ಶುಕ್ರವಾರ, ಮೇ 14, 2021
31 °C

ಶಿಕ್ಷಕರಿಗಾಗಿ ಕಾದು ಸುಸ್ತಾದ ಅಧಿಕಾರಿಗಳು, ಜನಪ್ರತಿನಿಧಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮದುರ್ಗ: ಶಾಲಾ ಕಟ್ಟಡದ ಸಮಸ್ಯೆ ನಿವಾರಣೆಗೆಂದು ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದಾಗ ಶಿಕ್ಷಕರೆಲ್ಲರೂ ಶಾಲೆಗೆ ಬೀಗ ಹಾಕಿ ಮನೆ ಸೇರಿದ ಪ್ರಯುಕ್ತ ಭೇಟಿಗೆ ಬಂದವರು ಗಂಟೆಗೂ ಹೆಚ್ಚುಕಾಲ ಬಾಗಿಲಲ್ಲಿ ಕಾದು ಸೋತ ಘಟನೆ ಗುರುವಾರ ಮಧ್ಯಾಹ್ನ ಜರುಗಿತು.ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಮಂಜೂರಾಗಿರುವ ಶಾಲಾ ಕಟ್ಟಡಕ್ಕೆ ಪುರಸಭೆ ಯವರು ನೀಡಿದ ತಕರಾರು ವಿಚಾರಣೆಗೆ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಭಾಗ್ಯನಗರದ ಶಾಲೆಗೆ ಭೇಟಿ ನೀಡಿದ್ದರು.ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಶಾಲೆಗೆ ಭೇಟಿ ನೀಡಿದ್ದಾರೆ ಎಂದು ತರಾತುರಿಯಲ್ಲಿ ಮರಳಿದ ಶಿಕ್ಷಕರೆಲ್ಲರೂ ಒಂದಲ್ಲ ಒಂದು ನೆಪವೊಡ್ಡಿ ಜಾರಿಕೊಳ್ಳಲು ಯತ್ನಿಸಿದರು. ಶಿಕ್ಷಣಾಧಿಕಾರಿಯ ವಾಸ್ತವ್ಯದ ಕೊಠಡಿಯ ಮುಂಭಾಗದಲ್ಲಿಯೇ ಈ ರೀತಿಯ ಅವ್ಯವಸ್ಥೆ ಎದುರಾಗಿರುವುದು ಶಿಕ್ಷಣ ಪ್ರೇಮಿಗಳಲ್ಲಿ ಮುಜುಗರ ಉಂಟು ಮಾಡಿದೆ.`ಮಧ್ಯಾಹ್ನದ ಬಿಸಿಯೂಟದ ನಂತರ ಶೌಚಕ್ಕೆ ತೆರಳಿದ್ದಾಗಿ~ ಒಬ್ಬ ಶಿಕ್ಷಕಿ ಸಬೂಬು ಹೇಳಿದರೆ ಉಳಿದವರಿಗೂ ಯಾವ ಉತ್ತರ ನೀಡಬೇಕೆಂಬುದು ತಲೆಗೆ ಹೊಳಿಯಲಿಲ್ಲ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಕೇಳುವ ಪ್ರಶ್ನೆಗೆ ಶಿಕ್ಷಣಾಧಿಕಾರಿಗಳು ತಬ್ಬಿಬ್ಬಾದರು.ಶಾಲೆಗೆ ಯಾವ ಸಮಯದಲ್ಲಿ ಬೀಗ ಹಾಕಲಾಗಿರುತ್ತದೆ ಎಂದು ತಾ.ಪಂ. ಅಧ್ಯಕ್ಷೆ ಮಂಜುಳಾ ದೇವರಡ್ಡಿ ಅವರು ಮಕ್ಕಳನ್ನು ಪ್ರಶ್ನಿಸಿದಾಗ ದಿನವೂ ಮಧ್ಯಾಹ್ನ ಎಲ್ಲ ಶಿಕ್ಷಕರು ಮನೆಗೆ ತೆರಳಿರುತ್ತಾರೆ ಎಂದು ನೇರ ಉತ್ತರ ಹೊರಬಿತ್ತು.ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದಾಗ ಬಹುತೇಕ ಮಹಿಳಾ ಶಿಕ್ಷಕರಿರುವ ಶಾಲೆಯಲ್ಲಿ ಅಡಿಗೆಯವರೂ ಹಾಜರಿರಲಿಲ್ಲ ಎಂಬುದನ್ನು ಗಮನಿಸಿ ಊಟಕ್ಕೆ ಮನೆಗೆ ಹೋಗುವಂತೆ ಯಾರು ಸೂಚಿಸಿದ್ದಾರೆ. ಮಕ್ಕಳು ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದಾರೆ. ಯಾರು ಜವಾಬ್ದಾರಿ ಹೊರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಶ್ನಿಸಿದರು.ಪಟ್ಟಣ ಪ್ರದೇಶದಲ್ಲಿಯೇ ಶಾಲೆಯೊಂದರ ಪರಿಸ್ಥಿತಿ ಹೀಗಿರುವಾಗ ಹಳ್ಳಿಗಳ ಸ್ಥಿತಿ ಯಾವ ಮಟ್ಟದಲ್ಲಿರಬಹುದು. ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರ ಸ್ವಗ್ರಾಮದಲ್ಲಿಯೇ ಈ ರೀತಿ ಶಾಲೆಗೆ ಬೀಗ ಹಾಕಿ ಮನೆಗೆ ತೆರಳಿರುವ ಶಿಕ್ಷಕರನ್ನು ದೂರದ ಹಳ್ಳಿಗಳಿಗೆ ವರ್ಗಾವಣೆ ಮಾಡಬೇಕು ಎಂದು ಚುನಾಯಿತ ಪ್ರತಿನಿಧಿಗಳು ಆಗ್ರಹಿಸಿದರು.ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ರತ್ನಾ ಯಾದವಾಡ, ತಾ.ಪಂ. ಅಧ್ಯಕ್ಷೆ ಮಂಜುಳಾ ದೇವರಡ್ಡಿ, ಉಪಾಧ್ಯಕ್ಷೆ ಲಲಿತಾ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಎಲ್. ಭಜಂತ್ರಿ ಶಾಲೆಗೆ ಭೇಟಿ ನೀಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.