ಶುಕ್ರವಾರ, ಮೇ 14, 2021
25 °C

ವೈಯಕ್ತಿಕ ಮಾಹಿತಿ ಮೇಲೆ `ದೊಡ್ಡಣ್ಣ'ನ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಗ್ರರ ಬೆದರಿಕೆ ಮತ್ತು ರಾಷ್ಟ್ರೀಯ ಭದ್ರತೆ ಉದ್ದೇಶಕ್ಕೆ ಅಂತರಜಾಲ ತಾಣ ಬಳಕೆದಾರರ ವೈಯಕ್ತಿಕ ವಿವರಗಳನ್ನೆಲ್ಲ  ರಹಸ್ಯವಾಗಿ ಸಂಗ್ರಹಿಸುವ ಅಮೆರಿಕದ ಗುಪ್ತಚರ ಸಂಸ್ಥೆಗಳ ಕ್ರಮವು ವಿಶ್ವದಾದ್ಯಂತ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.ಅಮೆರಿಕವು ವಿವಿಧ ದೇಶಗಳನ್ನು ಅಪಾಯಕ್ಕೆ ಅನುಗುಣವಾಗಿ ವರ್ಗೀಕರಿಸಿ, ಪ್ರತಿಯೊಂದು ದೇಶವನ್ನು ಭೂಪಟದಲ್ಲಿ ಪ್ರತ್ಯೇಕ ಬಣ್ಣದಲ್ಲಿ ಗುರುತಿಸಿದೆ. ಕೆಂಪು- ಅತಿ ಹೆಚ್ಚು ನಿಗಾ, ಹಸಿರು - ಕಡಿಮೆ ನಿಗಾ, ಹಳದಿ - ಕಿತ್ತಳೆ ಬಣ್ಣವು ತಕ್ಕಮಟ್ಟಿಗೆ ನಿಗಾ ಎಂದು ವರ್ಗೀಕರಿಸಿದ್ದು, ಭಾರತವನ್ನು ಕಿತ್ತಳೆ ಬಣ್ಣದಲ್ಲಿ ಗುರುತಿಸಿದೆ. ಚೀನಾ, ರಷ್ಯಾ ಮತ್ತು ಸೌದಿ ಅರೇಬಿಯಾಗಿಂತ ಭಾರತದಿಂದ ಸಂಗ್ರಹಿಸಿದ  ಮಾಹಿತಿ ಪ್ರಮಾಣ ಹೆಚ್ಚಿಗೆ ಇದೆ.ವಿಶ್ವದಾದ್ಯಂತ ಗೂಗಲ್, ಯಾಹೂ, ಫೇಸ್‌ಬುಕ್, ಯುಟ್ಯೂಬ್, ಫೇಸ್‌ಬುಕ್ ಮತ್ತಿತರ ತಾಣಗಳಿಂದ ವೈಯಕ್ತಿಕ ವಿವರಗಳನ್ನು ರಹಸ್ಯವಾಗಿ ಕದಿಯುವ ಕ್ರಮವನ್ನು ಒಬಾಮ ಸರ್ಕಾರ ಬಲವಾಗಿ ಸಮರ್ಥಿಸಿಕೊಂಡಿದೆ. `ಪ್ರೀಸಮ್' ಹೆಸರಿನಲ್ಲಿ ಈ ಸಹಸ್ಯ ಕಣ್ಗಾವಲು ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ.5ನೇ ಸ್ಥಾನದಲ್ಲಿ ಭಾರತ

ಒಂದು ಅಂದಾಜಿನ ಪ್ರಕಾರ, ಈ ವರ್ಷದ ಮೇ ತಿಂಗಳಿನಲ್ಲಿ 9700 ಕೋಟಿಗಳಷ್ಟು ಮಾಹಿತಿ ತುಣುಕುಗಳನ್ನು  ಕಂಪ್ಯೂಟರ್ ಜಾಲದಿಂದ ವಿಶ್ವದಾದ್ಯಂತ ಸಂಗ್ರಹಿಸಲಾಗಿದೆ. ಇದರಲ್ಲಿ ಇರಾನ್ ಮತ್ತು ಪಾಕಿಸ್ತಾನದ  ಮಾಹಿತಿ ಕ್ರಮವಾಗಿ ಶೇ 14 ಮತ್ತು ಶೇ 13.5ರಷ್ಟಿದ್ದರೆ, ನಂತರದ ಸ್ಥಾನದಲ್ಲಿ ಜೋರ್ಡಾನ್, ಈಜಿಪ್ಟ್ ಮತ್ತು 5ನೇ ಸ್ಥಾನದಲ್ಲಿ ಭಾರತ ಇದೆ.  ದೇಶದಲ್ಲಿ 630 ಕೋಟಿಗಳಷ್ಟು ಮಾಹಿತಿ ಸಂಗ್ರಹಿಸಲಾಗಿದೆ.ಐಬಿಎಂ ಸಂಸ್ಥೆಯ ಪ್ರಕಾರ, ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಸಾಮಾಜಿಕ ಸಂಪರ್ಕ ಜಾಲ ತಾಣಗಳಿಂದ  ಇ-ಮೇಲ್ ಮತ್ತು ಇತರ ಬಗೆಯ ಡಿಜಿಟಲ್ ಸಂಪರ್ಕದ ನೆರವಿನಿಂದ ವಿಶ್ವದಲ್ಲಿ  ಪ್ರತಿ ದಿನ 2.5  ಕ್ವಿಂಟಿಲಿನ್  ( 1  ಮುಂದೆ 18 ಸೊನ್ನೆ ಸೇರಿಸಿದರೆ ಬರುವ ಸಂಖ್ಯೆ)  (quintillion) ಬೈಟ್ಸ್‌ಗಳಷ್ಟು ಮಾಹಿತಿ ಸಂಗ್ರಹವಾಗುತ್ತಿದೆ.ಇಂಟರ್‌ನ್ಯಾಷನಲ್ ಡಾಟಾ ಕಾರ್ಪೊರೇಷನ್ (ಐಡಿಸಿ) ಪ್ರಕಾರ, ವಿಶ್ವದಲ್ಲಿ ಸದ್ಯಕ್ಕೆ ಅಂತರಜಾಲದಲ್ಲಿ ಸಂಗ್ರಹಗೊಂಡಿರುವ ಒಟ್ಟಾರೆ  ಮಾಹಿತಿಯ ಶೇ 90ರಷ್ಟು ಪ್ರಮಾಣ ಇತ್ತೀಚಿನ ಎರಡು ವರ್ಷಗಳಲ್ಲಿಯೇ ಸಂಗ್ರಹಗೊಂಡಿದೆ. 2020ರಷ್ಟೊತ್ತಿಗೆ `ಡಿಜಿಟಲ್ ಮಾಹಿತಿ ವಿಶ್ವ'ವು ಪ್ರತಿ ಎರಡು ವರ್ಷಗಳಿಗೊಮ್ಮೆ ದುಪ್ಪಟ್ಟು ಆಗಲಿದೆ.ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರ ಆದೇಶದ ಮೇರೆಗೆ 2001ರಲ್ಲಿ ಅಮೆರಿಕ ಪ್ರಜೆಗಳ ಅಂತರರಾಷ್ಟ್ರೀಯ ಕರೆ ಮತ್ತು ಇ-ಮೇಲ್ ಮೇಲೆ ನಿಗಾ ಇಡುವ ವ್ಯವಸ್ಥೆಯು ಕೋರ್ಟ್ ಅನುಮತಿ ಇಲ್ಲದೆ ಕಾರ್ಯರೂಪಕ್ಕೆ ಬಂದಿತ್ತು.ಮಾರ್ಗದರ್ಶಿ ಸೂತ್ರ

ನಿರ್ದಿಷ್ಟ ವ್ಯಕ್ತಿಗಳ ಚಲನವಲನಗಳ ಮೇಲೆ ಕಣ್ಗಾವಲು ಇಡಲು ಮತ್ತು ಸಾಮಾನ್ಯ ಬಳಕೆದಾರರ ಖಾಸಗಿತನ ರಕ್ಷಿಸಲು  ವಿವರವಾದ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು ಎನ್ನುವ ಬೇಡಿಕೆಯೂ ಕೇಳಿ ಬಂದಿದೆ. ಸ್ಥಳೀಯವಾಗಿ ಸರ್ವರ್‌ಗಳನ್ನು ಹೊಂದಿದರೂ ಮಾಹಿತಿ ಭೇದಿಸಲು ಸಾಧ್ಯವಾಗಲಾರದು ಎನ್ನುವ ಅಭಿಪ್ರಾಯವೂ ಇದೆ.ಮಾಹಿತಿ ಕಣಜ

ಒಂದು ದಶಕದಿಂದೀಚೆಗೆ ಕಂಡುಬಂದಿರುವ ಸ್ಫೋಟಕ ರೂಪದ ಡಿಜಿಟಲ್ ಸಂಪರ್ಕ ಮತ್ತು ಕಣ್ಗಾವಲು ಸೌಲಭ್ಯದಿಂದಾಗಿ, ವಿಶ್ವದ ಯಾವುದೇ ಭಾಗದಲ್ಲಿ ಇರುವ ವ್ಯಕ್ತಿಗಳ ನಡುವಣ ಸಂಭಾಷಣೆ ಅಥವಾ  ಚಟುವಟಿಕೆಗಳನ್ನು ನೇರವಾಗಿ ಕಾವಲು ಕಾಯದೇ ಸುಲಭವಾಗಿ ನಿಗಾ ಇಡಬಹುದಾಗಿದೆ. ಇದೇ ಕಾರಣಕ್ಕೆ, ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯು (ಎನ್‌ಎಸ್‌ಎ), ಅಮೆರಿಕ ಮತ್ತು ವಿದೇಶಿ ಪ್ರಜೆಗಳ ಡಿಜಿಟಲ್ ಮಾಹಿತಿಯ ಕಣಜವಾಗಿ ಮಾರ್ಪಾಟುಗೊಂಡಿದೆ.ತಂತ್ರಜ್ಞಾನ

ಬೇಹುಗಾರಿಕೆ ಮತ್ತು ಕಾನೂನು ಜಾರಿ ನಿರ್ದೇಶನಾಲಯವು ಟ್ರಿಲೆಟರೈಜೇಷನ್ (ಠtrilaterization) ಹೆಸರಿನ ಹೊಸ ತಂತ್ರಜ್ಞಾನ ಬಳಸುತ್ತಿವೆ. ವ್ಯಕ್ತಿಯೊಬ್ಬ ಇರುವ ತಾಣ, ಆತನ ಕ್ಷಣ ಕ್ಷಣದ ಚಟುವಟಿಕೆಗಳ ಮೇಲೆ ಕಣ್ಗಾವಲು ಇಡಲು ಈ ತಂತ್ರಜ್ಞಾನ ನೆರವಾಗುತ್ತದೆ.ಪರಿಹಾರ ಏನು?

ಗೂಗಲ್, ಫೇಸ್‌ಬುಕ್ ಮತ್ತಿತರ ಅಂತರಜಾಲ ತಾಣಗಳು ಭಾರತದಲ್ಲಿ ತಮ್ಮ ಸರ್ವರ್‌ಗಳನ್ನು ಸ್ಥಾಪಿಸುವಂತೆ ಮಾಡುವ ಮೂಲಕ ಭಾರತೀಯರ ವೈಯಕ್ತಿಕ ವಿವರಗಳು ಅಮೆರಿಕದ ಗುಪ್ತಚರ ಪಡೆಗಳ ಪಾಲಾಗುವುದನ್ನು  ತಡೆಯಲು ಸಾಧ್ಯ ಎನ್ನುವ ಅಭಿಪ್ರಾಯ ಇದೆ.

ದೇಶದಲ್ಲಿ ಇಂಟರ್‌ನೆಟ್ ಸೇವೆ ಒದಗಿಸುತ್ತಿರುವ ಸಂಸ್ಥೆಯ (Internet Service Providers Asso­ci­ation of India) ಅನ್ವಯ, ಸ್ಥಳೀಯವಾಗಿ ಸರ್ವರ್‌ಗಳನ್ನು ಸ್ಥಾಪಿಸುವ ಮೂಲಕ ದೇಶದ ಇಂಟರ್‌ನೆಟ್ ಬಳಕೆದಾರರ ಮಾಹಿತಿ ದೇಶದ ಒಳಗೇ ಇಟ್ಟುಕೊಳ್ಳಲು ಸಾಧ್ಯವಾಗಲಿದೆ. ದೇಶಿ ಅಂತರಜಾಲ ಬಳಕೆದಾರರ ಖಾಸಗಿತನ ರಕ್ಷಿಸಲು ಸಾಧ್ಯವಾಗಲಿದೆ.ಇಂಟರ್‌ನೆಟ್ ದೂರವಾಣಿ ಸೇವೆ ಒದಗಿಸುವ ಕೆಲ ದೇಶಿ ಸಂಸ್ಥೆಗಳು ಇದಕ್ಕಾಗಿ ಲೈಸನ್ಸ್ ಪಡೆದಿದ್ದು, ವರಮಾನದಲ್ಲಿನ ಕೆಲ ಪಾಲನ್ನು ಸರ್ಕಾರಕ್ಕೂ ಪಾವತಿಸುತ್ತವೆ. `ಸ್ಕೈಪ್'ನಂತಹ ವಿದೇಶಿ ಸಂಸ್ಥೆಗಳು ಇದೇ ಬಗೆಯ ಸೇವೆ ಒದಗಿಸಿದರೂ ಇದಕ್ಕಾಗಿ ಲೈಸನ್ಸ್ ಪಡೆದಿಲ್ಲ. ಇವುಗಳ ಸರ್ವರ್ ಅಮೆರಿಕದಲ್ಲಿ ಇರುವುದರಿಂದ  ಲೈಸನ್ಸ್ ಪಡೆದಿಲ್ಲ.ಕೇಂದ್ರ ಸರ್ಕಾರವೂ, ಇಂಟರ್‌ನೆಟ್ ಬಳಕೆದಾರರ ವರ್ತನೆಯ ಮೇಲೆ `ಅಂತರಜಾಲ ಶಿಷ್ಟಾಚಾರ ವಿವರಗಳ ದಾಖಲೆ' (Internet Protocol Detail Record)ಮೂಲಕ ಕಣ್ಣಿಟ್ಟಿದೆ.ಈ ಸೌಲಭ್ಯದ ನೆರವಿನಿಂದ ಇಂಟರ್‌ನೆಟ್ ಬಳಕೆ ಮತ್ತು ತಮ್ಮ ವಿಳಾಸವನ್ನು ರಹಸ್ಯವಾಗಿ ಇಡಲು ಹವಣಿಸುವವರ ಮೇಲೆ ನಿಗಾ ಇಡಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.