ಗುರುವಾರ , ಫೆಬ್ರವರಿ 25, 2021
31 °C
ಹರಿಪಾದ ಸೇರಿದ ಕಣ್ವಮಠದ ವಿದ್ಯಾಭಾಸ್ಕರತೀರ್ಥರು, ಶನಿವಾರ ಉತ್ತರಕ್ರಿಯೆ

ಶುಕ್ಲಯಜುರ್ವೇದದ ಪ್ರಾಮುಖ್ಯತೆ ಸಾರಿದ ಸ್ವಾಮೀಜಿ

ಪ್ರಜಾವಾಣಿ ವಾರ್ತೆ/ಅಶೋಕ ಸಾಲವಾಡಗಿ Updated:

ಅಕ್ಷರ ಗಾತ್ರ : | |

ಶುಕ್ಲಯಜುರ್ವೇದದ ಪ್ರಾಮುಖ್ಯತೆ ಸಾರಿದ ಸ್ವಾಮೀಜಿ

ಸುರಪುರ: 23 ವರ್ಷಗಳ ಕಾಲ ಪೀಠದಲ್ಲಿದ್ದ ಸುರಪುರ ತಾಲ್ಲೂಕಿನ ಹುಣಸಿಹೊಳೆಯ ಕಣ್ವಮಠದ 12ನೆ ಪೀಠಾಧಿಪತಿ ವಿದ್ಯಾಭಾಸ್ಕರ ತೀರ್ಥರು (93) ಶುಕ್ರವಾರ ರಾಯಚೂರಿನ ತಮ್ಮ ಪೂರ್ವಾಶ್ರಮದ ನಿವಾಸದಲ್ಲಿ ಹರಿಪಾದ ಸೇರಿದರು.ತಮ್ಮ ಇಡೀ ಜೀವನವನ್ನು ಕಣ್ವ ಮಠದ ಸೇವೆಗೆ ಮೀಸಲಾಗಿಟ್ಟಿದ್ದ ವಿದ್ಯಾ ಭಾಸ್ಕರರು ಕೊನೆಗೆ ಅದೇ ಮಠಕ್ಕೆ ಪೀಠಾ ಧಿಕಾರಿಯಾಗಿ ಸಲ್ಲಿಸಿದ ಸೇವೆ ಅನನ್ಯ. 9ನೇ ಪೀಠಾಧಿಪತಿ ವಿದ್ಯಾಮನೋಹರ ತೀರ್ಥರು, 10ನೇ ಪೀಠಾಧಿಪತಿ ವಿದ್ಯಾ ತಪೋನಿಧಿ ತೀರ್ಥರು, 11ನೇ ಪೀಠಾಧಿಪತಿ ವಿದ್ಯಾಭೂಷಣ ತೀರ್ಥರು ಈ ಮೂವರಿಗೆ ಪೀಠಾಧಿಕಾರಿಯನ್ನಾಗಿ ನೇಮಿಸಲು ಶ್ರಮಿಸಿದ್ದರು.ವಿದ್ಯಾಭೂಷಣರ ಕರಕಮಲ ಸಂಜಾತರಾಗಿ 1992ರಲ್ಲಿ ಕಣ್ವಮಠದ ಪೀಠಾಧಿಕಾರಿಗಳಾಗಿ ನೇಮಕವಾದರು. ಪಾದರಸದಂತೆ ಚಲಿಸುತ್ತಿದ್ದ ಅವರು ಒಂದು ನಿಮಿಷವೂ ಸುಮ್ಮನೇ ಕೂಡದೇ ಧರ್ಮ ಪ್ರಚಾರ ಕೈಗೊಳ್ಳುತ್ತಿದ್ದರು. ನೇತ್ರ ಚಿಕಿತ್ಸಾ ಶಿಬಿರ, ಉಚಿತ ವೈದ್ಯಕೀಯ ಚಿಕಿತ್ಸೆ, ಸಂಸ್ಕಾರ ಶಿಬಿರ ಇತರ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.ವಿಶ್ವ ಹಿಂದೂ ಪರಿಷತ್‌ನ ಕೇಂದ್ರಿಯ ಮಾರ್ಗದರ್ಶಕ ಮಂಡಳಿ ಸದಸ್ಯರಾಗಿ, ಅಖಿಲ ಭಾರತ ಕಣ್ವ ಪರಿಷತ್‌ನ ಪೋಷಕರಾಗಿ, ಅಖಿಲ ಭಾರತ ಮಧ್ವ ಮಹಾಮಂಡಳದ ಮಾರ್ಗದರ್ಶಕರಾಗಿ, ಅಖಿಲ ಭಾರತ ಯೋಗೀಶ್ವರ ಯಾಜ್ಞ ವಲ್ಕ್ಯ ಮಹಾಮಂಡಲದ ಅಧ್ಯಕ್ಷರಾಗಿ ಅವರು ಗಣನೀಯ ಸೇವೆ ನೀಡಿದ್ದಾರೆ.ಕನ್ನಡ, ಸಂಸ್ಕೃತ, ಹಿಂದಿ, ಮರಾಠಿ, ತೆಲುಗು, ಉರ್ದು, ಅರಬ್ಬಿ, ಪಾರ್ಸಿ ಭಾಷೆಗಳನ್ನು ಕರತಲಾಮಲಕ ಮಾಡಿ ಕೊಂಡಿದ್ದ ವಿದ್ಯಾಭಾಸ್ಕರರು ಭಗವ ದ್ಗೀತೆ, ಕುರಾನ್, ಬೈಬಲ್‌ ಗ್ರಂಥಗಳ ಪ್ರತಿ ಸಾಲನ್ನು ಕಂಠಪಾಠ ಮಾಡಿದ್ದರು.ನಿರಂತರ ಅಧ್ಯಯನ ಶೀಲರಾಗಿದ್ದ ಅವರು, ‘ಪಾಂಚಜನ್ಯ’ (ಯಾಜ್ಞವಲ್ಕ್ಯರ ಶ್ರೇಷ್ಠತೆ ಕುರಿತು), ‘ಅಜ್ಞಾನ ತಿಮಿರಕ್ಕೆ ವಿಜ್ಞಾನ ಭಾಸ್ಕರ’ (ಧರ್ಮದ ತಿರುಳಿನ ಕುರಿತು), ‘ಶಠೇ ಶಾಠ್ಯಂ ಸಮಾಚರೇತ’ (ಏಟಿಗೆ ಎದಿರೇಟು ಎಂಬ ಸಿದ್ಧಾಂತ) ಇತರ ಕಿರು ಗ್ರಂಥಗಳನ್ನು ರಚಿಸಿದ್ದರು.

ವಾರಣಾಸಿಯಲ್ಲಿ 1998ರಲ್ಲಿ ನಡೆದ ಕುಂಭಮೇಳದಲ್ಲಿ ಒಂದು ತಿಂಗಳ ಕಾಲ ಸಾಧು ಸಂತರಿಗೆ ಶುಕ್ಲಯಜುರ್ವೇದದ ಮಹತ್ವದ ಬಗ್ಗೆ ತಿಳಿಸಿದರು. ಮಾಜಿ ರಾಷ್ಟ್ರಪತಿ ಶಂಕರದಯಾಳ ಶರ್ಮಾ, ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರ ನಿವಾಸದಲ್ಲಿ ಸಂಜಾತ (ಧರ್ಮಕಾರ್ಯ) ಮಾಡಿ ಆಶೀರ್ವದಿಸಿದ್ದರು. ನೇಪಾಳದಲ್ಲಿ ಧರ್ಮ ಪ್ರಚಾರ ಮಾಡಿದ್ದರು.ಕಣ್ವಮಠದಲ್ಲಿ ಕಳೆದ ದಶಕದಿಂದ ಗೋಶಾಲೆ ನಡೆಸಿಕೊಂಡು ಬಂದಿದ್ದರು. ಸ್ವತಃ ದನದ ಸಂತೆಗೆ ಹೋಗಿ ಕಸಾಯಿ ಖಾನೆಗೆ ಮಾರುತ್ತಿದ್ದ ಆಕಳುಗ ಳನ್ನು ಖರೀದಿಸುತ್ತಿದ್ದರು. ಸಂಗೀತ, ಸಾಹಿತ್ಯ, ಲಲಿತಕಲೆಗಳ ಬಗ್ಗೆ ಪ್ರಾವೀಣ್ಯತೆ ಹೊಂದಿದ್ದ ಅವರು ಶ್ರೇಷ್ಠ ಯೋಗಾ ಭ್ಯಾಸಿಗಳಾಗಿದ್ದರು.

ರಾಯಚೂರಿನ ದೇವದುರ್ಗದ ನಿವಾಸಿಗಳಾಗಿದ್ದ ಅವರ ಪೂರ್ವಾ ಶ್ರಮದ ಹೆಸರು ಶ್ರೀನಿವಾಸ ದೇವರು. ಅವರ ಪೂರ್ವಾಶ್ರಮದ ಪತ್ನಿ ಕಮಲಾಬಾಯಿ ಅವರ ತವರು ಮನೆ ಸುರಪುರ. ರಾಯಚೂರಿನಲ್ಲಿ ನೆಲೆಸಿದ್ದ ಅವರು ಹೆಸರಾಂತ ವಕೀಲರಾಗಿದ್ದರು. ರಾಯಚೂರು ನಗರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.‘ಪರಮಾತ್ಮನ ಅಂತರಂಗದ ಭಕ್ತರಾ ಗಲು ಸಮಾಜದ ವಿವಿಧ ಮಜಲುಗಳಲ್ಲಿ ಜನ ಬಹಳ ದಿನಗಳ ಕಾಲ ನೆನಪಿಸುವ ಸೇವೆ ಸಲ್ಲಿಸಬೇಕು. ಇದು ಪರಮಾತ್ಮನಿಗೆ ಪ್ರಿಯವಾಗಿದ್ದು ಮೋಕ್ಷ ಪ್ರಾಪ್ತಿಗೆ ಕಾರಣ ವಾಗುತ್ತದೆ’ ಎಂಬ ಸಂದೇಶ ನೀಡಿದ್ದ ಅವರು ಹರಿಪಾದ ಸೇರಿದ್ದು ಅವರ ಅನುಯಾಯಗಳಿಗೆ ಇನ್ನಿಲ್ಲದ ದುಃಖ ಉಂಟು ಮಾಡಿದೆ.ಮುಖ್ಯಾಂಶಗಳು

* ಶುಕ್ಲಯಜುರ್ವೇದಕ್ಕೆ ದೇಶ, ವಿದೇಶದಲ್ಲಿ ಹೆಚ್ಚಿನ ಪ್ರಚಾರ

* ವಿಪ್ರರಲ್ಲಿದ್ದ ತಾರತಮ್ಯ ಹೋಗಲಾಡಿಸಲು    ಭಗೀರಥ ಯತ್ನ

* ಕಣ್ವಮಠವನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದ ಕೀರ್ತಿವಿದ್ಯಾಭಾಸ್ಕರತೀರ್ಥರು ಹರಿಪಾದ ಸೇರಿದ್ದು ತುಂಬಲಾರದ ನಷ್ಟವಾಗಿದೆ. ಉತ್ತರಕ್ರಿಯೆಯನ್ನು ಹುಣಸಿಹೊಳೆ ಯಲ್ಲಿ ಶನಿವಾರ ನೆರವೇರಿಸಲಾಗು ವುದು.

ವಿದ್ಯಾವಾರಿಧಿ ತೀರ್ಥರು, ಕಣ್ವಮಠದ ಕಿರಿಯ ಸ್ವಾಮೀಜಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.