ಶುಕ್ರವಾರ, ಜೂನ್ 18, 2021
27 °C

ವೈಭವದ ಗೋಣಿಬಸವೇಶ್ವರ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಕಾಯಕ ಪರಂಪರೆಯ ಪವಾಡ ಪುರುಷ ತಾಲ್ಲೂಕಿನ ಕೂಲಹಳ್ಳಿ ಗ್ರಾಮದ ಗೋಣಿಬಸವೇಶ್ವರ ರಥೋತ್ಸವವು ಭಾನುವಾರ ಸಂಜೆ 5ಕ್ಕೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ಊರ ಹೊರವಲಯದಲ್ಲಿ ನಿರ್ಮಿಸಿದ್ದ ಆಕರ್ಷಕ ರಥಕ್ಕೆ ಕೆಂಪು, ಬಿಳಿ ಸೇರಿದಂತೆ ವಿವಿಧ ಬಣ್ಣಗಳ ಬಾವುಟ ಹಾಗೂ ಹಲವು ದೇವಾನುದೇವತೆಗಳ ಭಾವಚಿತ್ರ ಅಳವಡಿಕೆಯ ಜತೆಗೆ, ಬಾಳೆದಿಂಡು, ಮಾವಿನ ತೋರಣ ಹಾಗೂ ಪುಷ್ಪಮಾಲೆಯೊಂದಿಗೆ ಅಲಂಕರಿಸಲಾಗಿತ್ತು. ಮಠದ ಪೀಠಾಧಿಪತಿ ಪಟ್ಟದ ಚಿನ್ಮಯ ಸ್ವಾಮೀಜಿ ನೇತೃತ್ವದಲ್ಲಿ ಬಿರುದಾವಳಿ ಮೂಲಕ ಸಕಲ ವಾದ್ಯತಂಡಗಳ ಭಾಜ -ಭಜಂತ್ರಿಯೊಂದಿಗೆ ಕೊಟ್ಟೂರೇಶ್ವರ ದೇವಸ್ಥಾನಕ್ಕೆ ತೆರಳಲಾಯಿತು.ದೇಗುಲದಲ್ಲಿ ಪೂಜೆ ನೆರವೇರಿದ ಬಳಿಕ ಕೊಟ್ಟೂರೇಶ್ವರರ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿಕೊಂಡ ಚಿನ್ಮಯ ಸ್ವಾಮೀಜಿ ಅಶ್ವರೋಹಿಯಾಗಿ ರಥದ ಬಳಿ ಆಗಮಿಸಿದರು. ಬಳಿಕ ರಥವನ್ನು ಐದು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಗೋಣಿಬಸವೇಶ್ವರರ ಪಟ(ಧ್ವಜ)ವನ್ನು ಬಹಿರಂಗವಾಗಿ ಹರಾಜ್ ಹಾಕಲಾಯಿತು.ನಂದಿಬೇವೂರು ಗ್ರಾಮದ  ವಿ. ಮಾರೆಪ್ಪ ್ಙ 1.25ಲಕ್ಷ ಹಣಕ್ಕೆ ಪಟವನ್ನು ತಮ್ಮದಾಗಿಸಿಕೊಂಡರು.

ಉತ್ಸವ ಮೂರ್ತಿಯನ್ನು ರಥಮಂಟಪದಲ್ಲಿ ಪ್ರತಿಷ್ಠಾಪಿಸುವ ಮೂಲಕ  ಅರ್ಚಕರು ಮಹಾ ಮಂಗಳಾರತಿ ನೆರವೇರಿಸುತ್ತಿದ್ದಂತಿಯೇ ಭರ್ಜರಿ ಜಯಘೋಷಗಳ ನಡುವೆ ರಥೋತ್ಸವಕ್ಕೆ ಉತ್ತರಾಭಿಮುಖವಾಗಿ ಚಾಲನೆ ನೀಡಲಾಯಿತು.ಹರಕೆ ಹೊತ್ತಿದ್ದ ಭಕ್ತರು, ರಥಕ್ಕೆ ತೆಂಗಿನಕಾಯಿ, ಬಾಳೇಹಣ್ಣು ಹಾಗೂ ಮೆಣಸು ತೂರಿ ಹರಕೆ ಸಮರ್ಪಿಸಿದರು. ದಾವಣಗೆರೆ, ಬಳ್ಳಾರಿ, ಗದಗ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳು ಸೇರಿದಂತೆ ನಾಡಿನಾದ್ಯಂತ ಪ್ರವಾಹೋಪಾದಿಯಲ್ಲಿ ಹರಿದು ಬಂದಿದ್ದ ಸಹಸ್ರಾರು ಭಕ್ತರು ರಥೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.