ಗುರುವಾರ , ಜೂಲೈ 2, 2020
28 °C

ಶೃಂಗೇರಿ: ಟ್ರಾಫಿಕ್‌ಜಾಮ್ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೃಂಗೇರಿ: ಟ್ರಾಫಿಕ್‌ಜಾಮ್ ಸಮಸ್ಯೆ

ಶೃಂಗೇರಿ : ಪಟ್ಟಣದ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ಕನಿಷ್ಠ 7ರಿಂದ 8 ಬಾರಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ವಾಹನಗಳ ಮಾಲೀಕರು ಮತ್ತು ಪ್ರಯಾಣಿಕರು ಪರದಾಡುವಂತಾಗಿದೆ.ಎರಡು ವರ್ಷಗಳಿಂದ ಹೆಚ್ಚಾಗಿರುವ ವಾಹನಗಳು ಮತ್ತು ಶೃಂಗೇರಿಗೆ ಅಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು ವಾಹನ ನಿಲುಗಡೆ ಮತ್ತು ಸಂಚಾರ ವ್ಯವಸ್ಥೆಯಲ್ಲಿ ತೊಡಕು ಉಂಟಾಗಿದೆ. ಅಲ್ಲದೇ ರಸ್ತೆಯು ಕಿರಿದಾಗಿರುವುದರಿಂದ ಪುರದ್ವಾರದಿಂದ ಆಗಮಿಸುವ ಒಂದೇ ಒಂದು ದೊಡ್ಡ ವಾಹನ ಬಂದರೂ ಟ್ರಾಫಿಕ್ ಜಾಮ್ ಗ್ಯಾರಂಟಿಯಾಗಿದೆ.ಸೋಮವಾರ ಸಂತೆ ದಿನ ಟ್ರಾಫಿಕ್ ಜಾಮ್ ಆಗುವುದು ಮಾಮೂಲಿ ಸಂಗತಿ. ಮುಖ್ಯರಸ್ತೆಯ ಕೇಂದ್ರಬಿಂದು ಕಟ್ಟೆಬಾಗಿಲು ಬಳಿ ಪ್ರತಿನಿತ್ಯವು ಜಾಮ್ ಆಗುವುದು ಸರ್ವೇ ಸಾಮಾನ್ಯವಾಗಿದೆ. ಸರ್ಕಾರದಿಂದ ಮುಖ್ಯರಸ್ತೆ ಕಾಂಕ್ರಿಟ್ ರಸ್ತೆಯನ್ನಾಗಿಸಲು ಸುಮಾರು 5 ಕೋಟಿ ರೂ. ಅನುದಾನ ನೀಡಿದ್ದು, ಇದೀಗ ಮತ್ತೆ ರಸ್ತೆ ವಿಸ್ತರಣೆ ಬಗ್ಗೆ ಉಹಾಪೋಹಗಳು ಹಬ್ಬುತ್ತಲಿದೆ.ಪಟ್ಟಣದ ಸಮಾರಂಭವೊಂದರಲ್ಲಿ ಇತ್ತೀಚಿಗೆ ಶಾಸಕ ಡಿ.ಎನ್. ಜೀವರಾಜ್ ರಸ್ತೆ ವಿಸ್ತರಣೆ ಬಗ್ಗೆ ಆಗಬೇಕೇ ಬೇಡವೇ ಎಂಬುದನ್ನು ಪಟ್ಟಣದ ಜನರೇ ತೀರ್ಮಾನಿಸಬೇಕು ಎಂದಿದ್ದರು.ನಾಗರಿಕರು ಏನು ಹೇಳುತ್ತಾರೆ: ಸುಭಾಷ್ ಬೀದಿಯ ಕೊನೆಯ ಭಾಗದಲ್ಲಿ ರಸ್ತೆಯಲ್ಲಿ ಪ್ರಾಥಮಿಕ ಶಾಲೆ ನಿರ್ಮಿಸಲಾಗಿದೆ.  ಭಾರತೀಬೀದಿಯ ನಿವಾಸಿಗಳು ಈಗ ಮನೆ ಮುಂಭಾಗ ಕಳೆದುಕೊಳ್ಳಬೇಕಾಗಿದೆ.ಕೆಲವು ಮನೆಯ ಮುಂಭಾಗ ಹೋದರೆ ಇದೇ ಮನೆಯೇ ಬಿದ್ದು ಹೋಗುತ್ತದೆ ಎನ್ನುತ್ತಾರೆ  ಕಡೇಮನೆ ಗಣಪತಿ ಭಟ್ಟ.ರಸ್ತೆ ವಿಸ್ತರಣೆ ಹೆಸರಿನಲ್ಲಿ ಮನೆ ಗಳನ್ನು ಮತ್ತೊಮ್ಮೆ ಒಡೆಯುವುದು ಸರಿಯಲ್ಲ. ಹಿಂದೆ ಸಚಿವ ರೇವಣ್ಣರ ಕಾಲದಲ್ಲಿ ರಸ್ತೆ ವಿಸ್ತರಣೆಗೊಂಡಾಗ ಮುಖ್ಯರಸ್ತೆಯಲ್ಲಿರುವ ವಾಗೀಶ್ವರೀ ದೇವಸ್ಥಾನದ ಮುಂಭಾಗದಲ್ಲಿರುವ ಎರಡು ಆನೆಕಲ್ಲುಗಳನ್ನು ಕಿತ್ತು ಹಾಕಲಾಗಿತ್ತು.

 

ಈ ಬಗ್ಗೆ ಖ್ಯಾತ ಜೋಯಿಸರು ಆನೆಕಲ್ಲು ಕಿತ್ತ ಸರ್ಕಾರ ಉಳಿಯು ವುದಿಲ್ಲ. ಅದಕ್ಕೆ ಕಾರಣರಾದವರು ಅಧಿಕಾರ ಕಳೆದುಕೊಳ್ಳುವುದು ನಿಶ್ಚಯ ಎಂದು ಪಂಥ ಕಟ್ಟಿದ್ದರು. ಅದರಂತೆ ನಡೆದು ಹೋಗಿರುವುದನ್ನು ಜ್ಞಾಪಿಸಿ ಕೊಳ್ಳಬೇಕು ಎಂದು  ಪಟ್ಟಣದ ಮತ್ತೊಬ್ಬ ನಿವಾಸಿ ಹೇಳುತ್ತಾರೆ.ಮಧ್ಯರಸ್ತೆಯಲ್ಲಿ ನಿಲ್ಲಿಸುವ ವಾಹನ ಮಾಲೀಕರು ರಸ್ತೆ ಅಗಲೀಕರಣದ ನಂತರವೂ ನಿಲ್ಲಿಸುವುದಿಲ್ಲ ಎಂಬ ಗ್ಯಾರಂಟಿ ಏನು? ಎಂಬುದು ಪಟ್ಟಣದ ವರ್ತಕ ಎಸ್. ರಮಾನಂದರದ್ದು.ಮುಕ್ತ ಮನಸ್ಸಿನಿಂದ ಹಾಗೂ ಸ್ವಯಂ ಪ್ರೇರಣೆಯಿಂದ  ವಿಸ್ತರಣೆ ಕಾರ್ಯವಾಗಬೇಕಿದೆ. ಸಮಸ್ಯೆಗಳು ಸಹಜ. ಅದನ್ನು ಪರಿಹರಿಸುವ ಕಾರ್ಯ ಜನಪ್ರತಿನಿಧಿಗಳಿಂದ ಆಗಬೇಕಾಗಿದೆ ಎನ್ನುತ್ತಾರೆ ವರ್ತಕ ಸಂಘದ ಅಧ್ಯಕ್ಷ ಗೇರ್‌ಬೈಲ್ ಶಂಕರಪ್ಪ.ಭಾರತೀಬೀದಿಗೆ ರಸ್ತೆ ಪರ್ಯಾಯವಾಗಿ ತುಂಗಾನದಿಯ ದಂಡೆ ಗಾಂಧಿ ಮೈದಾನದಲ್ಲಿ ಈಗಾಗಲೇ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ 500 ಮೀಟರ್ ರಸ್ತೆ ಕಾಮಗಾರಿ ಮುಕ್ತಾಯಗೊಂಡಿದೆ. ಇನ್ನುಳಿದ ಕಾಮಗಾರಿ ತುಂಗಾನದಿ ಮೇಲೆ ರಸ್ತೆ ನಿರ್ಮಿಸಬೇಕಿದೆ. ಕೇವಲ 4 ತಿಂಗಳು ಮಾತ್ರ ಕಾಮಗಾರಿ ನಡೆಸಲು ಸಾಧ್ಯ.ಮಳೆಗಾಲದ ಸಮಯದಲ್ಲಿ ಕಾಮಗಾರಿ ನಡೆಸಲು ಕಷ್ಟಸಾಧ್ಯ. 2012ರ ಅಂತ್ಯಕ್ಕೆ ಪರ್ಯಾಯ ರಸ್ತೆ ಸಿದ್ಧಗೊಳ್ಳಲಿದೆ. ಮುಂದೊಂದು ದಿನ ತುಂಗಾನದಿಯ  ಪಕ್ಕದಲ್ಲಿ ರಸ್ತೆ ನಿರ್ಮಿಸಿರುವುದರಿಂದ ಪ್ರೇಕ್ಷಣಿಯ ಸ್ಥಳವೂ ಆಗಬಹುದು ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಸದಸ್ಯ ಟಿ.ಕೆ. ಪರಾಶರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.