ಗುರುವಾರ , ಫೆಬ್ರವರಿ 25, 2021
18 °C
ಜಿಲ್ಲಾ ವಸತಿ ನಿಲಯ ಪಾಲಕರ ಪ್ರಗತಿ ಪರಿಶೀಲನಾ ಸಭೆ

ಶುಚಿತ್ವ ಕಾಪಾಡಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶುಚಿತ್ವ ಕಾಪಾಡಲು ಸೂಚನೆ

ತುಮಕೂರು: ಜಿಲ್ಲೆಯ ವಸತಿ ನಿಲಯಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿವೆ ಎಂದು ಜಿ.ಪಂ. ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ ವಸತಿ ನಿಲಯಗಳು ಮತ್ತು ಮೊರಾರ್ಜಿ ವಸತಿ ಶಾಲೆಗಳ ವಾರ್ಡನ್‌ ಮತ್ತು ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ವಾಸ್ಯಂಗ ಮಾಡಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸರಾಸರಿ ಫಲಿತಾಂಶ ಶೇ 88ರಷ್ಟಿದೆ. ಮೊರಾರ್ಜಿ ಶಾಲೆಗಳು ಶೇ 100ರ ಫಲಿತಾಂಶ ಪಡೆದಿವೆ. ಚಿಕ್ಕನಾಯಕನಹಳ್ಳಿ ವಸತಿ ಶಾಲೆಯ 16 ಮಕ್ಕಳು ಅತ್ಯುನ್ನತ ದರ್ಜೆ ಪಡೆದಿದ್ದಾರೆ ಎಂದು ಶ್ಲಾಘಿಸಿದರು.ವಸತಿ ನಿಲಯಗಳ ವಾರ್ಡನ್‌ಗಳು ಶಿಕ್ಷಣದ ಜೊತೆಗೆ ಶುಚಿತ್ವ ಮತ್ತು ಮಕ್ಕಳ ಸರ್ವಾಂಗೀಣ ಪ್ರಗತಿಗೂ ಗಮನ ನೀಡಬೇಕು. ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ವಾಸ ಮಾಡಬೇಕು. ಅನೇಕ ವಸತಿ ನಿಲಯಗಳಲ್ಲಿ ಶನಿವಾರ ಮಧ್ಯಾಹ್ನ ಊಟ ಹಾಕಿದರೆ, ಸೋಮವಾರ ಸಂಜೆಯವರೆಗೆ ಅಡುಗೆ ಮಾಡುತ್ತಿಲ್ಲ. ಮಕ್ಕಳ ಅಗತ್ಯಕ್ಕೆ ತಕ್ಕಂತೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಸೂಚಿಸಿದರು.ವಸತಿ ನಿಲಯಗಳಲ್ಲಿ ವಾರಕ್ಕೊಮ್ಮೆ ಬುದ್ಧಿಮತ್ತೆ ಪರೀಕ್ಷೆ, ಚರ್ಚಾಸ್ಪರ್ಧೆಗಳು ನಡೆಯಬೇಕು. ಮಾಸಿಕ ಹಾಜರಾತಿ ದೃಢೀಕರಣ ಪತ್ರವನ್ನು ಶಾಲೆಗಳಿಂದ ಅಧಿಕಾರಿಗಳೇ ಪಡೆಯಬೇಕು. ಹೆಣ್ಣು ಮಕ್ಕಳ ವಸತಿ ಶಾಲೆಗಳ ವಾರ್ಡನ್‌ಗಳು ಸಂಜೆ 6ಕ್ಕೆ ಹಾಜರಾತಿ ಪಡೆಯಬೇಕು. ರಾತ್ರಿ ಹೊತ್ತು ಹೆಣ್ಣುಮಕ್ಕಳು ಒಬ್ಬೊಬ್ಬರೇ ಓಡಾಡುವುದಕ್ಕೆ ಕಡಿವಾಣ ಹಾಕಬೇಕು ಎಂದರು.ವಿದ್ಯಾರ್ಥಿ ನಿಲಯಗಳಲ್ಲಿ ಗುಂಪುಗಾರಿಕೆ, ರಾಜಕೀಯ ಮಾಡಬೇಡಿ. ಮಕ್ಕಳನ್ನು ಬೆಳೆಸುವುದು ಮಾತ್ರ ನಿಮ್ಮ ಗುರಿಯಾಗಬೇಕು. ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಯ ಕಡೆಗೂ ಗಮನ ಕೊಡಿ ಎಂದು ಕಿವಿಮಾತು ಹೇಳಿದರು.

ಶುಚಿಯಾಗಿರಲಿ: ವಿದ್ಯಾರ್ಥಿ ನಿಲಯಕ್ಕೆ ಅಡುಗೆ ಮಾಡಲು ಬರುವವರು ಶುಚಿಯಾಗಿರಬೇಕು. ಉಗುರು ಕತ್ತರಿಸಿರಬೇಕು. ಕೆಲವು ಕಡೆ ಅಡುಗೆಯವರು ಕುಡಿದು ಕೆಲಸ ಮಾಡುವ ಬಗ್ಗೆ ದೂರು ಬಂದಿದೆ. ನಿಲಯ ಪಾಲಕರು ಶುಚಿತ್ವದತ್ತ ಕಡ್ಡಾಯವಾಗಿ ಗಮನ ಹರಿಸಬೇಕು ಎಂದರು.ಪರಿಶೀಲಿಸಿ: ಅನುದಾನಿತ ವಸತಿ ನಿಲಯಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿಲ್ಲ. ಹೀಗಾಗಿ ಅನೇಕ ಕಡೆ ಮಕ್ಕಳ ಸಂಖ್ಯೆಯನ್ನು ಹೆಚ್ಚಾಗಿ ತೋರಿಸಿ ಸರ್ಕಾರದ ಹಣ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಎಚ್ಚರಿಸಿದರು.ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸುಬ್ರಮಣ್ಯ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ರಮಾ ಉಪಸ್ಥಿತರಿದ್ದರು.ಕುಣಿಗಲ್ ಮಾದರಿ ಅನುಸರಿಸಿ

ಕುಣಿಗಲ್‌ನಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ ಜಿಲ್ಲೆಗೆ ಮಾದರಿಯಾಗಿದೆ. ಆವರಣದಲ್ಲಿ ಗಿಡಗಳನ್ನು ಹಾಕಿಸಿದ್ದಾರೆ. ಹಾಸ್ಟೆಲ್ ಮಧ್ಯೆ ಅಂಬೇಡ್ಕರ್ ಪ್ರತಿಮೆ ಇದೆ. ಈ ಹಾಸ್ಟೆಲ್‌ನ ವಿದ್ಯಾರ್ಥಿ ನವೀನ್ ಪಿಯುಸಿಯಲ್ಲಿ (ವಿಜ್ಞಾನ) ಶೇ 92ರಷ್ಟು ಅಂಕ ಪಡೆದಿದ್ದಾನೆ. ಜಿಲ್ಲೆಯ ಇತರ ಹಾಸ್ಟೆಲ್‌ಗಳೂ ಈ ಮಾದರಿ ಅನುಸರಿಸಬೇಕು ಎಂದು ಜಿ.ಪಂ. ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಸಭೆಯಲ್ಲಿ ಹೇಳಿದರು.

ಒತ್ತಡಕ್ಕೆ ತಲೆಬಾಗಿದ ಪ್ರಸಂಗ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವೈ.ಎಚ್.ಹುಚ್ಚಯ್ಯ ತಾವು ಒತ್ತಡಕ್ಕೆ ತಲೆಬಾಗಿದ ಘಟನೆಯೊಂದನ್ನು ಹಂಚಿಕೊಂಡರು.

‘ಮಧುಗಿರಿ ತಾಲ್ಲೂಕಿನ ಹಾಸ್ಟೆಲ್‌ಗೆ ರಾತ್ರಿ ವೇಳೆ ದಿಢೀರ್ ಭೇಟಿ ನೀಡಿದ್ದೆ. ವಾರ್ಡನ್ ಸ್ಥಳದಲ್ಲಿ ಇರಲಿಲ್ಲ. ಭಿಕ್ಷೆ ಬೇಡುವವರ ಮನೆಯಲ್ಲಿದ್ದಂತೆ ಅಡುಗೆ ಸಾಮಾನುಗಳು ಚಿಲ್ಲಾಪಿಲ್ಲಿಯಾಗಿದ್ದವು. ದಾಖಲಾತಿಗಳನ್ನು ಸರಿಯಾಗಿ ನಿರ್ವಹಿಸಿರಲಿಲ್ಲ. ವಾರ್ಡನ್ ವಿರುದ್ಧ ಕ್ರಮಕ್ಕೆ ವರದಿ ಸಿದ್ಧಪಡಿಸುವ ಹೊತ್ತಿಗೆ ಸ್ಥಳೀಯ ಪ್ರಭಾವಿ ರಾಜಕಾರಣಿಯೊಬ್ಬರು ಒತ್ತಡ ತಂದರು. ನಾನೂ ಸುಮ್ಮನಾದೆ’ ಎಂದರು.

‘ಅಧ್ಯಕ್ಷರೂ ಒತ್ತಡಕ್ಕೆ ಮಣಿಯುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಲ್ಲವೇ?’ ಎಂದು ಕೆಲ ಸಭಿಕರು ಮಾತನಾಡಿಕೊಂಡರು.ವಿವಿಧ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳು

10728 ಸಮಾಜ ಕಲ್ಯಾಣ ಇಲಾಖೆ

6857 ಹಿಂದುಳಿದ ವರ್ಗದ ವಸತಿ ನಿಲಯ

3910 ಮೊರಾರ್ಜಿ ವಸತಿ ಶಾಲೆ

 775  ಅಲ್ಪಸಂಖ್ಯಾತರ ವಸತಿ ನಿಲಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.