಥಗಳನ್ನು ಸಾಲುಗಟ್ಟಿಸಿದಷ್ಟಕ್ಕೆ ಸಮ ಎಂದಾಯಿತು!ಐಸಿ 1101 ಗ್ಯಾಲಕ್ಸಿಯ ನಕ್ಷತ್ರ ಸಂಖ್ಯೆ ಇನ್ನೂ ಕಲ್ಪನಾತೀತ. ಕ್ಷೀರಪಥ ಗ್ಯಾಲಕ್ಸಿಯಲ್ಲಿ ಸುಮಾರು ಒಂದು ನೂರು ಶತಕೋಟಿ ನಕ್ಷತ್ರಗಳಿವೆ. ಐಸಿ 1101 ರಲ್ಲಿರುವ ನಕ್ಷತ್ರಗಳ ಸಂಖ್ಯೆ ಕ್ಷಿರಪಥದ ಒಂದು ಸಾವಿರ ಮಡಿ ಆಗುವಷ್ಟಿದೆ. ಐಸಿ 1101 ರಲ್ಲಿರುವ ನಕ್ಷತ್ರಗಳ ಸಂಖ್ಯೆ ಒಂದು ಲಕ್ಷ ಶತಕೋಟಿ!

ಒಟ್ಟು ದ್ರವ್ಯರಾಶಿಯಲ್ಲೀ ಕೂಡ ಐಸಿ 1101 ಊಹಾತೀತ.ಕ್ಷೀರಪಥದ ಒಟ್ಟೂ ದ್ರವ್ಯರಾಶಿಯ ಎರಡು ಸಾವಿರದ ಐನೂರು ಪಟ್ಟು ದ್ರವ್ಯರಾಶಿ ಐಸಿ 1101 ಗ್ಯಾಲಕ್ಸಿಯಲ್ಲಿ ತಾರೆಗಳು ಮತ್ತಿತರ ಕಾಯಗಳ ರೂಪದಲ್ಲಿ ಸಂಗ್ರವಾಗಿದೆ!ಎಷ್ಟು ದೈತ್ಯ ಎಂಥ ಅದ್ಭುತ ಗ್ಯಾಲಕ್ಸಿ! ಅಲ್ಲವೇ?* * *

2. ಅನ್ಯ ಗ್ರಹಗಳಲ್ಲಿ ಏನೇನು ಬಗೆ?

ನಮ್ಮ ಸೌರವ್ಯೂಹಕ್ಕೆ (ಚಿತ್ರ 8) ಸೇರಿಲ್ಲದ, ಹಾಗೆಂದರೆ ನಮ್ಮ ಸೂರ್ಯನನ್ನು ಬೊಟ್ಟು ಇತರ ಯಾವುದೇ ನಕ್ಷತ್ರವನ್ನು ಪರಿಭ್ರಮಿಸುತ್ತಿರುವ ಗ್ರಹವೇ ‘ಅನ್ಯಗ್ರಹ.’ ಇಸವಿ 1992 ರಲ್ಲಿ ಪ್ರಥಮವಾಗಿ ಪತ್ತೆಯಾದ ಮೊತ್ತಮೊದಲ ಅನ್ಯಗ್ರಹದಿಂದ ಆರಂಭವಾಗಿ ಈವರೆಗೆ ಪತ್ತೆಯಾಗಿರುವ ಅನ್ಯಗ್ರಹಗಳ ಸಂಖ್ಯೆ 3472 ಅನ್ನು ಮುಟ್ಟಿದೆ!ನಮ್ಮ ಸೌರವ್ಯೂಹದಂತಹ 2597 ಬಹುಗ್ರಹವ್ಯೂಹಗಳೂ ಗುರುತಿಸಲ್ಪಟ್ಟಿವೆ. ಪ್ರಮುಖವಾಗಿ ಹಬಲ್‌ ಬಾಹ್ಯಾಕಾಶ ದೂರದರ್ಶಕ, ಸ್ಪಿಟ್ಜರ್‌ ವ್ಯೋಮ ದೂರದರ್ಶಕ ಮತ್ತು ಕೆಪ್ಲರ್‌ ಅಂತರಿಕ್ಷ ದೂರದರ್ಶಕಗಳ ನೆರವಿನಿಂದ ಪತ್ತೆಯಾಗಿರುವ ಅನ್ಯಗ್ರಹಗಳ ಪಟ್ಟಿ ದಿನೇ ದಿನೇ ಬೆಳೆಯುತ್ತಲೂ ಇದೆ.ಅನ್ಯಗ್ರಹ ಶೋಧ ಕಾರ್ಯದಲ್ಲಿ ನಿರತರಾಗಿರುವ ಖಗೋಳ ವಿಜ್ಞಾನಿಗಳ ಪ್ರಕಾರ ನಮ್ಮ ಗ್ಯಾಲಕ್ಸಿಯೊಂದರಲ್ಲೇ ಕನಿಷ್ಟ ಒಂದು ನೂರು ಕೋಟಿಗೂ ಅಧಿಕ ಅನ್ಯಗ್ರಹಗಳು ಖಂಡಿತ ಇವೆ!ಇಲ್ಲಿ ಬಹು ಕುತೂಹಲದ ಒಂದು ಪ್ರಶ್ನೆ ಬಹಳ ಸಹಜ: ‘ಈ ವರೆಗೆ ಪತ್ತೆಯಾಗಿರುವ ಅನ್ಯಗ್ರಹಗಳಲ್ಲಿ ಬೇರೆ ಬೇರೆ ವಿಧಗಳಿವೆಯೇ? ನಮ್ಮ ಸೌರವ್ಯೂಹದಲ್ಲಿರುವ ಗ್ರಹಗಳಿಂದ ಭಿನ್ನವಾಗಿರುವ ಬಗೆಗಳ ಅನ್ಯಗ್ರಹಗಳು ಇವೆಯೇ?’ವಾಸ್ತವ ಏನೆಂದರೆ ನಮ್ಮ ಸೌರವ್ಯೂಹದಲ್ಲಿರುವ ತ್ರಿವಿಧ ಗ್ರಹಗಳಾದ ಭೌಮಿಕ ಗ್ರಹಗಳು (ಚಿತ್ರ 9) ಅನಿಲ ದೈತ್ಯರು (ಚಿತ್ರ 10) ಮತ್ತು ಕುಬ್ಜಗ್ರಹಗಳು– ಇಂತಹವಷ್ಟೇ ಅಲ್ಲದೆ ಇನ್ನೂ ಹಲವಾರು ವಿಭಿನ್ನ ವಿಶಿಷ್ಟ ವಿಧಗಳು ಅನ್ರಗ್ರಹಗಳಲ್ಲಿವೆ. ಅಂತಹ ಪ್ರಮುಖ ಅನ್ಯಗ್ರಹ ವಿಧಗಳು ಹೀಗಿವೆ:1. ಪಲ್ಸಾರ್‌ ಗ್ರಹಗಳು:

ದೈತ್ಯ ನಕ್ಷತ್ರಗಳು ಅವುಗಳ ಬಾಳಿನ ಅಂತ್ಯದಲ್ಲಿ ‘ಸೂಪರ್‌ ನೋವಾ’ಗಳಾಗಿ ಸಿಡಿದ ನಂತರ ಉಳಿವ ಅತ್ಯಂತ ಸಾಂದ್ರ ಅವಶೇಷಗಳಾದ ‘ಪಲ್ಸಾರ್‌’ಗಳನ್ನು ಪರಿಭ್ರಮಿಸುತ್ತಿರುವ ಅನ್ಯಗ್ರಹಗಳು ಇವು. ಈ ವಿಧದ ಅನ್ಯಗ್ರಹಗಳು ಗ್ಯಾಲಕ್ಸಿಯ ಬೇರೆಲ್ಲೋ ಮೈದಳೆದು, ಅಲೆಮಾರಿಗಳಾಗಿ, ಆಕಸ್ಮಿಕವಾಗಿ ಪಲ್ಸಾರ್‌ನ ಗುರುತ್ವಕ್ಕೆ ಸಿಲುಕಿ ಅದನ್ನೇ ಪರಿಭ್ರಮಿಸುತ್ತ ಉಳಿಯುತ್ತವೆ (ಚಿತ್ರ 11)2. ‘ಬಿಸಿ ಗುರು’ ಗ್ರಹಗಳು:

ನಮ್ಮ ಸೌರವ್ಯೂಹದ ಗುರುಗ್ರಹದಂತೆಯೇ ‘ಅನಿಲ ದೈತ್ಯ’ರಾದ ಗ್ರಹಗಳು ನಕ್ಷತ್ರಗಳಿಗೆ ಸಮೀಪವಾದ, ನಕ್ಷತ್ರದ ಬಿಸಿ ತೀಕ್ಷ್ಣವಾಗಿಯೇ ತಲುಪುವ ಪ್ರದೇಶದಲ್ಲಿ ಪಥ ಹಿಡಿದು ಪರಿಭ್ರಮಿಸುತ್ತಿರುವುದಾದರೆ ಅಂತಹ ಗ್ರಹಗಳು ಈ ವರ್ಗಕ್ಕೆ ಸೇರುತ್ತವೆ (ಚಿತ್ರ 13)3. ‘ಕಂದು ಕುಬ್ಜ’ಗ್ರಹಗಳು:

ಸೌರವ್ಯೂಹದ ಗುರುಗ್ರಹಕ್ಕಿಂತ ಹೆಚ್ಚಾದ ಆದರೆ ಸೂರ್ಯನಿಗಿಂತ ಕಡಿಮೆ ಇರುವ ದ್ರವ್ಯರಾಶಿಯ ಗ್ರಹಗಳೇ ಕಂದು ಕುಬ್ಜಗಳು. ನಕ್ಷತ್ರವಾಗಲು ಸಾಧ್ಯವಾಗದೆ ಬೇರಾವುದೋ ನಕ್ಷತ್ರವನ್ನು ಪರಿಭ್ರಮಿಸುತ್ತ ಉಳಿವ ಪರಮ ದೈತ್ಯ ಗ್ರಹಗಳು ಇವು (ಚಿತ್ರ 12).4. ಭೂ ಸದೃಶ ಗ್ರಹಗಳು:

ಭೂಮಿಯಂತಹದೇ ಗಾತ್ರದ, ಗಟ್ಟಿ ಶಿಲಾ ನೆಲದ, ಜಲಭರಿತವಾದ ಜೀವಿಗಳು ನೆಲಸಲು ಯೋಗ್ಯವಾದ ಪರಿಸರದ ಗ್ರಹಗಳು ಈ ಗುಂಪಿಗೆ ಸೇರುತ್ತವೆ.5. ‘ಸೂಪರ್‌ ಭೂಮಿ’ಗಳು:

ನಮ್ಮ ಭೂಮಿಗಿಂತ ಅಧಿಕವಾದ ಆದರೆ ನೆಪ್ಚೂನ್‌ಗಿಂತ ಕಡಿಮೆ ಇರುವ ದ್ರವ್ಯರಾಶಿಯ ಗ್ರಹಗಳು. ತುಂಬ ಬಿಸಿಯಾದ ಅಥವಾ ತೀರ ಶೀತದ ಇಲ್ಲವೇ ಬರೀ ಅನಿಲ ಶರೀರದ ಇಂತಹ ಗ್ರಹಗಳೂ ಪತ್ತೆಯಾಗಿವೆ (ಚಿತ್ರ 14)6. ‘ಅನಿಲ ದೈತ್ಯ’ ಗ್ರಹಗಳು:

ಸೌರವ್ಯೂಹದ ಗುರು, ಶನಿ ಗ್ರಹಗಳಂತಹದೇ ದ್ರವ್ಯ ಸಂಯೋಜನೆ ಮತ್ತು ಗಾತ್ರದ ಗ್ರಹಗಳು ಇವು.7. ‘ಬಿಸಿ ಭೂಮಿ’ಗಳು:

ಶುಕ್ರ, ಭೂಮಿಗಳಂತೆ ಗಟ್ಟಿ ನೆಲದ ಆದರೆ ಬುಧ ಗ್ರಹದಂತೆ ಅಸಹನೀಯ ಬಿಸಿ ಮೇಲ್ಮೈ ಇರುವ ಗ್ರಹಗಳು ಇವು.8. ‘ಸ್ಟಾರ್‌ ವಾರ್‌್ಸ’ ಗ್ರಹಗಳು:

ಈ ವಿಧದ ಗ್ರಹಗಳ ವಿಶೇಷ ಏನೆಂದರೆ ಅವುಗಳು ಎರಡು ಅಥವಾ ಮೂರು ನಕ್ಷತ್ರಗಳನ್ನು ಪರಿವರಿಸಿ ಬರುವ ಪರಿಭ್ರಮಣ ಪಥವನ್ನು ಪಡೆದಿರುತ್ತವೆ (ಚಿತ್ರ 15)9. ಪುಂಡ ಗ್ರಹಗಳು:

ಈ ಬಗೆಯ ಗ್ರಹಗಳು ಯಾವುದೇ ಒಂದು ನಕ್ಷತ್ರವನ್ನು ಸುತ್ತುತ್ತ ಉಳಿವ ಬದಲು ಸ್ವತಂತ್ರವಾಗಿ ಇಡೀ ಗ್ಯಾಲಕ್ಸಿಯಲ್ಲಿ, ಗ್ಯಾಲಕ್ಸಿಯ ಕೇಂದ್ರವನ್ನೇ ಪರಿಭ್ರಮಿಸುತ್ತ ಇರುತ್ತವೆ.

ಹೀಗೆ ಅನ್ಯಗ್ರಹಗಳ ವಿಧಗಳು ಹಲವಾರು. ಎಂಥ ವೈವಿಧ್ಯ! ಅಲ್ಲವೇ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.