ಸೋಮವಾರ, ಜನವರಿ 20, 2020
24 °C

ಶೀಘ್ರದಲ್ಲೇ ಸಂತೆ ಸ್ಥಳಾಂತರ: ಕಾಗೋಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ನಗರದ ಇಂದಿರಾಗಾಂಧಿ ಮಹಿಳಾ ಕಾಲೇಜು ರಸ್ತೆಯ ಪಕ್ಕದಲ್ಲಿ ನೂತನ ಸಂತೆ ಮೈದಾನ ನಿರ್ಮಾಣ ಕಾಮಗಾರಿ ಶೀಘ್ರದಲ್ಲೆ ಆರಂಭ ಗೊಳ್ಳಲಿದ್ದು ಈಗ ನಡೆಯುತ್ತಿರುವ ಸಂತೆಯನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ತಿಳಿಸಿದರು.ನೂತನ ಸಂತೆ ಮೈದಾನ ನಿರ್ಮಾಣ ಸಂಬಂಧ ಭಾನುವಾರ ಸ್ಥಳ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಸಂತೆ ಮೈದಾನವನ್ನು ಈಗ ಉದ್ದೇಶಿಸಿರುವಂತೆ ಸ್ಥಳಾಂತರಗೊಳಿಸುವುದರಿಂದ ಗಣಪತಿ ಕೆರೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಬಿ.ಎಚ್‌.ರಸ್ತೆಯಿಂದ ಇಂದಿರಾಗಾಂಧಿ ಕಾಲೇಜಿಗೆ ಹೋಗುವ ರಸ್ತೆಯ ಬಲಭಾಗದಲ್ಲಿ ಸಂತೆ ಮೈದಾನಕ್ಕೆಂದೆ ಕಾಯ್ದಿರಿಸಿರುವ ಸ್ಥಳದಲ್ಲಿ ಸಂತೆ ಆರಂಭಗೊಳ್ಳಲಿದೆ. ಗಣಪತಿ ಕೆರೆಯ ಪ್ರದೇಶದಲ್ಲಿ ಸಂತೆ ಮೈದಾನ ಮಾಡಲಾಗುತ್ತಿದೆ ಎಂಬುದು ತಪ್ಪು ಕಲ್ಪನೆಯಾಗಿದೆ ಎಂದರು.ಈಗಿರುವ ಇಂದಿರಾಗಾಂಧಿ ಕಾಲೇಜಿಗೆ ಹೋಗುವ ರಸ್ತೆಯನ್ನು ವಿಸ್ತರಣೆಗೊಳಿಸಿ ಈ ಭಾಗದಲ್ಲಿ ಓಡಾಡುವ ಕಾಲೇಜು ವಿದ್ಯಾರ್ಥಿನಿಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಸಂತೆ ಸ್ಥಳಾಂತರಗೊಂಡ ನಂತರ ಈಗಿರುವ ಸಂತೆ ಮೈದಾನದಲ್ಲಿರುವ ಮೀನು ಹಾಗೂ ಮಾಂಸ ಮಾರಾಟದ ಮಳಿಗೆಗಳನ್ನು ಅಭಿವೃದ್ಧಿ ಪಡಿಸ ಲಾಗುವುದು ಎಂದು ಹೇಳಿದರು.ಒಟ್ಟು 4 ಎಕರೆ ಪ್ರದೇಶದಲ್ಲಿ ಸಂತೆ ಮೈದಾನ ನಿರ್ಮಾಣಗೊಳ್ಳಲಿದೆ. ಈಗಾಗಲೆ ಎಪಿಎಂಸಿ ಇದಕ್ಕೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ. ಅಗತ್ಯ ಬಿದ್ದರೆ ನಗರಸಭೆಯಿಂದ ಹೆಚ್ಚಿನ ನೆರವು ಪಡೆಯಲಾಗುವುದು. ಗಣಪತಿ ಕೆರೆ ಒತ್ತುವರಿ ಸಂಬಂಧ ಕಂದಾಯ ಇಲಾಖೆ ಹಾಗೂ ಭೂ ಮಾಪನ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದರು.ನಗರಸಭಾ ಸದಸ್ಯ ತೀ.ನ.ಶ್ರೀನಿವಾಸ್‌, ಜಿ.ಕೆ.ಭೈರಪ್ಪ, ಕಿರಿಯ ಅಭಿಯಂತರ ಎಚ್.ಕೆ.ನಾಗಪ್ಪ, ಭೂ ಮಾಪಕ ಕಿರಣ್‌ಕುಮಾರ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)