ಶನಿವಾರ, ಜೂಲೈ 4, 2020
28 °C

ವ್ಯಕ್ತಿತ್ವ ಬೆಳವಣಿಗೆಗೆ ಒತ್ತು ನೀಡದ ಶಿಕ್ಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವ್ಯಕ್ತಿತ್ವ ಬೆಳವಣಿಗೆಗೆ ಒತ್ತು ನೀಡದ ಶಿಕ್ಷಣ

ಬೆಂಗಳೂರು: ‘ಜನರಲ್ಲಿ ಮೌಲ್ಯಗಳನ್ನು ಮತ್ತು ಉನ್ನತ ವಿಚಾರಗಳನ್ನು ನೀಡುವುದೇ ನಿಜವಾದ ಕ್ರಾಂತಿ. ಇದನ್ನು ತತ್ವಜ್ಞಾನಿಗಳು ಮತ್ತು ಸಂತರು          ಸಾಧಿಸಿದ್ದಾರೆ’ ಎಂದು ತುಮಕೂರು ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದಲ್ಲಿ ಭಾನುವಾರ ರಿಲಯನ್ಸ್ ಟೈಂ ಔಟ್ ಏರ್ಪಡಿಸಿದ್ದ, ‘ಪುಸ್ತಕ   ಪ್ರಕಾಶನ’ ಪ್ರಕಟಿಸಿದ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದ ಗೌಡ ಅವರ ಅಂಕಣ ಬರಹಗಳ ಸಂಗ್ರಹ ‘ಬದುಕು ಬೆಳಕು, ಚುಟುಕು’ ಎರಡನೇ ಆವೃತ್ತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.‘ಇಂದಿನ ಶಿಕ್ಷಣವು ವ್ಯಕ್ತಿತ್ವ ಬೆಳವಣಿಗೆಗೆ ಮಹತ್ವ ನೀಡುವ ಬದಲು ಜೀವನೋಪಾಯ ಕಲಿಸಲು ಒತ್ತು ಕೊಡುತ್ತಿದೆ. ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಹೇಳಿದಂತೆ, ಈ ವ್ಯವಸ್ಥೆಯು ಮನುಷ್ಯನನ್ನು ಉತ್ತಮ ತರಬೇತಿ ಪಡೆದ ನಾಯಿಯನ್ನು ತಯಾರಿಸಿದಂತೆ. ಇದರಿಂದ ನೈಜ ವ್ಯಕ್ತಿತ್ವ ನಿರ್ಮಾಣ ಸಾಧ್ಯವಿಲ್ಲ’ ಎಂದು ನುಡಿದರು. ‘ಇಂದು ಸಜ್ಜನರು ಸುಮ್ಮನೆ ಕುಳಿತಿರುವುದರಿಂದಲೇ ಸಮಾಜ ದುಸ್ಥಿತಿಗೆ ತಳ್ಳಲ್ಪಟ್ಟಿದೆಯೇ ಹೊರತು ದರ್ಜನರ ದುಷ್ಟತನದಿಂದಲ್ಲ. ಆದ್ದರಿಂದ ಸಜ್ಜನರು ಕ್ರಿಯಾಶೀಲರಾಗಬೇಕು ಎಂದರು. ‘ಕನ್ನಡ ಸಾಹಿತ್ಯ ಮಾರಾಟ ಆಗುವುದಿಲ್ಲ ಎಂಬ ಕೂಗನ್ನು ಇಂದು ಜನರು ಹುಸಿಗೊಳಿಸಿದ್ದಾರೆ. ವಿಶ್ವ ಕನ್ನಡ ಸಮ್ಮೇಳನ ಮತ್ತು ಅದಕ್ಕಿಂತ ಮುಂಚೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೋಟ್ಯಂತರ ಮೌಲ್ಯದ ಕೃತಿಗಳನ್ನು ಖರೀದಿಸಿದ್ದಾರೆ. ಜೊತೆಗೆ ಸಂಸ್ಕೃತ ಮತ್ತು ವೈರಾಗ್ಯಕ್ಕೆ ಸಂಬಂಧಿಸಿದ ಆಧ್ಯಾತ್ಮಿಕ ಕೃತಿಗಳನ್ನು ಜನತೆ ಖರೀದಿಸಿದ್ದಾರೆ’ ಎಂದು ತಿಳಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಚ್.ಕೃಷ್ಣಯ್ಯ ಮಾತನಾಡಿ, ‘ಅಂಕಣ ಬರಹಗಳಿಗೆ ನೂರು ವರ್ಷಗಳ ಇತಿಹಾಸವಿದೆ.ಮೊದಲ ಅಂಕಣ ಬರಹ 1909-10ರಲ್ಲಿ ಎಚ್.ಕೆ.ವೀರನಗೌಡ ಅವರ ಸಂಪಾದಕತ್ವದಲ್ಲಿ ಹೊರಡಿಸಲಾಗುತ್ತಿದ್ದ ‘ಒಕ್ಕಲಿಗರ ಪತ್ರಿಕೆ’ಯಲ್ಲಿ ಮೂಡಿಬಂತು. ಮೊದಲು ಹಾಸ್ಯದ ಧಾಟಿಯಲ್ಲಿ ಬಂದ ಅಂಕಣ ಬರಹಗಳನ್ನು ನಂತರ ನಿರಂಜನರು ‘ಪ್ರಜಾಮತ’ದಲ್ಲಿ, ಎಚ್ಚೆಸ್ಕೆ  ‘ಸುಧಾ’ ವಾರಪತ್ರಿಕೆಯಲ್ಲಿ ಗಂಭೀರ ಶೈಲಿಯಲ್ಲಿ ಬರೆದರು’ ಎಂದರು.‘ಲೇಖಕ ಹಾ.ಮಾ.ನಾಯಕ ಅವರ ಅಂಕಣ ಬರಹಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರಶಸ್ತಿ ನೀಡುವುದರೊಂದಿಗೆ ಇದೊಂದು ಪ್ರಮುಖ ಸಾಹಿತ್ಯಿಕ ಪ್ರಕಾರವಾಗಿ ಗುರುತಿಸಿಕೊಂಡಿತು.ಆದರೆ ಕಾಲಮಿತಿ ಮತ್ತು ಸಮಯದ ಒತ್ತಡ ಇರುವುದರಿಂದ ಅಂಕಣಗಳನ್ನು ಬರೆಯುವುದು ಕಷ್ಟಕರ’ ಎಂದು ಅವರು ಅಭಿಪ್ರಾಯಪಟ್ಟರು. ‘ವ್ಯಕ್ತಿಯ ವ್ಯಕ್ತಿತ್ವ ಅಥವಾ ಘಟನೆಯನ್ನು ಆಧರಿಸಿ ಅಂಕಣವನ್ನು ಬರೆಯಲಾಗುತ್ತದೆ. ಇಂಥ ಹಲವಾರು ಘಟನೆಗಳನ್ನು ಹಲವು ವ್ಯಕ್ತಿಗಳ ಹಿಂದಿನ ವ್ಯಕ್ತಿತ್ವಗಳನ್ನು ಲೇಖಕರು ಗುರುತಿಸಿ, ತಮ್ಮ ಅಂಕಣದಲ್ಲಿ ದಾಖಲಿಸಿದ್ದಾರೆ’ ಎಂದು ಶ್ಲಾಘಿಸಿದರು. ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ.ಸುಧಾಮೂರ್ತಿ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ  ಕುಲಪತಿ ಡಾ.ಎಚ್.ಮಹೇಶಪ್ಪ, ಕರ್ನಾಟಕ ಮುಕ್ತ ವಿವಿ ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ,    ಸಾಹಿತಿ ಓ.ಅನಂತರಾಮಯ್ಯ, ಪುಸ್ತಕ ಪ್ರಕಾಶನದ ಮುಖ್ಯಸ್ಥ ಶಿವರಾಮ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.