ಸೋಮವಾರ, ಜನವರಿ 20, 2020
20 °C

ಶೋಕಗೀತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲ್ಲಿ ಮಾತಿತ್ತು. ಮೌನವೂ ಇತ್ತು. ಎರಡರಲ್ಲೂ ದುಃಖ, ವಿಷಾದದ ಛಾಯೆ ತುಂಬಿತ್ತು. ‘ಪ್ರೀತಿ ವಿಷ’ ಎಂದು ಹೇಳಲು ಹೊರಟಿದ್ದ ಹುಡುಗನಿಗೆ ಅದು ಅನುಭವಕ್ಕೆ ದಕ್ಕಿತ್ತೋ ಇಲ್ಲವೋ– ಆದರೆ, ಸಿನಿಮಾ ಪ್ರೀತಿಯಲ್ಲಿನ ಸಿಹಿ ಮತ್ತು ಕಹಿಯ ರುಚಿಯನ್ನು ಆತ ಕಂಡಿದ್ದ. ಅದೇ ಆತನ ಪಾಲಿನ ವಿಷವಾಯಿತೇ ಎಂಬ ಪ್ರಶ್ನೆಗಳಿದ್ದರೂ ಉತ್ತರಿಸಲು ಆತನಿಲ್ಲ.‘ಹಳ್ಳಿ ಹೈದ’ ರಾಜೇಶನ ಅಕಾಲಿಕ ಸಾವಿನಿಂದ ಇನ್ನೂ ಚೇತರಿಸಿಕೊಳ್ಳದ ಕುಟುಂಬದೊಂದಿಗೆ ಅಂದು ಸಿನಿಮಾ ಕುಟುಂಬ ಬೆರೆತಿತ್ತು. ರಾಜೇಶ್ ಅವರ ಅಗಲಿಕೆಯ ನೋವಿನ ನಡುವೆಯೇ ಚಿತ್ರತಂಡ ಆತನ ಪ್ರತಿಭಾ ಪ್ರದರ್ಶನದ ಅಂತಿಮ ದೃಶ್ಯಾವಳಿಗಳನ್ನು ತೆರೆಗೆ ತರುತ್ತಿದೆ. ಹಾಡುಗಳ ಸೀಡಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದು ಚಿತ್ರತಂಡಕ್ಕೆ ಸಂಭ್ರಮದ ಗಳಿಗೆ. ಆದರೆ ಅಂದು ಅದು ಶೋಕದ ಕ್ಷಣವಾಗಿ ಮಾರ್ಪಟ್ಟಿತ್ತು. ದುಃಖ, ಅಳು, ಸಂತಾಪ, ಸಾಂತ್ವನದ ನುಡಿಗಳಿಗೆ ಕಾರ್ಯಕ್ರಮ ಸಾಕ್ಷಿಯಾಯಿತು.ಕಾರ್ಯಕ್ರಮದ ಆಹ್ವಾನಿತರ ಪಟ್ಟಿ ತುಸು ದೀರ್ಘವಿತ್ತು. ದುಃಖದಲ್ಲಿ ಮುಳುಗಿದ್ದ ಸಭಾಂಗಣ ಕೊನೆಗೆ ರಾಜಕೀಯ ಸಭೆಯಾಗಿ ಬದಲಾಯಿತು. ಮಾಜಿ ಸಚಿವರುಗಳು, ಅವರ ಜೊತೆಗಾರರಿಂದ ಸಭಾಂಗಣ ತುಂಬಿಕೊಂಡಿತ್ತು. ಸೀಡಿ ಬಿಡುಗಡೆಗೆ ಬರಬೇಕಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ಬಂಡೆಪ್ಪ ಕಾಶೆಂಪೂರ್‌ ಮತ್ತು ಶಿವಣ್ಣ ಮಾತು ಹರಿಸಿದರು.ಸಾವಿನ ಮನೆ ಕದ ಬಡಿಯುವ ಮೊದಲು ರಾಜೇಶ ಚಿತ್ರದ ಎಲ್ಲಾ ಕಾರ್ಯಗಳನ್ನೂ ಪೂರೈಸಿದ್ದ ಎಂಬುದನ್ನು ನೆನಪಿಸಿಕೊಂಡರು ನಿರ್ದೇಶಕ ನಂದನ್‌ ಪ್ರಭು. ಸಕಲೇಶಪುರ, ಬೆಂಗಳೂರು ಮತ್ತು ಚಿಕ್ಕಮಗಳೂರುಗಳಲ್ಲಿ ಚಿತ್ರೀಕರಣ ನಡೆಸಿರುವ ತಂಡ, ಪೂನಂ ಪಾಂಡೆಯವರ ಒಂದು ಐಟಂ ಹಾಡಿಗೋಸ್ಕರವೇ 1 ಕೋಟಿ ರೂಪಾಯಿ ಖರ್ಚು ಮಾಡಿದೆಯಂತೆ.

ಸಾಯಿ ಕಾರ್ತಿಕ್‌ ಆರು ಹಾಡುಗಳನ್ನು ಚಿತ್ರಕ್ಕಾಗಿ ಹೊಸೆದಿದ್ದಾರೆ. ಚಿತ್ರದ ಇಬ್ಬರು ನಾಯಕಿಯರಲ್ಲಿ ಒಬ್ಬರಾದ ಖುಷಿ, ಗಾಯಕ, ನಟ ಗುರುರಾಜ ಹೊಸಕೋಟೆ, ನಿರ್ಮಾಪಕರಾದ ಕೇಶವಮೂರ್ತಿ ಮತ್ತು ಸೋಮಶೇಖರ್‌ ಹಾಜರಿದ್ದರು.

ಪ್ರತಿಕ್ರಿಯಿಸಿ (+)