ಭಾನುವಾರ, ಏಪ್ರಿಲ್ 11, 2021
32 °C

ಶಾಸ್ತ್ರೀಯ ಭಾಷೆ: ಸೌಲಭ್ಯ ವಂಚಿತ ಕನ್ನಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಶಾಸ್ತ್ರೀಯ ಭಾಷೆ ಸ್ಥಾನಮಾನ ಗಳಿಸಿಕೊಂಡಿರುವ ಕನ್ನಡದ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡಲು ಯೋಜನಾ ಆಯೋಗ ನಿರಾಕರಿಸಿದೆ.

ಕನ್ನಡ ಭಾಷೆಯ ಅಭಿವೃದ್ಧಿಗೆ ಹಣ ನೀಡುವ ವಿಷಯವನ್ನು 12ನೇ ಪಂಚವಾರ್ಷಿಕ ಯೋಜನಾ ಅವಧಿಗೆ ಮುಂದೂಡಿರುವುದರಿಂದ ಭಾಷಾಭಿವೃದ್ಧಿ ಯೋಜನೆಗಳು ಶೀಘ್ರ ಕೈಗೂಡುವ ಸಾಧ್ಯತೆ ಇಲ್ಲವಾಗಿದೆ.ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿರುವುದರಿಂದ ಭಾಷೆಯ ಅಭಿವೃದ್ಧಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ 2.20 ಕೋಟಿ ರೂಪಾಯಿಗಳನ್ನು ಒದಗಿಸಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಈ ಮೊದಲು ಯೋಜನಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆದರೆ ಇದೊಂದು ಹೊಸ ಯೋಜನೆಯಾಗಿದ್ದು, 2012ರಲ್ಲಿ ಆರಂಭವಾಗುವ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಇದರ ಬಗ್ಗೆ ಪರಿಶೀಲನೆ ನಡೆಸಬಹುದಷ್ಟೇ ಎಂದು ಯೋಜನಾ ಆಯೋಗ ತಿಳಿಸಿದೆ.  ‘12ನೇ ಪಂಚವಾರ್ಷಿಕ ಯೋಜನೆ 2012 ರಲ್ಲಿ ಆರಂಭವಾದರೂ ಯೋಜನಾ ಅವಧಿಯ ಮೊದಲ ವರ್ಷದಲ್ಲೇ ಹಣ ನೀಡಬೇಕಾಗಿಯೇನೂ ಇಲ್ಲ’ ಎಂದು ಆಯೋಗದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡುವ ಸಂದರ್ಭದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಯೋಜನಾ ಆಯೋಗಕ್ಕೆ ವಿವರವಾದ ಪ್ರಸ್ತಾವ ಕಳುಹಿಸಿ, ಮೈಸೂರಿನಲ್ಲಿರುವ ಕೇಂದ್ರೀಯ ಭಾರತೀಯ ಭಾಷಾ ಕೇಂದ್ರದಲ್ಲಿ ಶಾಸ್ತ್ರೀಯ ಭಾಷೆಗಳ ಉನ್ನತ ಅಧ್ಯಯನ ಕೇಂದ್ರ (ಸಿಇಎಸ್‌ಸಿಎಲ್) ಸ್ಥಾಪಿಸಬೇಕು ಎಂದು ಹೇಳಿತ್ತು.ಈ ಕೇಂದ್ರದಲ್ಲಿ ಕನ್ನಡ ಮತ್ತು ತೆಲುಗು ಘಟಕಗಳನ್ನು ತೆರೆಯಬೇಕು ಹಾಗೂ ಈ ಸಂಸ್ಥೆ ಗುರುತಿಸಿದ ಹಲವು ಚಟುವಟಿಕೆಗಳನ್ನುಕೈಗೊಳ್ಳಬೇಕು ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿತ್ತು.ಸಂಶೋಧನೆಗಳ ಜತೆಗೆ ಸಿಇಎಸ್‌ಸಿಎಲ್ ಎರಡೂ ಭಾಷೆಗಳಲ್ಲಿ ಮೂರು ಪುರಸ್ಕಾರಗಳನ್ನು (ಇವುಗಳಲ್ಲಿ ಎರಡು ಅಂತರರಾಷ್ಟ್ರೀಯ ಮಟ್ಟದ್ದು) ಸ್ಥಾಪಿಸಿ ಪ್ರತಿಯೊಬ್ಬ ವಿದ್ವಾಂಸರಿಗೆ ತಲಾ 5 ಲಕ್ಷ ರೂಪಾಯಿಯಂತೆ ಬಹುಮಾನ ನೀಡಬೇಕಾಗಿತ್ತು. ಜತೆಗೆ ಐದು ಮಂದಿ ಯುವ ವಿದ್ವಾಂಸರಿಗೆ ತಲಾ 1 ಲಕ್ಷ ರೂಪಾಯಿಯಂತೆ ಪುರಸ್ಕಾರ ನೀಡಬೇಕಿತ್ತು.ಪೂರ್ಣ ಪ್ರಮಾಣದ ಗ್ರಂಥಾಲಯ ಸ್ಥಾಪಿಸಿ, ಯುಜಿಸಿ ಮಾದರಿಯಲ್ಲಿ ಸಂಶೋಧನಾ ಫೆಲೋಶಿಪ್‌ಗಳನ್ನು ಒದಗಿಸುವುದು, ಉತ್ತಮ ಸಿಬ್ಬಂದಿಯ ನಿಯೋಜನೆ, ದಾಖಲೆಗಳ ಸಂಗ್ರಹ, ಸಂಶೋಧನೆಗಳನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಿಸಿ ಇಡುವುದು, ಮುದ್ರಣ ಮತ್ತು ವಿದ್ಯುನ್ಮಾನ ಮಾದರಿಯಲ್ಲಿ ಕನ್ನಡ ಮತ್ತು ತೆಲುಗು ಶಾಸ್ತ್ರೀಯ ಪುಸ್ತಕಗಳನ್ನು ಮತ್ತು ಸಂಶೋಧನೆಗಳನ್ನು ಪ್ರಕಾಶಿಸುವುದು ಸಹಿತ ಹಲವು ಪ್ರಸ್ತಾವಗಳೂ ಇದ್ದವು.ಈ ಎರಡೂ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ಸಿಗುವ ನಿಟ್ಟಿನಲ್ಲಿ ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯಿಲಿ ಅವರೂ ಶ್ರಮಿಸಿದ್ದಾರೆ. ಸದ್ಯದ ಪರಿಸ್ಥಿತಿ ಬಗ್ಗೆ ಅವರನ್ನು ಸಂಪರ್ಕಿಸಿದಾಗ, ಯೋಜನಾ ಆಯೋಗ ಹಣ ನೀಡಲು ನಿರಾಕರಿಸಿದ್ದನ್ನು ಅವರೂ ಒಪ್ಪಿಕೊಂಡರು. ಈ ವಿಚಾರವನ್ನು ಮತ್ತೊಮ್ಮೆ ಎತ್ತಿಕೊಂಡು ಒತ್ತಡ ಹೇರಲು ತಾವು ಮಾನವ ಸಂಪನ್ಮೂಲ ಸಚಿವಾಲಯವನ್ನು ಕೇಳಿಕೊಳ್ಳುವುದಾಗಿ ತಿಳಿಸಿದರು. ‘ಈ ವರ್ಷವೇ ಕೆಲವು ಕಾರ್ಯಕ್ರಮಗಳ ಆರಂಭಕ್ಕೆ ಸ್ವಲ್ಪ ಹಣವಾದರೂ ಬಿಡುಗಡೆ ಮಾಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ’ ಎಂದರು.ಕೇಂದ್ರವು 2008ರ ನವೆಂಬರ್‌ನಲ್ಲೇ ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಿದೆ. ಆದರೆ ಕೇಂದ್ರದ ಈ ನಿರ್ಧಾರ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರಿಂದ ಪ್ರಸ್ತಾವ ಜಾರಿಗೆ ಬರುವುದು ವಿಳಂಬವಾಯಿತು. ಆದರೆ ಬಳಿಕ ಕೇಂದ್ರ ಕಾನೂನು ಸಚಿವಾಲಯವು ಯೋಜನೆಗಳನ್ನು ಜಾರಿಗೆ ತರಲು ತನ್ನ ಅನುಮತಿ ನೀಡಿತ್ತು.

ಕುತೂಹಲದ ಸಂಗತಿಯೆಂದರೆ 2004ರಲ್ಲಿ ತಮಿಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಿದಾಗ ಕೇಂದ್ರವು ಯೋಜನೆಗಳ ಜಾರಿಯಲ್ಲಿ ಅತ್ಯುತ್ಸಾಹ ತೋರಿತ್ತು. ಚೆನ್ನೈಯಲ್ಲಿ ಸಂಶೋಧನಾ ಸಂಸ್ಥೆ ಸ್ಥಾಪನೆ ಸಹಿತ ಹಲವಾರು ಕಾರ್ಯಕ್ರಮಗಳಿಗಾಗಿ ಸಾಕಷ್ಟು ಹಣಕಾಸಿನ ನೆರವು ನೀಡಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.