ಭಾನುವಾರ, ಮೇ 22, 2022
21 °C

ಶ್ರೀಸಂಸಾರಿಯ ಸುತ್ತಮುತ್ತ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀಸಂಸಾರಿಯ ಸುತ್ತಮುತ್ತ...

ಡಾ. ಎಚ್.ಎಸ್. ವೆಂಕಟೇಶಮೂರ್ತಿಯವರಿಗೆ ಸಿದ್ಧಿಸಿರುವ ಕಥನ ಕವನ ಮಾದರಿಯಲ್ಲಿರುವ ಕವಿತೆ- ಶ್ರಿಸಂಸಾರಿ. ಸುಮ್ಮನೆ ಗಮನಿಸಿ ಕವಿತೆಯ ಶೀರ್ಷಿಕೆ. ತಮ್ಮ ಕವಿತೆಗಳಿಗೆ, ಪುಸ್ತಕಗಳಿಗೆ ಚಂದದ ಹೆಸರು ಕೊಡುವುದರಲ್ಲಿ ಡಾ. ಎಚ್‌ಎಸ್ವಿ ಅವರ ಪ್ರೀತಿಯನ್ನು ಗಮನಿಸಬೇಕು. ಶ್ರಿಸಂಸಾರಿ - ಅಂದರೆ ಈ ಲೋಕಕ್ಕೆ ಸೇರಿದವನು, ಗೃಹಸ್ಥ, ಎಲ್ಲರ ಯೋಗಕ್ಷೇಮ ನೋಡಿಕೊಳ್ಳುವವನು.

 

ಆಗ ಅದು ಕುಟುಂಬ, ರಾಮನ ಸಂಸಾರ, ಎಲ್ಲರಿಗೂ ಸೇರಿದ್ದು, ದೇಶಗಳಷ್ಟೇ ಅಲ್ಲದೆ ಜಗತ್ತಿನ ಅಪರಿಹಾರ ಸಮಸ್ಯೆಗಳನ್ನು ಪರಿಹರಿಸಬಲ್ಲುದು. ಎಲ್ಲರನ್ನೂ, ಎಲ್ಲವನ್ನೂ ಒಳಗೊಳ್ಳುವಂಥದ್ದು. ಇಂಥ ಕುಟುಂಬಕ್ಕೆ ಸೇರಿದವನು ಶ್ರಿರಾಮ, ಆದ್ದರಿಂದ ಅವನು ಶ್ರಿಸಂಸಾರಿ. ಕವಿತೆ ಹೇಳುತ್ತದೆ, `ಎಷ್ಟು ವಿಶಾಲ... ಎಷ್ಟು ವಿಸ್ತೃತ... ಶ್ರಿರಾಮನ ಈ ಸಂಸಾರ!~

ಕವಿತೆಯ ಆರಂಭದ ಸಾಲು:`ಶ್ರಿರಾಮನು ತಾನೊಬ್ಬನೇ ಎಲ್ಲೂ ಪೂಜೆಗೊಳ್ಳುವುದು ಕಂಡಿಲ್ಲ ಹೋಗಿ ನೋಡಿ ನೀವ್ಯಾವುದೆ ಊರಿನ ಯಾವುದೆ ರಾಮನ ಗುಡಿಗೆ!

ಮಹರ್ಷಿ ವಾಲ್ಮೀಕಿ ರಾಮಾಯಣದಲ್ಲಿ ಮಹರ್ಷಿಗಳೂ, ದೇವತೆಗಳೂ ರಾಮನಿಗೆ ಕೈಮುಗಿದು `ನೀನು ಪರಮಾತ್ಮನೆಂಬುದನ್ನು ನೆನೆದುಕೋ~ ಎಂದು ಒತ್ತಾಯಿಸಿದ ಸಂದರ್ಭಗಳಲ್ಲೂ, ಆತನೆಂದೂ ತಾನು ದಾಶರಥೀ ರಾಮನೆಂಬ ಮಾನವ - ಎನ್ನುವ ಸ್ಥಾನದಿಂದ ಕದಲಿಲ್ಲ. ಶ್ರಿರಾಮನು ದೇವರಾಗಿದ್ದರಿಂದಲೇ ಅವನಿಗೆ ಎಲ್ಲ ಸುಗುಣಗಳಿದ್ದವೆಂದು ಇಡೀ ರಾಮಾಯಣದಲ್ಲಿ, ಎಲ್ಲೂ ಸೂಚ್ಯವಾಗಿ ಹೇಳಿಲ್ಲ.ಶ್ರಿರಾಮನಿಗೆ ತಾನು ವಿಷ್ಣುವಿನ ಅವತಾರವೆಂದು ತಿಳಿದಿಲ್ಲ. ಶ್ರಿಕೃಷ್ಣ ತಾಯಿ ಯಶೋದಾ ಮಾತೆಗೆ ಮತ್ತು ಯುದ್ಧಭೂಮಿಯಲ್ಲಿ ಅರ್ಜುನನಿಗೆ ತಾನೇ ದೇವರೆಂದು ತೋರಿಸಿಕೊಂಡ ಹಾಗೆ,  ಶ್ರಿರಾಮ ತಾನು ವಿಷ್ಣುವಿನ ಅವತಾರವೆಂದಾಗಲೀ, ವಿಷ್ಣುವೆಂದಾಗಲೀ ತೋರಲಿಲ್ಲ, ಅವನಿಗಿದ್ದದ್ದು ತಾನೊಬ್ಬ ಮಾನವ ಎಂಬ ಗ್ರಹಿಕೆ ಮಾತ್ರ. ಇಷ್ಟೆಲ್ಲವನ್ನೂ ಬರೀ ಕವಿತೆಯ ಶೀರ್ಷಿಕೆ ಹೇಳಿಬಿಡುತ್ತದೆ; ನೀವು ಅದರೊಳಗೆ ಹೋಗುವುದಕ್ಕಿಂತ ಮುಂಚೆ, ದ್ವಾರಬಾಗಿಲಲ್ಲೆ ನಿಮ್ಮನ್ನು ನಿಲ್ಲಿಸಿಕೊಂಡು...

`ಯಾವುದೇ ಮನೆಯ ಗೋಡೆಯ ಮೇಲಿನ ಪಠವನ್ನಾದರೂ ನೋಡಿ

ರಾಮನೊಬ್ಬನೇ ಎಂದೂ ಎಲ್ಲೂ ಬಾರನು ಪೂಜೆಯ ಮಣೆಗೆ...~

ನನಗನಿಸುತ್ತದೆ; ರಾಮಾಯಣ ಬರೀ ರಾಮ-ಸೀತೆಯರ ಕಥೆಯಲ್ಲ. ಅದು ನಮ್ಮಲ್ಲೆ ಇರುವ, ನಮ್ಮಳಗಿರುವ ರಾಮ-ರಾವಣರ ಸಂಘರ್ಷ.  ಆಧುನಿಕ ಮನುಷ್ಯ ಬಹಳ ಸಂಕೀರ್ಣ. ಅವನಲ್ಲಿ ರಾಮನೂ ಇರುತ್ತಾನೆ, ರಾವಣನೂ. ಇದೊಂದು ರೀತಿಯ ಕಾಯಿಲೆ ಅನಿಸುತ್ತದೆ ನನಗೆ:DID – it is a struggle with dissociative identity disorder.  ಬಹುಮುಖಗಳು ತನ್ನೊಳಗೇ ತಂದೊಡ್ದುವ ಸಂಘರ್ಷ. ರಾಮತ್ವದ ಕಡೆಗೆ ಇಲ್ಲವೆ ರಾವಣತ್ವದ ಕಡೆಗೆ ಹಗ್ಗ ಜಗ್ಗಾಡುವ ಆಟ.ತನ್ನ ಚಹರೆ ಹುಡುಕುವ ಈ ನಿರಂತರ ಪ್ರಯತ್ನ ನಡೆಯುತ್ತಾ ಹೋಗುತ್ತದೆ ಆಧುನಿಕ ಮನುಷ್ಯನಲ್ಲಿ.ರಾವಣನಿಗೆ ಹತ್ತು ತಲೆ,He is plural and his life was multiple. ಅವನ ಲಂಕೆ ಸ್ವರ್ಣ ನಗರಿ. ತನ್ನ ಜೀವನದಲ್ಲಿ ಅತಿ ದೊಡ್ಡ ಸಾಧನೆ ಮಾಡಿ, ಮಹತ್ತರ ಸಿದ್ಧಿಗಳನ್ನು ಪಡೆದದ್ದಲ್ಲದೆ, ಕೊನೆಗೆ ಶಿವನನ್ನು ಒಲಿಸಿಕೊಂಡು ಪರಮ ಶಕ್ತಿಯನ್ನು ಪಡೆದುಕೊಂಡ ಮಹಾ ಜ್ಞಾನಿ, ಪಂಡಿತ. ಸುಲಭವಾಗಿ ರಾಮನನ್ನು ಶಾಸ್ತ್ರಗಳಲ್ಲಿ ಸೋಲಿಸಿಬಿಡಬಲ್ಲ.

 

ಅವನ ಬಳಿ ಎಲ್ಲವೂ ಇತ್ತು, ಜಗತ್ತಿನ ಚೆಲುವೆಯರೆಲ್ಲರೂ ಇದ್ದಾರೆ ಅವನ ಅಂತಃಪುರದಲ್ಲಿ. ಆದರೆ ಅವನಿಗೆ ಅದು ಸಾಕೆನಿಸುತ್ತಿಲ್ಲ, ಎಲ್ಲರನ್ನೂ ಗೆಲ್ಲಬೇಕು, ಪರಸ್ತ್ರೀಯರ ಆಕರ್ಷಣೆ ಅವನಿಗೆ. ರಾಮನಿಗೆ ಹೋಲಿಸಿ ನೋಡಿ ರಾವಣನನ್ನು. ರಾಮನಿಗೆ ಒಂದೇ ಮುಖ, ಒಂದೇ ಚಹರೆ.ಗುರು ಹಿರಿಯರ ಆಶೀರ್ವಾದದಿಂದ ಸಂಪಾದಿಸಿದ ವಿದ್ಯೆ ಮಾತ್ರ ಅವನಲ್ಲಿ. ಯಾವುದೇ ಸಾಧನೆ ಮಾಡಿ ಗಳಿಸಿದ ಹೆಗ್ಗಳಿಕೆ ಇಲ್ಲ. ರಾಜ್ಯವಿಲ್ಲ, ಅರಮನೆ ಇಲ್ಲ, ಸೇನೆ ಇಲ್ಲ, ಏನೂ ಇಲ್ಲ. ಎಲ್ಲವೂ ಇದ್ದ ರಾವಣನಿಗೆ ಇರುವುದೆಲ್ಲವೂ ಬೇಕು. ಯಾವುದಕ್ಕೂ ಅಂಟಿಕೊಳ್ಳದ ರಾಮನಿಗೆ ಯಾವುದೂ ಬೇಡ. ರಾಮನಿಗೆ ಎಲ್ಲರ ಒಳಿತು ಬೇಕು; ಅವನು ಕುಟೀರದಲ್ಲಿದ್ದರೂ ನೆಮ್ಮದಿಯಾಗಿರುತ್ತಾನೆ, ಸೀತೆ ಪ್ರೇಮವಷ್ಟೇ ಸಾಕವನಿಗೆ.ರಾಮನದು ಪ್ರಜಾರಾಜ್ಯ, ಎಲ್ಲರ ಮಾತಿಗೂ ಅಲ್ಲಿ ಮನ್ನಣೆ; ಎಲ್ಲ ಸಂದರ್ಭಗಳಲ್ಲೂ ಸಮಾಲೋಚಿಸುವ ರಾಮ. ರಾವಣನದು ಸರ್ವಾಧಿಕಾರ. ಅಲ್ಲಿ ಯಾರ ಮಾತಿಗೂ ಬೆಲೆ ಇಲ್ಲ, ಜ್ಞಾನಿ ವಿಭೀಷಣನಿಗೂ. ಅದಕ್ಕೆ ಕವಿತೆ ಹೇಳುತ್ತದೆ:

`ರಾಮ ಸಂಸಾರ ಒಟ್ಟು ಸಂಸಾರ. ತಮ್ಮಂದಿರು ನಾದಿನಿ ತಾಯಿ

ಆಳು ಕಾಳಿಗೂ ಮನ್ನಣೆಯುಂಟು. ಜೊತೆಗೆ ಗೆಳೆಯರಿಗೂ ಕೂಡ

ಅಯೋಧ್ಯೆಯಲ್ಲೇ ಲಂಕೆ-ಕಿಷ್ಕಿಂಧ-ಗುಡ್ಡಗಾಡು ಸೇರಿರಲು

ಆರ್ಯ-ದ್ರಾವಿಡ-ಆದಿವಾಸಿಗೂ ರಾಮಪೂಜೆಯಲಿ ಪಾಲು...

ಸ್ವಲ್ಪ ಧ್ಯಾನಿಸಿ; ಶ್ರಿಸಂಸಾರಿಯ ಕುಟುಂಬ ಹೇಗೆ ದೇಶದ ಗಡಿ ದಾಟಿ ವಿಸ್ತೃತಗೊಳ್ಳುತ್ತದೆ, ನೆರೆ ಮನೆಯವನನ್ನು ಪ್ರೀತಿಸುತ್ತಲೇ ಅದು ಗಡಿಗಳಾಚೆ ತನ್ನನ್ನು ತೆರೆದುಕೊಳ್ಳುತ್ತದೆ. ಕುಟುಂಬ ಅನಿಕೇತನವಾಗುತ್ತದೆ. ದೇಶ, ರಾಷ್ಟ್ರದ ಕಲ್ಪನೆ ಮರೆಯಾಗುತ್ತದೆ, ವಿಶ್ವಸಂಸ್ಥೆಯ ಪರಿಕಲ್ಪನೆ ಮೂಡುತ್ತದೆ, ` ಅಯೋಧ್ಯೆಯಲ್ಲೆ ಲಂಕೆ-ಕಿಷ್ಕಿಂಧ-ಗುಡ್ಡಗಾಡು...~

ಕವಿತೆ ಮುಂದುವರಿಯುತ್ತದೆ: `ಸಂಸಾರದ ಈ ಸಾರ ವ್ಯವಸ್ಥೆ ಪೂಜೆಗೊಳ್ವುದೀ ನೆಲದಲ್ಲಿ...~  ರಾಮನಲ್ಲಿ ಏನೂ ಇಲ್ಲ, ಆದರೆ ಅವನಲ್ಲಿ ಎಲ್ಲವೂ ಇದೆ. ಏನೂ ಇಲ್ಲದೆ ಎಲ್ಲವೂ ಇದೆ. ಈ ಎಲ್ಲ ಇರುವಿಕೆಯ ಪ್ರತಿನಿಧಿಯಾಗಿ ಅವನಿದ್ದಾನೆ ಶ್ರಿಸಂಸಾರಿಯಾಗಿ.

ಕವಿತೆ ತ್ರೇತಾಯುಗದ ರಾಮನ ಬಗ್ಗೆ, ಅವನ ಸಂಸಾರದ ಬಗ್ಗೆ ಹೇಳುತ್ತಲೇ ಒಂದು ಕಾಲಕ್ಕೆ ಸಂಬಂಧಿಸಿದ ಕಥೆಯನ್ನ ಕಾಲಾತೀತವಾಗಿಸಿ ಇವೊತ್ತಿನ ಕಾಲಕ್ಕೆ ಥಟ್ಟನೆ ಕರೆತರುವ ಮಾಂತ್ರಿಕತೆ ಗಮನಿಸಿ:

ಕರಿಯ ಮುಸುಕಲ್ಲಿ ಬಿಂಬಗ್ರಾಹಿ ಮಂದ್ರದಲ್ಲಿ ಗೊಣಗಿದ ಹೀಗೆ:

 `ಹೆಗಲ ಬಿಲ್ಲ ಕೆಳಗಿಳಿಸಿರಿ ಸ್ವಾಮಿ, ಜಾಗ ಉಂಟು ಇನ್ನೊಬ್ಬರಿಗೆ!~

ಥಟ್ಟನೆ ನೆನಪು ಸೇತುರಾಮನಿಗೆ ಮರಳು ಸೇವೆಯ ಅಳಿಲುಮರಿ!

ರಾಮ ಧ್ಯಾನಿಸಿದ: ಮರುಕ್ಷಣದಲ್ಲಿ ಅಳಿಲಿದೆ ಆತನ ಹೆಗಲಲ್ಲಿ.

 

   ರಾಮ ತನ್ನ ವೈಯಕ್ತಿಕ ಸಾಧನೆಗಾಗಿ ಎಂದೂ ಯುದ್ಧ ಮಾಡಿದವನಲ್ಲ.  ಫೋಟೋಗ್ರಾಫರ್ ಹೇಳುತ್ತಿದ್ದಂತೆ ಬಿಲ್ಲುಬಾಣ ತೆಗೆದಿರಿಸುತ್ತಾನೆ ರಾಮ, ನಿಶಸ್ತ್ರೀಕರಣದ ಸೂಚನೆಗೆ ಒಪ್ಪಿಗೆ, ಮನ್ನಣೆ. ವಿಸರ್ಜನೆ ಮಹತ್ವದ ಘಟ್ಟ, ಅಳಿಲು ರಾಮನ ಹೆಗಲೇರುತ್ತದೆ. ರಾಮನಿದ್ದಲ್ಲಿ ಶಾಂತಿ, ಸೌಹಾರ್ದ, ಸಹಬಾಳ್ವೆ. ಕವಿತೆ ಬೆಳೆಯುವ ರೀತಿ ಅಚ್ಚರಿಯೆನಿಸುತ್ತದೆ.  ಡಾ. ಎಚ್‌ಎಸ್ವಿ ಈ ನೆಲದ ಕವಿಯಾದರೂ ಸದಾ ಅವರ ಕೈಗಳು ನಕ್ಷತ್ರಗಳತ್ತ, ಆದರೆ ಕಾಲುಗಳು ಭದ್ರವಾಗಿ ಬೇರು ಬಿಟ್ಟಿರುವುದು ಈ ನೆಲದಲ್ಲೆ.  ಆ ರೀತಿಯದ್ದು ಅವರ ಪರಂಪರೆಯ ಜೊತೆಗಿನ ಅನುಸಂಧಾನ.ಶ್ರಿಸಂಸಾರಿ ಕವಿತೆ ಇರುವಿಕೆಯನ್ನು ಆರಾಧಿಸುವ ಕವಿತೆ, ರಾಮನ ಪೂಜೆಯ ನೆವದಲ್ಲಿ. ಎಲ್ಲರನ್ನೂ, ಎಲ್ಲದನ್ನೂ ಒಳಗೊಳ್ಳುವ ಕವಿತೆ. ಕುಟುಂಬವೇ ಜಗತ್ತಾಗುವ, ಜಗತ್ತೇ ಕುಟುಂಬವಾಗುವ, ಜೊತೆಗೆ ಸಮಾನತೆಯನ್ನು ಎತ್ತಿ ಹಿಡಿಯುವ ಅಸಾಮಾನ್ಯ ಸರಳ ಕವಿತೆ. ರಾಮನ ವ್ಯಕ್ತಿತ್ವದ ಮೇಲೆ ಹೊಸಬೆಳಕು ಚೆಲ್ಲುವ ಈ ಕವಿತೆ ಅವನಿಗೊಂದು ಘನತೆ ತಂದುಕೊಡುತ್ತದೆ. ಇಲ್ಲಿ ಎಲ್ಲರೂ ಶ್ರೇಷ್ಠರೇ, ಎಲ್ಲರೂ ಸಮಾನರೇ.ಪುಟ್ಟ ಅಳಿಲುಮರಿ ರಾಮನ ಹೆಗಲ ಮೇಲೆ. ಆದ್ದರಿಂದಲೇ ಈ ಕವಿತೆಗೆ ಮಹತ್ವದ ಸ್ಥಾನ. ಅದು ಶ್ರಿಸಂಸಾರಿ ಡಾ. ಎಚ್‌ಎಸ್ವಿ ಅವರ ಮನೋಧರ್ಮ... ಕವಿತೆ ಹಾಡುತ್ತಿದೆ,

   `ನಿತ್ಯಾರಾಧನೆ ನಿತ್ಯನೈವೇದ್ಯ ರಾಮನ ಪೂಜೆಯ ನೆವದಲ್ಲಿ

   ವರ್ಗ ವರ್ಣ ವೈಷಮ್ಯ ಲೆಕ್ಕಿಸದೆ ಪೂಜೆಗೊಳ್ಳುತಿದೆ ಸಂಸಾರ...~

 ಶ್ರೀಸಂಸಾರಿ

ಶ್ರಿರಾಮನು ತಾನೊಬ್ಬನೆ ಎಲ್ಲೂ ಪೂಜೆಗೊಳ್ಳುವುದು ಕಂಡಿಲ್ಲ

ಹೋಗಿ ನೋಡಿ ನೀವ್ಯಾವುದೆ ಊರಿನ ಯಾವುದೆ ರಾಮನ ಗುಡಿಗೆ!

ಯಾವುದೇ ಮನೆಯ ಗೋಡೆಯ ಮೇಲಿನ ಪಠವನ್ನಾದರು ನೋಡಿ

ರಾಮನೊಬ್ಬನೇ ಎಂದೂ ಎಲ್ಲೂ ಬಾರನು ಪೂಜೆಯ ಮಣೆಗೆ

ಎಡಕ್ಕೆ ಸೀತ, ಬಲಕ್ಕೆ ಲಕ್ಷ್ಮಣ, ಕಾಲ ಕೆಳಗೆ ಹನುಮಂತ

ಕೆಲವು ಪಠದಲ್ಲಿ ತಮ್ಮ ಶತೃಘ್ನ ಚಾಮರ ಹಾಕುವ ಭಂಗಿ

ಹಿಂದೆ ಕೊಡೆ ಹಿಡಿದ ಭರತ, ವಿಭೀಷಣ-ಜಾಂಬವ-ದೊರೆ ಸುಗ್ರೀವ

ಕೆಲವು ಪಠದಲ್ಲಿ ಮಾಂಡವಿ, ಊರ್ಮಿಳೆ, ನಗುತ್ತಿರುವ ಶೃತಕೀರ್ತಿ

ಉಳಿದ ದೇವರಂತೆಂದಿಗು ರಾಮ ಒಬ್ಬನೆ ಪೂಜೆಯ ಕೊಳ್ಳನು

ರಾಮಪೂಜೆ ಬರಿ ರಾಮನ ಪೂಜೆಯೆ? ಅದೊಂದು ಕುಟುಂಬ ಪೂಜೆ

ಎಷ್ಟು ವಿಶಾಲ...ಎಷ್ಟು ವಿಸ್ತೃತ...ಶ್ರಿರಾಮನ ಈ ಸಂಸಾರ!

ಇದು ತಾನಾಯಿತು ತನ್ನ ಕಣ್ಗೊಂಬೆ ತಾನಾಯಿತು-ಚೌಕಟ್ಟಲ್ಲ.

ರಾಮ ಸಂಸಾರ ಒಟ್ಟು ಸಂಸಾರ. ತಮ್ಮಂದಿರು ನಾದಿನಿ ತಾಯಿ

ಆಳು ಕಾಳಿಗೂ ಮನ್ನಣೆಯುಂಟು. ಜೊತೆಗೆ ಗೆಳೆಯರಿಗು ಕೂಡ

ಅಯೋಧ್ಯೆಯಲ್ಲೇ ಲಂಕೆ-ಕಿಷ್ಕಿಂಧ-ಗುಡ್ಡಗಾಡು ಸೇರಿರಲು

ಆರ್ಯ-ದ್ರಾವಿಡ-ಆದಿವಾಸಿಗೂ ರಾಮಪೂಜೆಯಲಿ ಪಾಲು

ಸಂಸಾರದ ಈ ಸಾರ ವ್ಯವಸ್ಥೆ ಪೂಜೆಗೊಳ್ವುದೀ ನೆಲದಲ್ಲಿ

ನಿತ್ಯರಾಧನೆ ನಿತ್ಯನೈವೇದ್ಯ ರಾಮನ ಪೂಜೆಯ ನೆವದಲ್ಲಿ

ವರ್ಗ ವರ್ಣ ವೈಷಮ್ಯ ಲೆಕ್ಕಿಸದೆ ಪೂಜೆಗೊಳ್ಳುತಿದೆ ಸಂಸಾರ

ಸ್ವರ್ಗವೆನ್ನುವುದು ಇನ್ನೆಲ್ಲಿರುವುದು-ಇಲ್ಲೇ ಕಾಲಡಿನೆಲದಲ್ಲೆ

ಈ ಕೌಟುಂಬಿಕ ಗೋಷ್ಠಿ ಪಠದಲ್ಲಿ ಸ್ನೇಹ ಮೋಹ ತಿಕ್ಕಾಟಗಳು!

ತಮ್ಮ ತಮ್ಮ ಗಂಡಂದಿರ ಪಕ್ಕ ಬೀಗುವರರೆನಗೆ ಹೆಣ್ಣುಗಳು!

ಹೆಗಲಿಗೆ ಹೆಗಲನು ತಾಗಿಸಿ ನಿಂತಿದ್ದಾನೆ ಜಾಂಬವನು ಭರತನಿಗೆ

ಚಿತ್ರ ಪಠದ ಅಂದಾಜೇ ಇಲ್ಲ ತಿರುವುಮೂತಿ ಹನುಮಂತನಿಗೆ

ಕರಿಯ ಮುಸುಕಲ್ಲಿ ಬಿಂಬಗ್ರಾಹಿ ಮಂದ್ರದಲ್ಲಿ ಗೊಣಗಿದ ಹೀಗೆ:

` ಹೆಗಲ ಬಿಲ್ಲ ಕೆಳಗಿಳಿಸಿರಿ ಸ್ವಾಮಿ, ಜಾಗ ಉಂಟು ಇನ್ನೊಬ್ಬರಿಗೆ!~

ಘಿಟ್ಟನೆ ನೆನಪು ಸೇತುರಾಮನಿಗೆ ಮರಳು ಸೇವೆಯ ಅಳಿಲುಮರಿ!

ರಾಮ ಧ್ಯಾನಿಸಿದ: ಮರುಕ್ಷಣದಲ್ಲಿ ಅಳಿಲಿದೆ ಆತನ ಹೆಗಲಲ್ಲಿ

       ಡಾ. ಎಚ್.ಎಸ್. ವೆಂಕಟೇಶಮೂರ್ತಿ 

(ಉತ್ತರಾಯಣ ಮತ್ತು... ಕವನ ಸಂಕಲನದಿಂದ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.