ಭಾನುವಾರ, ಮೇ 22, 2022
22 °C

ವೇತನ ಪಾವತಿಗೆ ಅತಿಥಿ ಉಪನ್ಯಾಸಕರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ಜಿಲ್ಲಾದ್ಯಂತ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಗುರುವಾರದಿಂದ ಅನಿರ್ದಿಷ್ಟ ಅವಧಿವರೆಗೆ ತರಗತಿ ಬಹಿಷ್ಕರಿಸಿ, ಪ್ರತಿಭಟನೆ ಆರಂಭಿಸಿದ್ದಾರೆ.ವೇತನ ಪಾವತಿ, ಸೇವಾಭದ್ರತೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು, ರಾಜ್ಯದಲ್ಲಿರುವ 6 ಸಾವಿರ ಅತಿಥಿ ಉಪನ್ಯಾಸಕರಿಗೆ ಸಮಯಕ್ಕೆ ಸರಿಯಾಗಿ ವೇತನ ಪೂರೈಕೆ ಆಗುತ್ತಿಲ್ಲ. ಯುಜಿಸಿ ನಿಯಮಾವಳಿ ಪ್ರಕಾರ ಅತಿಥಿ ಉಪನ್ಯಾಸಕರಿಗೆ ಪ್ರತಿ ತಿಂಗಳು ರೂ 20 ಸಾವಿರ ವೇತನ ಪಾವತಿಸಬೇಕು. ಆದರೆ, ಈಗ ಕೇವಲ  5 ಸಾವಿರ ಪಾವತಿಸಲಾಗುತ್ತಿದೆ. ಇದು ಖಂಡನೀಯ. ಅಲ್ಲದೇ ತಮಗೆ ಸೇವಾಭದ್ರತೆಯೂ ಇಲ್ಲ ಎಂದು ಹೇಳಿದರು.ರಜಾ ದಿನಗಳಲ್ಲಿ ವೇತನ ಪಾವತಿಯಾಗುತ್ತಿಲ್ಲ. ಮೌಲ್ಯಮಾಪನ, ವಿಶೇಷ ತರಗತಿ ಇತ್ಯಾದಿ ನಡೆಸುತ್ತಿದ್ದರೂ ಆ ದಿನಗಳನ್ನು ಸೇವಾವಧಿಗೆ ಪರಿಗಣಿಸುತ್ತಿಲ್ಲ. ನೆಟ್ ಪರೀಕ್ಷೆ, ಪಿ.ಎಚ್.ಡಿ ಮುಗಿಸಿದ್ದರೂ ತಮ್ಮ ಅರ್ಹತೆಗೆ ತಕ್ಕ ವೇತನ ದೊರೆಯುತ್ತಿಲ್ಲ. ಒಟ್ಟಿನಲ್ಲಿ ತಮ್ಮ ಬದುಕು ಅತಂತ್ರವಾಗಿದೆ ಎಂದು ಪ್ರತಿಭಟನಾನಿರತರು ದೂರಿದರು.

ಇವೇ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಮಟ್ಟದಲ್ಲಿ ಹೋರಾಟ ನಡೆಯುತ್ತಿದೆ. ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ನೇತೃತ್ವದಲ್ಲಿ ಎಲ್ಲ ಕಾಲೇಜುಗಳ ಉಪನ್ಯಾಸಕರು ಇಂದಿನಿಂದ ತರಗತಿ ಸ್ಥಗಿತಗೊಳಿಸಿದ್ದಾರೆ. ರಾಜ್ಯಮಟ್ಟದ ಸಮಿತಿಯ ನಿರ್ಣಯದಂತೆ ಹೋರಾಟ ಮುಂದುವರಿಸಲಾಗುತ್ತದೆ ಎಂದು ಉಪನ್ಯಾಸಕರು ತಿಳಿಸಿದರು.ಕಾಲೇಜಿನ 70 ಮಂದಿ ಅತಿಥಿ ಉಪನ್ಯಾಸಕರು ಬೋಧನೆ ಸ್ಥಗಿತಗೊಳಿಸಿದರು. ಮಂಜುನಾಥ್, ರವಿ ಸಿಂಗ್, ರಾಮಚಂದ್ರಪ್ಪ, ಇಂಗ್ಲಿಷ್ ಉಪನ್ಯಾಸಕ ಮಂಜುನಾಥ್ ಇತರರು ನೇತೃತ್ವ ವಹಿಸಿದ್ದರು.ಮನವಿ ಸಲ್ಲಿಕೆ

ಹರಿಹರ:
ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ  ಉಪನ್ಯಾಸಕರು ಈಗಿರುವ ಮಾಸಿಕ ವೇತನವನ್ನು ರೂ25 ಸಾವಿರಕ್ಕೆ ಹೆಚ್ಚಿಸಬೇಕು ಹಾಗೂ ಪ್ರತಿತಿಂಗಳೂ ವೇತನ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಉಪನ್ಯಾಸಕರು ಆಗ್ರಹಿಸಿ ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಿ. ಮುದ್ದುರಂಗಪ್ಪ ಅವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಉಪನ್ಯಾಸಕ ಜಿ.ಬಿ. ಮಾಲತೇಶ್, ಎಸ್.ಆರ್. ಮಹಾಂತೇಶ್, ಎಲ್. ಹಾಲೇಶ್, ಹಮೀದಾಬಾನು, ಎಸ್.ಕೆ. ಸೌಮ್ಯಾ, ಟಿ. ಸುಧಾ, ಎಂ. ಪ್ರಭಾಕರ, ಜೆ.ಆರ್. ಯಶವಂತ, ಶ್ವೇತಾ ಈಶ್ವರ್, ರವಿ ಬಣಕಾರ, ತಿಪ್ಪೇರುದ್ರಪ್ಪ, ರುದ್ರಮುನಿ, ಎಂ. ರೋಷನ್ ಜಮೀರ್, ಎಸ್.ಎಸ್. ವಿನಾಯಕ ಮತ್ತಿತರರು ಪಾಲ್ಗೊಂಡಿದ್ದರು.ಬಹಿಷ್ಕಾರ


ಹೊನ್ನಾಳಿ: ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಜಿ. ಶಾಂತರಾಜ್ ಅವರ ನೇತೃತ್ವದಲ್ಲಿ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ, ಪ್ರತಿಭಟಿಸಿದರು. ನಂತರ ಶಿರಸ್ತೇದಾರ್ ಟಿ.ಎಲ್. ಸ್ವಾಮಿರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್‌ಕುಮಾರ್, ಖಜಾಂಚಿ ಮೋಹನ್, ಉಪನ್ಯಾಸಕರಾದ ಅಶೋಕ್, ಗೊಲ್ಲರಹಳ್ಳಿ ಮಂಜುನಾಥ್, ಯು.ಬಿ. ಜಯಪ್ಪ, ಭಾರತಿ, ಹರಿಣಿ ಶಾಸ್ತ್ರಿ, ಶ್ವೇತಾ, ಹೊನ್ನಾಳಿ ಮತ್ತು ನ್ಯಾಮತಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಒಟ್ಟು 26 ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಸತ್ಯಾಗ್ರಹ

ಬಸವಾಪಟ್ಟಣ: ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಗುರುವಾರ ಸರ್ಕಾರ ತಮಗೆ ಒಂದು ವರ್ಷದಿಂದ ಸಂಬಳ ವಿತರಣೆ ಮಾಡಿಲ್ಲ ಎಂದು ಅನಿರ್ದಿಷ್ಟ ಅವಧಿಯ ಸತ್ಯಾಗ್ರಹ ಆರಂಭಿಸಿದರು. ಸತ್ಯಾಗ್ರಹದಲ್ಲಿ ಉಪನ್ಯಾಸಕರಾದ ಜಿ.ಎಸ್. ವಿಠಲ, ಎಚ್. ಸಿದ್ದೇಶ್, ಕೆ. ಗೋವಿಂದರೆಡ್ಡಿ, ಜಿ.ಆರ್. ಪುಷ್ಪಾ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.