ಮಂಗಳವಾರ, ಮೇ 17, 2022
23 °C

ಶಾಂತಿಯುತ ಮತದಾನ: ನೀರಸ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಂತಿಯುತ ಮತದಾನ: ನೀರಸ ಪ್ರತಿಕ್ರಿಯೆ

ದೇವನಹಳ್ಳಿ: ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಶೇ. 68.66 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ತಾಲ್ಲೂಕಿನಲ್ಲಿ 925 ಮಂದಿ ಪದವೀಧರ ಮತದಾರರು ಹೆಸರು ನೋಂದಾಯಿಸಿಕೊಂಡಿದ್ದರೂ ಅಸಮರ್ಪಕ ವಿಳಾಸ ಮತ್ತು ಇತರೆ ತಾಂತ್ರಿಕ ತೊಂದರೆಯಿಂದ 73 ಮತದಾರರನ್ನು ಮತ ಪಟ್ಟಿಯಿಂದ ಕೈಬಿಡಲಾಯಿತು. ಉಳಿದ 847 ಮತದಾರರ ಪೈಕಿ 578 ಮಂದಿ ಮತ ಚಲಾಯಿಸಿದ್ದಾರೆ.ಇದರಲ್ಲಿ 450 ಮಂದಿ ಪುರುಷ ಹಾಗೂ 128 ಮಂದಿ ಮಹಿಳಾ ಮತದಾರರು ಮತಚಲಾಯಿಸಿದ್ದಾರೆ. ಮತದಾನ ಪ್ರಕ್ರಿಯೆ ಆರಂಭದಲ್ಲಿ ಮಂದಗತಿಯಲ್ಲಿ ಸಾಗಿ ನಂತರ   ಬಿರುಸುಗೊಂಡಿತು. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪದವೀಧರರ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆ ಎಂಬುದು ಗೊತ್ತಿದ್ದರೂ ಹಲವು ಮತದಾರರು ಅಗತ್ಯ ಮೂಲ ದಾಖಲಾತಿಗಳನ್ನು ತರದೆ ದಾಖಲಾತಿಯ ನಕಲು ಪ್ರತಿ ತಂದಿದ್ದರಿಂದ ಮತದಾನದಿಂದ ವಂಚಿತರಾದರು.ಶೇ 50.55ರಷ್ಟು ಮತದಾನ


ದೊಡ್ಡಬಳ್ಳಾಪುರ: ವಿಧಾನ ಪರಿಷತ್‌ನ ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಶೇ 50.55ರಷ್ಟು ಮತದಾನ ನಡೆದಿದೆ ಎಂದು ತಹಸೀಲ್ದಾರ್ ಚಂದ್ರ ತಿಳಿಸಿದ್ದಾರೆ.ತಾಲ್ಲೂಕಿನ ಒಟ್ಟು ಮತಗಳ ಸಂಖ್ಯೆ 1,970. ಅದರಲ್ಲಿ 996 ಮತಗಳು ಚಲಾವಣೆಯಾಗಿವೆ. ಬೆಳಿಗ್ಗೆ 11 ಗಂಟೆವರೆಗೂ ಮಂದಗತಿಯಲ್ಲಿ ನಡೆದ ಮತದಾನ ಮಧ್ಯಾಹ್ನದ ವೇಳೆಗೆ ಚುರುಕುಗೊಂಡಿತ್ತು. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಹಾಗೂ ಸಿಪಿಐ(ಎಂ) ಪಕ್ಷಗಳ ಮುಖಂಡರು ತಾಲ್ಲೂಕು ಕಚೇರಿಯಲ್ಲಿನ ಮತಗಟ್ಟೆ ಸಮೀಪ ಪೆಂಡಾಲ್ ಹಾಕಿಕೊಂಡು ಖುದ್ದು ಹಾಜರಿದ್ದು ಮತಯಾಚನೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಜೆಡಿಎಸ್‌ನ ಗುಂಪುಗಾರಿಕೆ ಬಹಿರಂಗ: ತಾಲ್ಲೂಕಿನ ರಾಜಕೀಯಕ್ಕೆ ಮಾಜಿ ಸಚಿವ ಸಿ.ಚನ್ನಿಗಪ್ಪ ಬಂದ ನಂತರ ಜೆಡಿಎಸ್‌ನಲ್ಲಿ ಉಂಟಾಗಿದ್ದ ಗುಂಪುಗಾರಿಕೆ ವಿಧಾನ ಪರಿಷತ್ ಮತದಾನದ ವೇಳೆ ಅಧಿಕೃತವಾಗಿ ಬಹಿರಂಗವಾಗಿ ಕಾಣಿಸಿಕೊಂಡಿದೆ.ಭಾನುವಾರ ಎಲ್ಲಾ ಪಕ್ಷಗಳ ಮುಖಂಡರು ತಾಲ್ಲೂಕು ಕಚೇರಿ ವೃತ್ತದಲ್ಲಿ ಪೆಂಡಾಲ್‌ಗಳನ್ನು ಹಾಕಿಕೊಂಡು ಮತಯಾಚಿಸಿದರು. ಆದರೆ ಜೆಡಿಎಸ್ ಪಕ್ಷದ ವತಿಯಿಂದ ಮಾತ್ರ ಎರಡು ಕಡೆಗಳಲ್ಲಿ ಪೆಂಡಾಲ್ ಹಾಕಿಕೊಂಡು ಅ.ದೇವೇಗೌಡ ಅವರ ಪರವಾಗಿ ಮತಯಾಚನೆ ಮಾಡಲಾಗುತ್ತಿತ್ತು.

 

ಇದರಿಂದಾಗಿ ಮತದಾರರಲ್ಲಿ ಗೊಂದಲು ಉಂಟಾಗಿತ್ತು. ಹಾಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಗೋವಿಂದರಾಜ್ ಹಾಗೂ ಗ್ರಾಮಾಂತರ ಜಿಲ್ಲಾ ಜೆಡಿಎಸ್ ಖಜಾಂಚಿ ಬಿ.ಮುನೇಗೌಡ ಅವರು ಒಂದೊಂದು ಕಡೆ ನಿಂತು ಮತಯಾಚಿಸುತ್ತಿದ್ದು ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೆ ಮುಜುಗರ ಉಂಟು ಮಾಡಿತ್ತು.ಶೇ 44ರಷ್ಟು ಮತದಾನ

ಆನೇಕಲ್:  ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಆನೇಕಲ್ ತಾಲ್ಲೂಕಿನಲ್ಲಿ ಶೇ.44 ರಷ್ಟು ಮತದಾನವಾಗಿದೆ ಎಂದು ತಹಸೀಲ್ದಾರ್ ಎಚ್.ಎನ್.ಶಿವೇಗೌಡ ತಿಳಿಸಿದರು.ತಾಲ್ಲೂಕು ಕಚೇರಿಯಲ್ಲಿ ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಶಾಂತಿಯುತ ಮತದಾನ ನಡೆಯಿತು ಎಂದು ಹೇಳಿದರು. ಒಟ್ಟು 2,767 ಮತದಾರಿದ್ದರು ಈ ಪೈಕಿ 309 ಮಹಿಳೆಯರು ಸೇರಿದಂತೆ  1,215ಮಂದಿ ಮತ  ಚಲಾಯಿಸಿದರು.

 

ಎರಡು ಮತಗಟ್ಟೆಗಳಲ್ಲೂ ಬೆಳಗಿನಿಂದಲೇ ಬಿರುಸಿನ ಮತದಾನ ನಡೆಯಿತು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಸಿಪಿಐ(ಎಂ) ಪಕ್ಷಗಳ ಕಾರ್ಯಕರ್ತರು ಫೆಂಡಾಲ್‌ಗಳನ್ನು ಹಾಕಿಕೊಂಡು ಮತದಾರರಿಗೆ ಮಾಹಿತಿ ನೀಡುತ್ತಿದ್ದ ದೃಶ್ಯ ಕಂಡು ಬಂದಿತು. ಕೊನೆಗಳಿಗೆಯಲ್ಲಿ ಮತದಾರರನ್ನು ಒಲಿಸಿಕೊಳ್ಳುವ ಕಸರತ್ತಿನಲ್ಲಿ ಕಾರ್ಯಕರ್ತರು ತೊಡಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.