ಭಾನುವಾರ, ಜೂಲೈ 5, 2020
22 °C

ಶಾಲೆಗಳಿಗೆ ನೇತಾಜಿ ಜೀವನಚರಿತ್ರೆಪುಸ್ತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ವಾತಂತ್ರ್ಯ ಯೋಧ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನ ಚರಿತ್ರೆಯ ಪುಸ್ತಕಗಳನ್ನು ಖರೀದಿ ಮಾಡಿ ರಾಜ್ಯದಲ್ಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಹಂಚಲು ಒಂದು ಕೋಟಿ ರೂಪಾಯಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾನುವಾರ ಇಲ್ಲಿ ತಿಳಿಸಿದರು.ಸುಭಾಷ್ ಚಂದ್ರ ಬೋಸ್ ಅವರ 114ನೇ ಜನ್ಮದಿನದ ಅಂಗವಾಗಿ ವಿಧಾನಸೌಧದ ಪಶ್ಚಿಮ ಭಾಗದಲ್ಲಿರುವ ಅವರ ಪ್ರತಿಮೆಗೆ ಭಾನುವಾರ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ‘ಇಂದಿನ ಯುವ ಪೀಳಿಗೆ ಅದರಲ್ಲೂ ಶಾಲಾ ಮಕ್ಕಳು ಬೋಸ್ ಅವರ ದೇಶಭಕ್ತಿ, ನಾಯಕತ್ವದ ಗುಣಗಳನ್ನು ಓದಿ ತಿಳಿದುಕೊಳ್ಳುವುದಲ್ಲದೆ ಆ ಮಾರ್ಗದಲ್ಲಿ ಸಾಗಬೇಕು ಎಂದರು.ದೇಶಕ್ಕಾಗಿ ಹೋರಾಟ ನಡೆಸಿದ ಅಪ್ರತಿಮ ನಾಯಕನ ಜೀವನ ಚರಿತ್ರೆ ಪುಸ್ತಕ ಎಲ್ಲ ಮಾಧ್ಯಮಿಕ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಲಭ್ಯವಾಗಬೇಕು. ಈ ಉದ್ದೇಶದಿಂದ ಸರ್ಕಾರ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಪುಸ್ತಕಗಳನ್ನು ಖರೀದಿಸಿ ಶಾಲೆಗಳಿಗೆ ಹಂಚಲಿದೆ ಎಂದು ತಿಳಿಸಿದರು. ‘ಅವರಲ್ಲಿದ್ದ ರಾಷ್ಟ್ರಪ್ರೇಮ, ದೇಶಭಕ್ತಿ ಮತ್ತು ನಾಯಕತ್ವದ ಗುಣಗಳನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಇಂದಿನ ಕಲುಷಿತ ರಾಜಕಾರಣದಲ್ಲಿ ಅಂತಹ ನಾಯಕನ ಅಗತ್ಯವಿದೆ’ ಎಂದು ಹೇಳಿದರು. ಸಚಿವರಾದ ಮುರುಗೇಶ್ ನಿರಾಣಿ, ಸಿ.ಎಚ್.ವಿಜಯ ಶಂಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.