ಬುಧವಾರ, ಮೇ 19, 2021
24 °C
ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ಸಮಾರಂಭದಲ್ಲಿ ಸುತ್ತೂರು ಶ್ರೀ ವಿಷಾದ

ಶರಣರ ತತ್ವ ಮರೆಯುತ್ತಿರುವ ವೀರಶೈವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ಬದಲಾವಣೆಗೆ ಕಾರಣವಾದ ವೀರಶೈವ ಧರ್ಮವು ಪ್ರಸ್ತುತ ದಿನಗಳಲ್ಲಿ ನಾಡಿನ ಇತರೆ ಸಮುದಾಯಗಳಿಂದ ತಿರಸ್ಕಾರಕ್ಕೆ ಒಳಗಾಗುತ್ತಿರುವುದು ವಿಷಾದದ ಸಂಗತಿ' ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆಗೆ ಚಾಲನೆ ನೀಡಿ ಅವರು ಮಾತನಾಡಿದರು.`ಸಮಾಜದಲ್ಲಿ ಸಮಾನತೆ ಸಾಧಿಸಲು ಪ್ರಯತ್ನಿಸಿದ ಶರಣರ ತತ್ವಗಳನ್ನು ವೀರಶೈವರೇ ಮರೆಯುತ್ತಿದ್ದಾರೆ. ವೀರಶೈವ ಧರ್ಮದೊಳಗೇ ಅನೇಕ ಉಪ ಪಂಗಡಗಳು ಹುಟ್ಟಿಕೊಂಡಿವೆ. ವಚನ ಚಳವಳಿಯ ಸಾಮಾಜಿಕ ಬದಲಾವಣೆಯ ಅಂಶಗಳನ್ನು ವೀರಶೈವರು ಮರೆಯುತ್ತಿರುವ ಪರಿಣಾಮ ಇತರೆ ಸಮುದಾಯಗಳಿಂದ ದೂರಾಗುವ ಸ್ಥಿತಿ ನಿರ್ಮಾಣವಾಗಿದೆ. ಇದು ತಪ್ಪಬೇಕು. ಬಸವಣ್ಣನ ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು' ಎಂದು ಅವರು ಆಶಿಸಿದರು.`ವೀರಶೈವ ಅಥವಾ ಲಿಂಗಾಯಿತ ಎಂಬ ವಿಂಗಡಣೆಯ ಬಗ್ಗೆ ಸಮುದಾಯದೊಳಗೆ ಭಿನ್ನಾಭಿಪ್ರಾಯಗಳಿವೆ. ಲಿಂಗಾಯಿತರೊಳಗೇ ಅನೇಕ ಒಳ ಜಾತಿಗಳು ಹುಟ್ಟಿಕೊಂಡಿವೆ. ಸಮುದಾಯದ ಸಂಘಟನೆಗಳು ಒಗ್ಗಟ್ಟನ್ನು ಕಳೆದುಕೊಂಡು ಶಕ್ತಿಗುಂದಿವೆ. ಇಂತಹ ಸಂದರ್ಭದಲ್ಲಿ ಸಮುದಾಯದ ಯುವ ಜನರು ಅಂತರರಾಷ್ಟ್ರೀಯ ಮಟ್ಟದಲ್ಲಿ ವೇದಿಕೆ ಆರಂಭಿಸುತ್ತಿರುವುದು ಉತ್ತಮ ಸಂಗತಿ. ಆದರೆ ಇದು ಆರಂಭ ಶೂರತ್ವವಾಗಬಾರದು' ಎಂದರು.ವೇದಿಕೆಯ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದ ನೀರಾವರಿ ಸಚಿವ ಎಂ.ಬಿ.ಪಾಟೀಲ್, `ಉಪ ಜಾತಿಗಳ ಮಿತಿಯಿಂದ ಕಳಚಿಕೊಂಡು, ವೀರಶೈವ - ಲಿಂಗಾಯಿತ ಎಂಬ ಅಂತರಗಳಿಲ್ಲದೇ ಸಮುದಾಯದ ಎಲ್ಲರೂ ಒಂದಾಗಬೇಕು. ಸಮುದಾಯದ ಹಿತಕ್ಕಾಗಿ ಎಲ್ಲರೂ ದುಡಿಯಬೇಕು' ಎಂದರು.ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಮಾತನಾಡಿ, `ಮಠಗಳಲ್ಲಿದ್ದು ಮಾರ್ಗದರ್ಶನ ನೀಡಬೇಕಾದ ಬಹುತೇಕ ಸ್ವಾಮೀಜಿಗಳು ಇಂದು ಅಡ್ಡದಾರಿ ಹಿಡಿದಿದ್ದಾರೆ. ಅನೇಕ ಸ್ವಾಮೀಜಿಗಳು ರಾಜಕೀಯದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಯಾರಿಗೆ ಸಚಿವ ಸ್ಥಾನ ನೀಡಬೇಕು, ಯಾವ ಖಾತೆ ನೀಡಬೇಕು ಎಂಬುದನ್ನು ಸ್ವಾಮೀಜಿಗಳೇ ನಿರ್ಧರಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ' ಎಂದರು.`ರಾಜ್ಯದ ಒಟ್ಟು ಜನಸಂಖ್ಯೆಯ ಶೇ 22ರಷ್ಟಿರುವ ಲಿಂಗಾಯಿತ ಸಮುದಾಯದಲ್ಲಿ 20ಕ್ಕೂ ಹೆಚ್ಚು ಉಪಜಾತಿಗಳಿವೆ. ಹೀಗಾಗಿ ಸಮುದಾಯದಲ್ಲಿ ಒಗ್ಗಟ್ಟಿಲ್ಲ. ಸಮುದಾಯದಲ್ಲಿ ಒಬ್ಬರ ಏಳಿಗೆಯನ್ನು ಮತ್ತೊಬ್ಬರು ಸಹಿಸುವುದಿಲ್ಲ. ಸಮುದಾಯದಲ್ಲಿ ಉಪಜಾತಿಗಳ ತಾರತಮ್ಯ ತಪ್ಪಬೇಕು. ಉಪಜಾತಿಗಳ ಹೆಸರಿನಲ್ಲಿ ಸಮಾವೇಶ ನಡೆಸುವವರನ್ನು ಸಮುದಾಯ ಬಹಿಷ್ಕರಿಸಬೇಕು.ಬಿ.ಎಸ್.ಯಡಿಯೂರಪ್ಪ ಅವರು ಲಿಂಗಾಯಿತರನ್ನು ಒಗ್ಗೂಡಿಸಿ, ಅಧಿಕಾರ ಸ್ಥಾನ ದೊರಕಿಸಿಕೊಟ್ಟ ಮೊದಲಿಗರು' ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಮಾಜಿ ಸಚಿವ ಮುರಗೇಶ್ ನಿರಾಣಿ, ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ, ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ, ಅಬಕಾರಿ ಆಯುಕ್ತ ಡಾ.ಸಿ.ಸೋಮಶೇಖರ್, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ, ವೇದಿಕೆ ಅಧ್ಯಕ್ಷ ನವೀನ್ ಕಟ್ಟಿಗೆ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.