ಶನಿವಾರ, ಮೇ 8, 2021
18 °C

ಶಿವನ ಕಣ್ಣುಗಳಿಂದ ನೋಡಿ (ಸ್ವಸ್ಥ ಬುದುಕು)

ಭರತ್ ಮತ್ತು ಶಾಲನ್ ಸವೂರ್ Updated:

ಅಕ್ಷರ ಗಾತ್ರ : | |

ನಿಮ್ಮ ಸಿನಿಕತನ ಬಿಟ್ಟುಬಿಡಿ. ನಿಮ್ಮ ಸುತ್ತ ಹಾಕಿಕೊಂಡಿಕೊಂಡಿರುವ ಸೀಮಿತ ಚೌಕಟ್ಟು ಕಿತ್ತುಹಾಕಿ. ನಮಗೆಲ್ಲ ನಮ್ಮದೇ ವಿಚಾರ, ಆಲೋಚನೆಯ ಬಗ್ಗೆ ಗೌರವವಿರುತ್ತದೆ. ಅದನ್ನು ನಾವು ಪ್ರೀತಿಸುತ್ತೇವೆ ಸಹ. ಆದರೆ, ಮತ್ತೊಬ್ಬರ ಆಲೋಚನೆಗಳು ನಮಗಿಂತ ಉತ್ತಮವಾಗಿರಬಹುದು.

ಮತ್ತಷ್ಟು ಉಪಯುಕ್ತವಾಗಿರಬಹುದು. ನಮಗಿಂತ ದೈವಿಕವಾಗಿರಬಹುದು ಎಂಬುದನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಈ ವಿಷಯದಲ್ಲಿ ನಾವು ಬಾವಿಯೊಳಗಿನ ಕಪ್ಪೆಯಂತೆ ಆಗುತ್ತೇವೆ.ಸಾಗರದಂತಹ ವಿಶಾಲ ಜಲಾಗಾರ ಇದೆ ಎಂಬುದನ್ನು ಆ ಕಪ್ಪೆ ಒಪ್ಪಿಕೊಳ್ಳುವುದಿಲ್ಲ. ಸಾಗರ ಅಗಾಧವಾಗಿರುತ್ತದೆ. ಅದ್ಭುತವಾಗಿರುತ್ತದೆ. ದಡಕ್ಕೆ ಅಪ್ಪಳಿಸುವ ಅದರ ಅಲೆಗಳ ಶಬ್ದ ದೇವರ ಪಿಸುಮಾತಿನಂತೆ ಕೇಳಿಸುತ್ತದೆ.ಹೊಸ ವಿಚಾರ, ವಸ್ತು ಯಾವುದೇ ಇರಲಿ. ಅದನ್ನು ಒಮ್ಮೆಗೆ ಖಂಡಿಸಬೇಡಿ. ನಿಮ್ಮ ಹಳೆಯ ವಿಚಾರಗಳನ್ನು ಬದಿಗೊತ್ತಿ ಹೊಸ ವಿಚಾರಧಾರೆ ಸ್ವೀಕರಿಸಿ. ನವಜಾತ ಶಿಶುವಿನ ಮುಗ್ಧತೆ, ಮುಕ್ತತೆ ನಿಮ್ಮಲ್ಲಿರಲಿ. ಕ್ರಮೇಣ ನಿಮ್ಮ ಮನಸ್ಸಿನೊಳಗೆ ಆಳವಾದ, ಉನ್ನತವಾದ ವಿಚಾರ ರೂಪುಗೊಳ್ಳುತ್ತದೆ.ಸೀಮಿತ ಚೌಕಟ್ಟಿನಲ್ಲಿ ಬಂದಿಯಾಗಿರುವ ನಿಮ್ಮ ಮನಸ್ಸನ್ನು ಹೇಗೆ ತೆರೆದುಕೊಳ್ಳುತ್ತೀರಿ? ಹಳೆಯದಾಗಲಿ, ಹೊಸದಾಗಲಿ ಅದು ದೈವಿಕವಾದುದ್ದು ಎಂದುಕೊಳ್ಳಿ. ಯಾವುದೇ ಪ್ರತಿರೋಧದ ಭಾವವಿಲ್ಲದೇ ಅದು ನಿಮ್ಮ ಮನಸ್ಸಿನೊಳಗೆ ಇಳಿಯಲಿ. `ಶಿವ~ ಎಂಬ ಪದದ ಅರ್ಥವೇ ಪವಿತ್ರವಾದುದ್ದು ಎಂದು ಗುರುಗಳು ಹೇಳುತ್ತಾರೆ.ನೀವು ಶಿವನ ಕಣ್ಣಿನ ಮೂಲಕ ಎಲ್ಲವನ್ನೂ ನೋಡಿದಾಗೆಲ್ಲವೂ ಪವಿತ್ರವಾಗಿ ಕಾಣುತ್ತದೆ. ನಿಮ್ಮ ಮಿದುಳಿನಲ್ಲಿ ಇರುವ ನ್ಯೂರಾನ್‌ಗಳು (ನರಕೋಶಗಳು) ಉತ್ತೇಜನಗೊಳ್ಳುತ್ತವೆ. ತೃಪ್ತಿ, ಸಂತಸ, ಖುಷಿಯ ಭಾವ ಮೆಲ್ಲನೆ ಪಸರಿಸುತ್ತದೆ. ಆಶ್ಚರ್ಯವೆಂದರೆ ಸ್ಕಿಜೋಫ್ರಿನಿಯಾದಂತಹ ರೋಗಕ್ಕೆ ನೀಡುವ ಔಷಧಗಳೂ ಇದೇ ಪರಿಣಾಮ ಬೀರುತ್ತವೆ.ಪವಿತ್ರವಾದುದ್ದು ಅಂದರೆ ಏನು? ಪವಿತ್ರವಾದುದ್ದು ಅಂದರೆ ಕಾಲಾತೀತವಾದದ್ದು. ಎಲ್ಲವೂ ಪವಿತ್ರವಾದದ್ದು ಎಂಬ ಪರಿಕಲ್ಪನೆ ನಿಮ್ಮಳಗೆ ಮೂಡಿದಾಗ ಭೂಕಂಪನ ಅಥವಾ ಪ್ರವಾಹ ಸಹ ನಮ್ಮ ಕ್ರಿಯೆಗಳಿಗೆ ಉತ್ತರವಾಗಿ ಭೂಮಿ ಮಾಡಿಕೊಳ್ಳುವ ಹೊಂದಾಣಿಕೆಯಂತೆ ಭಾಸವಾಗುತ್ತದೆ.

ಹಾಗೆ ಹೊಂದಾಣಿಕೆ ಮಾಡಿಕೊಳ್ಳದಿದ್ದಲ್ಲಿ ಅದು ಒಮ್ಮೆಲೇ ಕುಸಿದುಬೀಳುತ್ತದೆ. ಹಾಗೆಯೇ ರೋಗಗಳು ಸಹ ನಮ್ಮ ಜೀವನಶೈಲಿ ಹಾಗೂ ಚಿಂತನಾ ವಿಧಾನಗಳಿಗೆ ದೇಹ ಮಾಡಿಕೊಳ್ಳುವ ಹೊಂದಾಣಿಕೆಯಾಗಿರುತ್ತದೆ. ಸುದೀರ್ಘ ಜೀವನದಲ್ಲಿ ಆಗಾಗ ಅಸ್ವಸ್ಥತೆ ಕಾಡದಿದ್ದಲ್ಲಿ ನಾವು ಹಠಾತ್ತಾಗಿ ಸತ್ತುಹೋಗಲೂಬಹುದು.ಪ್ರತಿಯೊಂದು ಘಟನೆ, ಸನ್ನಿವೇಶ ಒಳಿತಿಗಾಗಿಯೇ ಆಗುತ್ತದೆ. ಅದು ಪವಿತ್ರವಾದದ್ದು ಅಂದುಕೊಳ್ಳುವ ಮನಸ್ಸು ಪರಿವರ್ತನೆ ಹೊಂದುತ್ತದೆ. ಆಳವಾದ ಬುದ್ಧಿಮತ್ತೆ ಹೊಂದುತ್ತದೆ. ಉನ್ನತ ಕಂಪನಾಂಕದ ಪ್ರಜ್ಞೆಗೆ ಜಿಗಿಯುತ್ತದೆ. ಮಸುಕಾದ ನಮ್ಮ ಪ್ರಜ್ಞೆ ಬೆಳಕಿನಷ್ಟು ಪ್ರಜ್ವಲಿಸುತ್ತದೆ. ಮಂಜು ಮುಸುಕಿದ ಹಾದಿಯಲ್ಲಿ ನಡೆಯುತ್ತಿದ್ದಾಗ ಒಮ್ಮೆಲೇ ಬೆಳಕು ಆವರಿಸಿದಂತೆ ಅನ್ನಿಸುತ್ತದೆ. ನಮ್ಮ ಹಾದಿ ನಿಚ್ಚಳವಾಗುತ್ತದೆ. ಎಲ್ಲದರಿಂದ ಮುಕ್ತವಾದಂತೆ ಅನಿಸುತ್ತದೆ.ಯಾವುದರಿಂದ ಮುಕ್ತತೆ? ಇದಕ್ಕೂ ಮೊದಲು ನೀವು ಜಗತ್ತಿನ, ನಿಮ್ಮ ಸುತ್ತಲಿನ ಆಗುಹೋಗುಗಳ ಬಗ್ಗೆ ಸಾಕಷ್ಟು ಚಿಂತಿಸುತ್ತಿದ್ದೀರಿ. ಯಾವುದೂ ಸರಿಯಾಗಿ ನಡೆಯುತ್ತಿಲ್ಲ ಎಂಬ ಅಸಮಾಧಾನ ನಿಮ್ಮಳಗೆ ಮೂಡುತ್ತಿತ್ತು. ನಿಮ್ಮ ಆಲೋಚನೆಗಳಿವೆ ಸರಿಯಾಗಿ ಅದನ್ನು ಬದಲಿಸಲು ಯತ್ನಿಸುತ್ತಿದ್ದೀರಿ. ಅದನ್ನು ಖಂಡಿಸಲು, ಪ್ರತಿರೋಧಿಸಲು ಆ ಬಗ್ಗೆ ಒಂದು ಅಭಿಪ್ರಾಯ ರೂಪಿಸಿಕೊಳ್ಳಲು ಸಾಕಷ್ಟು ಶಕ್ತಿ ಹಾಗೂ ಸಮಯವನ್ನು ಹಾಳು ಮಾಡುತ್ತಿದ್ದೀರಿ. ಇದರಿಂದ ನಿಮ್ಮ ಆರೋಗ್ಯ ಹಾಳಾಗುತ್ತಿತ್ತು. ರಕ್ತದೊತ್ತಡ ಹೆಚ್ಚುತ್ತಿತ್ತು. ಅಜೀರ್ಣ, ತಲೆನೋವು ಬಾಧಿಸುತ್ತಿತ್ತು.ಈಗ ನೀವು ಬೇರೆಯದೇ ಆದ ಆಯಾಮದಲ್ಲಿ ಇದ್ದೀರಿ. ಚಳಿಗಾಲ ಮುಗಿದು ಬೇಸಿಗೆ ಬಂದಂತೆ ಅಲ್ಲಿ ಸಾಕಷ್ಟು ಬೆಳಕು ಇದೆ. ಪ್ರತಿಯೊಂದು ಪವಿತ್ರವಾಗಿ ಕಾಣುತ್ತಿದೆ. ಇಡೀ ಜಗತ್ತಿಗೆ ಕಾರ್ಪೆಟ್ ಹಾಕುವ ಆಲೋಚನೆ ತೊಡೆದು ಹಾಕಿ, ಜಾಣರಂತೆ ನೀವು ಮೃದುವಾದ `ಶೂ~ ಹಾಕಿಕೊಂಡು ಕಲ್ಲಿನ ಹಾದಿಯಲ್ಲಿ ಮೆತ್ತಗೆ ನಡೆಯುತ್ತೀರಿ. ಸಂತಸ ಎಂಬುದು ಮನಸ್ಸಿನ ಅಸ್ತ್ರ ಎಂಬುದು ನಿಮಗೆ ಮನದಟ್ಟಾಗುತ್ತದೆ.ಮೊದಲು ನಿಮಗೆ ಬಹುಬೇಗ ಕಿರಿಕಿರಿಯಾಗುತ್ತಿತ್ತು. ಹಳವಂಡಗಳು ಬಾಧಿಸುತ್ತಿದ್ದವು. ಎಲ್ಲ ಜೀವಜಂತುಗಳು ಪವಿತ್ರವಾಗಿದೆ. ಸದಾ ವೃದ್ಧಿಸುತ್ತದೆ ಎಂಬುದರ ಅರಿವು ಈಗ ನಿಮಗಾಗುತ್ತಿದೆ. ಜಗತ್ತಿನಲ್ಲಿರುವ ಎಲ್ಲವೂ ಪವಿತ್ರವಾದವು ಎಂಬ ಭಾವ ಮೂಡಿದಾಗ ನಿಮ್ಮ ಬದುಕು ಸಹ ಪವಿತ್ರವಾದದ್ದು ಎಂಬ ಅರಿವು ದೀಪದಂತೆ ಝಗ್ಗನೆ ಹೊತ್ತಿಕೊಳ್ಳುತ್ತದೆ.ಆಹಾ..! ಎಂಥ ಉನ್ನತ ಭಾವ ಇದು. ನೀವು ಇಲ್ಲಿರಬೇಕು ಎಂಬ ಕಾರಣಕ್ಕೆ ಇಲ್ಲಿ ಹುಟ್ಟಿದ್ದೀರಿ. ನೀವು ಇಲ್ಲಿರಬೇಕು ಎಂದು ಆ ದೈವಿಕ ಶಕ್ತಿ ಬಯಸಿದ್ದರಿಂದ ಜನಿಸಿದ್ದೀರಿ. ನೀವು ಇಲ್ಲಿ ಇರದಿದ್ದರೇ ಆ ದೈವಿಕ ಶಕ್ತಿ ನಿಮ್ಮನ್ನು ಕಳೆದುಕೊಳ್ಳುತ್ತಿತ್ತು. ನಿಮ್ಮ ಅಸ್ತಿತ್ವ, ನಿಮ್ಮ ಚಿಂತನೆ, ನೀವು ಮಾಡುವ ಕೆಲಸಗಳು ಯಾವುದೂ ಇಲ್ಲಿ ಇರುತ್ತಿರಲಿಲ್ಲ. ನಿಮ್ಮ ಬುದ್ಧಿಮತ್ತೆ, ನಿಮ್ಮ ಸಂಪತ್ತು, ನಿಮ್ಮ ಸಂಬಂಧಗಳು ಎಲ್ಲವೂ ಆ ದೈವಿಕ ಶಕ್ತಿ ನೀಡಿದ ಕೊಡುಗೆ. ನಿಮ್ಮ ಮೂಲಕ ಅದು ತನ್ನನ್ನು ತಾನು ವ್ಯಕ್ತಪಡಿಸಿಕೊಳ್ಳುತ್ತದೆ. ಈ ಭಾವ ನಿಮ್ಮಳಗೆ ಇಳಿದಾಗ ನೀವು ಬೆಳಕಿನಲ್ಲೇ ಬದುಕುತ್ತೀರಿ. ಅಮೂರ್ತವಾದ ಶಾಂತಿಯಲ್ಲಿ, ಸಂತಸದಲ್ಲಿ ಮುಳುಗೇಳುತ್ತೀರಿ.ಇದೇ ಭಾವದಲ್ಲಿ ಸದಾ ತೇಲಾಡಲು ನೀವು ಮಾಡಬೇಕಾದುದು ಇಷ್ಟೇ. ಚೂಪಾದ ಟೀಕಾಸ್ತ್ರ ಎಸೆಯುವ ಬದಲು ಎಲ್ಲವನ್ನೂ ಸ್ವೀಕರಿಸಿ. ಹೂವು ಸುಗಂಧ ಬೀರುವಂತೆ ಮೆಚ್ಚುಗೆಯ ಮಾತನಾಡಿ. ಕಾದ ಮರಳಿನಂತಹ ಹಳೆಯ ಕಹಿನೆನಪುಗಳನ್ನು ಕೂಡಿಟ್ಟುಕೊಳ್ಳುವ ಬದಲು ಅದನ್ನು ಕ್ಷಮೆಯೆಂಬ ಸ್ಫಟಿಕ ಶುದ್ಧ ನೀರಿನಿಂದ ತೊಳೆದುಹಾಕಿ. `ಅಪ್ಪ ನೆಟ್ಟ ಆಲದಮರ~ಕ್ಕೆ ಜೋತು ಬೀಳದೇ ಹೊಸ ವಿಚಾರಗಳನ್ನು ಸ್ವೀಕರಿಸಿ. ಮುಕ್ತವಾಗಿರಿ. ಸಂತಸದಿಂದಿರಿ. ಕೃತಜ್ಞತಾ ಭಾವ ನಿಮ್ಮಳಗಿಂದ ಚಿಲುಮೆಯಂತೆ ಚಿಮ್ಮುತ್ತಿರಲಿ.ಜ್ಞಾನೋದಯದಿಂದ ನಿಮಗೆ ಏನಾಯಿತು ಎಂದು ಶಿಷ್ಯನೊಬ್ಬ ಗುರುವನ್ನು ಕೇಳಿದ. `ಸಂತಸ~ ಎಂದು ಗುರು ಉತ್ತರಿಸಿದ. `ಸಂತಸ~ ಎಂದರೆ ಏನು ಎಂದು ಆ ಶಿಷ್ಯ ಮತ್ತೆ ಪ್ರಶ್ನಿಸಿದ. `ಎಲ್ಲವನ್ನೂ ಕಳೆದುಕೊಂಡಾಗ, ನಾನು ಕಳೆದುಕೊಂಡಿದ್ದು ಕೇವಲ ಅಭಿಪ್ರಾಯಗಳನ್ನು ಎಂಬ ಅರಿವು ಮೂಡುವುದೇ ಸಂತಸ~ ಎಂದು ಆ ಗುರು ಉತ್ತರಿಸಿದ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.