ವೈಷಮ್ಯ: ಮನ್‌ಮುಲ್ ನಿರ್ದೇಶಕ ಮನೆಗೆ ಬೆಂಕಿ

ನಾಗಮಂಗಲ: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮಂಡ್ಯ ಹಾಲು ಒಕ್ಕೂಟದ (ಮನ್‌ಮುಲ್) ನಿರ್ದೇಶಕ ನರಸಿಂಹಮೂರ್ತಿ ಅವರ ಮನೆ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳ ತಂಡ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.
ನರಸಿಂಹಮೂರ್ತಿ ಮನೆಯು ತಾಲ್ಲೂಕಿನ ತಟ್ಟಹಳ್ಳಿಯ ಹೊರವಲಯದ ತೋಟ ದಲ್ಲಿದ್ದು, ಬೆಳಗಿನ ಜಾವ ಇಬ್ಬರು ದುಷ್ಕರ್ಮಿಗಳು ಮನೆಯ ಕಿಟಕಿ ಗಾಜು ಒಡೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಮನೆಯವರು ಹೊರಬರದಂತೆ ಹೊರಗಿನಿಂದ ಚಿಲಕ ಹಾಕಿ ಈ ಕೃತ್ಯ ಎಸಗಿದ್ದಾರೆ.
ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಕೃತ್ಯ ಪೂರ್ವ ನಿಯೋಜಿತವಾಗಿದ್ದು, ದುಷ್ಕರ್ಮಿಗಳು ಮೊದಲೇ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು. ಆದರೆ ಕೃತ್ಯದ ಹಿಂದೆ ಯಾರಿದ್ದಾರೆ, ದಾಳಿ ಮಾಡಿದವರು ಯಾರು ಎಂಬುದು ಖಚಿತವಾಗಿಲ್ಲ.
ಕೃತ್ಯ ನಡೆದಾಗ ನರಸಿಂಹಮೂರ್ತಿ ಅವರ ತಾಯಿ ಕೆಂಪಮ್ಮ, ಪತ್ನಿ ಜಯಲಕ್ಷ್ಮಿ ಮತ್ತು ಪುತ್ರಿ ರಮ್ಯಾ ಇದ್ದರು. ನರಸಿಂಹಮೂರ್ತಿ ಕಾರ್ಯ ನಿಮಿತ್ತ ಬೆಂಗಳೂರಿಗೆ ಹೋಗಿದ್ದರು. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಜಯಲಕ್ಷ್ಮಿ ಜಿಲ್ಲಾ ಪಂಚಾಯಿತಿಯ ಮಾಜಿ ಉಪಾಧ್ಯಕ್ಷೆಯಾಗಿದ್ದಾರೆ.
ರಾತ್ರಿ ಹೊತ್ತಿನಲ್ಲಿ ಕಿಟಕಿ ಗಾಜು ಒಡೆದ ಸದ್ದಿಗೆ ಎಚ್ಚರಗೊಂಡ ನರಸಿಂಹಮೂರ್ತಿ ಅವರ ಕಾರಿನ ಚಾಲಕರಾದ ಸೋಮಶೇಖರ್ ಮತ್ತು ನಂಜುಂಡ ಅವರಿಗೆ ಮುಸುಕುಧರಿಸಿದ್ದ ದುಷ್ಕರ್ಮಿಗಳು ಲಾಂಗ್‌ನಿಂದ ಹೆದರಿಸಿದರು.
ಗಲಾಟೆಯಿಂದ ಮನೆಯಲ್ಲಿದ್ದವರು ಎಚ್ಚರಗೊಂಡಿದ್ದು, ಅಪಾಯವನ್ನು ಗ್ರಹಿಸಿದ ಜಯಲಕ್ಷ್ಮಿ ಅವರು ದೂರವಾಣಿ ಮೂಲಕ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು, ಕೆಲಹೊತ್ತಿನಲ್ಲಿಯೇ ಗ್ರಾಮಸ್ಥರು ಸಹಾಯಕ್ಕೆ ಧಾವಿಸಿದರು.
ಗ್ರಾಮಸ್ಥರು ಧಾವಿಸುವುದನ್ನು ಕಂಡ ದುಷ್ಕರ್ಮಿಗಳು ಸ್ಥಳದಿಂದ ಪಲಾಯನ ಮಾಡಿದರು. ಗ್ರಾಮಸ್ಥರು ಬೆಂಕಿಯನ್ನು ನಂದಿಸಿದ್ದಾರೆ.
ಈ ಘಟನೆಯಲ್ಲಿ ಮನೆಯ ಎರಡು ದಿವಾನ್ ಕಾಟ್‌ಗಳು ಹಾಗೂ ಮನೆಯ ವಿದ್ಯುತ್ ಸಂಪರ್ಕ ಹಾಳಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿದ ನರಸಿಂಹಮೂರ್ತಿ ಅವರು, ‘ನನಗೆ ಯಾರು ರಾಜಕೀಯ ದ್ವೇಷಿಗಳು ಇಲ್ಲ. ಘಟನೆ ಹಿಂದೆ ಯಾರಿದ್ದಾರೆ, ಏಕೆ ಮಾಡಿದ್ದಾರೆ ಎಂದು ತಿಳಿಯುತ್ತಿಲ್ಲ’ ಎಂದರು.
ಸ್ಥಳಕ್ಕೆ ಮಂಡ್ಯ ಉಪ ವಿಭಾಗದ ಡಿವೈಎಸ್‌ಪಿ ಚನ್ನಬಸವಣ್ಣ, ಸರ್ಕಲ್ ಇನ್ಸ್‌ಪೆಕ್ಟರ್ ಟಿ.ಡಿ.ರಾಜು ಅವರು ಭೇಟಿ ನೀಡಿದ್ದರು. ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.