ಬುಧವಾರ, ಜೂನ್ 16, 2021
26 °C

ವೈಷಮ್ಯ ಇಲ್ಲ, ಭಾವೈಕ್ಯವೇ ಎಲ್ಲ...!

ಪ್ರಜಾವಾಣಿ ವಾರ್ತೆ/ ವಿಜಯ್‌ ಹೂಗಾರ Updated:

ಅಕ್ಷರ ಗಾತ್ರ : | |

ಹಾವೇರಿ: ಕನಕದಾಸ, ಸರ್ವಜ್ಞ, ಶಿಶುನಾಳ ಶರೀಫರ ನಾಡಾದ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ವೈಷಮ್ಯ ಇಲ್ಲವೇ ಇಲ್ಲ, ಇಲ್ಲಿ ಭಾವೈಕ್ಯವೇ ಎಲ್ಲ. ಕಳೆದ ಹದಿನೈದು ಚುನಾವಣೆ­ಗಳಲ್ಲಿ ಹತ್ತು ಬಾರಿ ಅಲ್ಪಸಂಖ್ಯಾತ ಅಭ್ಯರ್ಥಿಗಳು, ಐದು ಬಾರಿ ಇತರರು ಆಯ್ಕೆಯಾಗಿರುವುದು ಈ ಕ್ಷೇತ್ರದ ವಿಶೇಷ.1952 ರಿಂದ 2004ರವರೆಗೆ ಇದು ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರವಾಗಿತ್ತು. 2008ರಲ್ಲಿ ಪುನರ್‌ ವಿಂಗಡಣೆ­ಯಾಗಿ ಹಾವೇರಿ ಲೋಕಸಭಾ ಕ್ಷೇತ್ರವಾಗಿದೆ. ಪುನರ್‌­ವಿಂಗಡಣೆ ನಂತರ, ಅಲ್ಪಸಂಖ್ಯಾತರ ಮತಗಳು ಹೆಚ್ಚಿದ್ದ ಶಿಗ್ಗಾವಿ, ಸವಣೂರು ತಾಲ್ಲೂಕುಗಳು ಧಾರವಾಡ ಲೋಕ­ಸಭಾ ಕ್ಷೇತ್ರಕ್ಕೆ ಸೇರಿವೆ. ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳು ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಸೇರಿಕೊಂಡಿವೆ.ಅಲ್ಪಸಂಖ್ಯಾತರ ಮೀಸಲು ಕ್ಷೇತ್ರ: ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ  ಶಿಗ್ಗಾವಿ, ಸವಣೂರು ತಾಲ್ಲೂಕು­ಗಳ ಮುಸ್ಲಿಂ ಮತದಾರರೇ ನಿರ್ಣಾಯಕರಾಗಿದ್ದರು. ಹೀಗಾಗಿ 1952 ರಿಂದ ಮೊದಲೆರಡು ಚುನಾವಣೆ (ಟಿ.ಆರ್‌.ನೇಶ್ವಿ) ಹೊರತುಪಡಿಸಿದರೆ, 1962 ರಿಂದ ಇಲ್ಲಿವರೆಗೆ ನಡೆದ 13 ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ಟಿಕೆಟ್‌ ನೀಡುವಾಗ ಅಲ್ಪಸಂಖ್ಯಾತರನ್ನೇ ಆಯ್ಕೆ ಮಾಡಿದೆ.  ಈ ಅವಧಿಯಲ್ಲಿ 10 ಬಾರಿ ಕಾಂಗ್ರೆಸ್‌ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ.1962ರಿಂದ 1980ರ ವರೆಗೆ ಕಾಂಗ್ರೆಸ್‌ನಿಂದ ಸತತ ಐದು ಬಾರಿ (18 ವರ್ಷ) ಸಂಸದರಾದ ಹುಬ್ಬಳ್ಳಿಯ ಎಫ್‌.ಎಚ್‌.­ಮೊಹಸಿನ್‌ ಅವರು ಇಂದಿರಾ ಗಾಂಧಿ ಸಂಪುಟದಲ್ಲಿ ಗೃಹ ಖಾತೆ ಉಪ ಸಚಿವರಾಗಿದ್ದರು. ನಂತರ ಒಂದು ಬಾರಿ ಮೈಸೂರಿನ ಅಜೀಜ್‌ ಸೇಠ್‌, ಎರಡು ಬಾರಿ ಹುಬ್ಬಳ್ಳಿಯ ವಕೀಲ­ರಾದ ಬಿ.ಎ. ಮುಜಾಹಿದ್‌, 1996ರಿಂದ 2004ರ ವರೆಗೆ ಸತತ ನಾಲ್ಕು ಬಾರಿ ಹುಬ್ಬಳ್ಳಿಯ ಪ್ರೊ. ಐ.ಜಿ.ಸನದಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. ‘ರಾಜಕೀಯ’ ಸಂತ ಎಂದೇ ಹೆಸರು ಮಾಡಿರುವ ಸನದಿ ಅವರು ಎರಡು ಬಾರಿ ಸಂಸದರೂ ಆಗಿದ್ದರು.ಹೊರಗಿನವರಿಗೆ ನಿರಾಸೆ: 15 ಚುನಾವಣೆಗಳಲ್ಲಿ 11 ಬಾರಿ ಅಲ್ಪ­ಸಂಖ್ಯಾತರು ಆಯ್ಕೆಯಾಗಿದ್ದರ ಪರಿಣಾಮ ಹಾವೇರಿ ಲೋಕಸಭಾ ಕ್ಷೇತ್ರ ಅಲ್ಪಸಂಖ್ಯಾತರ ಪಾಲಿಗೆ  ಭದ್ರಕೋಟೆ. ಅದೇ ಕಾರಣಕ್ಕಾಗಿ ಕಾಂಗ್ರೆಸ್ಸೇತರ ಹಾಗೂ ರಾಜ್ಯದ ಇತರ ಜಿಲ್ಲೆಗಳ ಅಲ್ಪಸಂಖ್ಯಾತ ನಾಯಕರು ತಮ್ಮ ರಾಜಕೀಯ ಜೀವನ ಗಟ್ಟಿಗೊಳಿಸಿಕೊಳ್ಳಲು ಈ ಕ್ಷೇತ್ರದಲ್ಲಿ ಚುನಾವಣೆ ಎದುರಿಸಿ­ದ್ದಾರೆ.ಅವರಲ್ಲಿ ಕಾಂಗ್ರೆಸ್‌ನ ಅಜೀಜ್‌ ಸೇಠ್‌, ನೀರ್‌ ಸಾಬ್‌ ಎಂದೇ ಖ್ಯಾತ­ರಾಗಿದ್ದ ಜನತಾ ಪಕ್ಷದ ಅಬ್ದುಲ್‌ ನಜೀರ್‌ ಸಾಬ್‌ ಪೀರ್‌ಸಾಬ್‌, ಭಾರ­ತೀಯ ಲೋಕದಳದ ಸಿ.ಎಂ.ಇಬ್ರಾಹಿಂ, ಈ ಸಲವೂ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾದ ಸಲೀಂ ಅಹ್ಮದ್‌ ಪ್ರಮುಖರಾಗಿದ್ದಾರೆ. ಆದರೆ, ನಜೀರ್‌­ಸಾಬ್‌ ವಿರುದ್ಧ ಅಜೀಜ್‌ ಸೇಠ್‌ ಗೆಲುವು ಸಾಧಿಸಿದ್ದು ಬಿಟ್ಟರೆ, ಹೊರಗಿನ­ವರು ಈ ಕ್ಷೇತ್ರದಿಂದ ಆಯ್ಕೆಯಾಗದೇ ನಿರಾಸೆ ಅನುಭವಿಸಿದ್ದಾರೆ.ಗೆಲುವಿಗೆ ಬ್ರೇಕ್‌: ಸತತ 11 ಚುನಾವ­ಣೆ­ಗಳಲ್ಲಿ ಗೆಲುವಿನ  ಓಟ ಮುಂದು­ವರಿ­ಸಿದ ಕಾಂಗ್ರೆಸ್‌ಗೆ ಪ್ರಪ್ರ­ಥಮ ಬಾರಿ ಕಾಂಗ್ರೆ­ಸ್ಸೇತರ ಹಾಗೂ ಬಹು­ಸಂಖ್ಯಾತ ವರ್ಗಕ್ಕೆ ಸೇರಿದವ­ರೊಬ್ಬರು ಗೆದ್ದು ಆಘಾತ ಕೊಟ್ಟಿ­ದ್ದರು. ಬಿ.ಎಂ. ಮೆಣಸಿನ­ಕಾಯಿ ಅವರು ಲೋಕಶಕ್ತಿ­ಯಿಂದ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ನ ಗೆಲವಿನ ಓಟಕ್ಕೆ ಬ್ರೇಕ್‌ ಹಾಕಿದ್ದರು. ನಂತರ ಒಂದು ವರ್ಷದ ಅಂತರ­ದಲ್ಲಿ ನಡೆದ 13ನೇ ಲೋಕಸಭಾ ಚುನಾವಣೆ­ಯಲ್ಲಿ  ಮೆಣಸಿನ­ಕಾಯಿ ಅವರು ಮತ್ತೆ ಪ್ರೊ.ಸನದಿ ವಿರುದ್ಧ ಸೋತರು.

ಬಿಜೆಪಿ ಗೆಲುವು: 2004ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದ ಮಂಜುನಾಥ ಕುನ್ನೂರ ಗೆದ್ದಿದ್ದರು.  2009ರಲ್ಲಿ ಹಾವೇರಿ ಲೋಕಸಭಾ ಕ್ಷೇತ್ರ ಎಂದು ಹೆಸರು ಪಡೆದುಕೊಂಡ ನಂತರ ಮೊದಲ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಿದ್ದ ಶಾಸಕ ಸಿ.ಎಂ.ಉದಾಸಿ ಅವರ ಪುತ್ರ ಶಿವಕುಮಾರ ಉದಾಸಿ ಅವರು ಕಾಂಗ್ರೆಸ್‌ನ ಸಲೀಂ ಅಹ್ಮದ್‌ ವಿರುದ್ಧ ಗೆದ್ದಿದ್ದರು.ಗೊಂದಲದಲ್ಲಿ ಕಾಂಗ್ರೆಸ್‌: ಕ್ಷೇತ್ರದಲ್ಲಿ ಶೇ 50ಕ್ಕಿಂತಲೂ ಹೆಚ್ಚು ಲಿಂಗಾಯತ ಸಮುದಾಯದ ಮತಗಳಿವೆ. ಪಕ್ಷವು ಅಲ್ಪ­ಸಂಖ್ಯಾತ ಅಭ್ಯರ್ಥಿ ಹಾಕಿದರೆ, ವಿರೋಧ ಪಕ್ಷವಾದ ಬಿಜೆಪಿಗೆ ಹಿಂದೂ–ಮುಸ್ಲಿಂ ವಿಷಯವೇ ಪ್ರಮುಖ ಚುನಾವಣೆ ಅಸ್ತ್ರವಾಗಲಿದೆ. ಅದಕ್ಕಾಗಿ ಬಹುಸಂಖ್ಯಾತ ಅಭ್ಯರ್ಥಿಗೆ ಟಿಕೆಟ್‌ ನೀಡುವಂತೆ ಸ್ಥಳೀಯರು ಒತ್ತಾಯ ಮಾಡಿರುವುದು ಗುಟ್ಟಾಗಿ ಉಳಿದಿಲ್ಲ.ಇದನ್ನೇ ಮುಂದು ಮಾಡಿಕೊಂಡು ಸಚಿವ ಎಚ್‌.ಕೆ.­ಪಾಟೀಲರು ತಮ್ಮ ಸೋದರ ಸಂಬಂಧಿ ಡಿ.ಆರ್‌.ಪಾಟೀಲರಿಗೆ ಟಿಕೆಟ್‌ ಕೊಡಿ­ಸಲು ದೆಹಲಿ ಮಟ್ಟದಲ್ಲಿ ಪ್ರಭಾವ ಬೀರು­ತ್ತಿದ್ದಾರೆ ಎಂದು ಹೇಳಲಾಗಿದೆ.ತದ್ವಿರುದ್ಧ ಪರಿಸ್ಥಿತಿ: ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ  ಬಾರಿ ತದ್ವಿರುದ್ಧವಾದ  ರಾಜಕೀಯ ಪರಿಸ್ಥಿತಿ ಕ್ಷೇತ್ರ­ದಲ್ಲಿದೆ. 2008 ರ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರ­ಗಳಲ್ಲಿ ಹಿರೇ­ಕೆರೂರ ಹೊರತುಪಡಿಸಿ ಏಳು ಜನ ಬಿಜೆಪಿ ಶಾಸಕರಿದ್ದರು. ಆದರೆ, ಕೆಜೆಪಿ, ಬಿಜೆಪಿ ವಿಭಜ­ನೆಯ ನಂತರ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.ಈಗ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದೆ. ಹಿರೇಕೆರೂರ ಹೊರ­ತು­ಪಡಿಸಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏಳು ಜನ ಕಾಂಗ್ರೆಸ್‌ ಶಾಸಕರಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.