ಬುಧವಾರ, ಜೂಲೈ 8, 2020
22 °C

ಶಿಕಾರಿ ಕಥಾನಕವು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕಾರಿ ಕಥಾನಕವು...

ಮೂರು ವರ್ಷದ ಧ್ಯಾನ ಮುಕ್ತಾಯದ ಹಂತ ಮುಟ್ಟಿದ ಭಾವ. ಸದ್ಯ, ನಿರ್ಮಾಪಕರ ಜೇಬಿಗೆ ಭಾರ ಹಾಕಲಿಲ್ಲ ಎಂಬ ನಿರಾಳತೆ. ಬೇರೆ ಭಾಷೆಯ ಸೂಪರ್‌ಸ್ಟಾರ್‌ಗೆ ಆ್ಯಕ್ಷನ್, ಕಟ್ ಹೇಳಿ ಸೈ ಎನ್ನಿಸಿಕೊಂಡ ಧನ್ಯತಾಭಾವ. ಕನ್ನಡ, ಮಲಯಾಳ ಎರಡೂ ಭಾಷೆಗಳಲ್ಲಿ ಒಂದೇ ಚಿತ್ರವನ್ನು ಏಕಕಾಲದಲ್ಲಿ ಚಿತ್ರೀಕರಿಸಿರುವ ಈ ಕನ್ನಡಿಗ ಅಭಯ ಸಿಂಹ. ಮಲಯಾಳಂ ಸೂಪರ್‌ಸ್ಟಾರ್ ಮುಮ್ಮುಟ್ಟಿಯವರನ್ನು ಮೊದಲ ಬಾರಿಗೆ ಕನ್ನಡ ಚಿತ್ರೋದ್ಯಮಕ್ಕೆ ಕರೆತಂದು, ‘ಶಿಕಾರಿ’ ಸಿದ್ಧಪಡಿಸಿರುವ ಅಭಯ ಸಿಂಹ ಮುಕ್ತವಾಗಿ ಮಾತಿಗೆ ತೆರೆದುಕೊಂಡರು.

ಮುಮ್ಮುಟ್ಟಿ ಈ ಸಿನಿಮಾ ಒಪ್ಪಿದ್ದು ಹೇಗೆ?

ನಾನು ಪುಣೆಯ ಎಫ್‌ಟಿಐಐನಲ್ಲಿ (ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ) ಕಲಿಯುತ್ತಿದ್ದಾಗ ಅಂಜಲಿ ಶುಕ್ಲಾ ಎಂಬುವರು ನನ್ನ ಸೀನಿಯರ್ ಆಗಿದ್ದರು. ಅವರೀಗ ಹೆಸರಾಂತ ಸಿನಿಮಾಟೋಗ್ರಫರ್. ಅವರಿಂದ ಮುಮ್ಮುಟ್ಟಿಯವರ ನಂಬರ್ ಸಿಕ್ಕಿತು. ಮೊದಲಿಗೆ ಫೋನ್ ಮಾಡಿದೆ. ಇ-ಮೇಲ್ ಮೂಲಕ ಸಂಕ್ಷಿಪ್ತ ಕತೆ ಕಳುಹಿಸಿಕೊಡುವಂತೆ ಹೇಳಿದರು. ಇ-ಮೇಲ್ ಕಳಿಸಿ, ಇನ್ನು ಯಾವಾಗ ಓದುತ್ತಾರೋ ಎಂದುಕೊಂಡು ಸುಮ್ಮನಾದೆ. ಮರುದಿನವೇ ಫೋನ್ ಮಾಡಿದರು. ನನಗೆ ಅಚ್ಚರಿ. ಕಥೆ ಅವರಿಗೆ ಇಷ್ಟವಾಗಿತ್ತು. ಚರ್ಚೆಗೆ ಅವರು ಸಿದ್ಧರಾದರು. ಅಷ್ಟು ಬೇಗ ಮುಮ್ಮುಟ್ಟಿ ಪ್ರತಿಕ್ರಿಯಿಸಬಹುದು ಎಂದು ನಾನು ಕನಸು ಮನಸಲ್ಲೂ ಎಣಿಸಿರಲಿಲ್ಲ.

ಮುಮ್ಮುಟ್ಟಿಯೇ ಈ ಪಾತ್ರಕ್ಕೆ ಸೂಕ್ತ ಎಂದು ಅನ್ನಿಸಿದ್ದು ಯಾಕೆ?

‘ಶಿಕಾರಿ’ಯಲ್ಲಿ ನಾಯಕ ಎರಡು ಪಾತ್ರಗಳಲ್ಲಿದ್ದಾನೆ. ಸ್ವಾತಂತ್ರ್ಯಪೂರ್ವದ ಕಥೆಯ ನಾಯಕ ಒಬ್ಬನಾದರೆ, ಇನ್ನೊಬ್ಬ ಈ ಕಾಲಮಾನದವನು. ಎರಡೂ ಪಾತ್ರಗಳ ವರ್ತನೆಯಲ್ಲೇ ವ್ಯತ್ಯಾಸವಿದೆ. ಹಾಗಾಗಿ ಒಬ್ಬರೇ ಅದನ್ನು ನಿರ್ವಹಿಸುವುದು ಸಂಕೀರ್ಣವಾದ ಕೆಲಸ.

ಅಷ್ಟೊಂದು ಸಂಕೀರ್ಣವಾದ ಪಾತ್ರಗಳನ್ನು ಮುಮ್ಮುಟ್ಟಿ ಸಲೀಸಾಗಿ ನಿಭಾಯಿಸಿರುವುದನ್ನು ನಾನು ಅನೇಕ ಚಿತ್ರಗಳಲ್ಲಿ ಕಂಡಿದ್ದೆ. ಹಾಗಾಗಿ ಸ್ಕ್ರಿಪ್ಟ್ ಮಾಡುವ ಹಂತದಲ್ಲಿ ನನಗೆ ಹೊಳೆದದ್ದು ಅವರೇ.

ಕನ್ನಡ ಚಿತ್ರದಲ್ಲಿ ನಟಿಸಲು ಅವರು ಸಲೀಸಾಗಿ ಒಪ್ಪಿದರೇ?

ಕನ್ನಡಿಗನಾಗಿ ನನಗೆ ಈ ಸಿನಿಮಾ ಕನ್ನಡದಲ್ಲಿಯೇ ಆದರೆ ಒಳ್ಳೆಯದು ಎಂಬ ಭಾವನೆ ಇತ್ತು. ಮುಮ್ಮುಟ್ಟಿ ಒಪ್ಪಿದ ನಂತರ ಒಂದು ವೇಳೆ ಅವರು ಕನ್ನಡ ಒಲ್ಲದೇ ಹೋದರೆ ಮಲಯಾಳದಲ್ಲಾದರೂ ಮಾಡೋಣ ಎಂದು ನಿರ್ಧರಿಸಿದ್ದೆ. ಒಟ್ಟಿನಲ್ಲಿ ನನಗೆ ಆ ಚಿತ್ರ ಮೂಡಿಬರುವುದು ಮುಖ್ಯವಿತ್ತು. ಅವರು ಕನ್ನಡ, ಮಲಯಾಳ ಎರಡೂ ಭಾಷೆಗಳಲ್ಲಿ ನಟಿಸಲು ಒಪ್ಪಿದರು.

ಕೆ.ಮಂಜು ಈ ಚಿತ್ರ ನಿರ್ಮಿಸಲು ಒಪ್ಪಿದ್ದು ಹೇಗೆ?

ನ್ಯಾಷನಲ್ ಅವಾರ್ಡ್ ಫಂಕ್ಷನ್‌ನಲ್ಲಿ ಪ್ರಕಾಶ್ ರೈ ಮೊದಲಾದವರು ಇದ್ದರು. ನಾನೂ ಹೋಗಿದ್ದೆ. ಆಗ ಪ್ರಕಾಶ್ ಅವರಿಗೆ ‘ಕಾಂಚೀವರಂ’ ಚಿತ್ರದ ಅಭಿನಯಕ್ಕೆ ಪ್ರಶಸ್ತಿ ಬಂದಿತ್ತು. ಪರಿಚಯದವರೊಬ್ಬರು ನಾನು ಕಥೆ ಮಾಡಿದ್ದು, ಮುಮ್ಮುಟ್ಟಿ ನಟಿಸಲು ಒಪ್ಪಿದ್ದು ಎಲ್ಲವನ್ನೂ ಅಲ್ಲೇ ಇದ್ದ ಕೆ.ಮಂಜು ಅವರಿಗೆ ವಿವರಿಸಿದರು. ತಮ್ಮ ಕಚೇರಿಗೆ ಬಂದು ನೋಡುವಂತೆ ಮಂಜು ಸೂಚಿಸಿದರು. ನನ್ನ ಕನಸು ಅವರಿಗೂ ಇಷ್ಟವಾಯಿತು. ನಿರ್ಮಿಸಲು ಒಪ್ಪಿದರು. ಅದಕ್ಕೂ ಮೊದಲೇ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಇನ್ನೊಬ್ಬರು ಚಿತ್ರಕ್ಕೆ ಹಣ ಕೊಡಲು ಒಪ್ಪಿದ್ದರು. ಆದರೆ, ವ್ಯವಹಾರದ ಇಕ್ಕಟ್ಟಿನಿಂದಾಗಿ ಅವರಿಗೆ ಆ ಸಂದರ್ಭದಲ್ಲಿ ಚಿತ್ರ ನಿರ್ಮಾಣ ಸಾಧ್ಯವಾಗಲಿಲ್ಲ.

ಸಂಭಾವನೆ ವಿಷಯದಲ್ಲಿ ಮುಮ್ಮುಟ್ಟಿ ರಾಜಿಯಾದರು ಅಂತ ಕೇಳಿದ್ದೇನೆ, ನಿಜವಾ?

ಹೌದು. ಅವರು ತಮ್ಮ ಸಂಭಾವನೆಯಲ್ಲಿ ರಿಯಾಯಿತಿ ಕೊಟ್ಟರು. ಮಲಯಾಳ ವರ್ಶನ್‌ಗೆ ಮಾತ್ರ ಈ ರಿಯಾಯಿತಿ. ಕನ್ನಡದ ವರ್ಶನ್‌ನಲ್ಲಿ ಅವರು ಹಣವನ್ನೇ ಪಡೆಯದೆ ಅಭಿನಯಿಸಿದರು. ನನ್ನ ಪ್ರಕಾರ ಇದು ದೊಡ್ಡ ವಿಷಯ. ಯಾಕೆಂದರೆ, 30 ವರ್ಷಗಳ ಅನುಭವವಿರುವ ಸೂಪರ್‌ಸ್ಟಾರ್ ಒಬ್ಬ ಬೇರೆ ಭಾಷೆಯಲ್ಲಿ ಹಣ ಪಡೆಯದೆ ನಟಿಸುವುದು ತಮಾಷೆಯಲ್ಲ. ಇದು ಮುಮ್ಮುಟ್ಟಿ ಅಭಿನಯದ 369ನೇ ಚಿತ್ರ. ಅದಕ್ಕೂ ಮಿಗಿಲಾಗಿ ಅನೇಕರಿಗೆ ಅವರು ಎರಡು ಮೂರು ವರ್ಷದ ನಂತರ ಕಾಲ್‌ಷೀಟ್ ಕೊಟ್ಟಿರುವ ಉದಾಹರಣೆಗಳಿವೆ. ನನಗೆ ಆರೇ ತಿಂಗಳಲ್ಲಿ ಕೊಟ್ಟರು.

ಚಿತ್ರೀಕರಣ ಎಲ್ಲೆಲ್ಲಿ ನಡೆಯಿತು? ಎಷ್ಟು ದಿನ ಹಿಡಿಯಿತು?

ಬೆಂಗಳೂರು, ತೀರ್ಥಹಳ್ಳಿ, ಕೊಚ್ಚಿನ್- ಈ ಮೂರೂ ಸ್ಥಳಗಳಲ್ಲಿ ನಾಲ್ಕು ಹಂತದಲ್ಲಿ ಚಿತ್ರೀಕರಣ ನಡೆಸಿದೆವು. ಐದು ಹಾಡು, ಎರಡು ಫೈಟ್ ಸೇರಿ 47 ದಿನಗಳಲ್ಲಿ ಎರಡೂ ಭಾಷೆಗಳಲ್ಲಿ ಚಿತ್ರೀಕರಣ ಮುಗಿಸಿದೆವು.

ಕನ್ನಡ, ಮಲಯಾಳ ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣ ನಡೆಸಿದ್ದಾ?

ಹೌದು. ಇದಕ್ಕೆ ಸಾಕಷ್ಟು ಸಿದ್ಧತೆ ಬೇಕಿತ್ತು. ಆದರೆ, ಹಣ ಪೋಲಾಗುವುದನ್ನು ತಡೆಯಲು ಹಾಗೂ ಮುಮ್ಮುಟ್ಟಿ ಕಾಲ್‌ಷೀಟ್‌ನ ಅವಧಿಯಲ್ಲೇ ಚಿತ್ರೀಕರಣ ಮುಗಿಸಲು ಇದು ಅಗತ್ಯವಿತ್ತು.

‘ಶಿಕಾರಿ’ ಕಥೆಯ ಸಾರಾಂಶವೇನು?

ಕಥೆಯ ಎಳೆಯನ್ನು ನಾನು ಬಿಟ್ಟುಕೊಡಲಾರೆ. ಚರಿತ್ರೆಯನ್ನು ಈ ಕಾಲಮಾನಕ್ಕೆ ಬೆಸೆದು ಕಥೆ ಹೇಳುವ, ಕನ್ನಡದ ಮಟ್ಟಿಗೆ ಹೊಸತು ಎನ್ನಬಹುದಾದ ನಿರೂಪಣೆಗೆ ಪ್ರಯತ್ನಿಸಿದ್ದೇನೆ. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರ ದಾಸರಾಗಿದ್ದ ನಾವು, ಈಗಲೂ ಜಾಗತೀಕರಣದ ಮೂಲಕ ವಸಾಹತುಶಾಹಿಯನ್ನು ಬರಮಾಡಿಕೊಳ್ಳುತ್ತಿದ್ದೇವೆ. ನಾವು ಆವತ್ತಿಗೂ, ಈಹೊತ್ತಿಗೂ ಬದಲಾಗಿಲ್ಲವೆಂಬುದೇ ಕಥೆಯ ಒಳಹರಿವು. ಪ್ರೇಮಕಥೆಯೂ ಇದ್ದು, ಅದು ಗೌಣವೆಂಬಂತೆ ಮೂಡಿಬಂದಿದೆ.

ನಾಯಕಿಯ ಆಯ್ಕೆ ತಡವಾದದ್ದು ಏಕೆ?

ಮುಮ್ಮುಟ್ಟಿ ನಾಯಕ ಅಂದಮೇಲೆ ಅವರಿಗೆ ಹೊಂದಾಣಿಕೆಯಾಗುವ ನಾಯಕಿಯೇ ಬೇಕು. ನಾವು ಅದಕ್ಕಾಗಿ ಸಾಕಷ್ಟು ತಲಾಷು ನಡೆಸಿದೆವು. ಸ್ಥಳೀಯ ನಟಿಯರನ್ನೂ ಪರಿಗಣಿಸಿದೆವು. ಕಾರಣಾಂತರಗಳಿಂದ ಕೆಲವರ ಡೇಟ್ಸ್ ಸಿಗಲಿಲ್ಲ. ‘ತಂಗಿಗಾಗಿ’ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಪೂನಂ ಆಜ್ವಾ ಕೂಡ ಆಸಕ್ತಿ ತೋರಿಸಿ ಮುಂದೆ ಬಂದರು. ಕೆಲವು ತಮಿಳು ಚಿತ್ರಗಳಲ್ಲಿ ನಟಿಸಿದ್ದ ಅವರ ‘ಬಾಡಿ ಆಫ್ ವರ್ಕ್’ ಸಾಕಷ್ಟು ಬದಲಾವಣೆಯಾಗಿತ್ತು. ಪಾತ್ರಕ್ಕೆ ಸಂಪೂರ್ಣವಾಗಿ ಹೊಂದುತ್ತಾರೆ ಎಂಬ ಭರವಸೆ ಮೂಡಿದ್ದರಿಂದ ಅವರನ್ನು ಆಯ್ಕೆ ಮಾಡಿದೆವು. ಅವರದ್ದೂ ಎರಡು ಪಾತ್ರ. ಅವರು ಅದ್ಭುತವಾಗಿ ನಟಿಸಿದ್ದಾರೆ. ಒಳ್ಳೆಯ ಕಲಾವಿದೆ.

ಮುಮ್ಮುಟ್ಟಿ ಕನ್ನಡದಲ್ಲಿ ಡಬ್ ಮಾಡಲು ಕಷ್ಟಪಡಲಿಲ್ಲವೇ?

ಚೆನ್ನೈನಲ್ಲಿ ಮೊದಲ ಮೂರು ದಿನ ಕೆಲವು ಭಾಗಗಳಿಗೆ ಡಬಿಂಗ್ ಮಾಡಲು ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಾನೇ ಪಕ್ಕದಲ್ಲಿ ಕೂತು ಅವರಿಗೆ ಕನ್ನಡದ ಮಾತುಗಳನ್ನು ಹೇಳುತ್ತಿದ್ದೆ. ಏರಿಳಿತಗಳನ್ನು ಅರಿತೇ ಅವರು ಡಬ್ ಮಾಡುತ್ತಿದ್ದರು. ಕೇಳುವಾಗ ಚೆನ್ನಾಗಿಯೇ ಇರುತ್ತಿತ್ತು. ರೆಕಾರ್ಡ್ ಆದ ನಂತರ ಏನೋ ಕೊರತೆ ಇದೆ ಅನ್ನಿಸುತ್ತಿತ್ತು. ಚಿತ್ರದಲ್ಲಿ ಅವರದ್ದು ಮಲಯಾಳ ಮೂಲದ ಪಾತ್ರವೇ ಆಗಿರುವುದರಿಂದ ಸ್ವಚ್ಛವಾದ ಕನ್ನಡವನ್ನು ಅವರು ಮಾತಾಡದಿದ್ದರೂ ನಡೆಯುತ್ತದೆ. ಆದರೆ, ಕೇಳುವ ಮಾತು ಕಿವಿಗೆ ಹಿತವಿರಬೇಕು. ಆಮೇಲೆ ಕೊಚ್ಚಿನ್‌ನಲ್ಲಿ ಮತ್ತೆ ಡಬಿಂಗ್ ಮುಂದುವರಿಸಿದೆವು. ಕನ್ನಡದಲ್ಲಿ ಮಾತನಾಡುವ ಉತ್ಸಾಹವಂತೂ ಅವರಲ್ಲಿದೆ.

ಎರಡೂ ಭಾಷೆಯ ಚಿತ್ರಗಳ ಬಿಡುಗಡೆ ಹೇಗೆ?

ಒಂದೇ ದಿನ ಎರಡನ್ನೂ ಬಿಡುಗಡೆ ಮಾಡುವ ಯೋಚನೆ ಇದೆ. ಅದಕ್ಕೇ ಈಗ ಪ್ಲಾನ್ ಮಾಡುತ್ತಿದ್ದೇವೆ. ಬಹುಶಃ ಮೇ ತಿಂಗಳಲ್ಲಿ ಚಿತ್ರ ತೆರೆಕಾಣಲಿದೆ.

ಮಲಯಾಳದಲ್ಲಿ ಖುದ್ದು ಮುಮ್ಮುಟ್ಟಿ ಸಂಭಾಷಣೆ ಬರೆದರಲ್ಲವೇ?

ಹೌದು. ನಾನು ಅವರಿಗೆ ಸೀನ್‌ಗಳನ್ನು ವಿವರಿಸುತ್ತಿದ್ದೆ. ತಮ್ಮ ಸಹಾಯಕರ ನೆರವಿನಿಂದ ಅವರೇ ಸಂಭಾಷಣೆ ಬರೆದರು.

ಈ ರೀತಿ ಏಕಕಾಲದಲ್ಲಿ ಎರಡು ಭಾಷೆಗಳಲ್ಲಿ ಚಿತ್ರ ತೆಗೆಯುವುದರಿಂದ ವ್ಯಾಪಾರದ ದೃಷ್ಟಿಯಿಂದ ಲಾಭವಿದೆಯೇ?

ಖಂಡಿತ ಇದೆ. ಆದರೆ, ಹಣ ಪೋಲಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನಾನು ಎರಡೂ ಭಾಷೆಗಳಲ್ಲಿ ಸಿನಿಮಾ ತೆಗೆಯಲು 65 ಸಾವಿರ ಅಡಿಯಷ್ಟು ಫಿಲ್ಮ್ ಮಾತ್ರ ಉಪಯೋಗಿಸಿದ್ದೇನೆ. ಪಕ್ಕಾ ರೀತಿಯಲ್ಲಿ ಹೋಂವರ್ಕ್ ಮಾಡಿಕೊಂಡಿದ್ದರೆ ಹಣವನ್ನು ಉಳಿಸುವುದು ಸಾಧ್ಯವಿದೆ. ಎರಡೂ ಭಾಷೆಗಳಲ್ಲಿ ಪ್ರತ್ಯೇಕವಾಗಿ ತೆಗೆದರೆ ಆಗುವ ಖರ್ಚಿನ ಶೇ 25ರಷ್ಟು ಕಡಿಮೆ ಹಣದಲ್ಲೇ ನಾನು ಚಿತ್ರೀಕರಣ ಮುಗಿಸಿದೆ.

ತಂತ್ರಜ್ಞರನ್ನು ಯಾವ ಮಾನದಂಡದ ಮೇಲೆ ಆಯ್ದುಕೊಂಡಿರಿ?

ವಿಕ್ರಂ ಎಫ್‌ಟಿಐನಲ್ಲಿ ನನ್ನ ಜೊತೆ ಕಲಿತವರು. ನನ್ನ ‘ಗುಬ್ಬಚ್ಚಿಗಳು’ ಚಿತ್ರದ ಛಾಯಾಗ್ರಾಹಕರು ಅವರೇ ಆಗಿದ್ದರು. ಈ ಚಿತ್ರದಲ್ಲೂ ಅವರಿಗೇ ಆ ಕೆಲಸ ಕೊಟ್ಟೆ. ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡುಗಳಲ್ಲಿ ಮಾಧುರ್ಯಕ್ಕೆ ಒತ್ತು ನೀಡಿದ್ದೇವೆ.

ಮುಂದೆಯೂ ಒಟ್ಟೊಟ್ಟಿಗೆ ಎರಡು ಭಾಷೆಗಳಲ್ಲಿ ಸಿನಿಮಾ ಮಾಡುವ ಪ್ಲಾನ್ ಇದೆಯಾ?

ಅಂಥ ಕಥೆಗಳು ನನ್ನಲ್ಲಿವೆ. ನಿರ್ಮಾಪಕರು ಮನಸ್ಸು ಮಾಡಿದರೆ ಎರಡಕ್ಕಿಂತ ಹೆಚ್ಚು ಭಾಷೆಗಳಲ್ಲೂ ಮಾಡಬಹುದು. ಬಿಜಿನೆಸ್ ಲೆಕ್ಕಾಚಾರ ಬದಲಾಗುತ್ತಿರುವ ಈ ಕಾಲದಲ್ಲಿ ಅಂಥ ಯತ್ನಗಳು ಬೇಕೆಂಬುದು ನನ್ನ ವೈಯಕ್ತಿಕ ಭಾವನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.