ಮಂಗಳವಾರ, ಮೇ 18, 2021
30 °C

ಶಾಸಕರಿಗೆ ವಿದೇಶ ಯಾತ್ರೆ ಚಿಂತೆ!

ಪ್ರಜಾವಾಣಿ ವಾರ್ತೆ ಬಿ.ಎನ್.ಶ್ರೀಧರ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ 123 ತಾಲ್ಲೂಕುಗಳಲ್ಲಿ ಭೀಕರ ಬರ. ಕುಡಿಯುವ ನೀರಿಗೆ ಹಾಹಾಕಾರ. ಮೇವಿನ ಕೊರತೆ... ಹೀಗೆ ನೂರೆಂಟು ತೊಂದರೆ. ಆದರೆ, ಶಾಸಕರು ಮಾತ್ರ ತಮ್ಮ ಈ ಅವಧಿ ಮುಗಿಯುವುದರೊಳಗೆ (2013ರ ಮೇ) ಅಧ್ಯಯನದ ನೆಪದಲ್ಲಿ ಮತ್ತೊಮ್ಮೆ ವಿದೇಶ ಪ್ರವಾಸ ಹೋಗಬೇಕೆನ್ನುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಕುರಿತ ಪ್ರಸ್ತಾವನೆ ಮುಖ್ಯಮಂತ್ರಿ ಕಚೇರಿಗೆ ಹೋಗಿದ್ದು ಅವರ ನಿರ್ಧಾರದ ಮೇಲೆ  ಪ್ರವಾಸದ ಭವಿಷ್ಯ ನಿಂತಿದೆ.ವಿಧಾನಮಂಡಲದ ವಿವಿಧ ಸಮಿತಿಗಳ ಸದಸ್ಯರು ತಮ್ಮ ಸದಸ್ಯತ್ವದ ಅವಧಿ ಮುಗಿಯುವುದರೊಳಗೆ ಒಂದು ಸಲ ವಿದೇಶ ಹಾಗೂ ಮೂರು ಬಾರಿ ಸ್ವದೇಶದಲ್ಲಿ `ಅಧ್ಯಯನ ಪ್ರವಾಸ~ ಮಾಡಲು 2009ರಲ್ಲೇ ಸರ್ಕಾರ ಅವಕಾಶ ಕಲ್ಪಿಸಿತು.ಈಗ ವಿದೇಶ ಪ್ರವಾಸವನ್ನು ಎರಡು ಬಾರಿಗೆ ಏರಿಸಬೇಕು ಹಾಗೂ ಮೂರು ಬಾರಿ ಇರುವ ಸ್ವದೇಶ ಪ್ರವಾಸವನ್ನು ಎರಡು ಬಾರಿಗೆ ಇಳಿಸಬೇಕು ಎನ್ನುವ ಪ್ರಸ್ತಾವ ಇದೆ. ಇದಕ್ಕೆ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಮತ್ತು ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅಂಕಿತ ಕೂಡ ಹಾಕಿದ್ದಾರೆ. ಈ ಕಡತ ಈಗ ಮುಖ್ಯಮಂತ್ರಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶಕುಮಾರ್ ಅವರ ಅಂತಿಮ ಒಪ್ಪಿಗೆಗಾಗಿ ಕಾದು ಕುಳಿತಿದೆ.ಶಾಸಕರ ಸಮಜಾಯಿಷಿ: ಎರಡು ಬಾರಿ ವಿದೇಶ ಪ್ರವಾಸ ಬೇಕು ಎನ್ನುವ ಶಾಸಕರು ಅದಕ್ಕೆ ಪೂರಕವಾಗಿ ತಮ್ಮದೇ ವಾದ ಮಂಡಿಸಿದ್ದಾರೆ. ನಗರಾಭಿವೃದ್ಧಿ, ಕೃಷಿ, ಸಾರಿಗೆ, ಮೂಲಸೌಲಭ್ಯ ಇನ್ನಿತರ ಕ್ಷೇತ್ರಗಳಲ್ಲಿ ವಿದೇಶಗಳಲ್ಲಿ ಆಗಿರುವ ಪ್ರಗತಿ ಮತ್ತು ನೂತನ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಳ್ಳುವ ಅಗತ್ಯ ಇದೆ. ಹೀಗಾಗಿ ಎರಡು ಬಾರಿ ವಿದೇಶಕ್ಕೆ ಹೋಗಿ ಬರಲು ಅವಕಾಶ ಮಾಡಬೇಕು ಎಂದಿದ್ದಾರೆ.ಈ ಕುರಿತು ಇತ್ತೀಚೆಗೆ ನಡೆದ ವಿವಿಧ ಸಮಿತಿಗಳ ಅಧ್ಯಕ್ಷರ ಸಭೆಯಲ್ಲಿ ಸಭಾಧ್ಯಕ್ಷ ಮತ್ತು ಸಭಾಪತಿಯವರು ಸುದೀರ್ಘ ಚರ್ಚೆ ನಡೆಸಿ, ಶಾಸಕರ ಕೋರಿಕೆಗೆ ಸಮ್ಮತಿ ಸೂಚಿಸಿದ್ದಾರೆ.ಎಷ್ಟು ಖರ್ಚಾಗುತ್ತದೆ?: ವಿಧಾನಸಭೆಯ 225 ಹಾಗೂ ವಿಧಾನ ಪರಿಷತ್ತಿನ 75 ಮಂದಿ ಸದಸ್ಯರ ಒಂದು ಬಾರಿಯ ವಿದೇಶ ಪ್ರವಾಸಕ್ಕೆ ಕನಿಷ್ಠ 18ರಿಂದ 20 ಕೋಟಿ ರೂಪಾಯಿ ಖರ್ಚಾಗುತ್ತದೆ. ಒಂದು ವೇಳೆ ಪ್ರವಾಸ ಎರಡು ಬಾರಿಯಾದರೆ ಅದರ ಖರ್ಚು ದುಪ್ಪಟ್ಟು ಆಗುವುದು ಖಚಿತ. ಇತ್ತೀಚೆಗೆ ವಿಮಾನಯಾನ ದುಬಾರಿಯಾಗಿರುವ ಕಾರಣದಿಂದ ಈ ಮೊತ್ತ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಒಮ್ಮೆ ಸರ್ಕಾರ ಒಪ್ಪಿಗೆ ಕೊಟ್ಟ ನಂತರ ಅದರ ಖರ್ಚು-ವೆಚ್ಚ ಎಷ್ಟೇ ಆದರೂ ಅದನ್ನು ಭರಿಸಬೇಕಾಗುತ್ತದೆ. ಇದು ನಿಯಮ ಕೂಡ.12ನೇ ವಿಧಾನಸಭೆ ಅಸ್ತಿತ್ವಕ್ಕೆ ಬಂದ ನಂತರ ಇನ್ನೂ ಸುಮಾರು 32 ಮಂದಿ ವಿಧಾನಸಭಾ ಸದಸ್ಯರು ಹಾಗೂ 40ಕ್ಕೂ ಹೆಚ್ಚು ವಿಧಾನ ಪರಿಷತ್ ಸದಸ್ಯರು ಒಮ್ಮೆಯೂ ವಿದೇಶಕ್ಕೆ ಅಧ್ಯಯನ ಪ್ರವಾಸ ಹೋಗಿಲ್ಲ. ಇವರ ಪ್ರವಾಸಕ್ಕೆ ಇತ್ತೀಚೆಗೆ ಸಿದ್ಧತೆ ಕೂಡ ಮಾಡಿಕೊಳ್ಳಲಾಗಿತ್ತು. ಮೇ ತಿಂಗಳಲ್ಲಿ ಹೋಗಲು ತಯಾರಿ ನಡೆದಿತ್ತು. ಆದರೆ, ಬರದ ಹಿನ್ನೆಲೆಯಲ್ಲಿ ಪ್ರವಾಸವನ್ನು ಮುಂದೂಡಲಾಯಿತು. ಜೂನ್- ಜುಲೈನಲ್ಲಿ ಪ್ರವಾಸ ಹೋಗಲು ತೀರ್ಮಾನಿಸಲಾಗಿದೆ.ಎಷ್ಟು ದಿನದ ಪ್ರವಾಸ: ವಿದೇಶದ `ಅಧ್ಯಯನ ಪ್ರವಾಸ~ವನ್ನು ಪ್ರಯಾಣದ ಅವಧಿ ಹೊರತುಪಡಿಸಿ ಒಟ್ಟು 15 ದಿನ ಮೀರದಂತೆ ಹಮ್ಮಿಕೊಳ್ಳಬೇಕು. ಸಮಿತಿಯು ದೂರದ ದೇಶಕ್ಕೆ ವಿದೇಶಿ ಪ್ರವಾಸ ನಿಗದಿಗೊಳಿಸಿದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಇರುವ ದೇಶಗಳಿಗೆ ಮಾತ್ರ ಭೇಟಿ ನೀಡಬೇಕು. ಒಂದಕ್ಕಿಂತ ಹೆಚ್ಚು ಸಮಿತಿಗಳಿಗೆ ಸದಸ್ಯರಾದವರ ವಿದೇಶ ಪ್ರವಾಸ ಎರಡು ಬಾರಿ ಮೀರದಂತೆ ಇರಬೇಕು. ಸಮಿತಿ ಜತೆ ಪ್ರಯಾಣ ಮಾಡುವ ಅಧಿಕಾರಿ/ನೌಕರರ ಸಂಖ್ಯೆಯನ್ನು ಮೂರಕ್ಕೆ ಮಿತಿಗೊಳಿಸಬೇಕು ಎಂದೂ ಷರತ್ತು ವಿಧಿಸಲಾಗಿದೆ.ಒಟ್ಟಿನಲ್ಲಿ ಶಾಸಕರ ವಿದೇಶ ಪ್ರಯಾಣದ ಆಸೆ ಕೈಗೂಡುವುದು ಬಿಡುವುದು ವಿಶೇಷ ಮಂಡಳಿಯ ಸದಸ್ಯರೂ ಆದ ಮುಖ್ಯಮಂತ್ರಿಗಳ ನಿರ್ಧಾರದ ಮೇಲೆ ನಿಂತಿದೆ ಎನ್ನುತ್ತವೆ ಸಚಿವಾಲಯದ ಮೂಲಗಳು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.