ಶನಿವಾರ, ಜೂನ್ 19, 2021
26 °C

ಶರಣಾಗತ ನಕ್ಸಲ್ ಪ್ರಮುಖರಿಗೆ 25 ಲಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶರಣಾಗತ ನಕ್ಸಲ್ ಪ್ರಮುಖರಿಗೆ 25 ಲಕ್ಷ

ನವದೆಹಲಿ (ಪಿಟಿಐ): ಹಿಂಸಾಮಾರ್ಗ ತ್ಯಜಿಸುವ ಪ್ರಮುಖ ನಕ್ಸಲ್ ನಾಯಕರಿಗೆ 25 ಲಕ್ಷ ರೂಪಾಯಿವರೆಗೆ ನಗದು ಬಹುಮಾನ ನೀಡಲು ಆಂಧ್ರ ಪ್ರದೇಶ ಹಾಗೂ ಒಡಿಶಾ ಸರ್ಕಾರಗಳು ನಿರ್ಧರಿಸಿವೆ.



ನಕ್ಸಲೀಯರನ್ನು ಮುಖ್ಯವಾಹಿನಿಗೆ ಕರೆತರಲು ಗೃಹ ಸಚಿವಾಲಯ ನೀಡಿದ ಸಲಹೆ ಮೇರೆಗೆ ಅವು ಈ ತೀರ್ಮಾನಕ್ಕೆ ಬಂದಿವೆ. ಯಾವುದೇ ಶಸ್ತ್ರಾಸ್ತ್ರ ಇಲ್ಲದೆ ಶರಣಾಗುವವರಿಗೂ ನಗದು ನೀಡಲಾಗುತ್ತದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.



ನಕ್ಸಲ್ ಚಳವಳಿ ತೊರೆಯಬಯಸುವ ಯಾವುದೇ ಪಾಲಿಟ್‌ಬ್ಯೂರೊ ಅಥವಾ ಕೇಂದ್ರ ಸಮಿತಿ ಸದಸ್ಯರಿಗೆ ಆಂಧ್ರ ಸರ್ಕಾರವು 25 ಲಕ್ಷ ರೂಪಾಯಿ ಹಾಗೂ ಒಡಿಶಾ ಸರ್ಕಾರ 20 ಲಕ್ಷ ರೂಪಾಯಿ ಬಹುಮಾನ ಘೋಷಿಸಿವೆ.

ಲಘು ಮಶೀನ್‌ಗನ್ ತ್ಯಜಿಸುವವರಿಗೆ 5 ಲಕ್ಷ ಹಾಗೂ ಎ.ಕೆ 47 ಒಪ್ಪಿಸುವವರಿಗೆ 3 ಲಕ್ಷ ರೂಪಾಯಿ ನೀಡುವುದೂ ಸೇರಿದಂತೆ ನಕ್ಸಲೀಯರ ಶರಣಾಗತಿಗೆ ಎಲ್ಲ ರಾಜ್ಯಗಳಲ್ಲಿಯೂ ಏಕರೂಪದ ನೀತಿ ಜಾರಿಗೆ ಗೃಹ ಸಚಿವಾಲಯ ಒತ್ತಡ ಹೇರುತ್ತಿದೆ.



ಕಳೆದ ತಿಂಗಳು ಗೃಹ ಸಚಿವ ಪಿ.ಚಿದಂಬರಂ ಅವರ ಅಧ್ಯಕ್ಷತೆಯಲ್ಲಿ ನಡೆದ ನಕ್ಸಲ್ ಪೀಡಿತ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಪ್ರಧಾನ ನಿರ್ದೇಶಕರ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿತ್ತು.



`ಶರಣಾಗತಿಗೆ ಸಂಬಂಧಿಸಿದಂತೆ ಈಗಿರುವ ನೀತಿಯನ್ನು ಪರಾಮರ್ಶಿಸಬೇಕಿದೆ. ಶರಣಾಗತರಿಗೆ ನೀಡುವ ಹಣದ ಮೊತ್ತವನ್ನು ಹೆಚ್ಚಿಸಬೇಕಿದೆ. ಈ ಸಂಬಂಧ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ. ಕೇಂದ್ರವು ಇದಕ್ಕಾಗಿ ಸಹಾಯಧನ ನೀಡಲಿದೆ. ಒಟ್ಟಾರೆ ಎಲ್ಲ ರಾಜ್ಯಗಳಲ್ಲಿಯೂ ಏಕ ರೂಪದ ನೀತಿ ಜಾರಿಗೆ ಬರಬೇಕಾಗಿದೆ~ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 




ಕಿಶನ್‌ಜಿ ನಿಕಟವರ್ತಿ ಸುಚಿತ್ರಾ ಶರಣಾಗತಿ

ಕೋಲ್ಕತ್ತ (ಪಿಟಿಐ): ಕಳೆದ ವರ್ಷ ಜಂಟಿ ಭದ್ರತಾ ಪಡೆಗಳ ಗುಂಡೇಟಿಗೆ ಬಲಿಯಾದ ಪ್ರಮುಖ ನಕ್ಸಲ್ ನಾಯಕ ಕಿಶನ್‌ಜಿ ಮಹತೊ ಅವರ ನಿಕಟ ಸಹಚರರಾದ ಸುಚಿತ್ರಾ ಮಹತೊ ಶುಕ್ರವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಶರಣಾಗತರಾಗಿದ್ದಾರೆ.

`ನವೆಂಬರ್ 24ರಂದು ಬುರಿಸೋಲ್ ಅರಣ್ಯ ಪ್ರದೇಶದಲ್ಲಿ ಕಿಶನ್‌ಜಿ ಅವರ ಹತ್ಯೆ ನಡೆದ ಸಂದರ್ಭದಲ್ಲಿ ಕಣ್ಮರೆಯಾಗಿದ್ದ ಸುಚಿತ್ರಾ, ನಮ್ಮ ಸರ್ಕಾರ ಮುಂದಿಟ್ಟ ಶಾಂತಿ ಪ್ರಸ್ತಾಪಕ್ಕೆ ಸ್ಪಂದಿಸಿದ್ದಾರೆ. ಹೋಲಿ ಹಬ್ಬದ ಕೊಡುಗೆಯ ರೀತಿಯಲ್ಲಿ ತಮ್ಮ ನವವಿವಾಹಿತ ಎರಡನೇ ಪತಿ ಪ್ರಬೀರ್ ಗರಾಯ್ ಅವರೊಂದಿಗೆ ಶರಣಾಗಿದ್ದಾರೆ~ ಎಂದು ಬ್ಯಾನರ್ಜಿ ಈ ಸಂದರ್ಭದಲ್ಲಿ ಹೇಳಿದರು. ಕಿಶನ್‌ಜಿ ಹತ್ಯೆಯ ವೇಳೆ ಸುಚಿತ್ರಾ ಕೂಡ ಗಾಯಗೊಂಡಿದ್ದರು.

`ಸುಚಿತ್ರಾ ಅವರ ಶರಣಾಗತಿಯು ನಮ್ಮ ಸರ್ಕಾರ ಹಾಗೂ ನಕ್ಸಲ್ ಸಹೋದರರ ಪಾಲಿಗೆ ದೊಡ್ಡ ಸಾಧನೆಯಾಗಿದೆ. ಗಾಯಗೊಂಡಿರುವ ಅವರಿಗೆ ಸೂಕ್ತ ಚಿಕಿತ್ಸೆಯ ಅಗತ್ಯವಿದೆ. ನನ್ನನ್ನು ಭೇಟಿಯಾಗುವ ಮುನ್ನ ಸುಚಿತ್ರಾ ಪೊಲೀಸ್ ಜಾಗೃತ ವಿಭಾಗದವರನ್ನು ಭೇಟಿ ಮಾಡಿದ್ದರು~ ಎಂದು ಬ್ಯಾನರ್ಜಿ ತಿಳಿಸಿದರು.

ಸುಚಿತ್ರಾಗೆ ಮದುವೆಯ ಶುಭಾಶಯ ಕೋರಿದ ಮುಖ್ಯಮಂತ್ರಿ, ಬಂಗಾಳವನ್ನು ಮಾದರಿ ಶಾಂತಿ ರಾಜ್ಯವನ್ನಾಗಿ ರೂಪಿಸಲು ಬಯಸಿದ್ದೇವೆ ಎಂದರು.

ಸಾಕಷ್ಟು ಕಾಲ ತಾವು ಅರಣ್ಯದಲ್ಲಿ ಕಳೆದಿದ್ದಾಗಿ ಸರಣಿ ಪ್ರಶ್ನೆಗಳಿಗೆ ಸುಚಿತ್ರಾ ಪ್ರತಿಕ್ರಿಯಿಸಿದರು. `ನಾನು ಮಾವೊವಾದಿಯಲ್ಲ, ಲಾಲ್‌ಗಡ ಚಳವಳಿಯಲ್ಲಿ ಸಕ್ರಿಯಳಾಗಿದ್ದೆ. ಮಮತಾಜಿ ಅವರ ಕರೆಯ ಮೇರೆಗೆ ಶಾಂತಿಯುತ ಜೀವನ ನಡೆಸಲು ಬಯಸಿದ್ದೇನೆ~ ಎಂದು ಹೇಳಿದರು. ಸುಚಿತ್ರಾ  ಆರೋಗ್ಯ ಸರಿ ಇಲ್ಲದಿರುವುದರಿಂದ ಹೆಚ್ಚಿನ ಪ್ರಶ್ನೆಗಳನ್ನು ಕೇಳದಂತೆ ಬ್ಯಾನರ್ಜಿ ಸುದ್ದಿಗಾರರಲ್ಲಿ ಮನವಿ ಮಾಡಿದರು. ಫೆ.25ರಂದು ಸುಚಿತ್ರಾ ಅವರನ್ನು ಮದುವೆಯಾಗಿದ್ದಾಗಿ ಪ್ರಬೀರ್ ತಿಳಿಸಿದರು.  ಶಶಿಧರ್ ಮಹತೊ ಅವರನ್ನು ಸುಚಿತ್ರಾ ಮೊದಲು ವಿವಾಹವಾಗಿದ್ದರು. ಆದರೆ ಕಳೆದ ವರ್ಷ ನಡೆದ ದಾಳಿಯಲ್ಲಿ ಶಶಿಧರ್ ಹತರಾಗಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.