ಶನಿವಾರ, ಏಪ್ರಿಲ್ 10, 2021
32 °C

ಶಿಕ್ಷಕರ ನೇಮಕಕ್ಕೆ ಒತ್ತಾಯಿಸಿ ಶಾಲೆಗೆ ಬೀಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ತಾಲ್ಲೂಕಿನ ಮುಗಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕಮತೇನಟ್ಟಿ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಗೆ ಅಗತ್ಯ ಶಿಕ್ಷಕರನ್ನು ನಿಯೋಜನೆ ಮಾಡಬೇಕು ಎಂದು ಒತ್ತಾಯಿಸಿ ಎಸ್‌ಡಿಎಂಸಿ ಪದಾಧಿಕಾರಿಗಳು ಮತ್ತು ಪಾಲಕರು ಗುರುವಾರ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.ಶಾಲೆಯಲ್ಲಿ 12 ಜನ ಶಿಕ್ಷಕರ ಹುದ್ದೆ ಮಂಜೂರಾತಿ ಇದೆ. ಆ ಪೈಕಿ ಕೇವಲ ಆರು ಜನ ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಒಬ್ಬರು ಮುಖ್ಯೋಪಾಧ್ಯಾಯರು, ಇನ್ನೊಬ್ಬರು ದೈಹಿಕ ಶಿಕ್ಷಕರಿದ್ದಾರೆ. 1 ರಿಂದ 8ನೇ ತರಗತಿಯವರೆಗೆ 313 ಜನ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಈ 4 ಜನ ಶಿಕ್ಷಕರು ಪಾಠ ಮಾಡಲು ಸಾಧ್ಯವಿಲ್ಲ.ಶಾಲೆೆ ಅಗತ್ಯ ಶಿಕ್ಷಕರನ್ನು ನಿಯೋಜನೆ ಮಾಡುವಂತೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ತಗೆ ದುಕೊಂಡಿಲ್ಲ. ಕೇವಲ ಹಾರಿಕೆಯ ಉತ್ತರವನ್ನೇ ನೀಡುತ್ತಿದ್ದಾರೆ.ಶಾಲೆಗೆ ಅಗತ್ಯ ಶಿಕ್ಷಕರನ್ನು ನಿಯೋಜನೆ ಮಾಡುವ ತನಕ ಪ್ರತಿಭಟನೆ ಹಿಂತಗೆದುಕೊಳ್ಳುವುದಿಲ್ಲ ಎಂದು  ಎಸ್‌ಡಿಎಂಸಿ ಅಧ್ಯಕ್ಷ ನಾನಾಗೌಡ ಪಾಟೀಲ ಹೇಳಿದರು.ಶಿಕ್ಷಕರ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಮಟ್ಟ ಕುಸಿತವಾಗುತ್ತಿದೆ. ಬರ ಪೀಡಿತ ಪ್ರದೇಶವಾಗಿರುವ ಕಮತೇನಟ್ಟಿ ಗ್ರಾಮದ ಬಡಬಗ್ಗರ ಮಕ್ಕಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದು, ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ಸೂಕ್ತ ಶಿಕ್ಷಣ ದೊರಕುತ್ತಿಲ್ಲ. ಈಗಾಗಲೇ ಕೆಲವು ಮಕ್ಕಳು ಬೇರೆ ಗ್ರಾಮದ ಶಾಲೆಗಳಿಗೆ ಹೋಗುತ್ತಿದ್ದು, ಇದೇ ರೀತಿ ಶಿಕ್ಷಕರ ಕೊರತೆ ಉಂಟಾದ್ದಲ್ಲಿ ಮುಂಬರುವ ವರ್ಷಗಳಲ್ಲಿ ಶಾಲೆ ಬಂದ್ ಆಗುವ ಹಂತ ತಲುಪಲಿದೆ ಎಂದು ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜೆ.ಅಂಚಿ ಅವರು, ಚಿಕ್ಕೋಡಿ ದಕ್ಷಿಣ ವಲಯ ವ್ಯಾಪ್ತಿಯ 269 ಶಾಲೆಗಳಲ್ಲಿ ಒಟ್ಟು 180 ಶಿಕ್ಷಕ ಹುದ್ದೆಗಳು ಖಾಲಿ ಇದ್ದು, ಸರ್ಕಾರದಿಂದ ಶಿಕ್ಷಕರ ನೇಮಕಾತಿ ಆಗುವವರೆಗೆ ಇಂತಹ ಸಮಸ್ಯೆಗಳು ಎದುರಾಗಲಿವೆ. ಅದ್ದಾಗ್ಯೂ ಶಾಲೆಗೆ ಇಬ್ಬರು ಶಿಕ್ಷಕರನ್ನು ನಿಯೋಜನೆ ಮಾಡುವುದಾಗಿ ಹೇಳಿದರು.

ಬೇರೊಂದು ಶಾಲೆಯಿಂದ ಓರ್ವ ಶಿಕ್ಷಕ ಮತ್ತು ಓರ್ವ ಸಮೂಹ ಸಂಪನ್ಮೂಲ ವ್ಯಕ್ತಿಯ ಮುಂದುವರಿಕೆ ಸೇರಿದಂತೆ ಇಬ್ಬರು ಹೊಸ ಶಿಕ್ಷಕರನ್ನು ಶಾಲೆಗೆ ನೀಡಿದ ನಂತರವೇ ಗ್ರಾಮಸ್ಥರು ಪ್ರತಿಭಟನೆಯನ್ನು ಮೊಟ ಕುಗೊಳಿಸಿದರು.ಸುಮಾರು ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆದ ಹಿನ್ನಲೆಯಲ್ಲಿ ಮಕ್ಕಳು ಶಾಲೆಯ ಆವರಣದಲ್ಲಿರುವ ಗಿಡಗಳ ನೆರಳಿನಡಿಯಲ್ಲೇ ಅಕ್ಷರಾಭ್ಯಾಸ ನಡೆಸಿದರು. ಪೊಲೀಸ್ ಅಧಿಕಾರಿಗಳೂ ಸ್ಥಳಕ್ಕೆ ಆಗಮಿಸಿದ್ದರು.ರುದ್ರಗೌಡ ಪಾಟೀಲ, ಶಿದಗೌಡ ಪಾಟೀಲ, ಮಲ್ಲಪ್ಪಾ ವಠಾರೆ, ರಾಚಪ್ಪಾ ಕಮತೆ, ಶ್ರೀಶೈಲ ಮಾಯನ್ನವರ, ಕುಮಾರ ಕುಶಾಪ್ಪಗೋಳ, ಲಕ್ಷ್ಮಣ ಕುಂಬಾರ, ಸದಾಶಿವ ಮುರಚಿಟ್ಟೆ, ನೀಲವ್ವಾ ಮಾಳಿ, ಗಂಗವ್ವಾ ಕಂಕಣವಾಡಿ, ಸುನಿತಾ ಕುಂಬಾರ, ಸತ್ಯವ್ವಾ ದಳವಾಯಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಯುವಕ ಆತ್ಮಹತ್ಯೆ

ಹುಕ್ಕೇರಿ: ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸ್ಥಳೀಯ ಹಳ್ಳದಕೇರಿಯ ಗುಡಿಸಲಿನಲ್ಲಿ ನಡೆದಿದೆ.

ವಿಠ್ಠಲ ಲಗಮಾ ದಳವಾಯಿ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಎರಡು ತಿಂಗಳ ಹಿಂದಷ್ಟೇ ಆತನ ವಿವಾಹವಾಗಿತ್ತು. ಹೆಂಡತಿ ತವರು ಮನೆಗೆ ಹೋದಾಗ ರಾತ್ರಿ ಗುಡಿಸಲಿನ ತೊಲೆಗೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡಿದ್ದಾನೆ. ಈತನ ಸಾವಿಗೆ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹುಕ್ಕೇರಿ ಎ.ಎಸ್.ಐ ಎಂ.ಎಂ. ಹುಣಶಿಕಟ್ಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.