ಸೋಮವಾರ, ಮಾರ್ಚ್ 27, 2023
21 °C
ಮನಸೂರೆಗೊಂಡ ‘ಎಕ್ಸ್ ಪೋ ಸಿಮ್ಸ್’ ಭರಪೂರ ಮಾಹಿತಿ

ವೈದ್ಯಕೀಯ ವಿಸ್ಮಯಗಳಿಗೆ ಬೆರಗಾದ ಸಾರ್ವಜನಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈದ್ಯಕೀಯ ವಿಸ್ಮಯಗಳಿಗೆ ಬೆರಗಾದ ಸಾರ್ವಜನಿಕರು

ಶಿವಮೊಗ್ಗ: ಅಲ್ಲಿ ವೈದ್ಯಕೀಯ ಲೋಕದಲ್ಲಿರುವ ವಿಸ್ಮಯಗಳನ್ನು ನೋಡಲು ಕಾದು ನಿಂತಿರುವ ಸಾರ್ವಜನಿಕರು. ನಾವು ಯಾವಾಗ ವಿಸ್ಮಯಗಳನ್ನು ನೋಡುತ್ತೇವೆ ಎಂಬ ತುದಿಗಾಲಲ್ಲಿ ನಿಂತಿದ್ದ ಮಕ್ಕಳು ಮತ್ತು ವಿದ್ಯಾರ್ಥಿಗಳು. ಸುಡುವ ಬಿಸಿಲನ್ನು ಲೆಕ್ಕಿಸದ ಜನರು. ಕೊಡೆಯ ಆಶ್ರಯ ಪಡೆದು, ಸಾಲಿನಲ್ಲಿ ನಿಂತಿದ್ದ ಹಿರಿಯ ಜೀವಿಗಳದ್ದು.ಇದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿರುವ ‘ಎಕ್ಸ್ ಪೋ ಸಿಮ್ಸ್’ ನೋಡಲು ಕೊನೆಯ ದಿನವಾದ ಭಾನುವಾರ ಕಾದು ನಿಂತಿದ್ದ  ದೃಶ್ಯ.ಅಂಗರಚನಾಶಾಸ್ತ್ರ, ಜೀವರಸಾಯನಶಾಸ್ತ್ರ, ಶಸ್ತ್ರಚಿಕಿತ್ಸಾ ಶಾಸ್ತ್ರ, ಅರಿವಳಿಕೆಶಾಸ್ತ್ರ, ಮನೋವಿಜ್ಞಾನ ಸೇರಿದಂತೆ ಸುಮಾರು 21 ವಿಭಾಗಗಳಲ್ಲಿ ವೈದ್ಯಕೀಯ ಶಾಸ್ತ್ರಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ ನೋಡಲು ಬಂದ ಜನರನ್ನು ಕ್ಷಣಕಾಲ ಮಂತ್ರಮುಗ್ಧರನ್ನಾಗಿಸಿತು.

ಪ್ರತಿ ವಿಭಾಗದಲ್ಲಿದ್ದ ಪ್ರಾತ್ಯಕ್ಷತೆಗಳು ಮಕ್ಕಳನ್ನು ಆಕರ್ಷಿಸುವುದರ ಜೊತೆಗೆ, ಕುತೂಹಲವನ್ನು ಭರಿಸಿದವು. ಸಾರ್ವಜನಿಕರು ಕೂಡ, ವೈದ್ಯಕೀಯ ಕ್ಷೇತ್ರದ ಒಂದು ಲೋಕವನ್ನು ಕಣ್ತುಂಬಿಕೊಂಡರು.ಅಂಗರಂಚನಾಶಾಸ್ತ್ರದಲ್ಲಿ ಶರೀರದ ನೈಜ ಅಂಗಾಂಗಳು ಕಾಣಸಿಗುತ್ತವೆ. ಧೂಮಪಾನದಿಂದ ಏನೆಲ್ಲಾ ತೊಂದರೆಗಳಾಗುತ್ತವೆ ಎಂಬುದನ್ನು ತಿಳಿಸುವ ನೈಜ ಶರೀರದ ಮೂಲಕ ತೋರಿಸಿರುವುದು. ಧೂಮಪಾನಿಗಳು ಆ ದೇಹವನ್ನು ಒಮ್ಮೆ ವೀಕ್ಷಿಸಿದರೆ, ಮತ್ತೊಮ್ಮೆ ಯಾವುದೇ ಕಾರಣಕ್ಕೂ ಮೃತ್ಯು ಕೂಪಕ್ಕೆ ಬೀಳಬಾರದು ಎಂಬುದನ್ನು ಸಾರಿ ಸಾರಿ ಹೇಳುತ್ತದೆ.‘ಎಕ್ಸ್ ಪೋ ಸಿಮ್ಸ್’ನ್ನು ಇನ್ನು ಎರಡು ದಿನ ಮುಂದುವರಿಸಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಆದರೆ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಮೊಟಕುಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ಸಿಮ್ಸ್ ನಿರ್ದೇಶಕ ಡಾ.ಗಂಗಾಧರ ಪ್ರಜಾವಾಣಿಗೆ ತಿಳಿಸಿದರು.ನಾವು ನಿರೀಕ್ಷಿಸಲಾರದಷ್ಟು ಸಾರ್ವಜನಿಕರು ಭೇಟಿ ನೀಡಿದ್ದು, ನಗರದಲ್ಲಿ ಮಾತ್ರವಲ್ಲದೇ, ಬೆಂಗಳೂರಿನ ಅನೇಕ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಭೇಟಿ ನೀಡಿದ್ದಾರೆ ಎಂದು ಹೇಳಿದರು. ಪ್ರತಿಯೊಬ್ಬರು ಪ್ರಾತ್ಯಕ್ಷತೆ ಕುರಿತು ಮಾಹಿತಿ ಕೇಳುತ್ತಿದ್ದು, ನಾವು ರೋಗದಿಂದ ಹೇಗೆ ಮುಕ್ತರಾಗಬೇಕು ಎಂಬುದರ ಮಾಹಿತಿ ಕೂಡ ಕೇಳುತ್ತಿದ್ದಾರೆ ಎಂದು ವೈದ್ಯಕೀಯ ವಿದ್ಯಾರ್ಥಿ ಶ್ರೀಧರ ಹೇಳುತ್ತಾರೆ.‘ಎಕ್ಸ್ ಪೋ ಸಿಮ್ಸ್’ ಒಂದು ಅದ್ಭುತ ಕಾರ್ಯಕ್ರಮವಾಗಿದ್ದು, ರಾಜ್ಯದಲ್ಲಿಯೇ ಒಂದು ಮಾದರಿ ಪ್ರಾತ್ಯಕ್ಷತೆಗಳ ಕಾರ್ಯಕ್ರಮವಾಗಿದೆ. ಇನ್ನು ಕೆಲವು ದಿನಗಳು ಮುಂದುವರಿಸಬೇಕು ಎಂಬುದು ನಮ್ಮ ಅಭಿಲಾಷೆಯಾಗಿದೆ. ವಿದ್ಯಾರ್ಥಿಗಳೇ ಹೆಚ್ಚಾಗಿ ಇಂತಹ ವೈದ್ಯಕೀಯ ಪ್ರಾತ್ಯಕ್ಷತೆಗಳಲ್ಲಿ ಭಾಗವಹಿಸಬೇಕು ಎಂದು ನಿವಾಸಿ ರವಿ ಹೇಳುತ್ತಾರೆ. ವೈದ್ಯಕೀಯ ಕ್ಷೇತ್ರಗಳಲ್ಲಿ ತಿಳಿದುಕೊಳ್ಳದ ಕೆಲವೊಂದು ವಿಚಾರಗಳು ತಿಳಿದವು. ಶೇ.75ರಷ್ಟು ವೈದ್ಯಕೀಯ ವಿಷಯಗಳು ತಿಳಿದಿದ್ದು, ಸಿಗರೇಟ್ ಸೇವನೆ ಮಾಡುತ್ತಿರುವ ಮಾನವನ ದೇಹದ ಅಂಗರಚನೆ ಹೇಗಿರುತ್ತದೆ  ಎಂಬುದು ಚೆನ್ನಾಗಿತ್ತು  ಎಂದು ಸಂಚಾರ ಪೊಲೀಸ್ ಠಾಣೆಯ ರಾಘವೇಂದ್ರ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.