ಸೋಮವಾರ, ಮೇ 23, 2022
21 °C

ವೇತನ, ಬಡ್ತಿಯಲ್ಲಿ ತಾರತಮ್ಯ: ಗಮನ ಸೆಳೆಯಲು ಸಮಿತಿ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ:  ವೇತನ ಹಾಗೂ ಬಡ್ತಿ ವಿಷಯದಲ್ಲಿ ಆಗುತ್ತಿರುವ ತಾರತಮ್ಯ ನಿವಾರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಗಮನ ಸೆಳೆಯಲು ಹಾಗೂ ಹೋರಾಟಗಳನ್ನು ರೂಪಿಸುವ ಸಲುವಾಗಿ ಜಿಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹೋರಾಟ ಸಮಿತಿ ರಚನೆಯಾಗಿದೆ.ಜಿಲ್ಲೆಯಲ್ಲಿ ಇರುವ 35 ಸರ್ಕಾರಿ ಪದವಿ ಪೂರ್ವ ಕಾಲೇಜುಗಳ 300 ಕ್ಕೂ ಹೆಚ್ಚು ಕಾಯಂ ಉಪನ್ಯಾಸಕರ ಹಿತರಕ್ಷಣೆಯ ಮೂಲ ಉದ್ದೇಶದೊಂದಿಗೆ ಈ ಹೋರಾಟ ಸಮಿತಿಯನ್ನು ರಚಿಸಲಾಗಿದೆ ಎಂದು ಸಮಿತಿಯ ಜಿಲ್ಲಾ ಪ್ರತಿನಿಧಿ ಎಸ್.ಮಂಜುನಾಥ್ ಹಾಗೂ ಸಲಹೆಗಾರ ಕೆ.ಕರೀಗೌಡ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸರ್ಕಾರಿ ಉಪನ್ಯಾಸಕರ ಸಮಸ್ಯೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯಲು ಜೂನ್ ತಿಂಗಳಲ್ಲಿ ಜಿಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘಟನೆಯೊಂದನ್ನು ರಚಿಸಲು ಶುಕ್ರವಾರ ನಡೆದ ಉಪನ್ಯಾಸಕರ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.ರಾಜ್ಯದಲ್ಲಿ ಹೆಚ್ಚಿರುವ ತಾರತಮ್ಯ: ದೇಶದ ಬೇರೆ ರಾಜ್ಯಗಳ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವೇತನವನ್ನು ಪರಿಶೀಲಿಸಿದರೆ ಕರ್ನಾಟಕ ಸರ್ಕಾರ ಇಲ್ಲಿನ ಉಪನ್ಯಾಸಕರಿಗೆ ಅತಿ ಕಡಿಮೆ ವೇತನ ನೀಡುತ್ತಿದೆ ಎಂದು ಅವರು ದೂರಿದರು.ರಾಜ್ಯದಲ್ಲಿ ಪಿ.ಯು ಉಪನ್ಯಾಸಕರಿಗೆ ರೂ 18 ಸಾವಿರ ವೇತನ ಇದ್ದರೆ, ಆಂಧ್ರ ಪ್ರದೇಶ ಮತ್ತು ಕೇರಳದಲ್ಲಿ ರೂ 30 ಸಾವಿರ ವೇತನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಕೂಡ 11 ಮತ್ತು 12ನೇ ತರಗತಿಗಳ ಉಪನ್ಯಾಸಕರಿಗೆ ರೂ 24ರಿಂದ 25 ಸಾವಿರ ರೂಪಾಯಿ ವೇತನ ಕೊಡುತ್ತಿದೆ. ರಾಜ್ಯದಲ್ಲಿ ಅತಿ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.ರಾಜ್ಯದಲ್ಲಿ ಈ ಹಿಂದೆ ಪದವಿ ಮತ್ತು ಪದವಿ ಪೂರ್ವ ಉಪನ್ಯಾಸಕರ ನಡುವೆ ವೇತನ ತಾರತಮ್ಯ ಇರಲಿಲ್ಲ. 1986ರವರೆಗೂ ಎರಡೂ ಬಗೆಯ ಕಾಲೇಜುಗಳ ಉಪನ್ಯಾಸಕರು ಸಮಾನ ವೇತನ ಪಡೆಯುತ್ತಿದ್ದರು. ನಂತರ ಮೂಲ ವೇತನದಲ್ಲಿ ಪದವಿ ಉಪನ್ಯಾಸಕರಿಗೆ 150 ರೂಪಾಯಿ ಹೆಚ್ಚಿಸಲಾಯಿತು. 5ನೇ ವೇತನ ಆಯೋಗದ ವರದಿ ಅನುಷ್ಠಾನವಾದಾಗ ಪದವಿ ಕಾಲೇಜಿನ ಉಪನ್ಯಾಸಕರಿಗೆ ಮೂಲ ವೇತನ 8000 ರೂಪಾಯಿ ಇದ್ದರೆ, ಪಿ.ಯು ಉಪನ್ಯಾಸಕರ ಮೂಲ ವೇತನ ರೂ 6 ಸಾವಿರ ನಿಗದಿಯಾಗಿತ್ತು ಎಂದರು.ಇದೀಗ ಕೇಂದ್ರ ಸರ್ಕಾರ ಪದವಿ ಕಾಲೇಜಿನ ಉಪನ್ಯಾಸಕರಿಗೆ 6ನೇ ಪರಿಷ್ಕೃತ ವೇತನ ಶ್ರೇಣಿ ನೀಡಿದೆ. ಇದರಿಂದ ಪದವಿ ಮತ್ತು ಪಿ.ಯು ಕಾಲೇಜಿನ ಉಪನ್ಯಾಸಕರ ನಡುವಿನ ವೇತನ ತಾರತಮ್ಯ 11 ಸಾವಿರ ರೂಪಾಯಿಗೆ ಏರಿಕೆಯಾಗಿದೆ ಎಂದು ಅವರು ವಿವರಿಸಿದರು.ಹಲವು ಬಾರಿ ಸರ್ಕಾರಕ್ಕೆ ಮನವಿ ನೀಡಿದರೂ, ಪ್ರಯೋಜನವಾಗಲಿಲ್ಲ. ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇತ್ತೀಚೆಗೆ ವಿಧಾನ ಮಂಡಲ ಅಧಿವೇಶನದಲ್ಲಿ ಪಿ.ಯು ಉಪನ್ಯಾಸಕರಿಗೆ ವೇತನ ತಾರತಮ್ಯ ಇಲ್ಲ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ದೂರಿದರು.ವಿಶೇಷ ಭತ್ಯೆಗೂ ಕತ್ತರಿ: ಅಲ್ಲದೆ ಹೊಸದಾಗಿ ನೇಮಕವಾಗಿರುವ ಉಪನ್ಯಾಸಕರಿಗೆ ಮಾಸಿಕ ವಿಶೇಷ ಭತ್ಯೆ 200 ರೂಪಾಯಿ ತಡೆ ಹಿಡಿಯುವ ಮೂಲಕ ರಾಜ್ಯ ಸರ್ಕಾರ ಪಿ.ಯು ಉಪನ್ಯಾಸಕರ ವೇತನ ತಾರತಮ್ಯವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಪಿ.ಯು ಉಪನ್ಯಾಸಕರಿಗೆ ಪ್ರತ್ಯೇಕ ವರ್ಗಾವಣೆ ನೀತಿ ರೂಪಿಸಬೇಕು. ಅಲ್ಲದೆ ಸರ್ಕಾರಿ ಪಿ.ಯು ಕಾಲೇಜುಗಳಲ್ಲಿ ಎನ್‌ಇಟಿ, ಎಸ್‌ಎಲ್‌ಇಟಿ ಹಾಗೂ ಪಿಎಚ್‌ಡಿ ಪದವಿ ಪಡೆದಿರುವ ಉಪನ್ಯಾಸಕರಿಗೆ ಪದವಿ ಕಾಲೇಜುಗಳಿಗೆ ಬಡ್ತಿ ನೀಡುವಂತೆ ಅವರು ಇದೇ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.