ಸೋಮವಾರ, ಜನವರಿ 20, 2020
18 °C

ಷಟಲ್‌ ಬ್ಯಾಡ್ಮಿಂಟನ್‌ ಪ್ರತಿಭೆಗಳು

–ಶ.ಗ. ನಯನತಾರಾ. Updated:

ಅಕ್ಷರ ಗಾತ್ರ : | |

ಶನಿವಾರಸಂತೆ: ಇಲ್ಲಿಯ ಅನೇಕ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿದ್ದಾರೆ. ಇದೀಗ ಅಂಥವರ ಸಾಲಿಗೆ ಪವಿತ್ರ ಹೃದಯ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಸೇರ್ಪಡೆಯಾಗಿದ್ದಾರೆ.ಎಸ್‌.ಕೆ. ಜನನಿ ಮತ್ತು ಎನ್‌.ಪಿ. ಶಾಲಿನಿ ಷಟಲ್‌ ಬ್ಯಾಡ್ಮಿಂಟನ್‌ ಕ್ರೀಡಾ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ಡಿ. 5ರಂದು ಗುರುವಾರ ಚಂಡೀಘಡದಲ್ಲಿ ಆರಂಭವಾದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.ಗ್ರಾಮ ಪಂಚಾಯಿತಿ ಸದಸ್ಯ ಆರ್‌.ವಿ. ಕುಮಾರ್‌ ಮತ್ತು ಸುಮತಿ ದಂಪತಿಯ ಪುತ್ರಿ ಎಸ್‌.ಕೆ. ಜನನಿ. ಶಿಕ್ಷಕ ಸಿ.ಎಲ್‌. ಪುಟ್ಟರಾಜು ಮತ್ತು ಮಂಜುಳಾ ದಂಪತಿಯ ಪುತ್ರಿ ಎನ್‌.ಪಿ. ಶಾಲಿನಿ ಸತತ 3 ವರ್ಷಗಳಿಂದ ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟದ ಪ್ರಶಸ್ತಿಗಳು, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಗಣರಾಜ್ಯೋತ್ಸವ ಪ್ರಶಸ್ತಿ, ವಿಭಾಗ ಮಟ್ಟದಲ್ಲಿ ಪ್ರಥಮ, ರಾಜ್ಯಮಟ್ಟದ ಡಬಲ್ಸ್‌ನಲ್ಲಿ ಪ್ರಥಮ, ಸಿಂಗಲ್ಸ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.2013–14ರ ಸಾಲಿನ ಶಿಕ್ಷಣ ಇಲಾಖೆ ನಡೆಸುವ ಷಟಲ್‌ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ನಡೆಸುವ ಸ್ಪರ್ಧೆಯಲ್ಲಿ ಜಿಲ್ಲೆಗೆ. ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಶನಿವಾರಸಂತೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಈ ಇಬ್ಬರು ಕ್ರೀಡಾಪ್ರತಿಭೆಗಳನ್ನು ಗುರುತಿಸಿ ₨ 7 ಸಾವಿರ ಮೌಲ್ಯದ ಷಟಲ್‌ ಬ್ಯಾಡ್ಮಿಂಟನ್‌ ರ್‌ಯಾಕೆಟ್‌ಗಳನ್ನು ನೀಡಿ ಗೌರವಿಸಿದ್ದಾರೆ. ಆದರೆ, ಜಿಲ್ಲಾಡಳಿತ ತಮಗೆ ಪ್ರೋತ್ಸಾಹ ನೀಡಲಿಲ್ಲ ಎಂದು ವಿದ್ಯಾರ್ಥಿನಿಯರಿಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.ಕ್ರೀಡಾರಂಗದಲ್ಲಿ ಮಿನುಗುತ್ತಿರುವ ಈ ಪುಟ್ಟ ಕ್ರೀಡಾ ಪ್ರತಿಭೆಗಳನ್ನು ಜಿಲ್ಲಾಡಳಿತ ಗುರುತಿಸಿ ಗೌರವಿಸಿದರೆ ಮುಂದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಮಿನುಗುವ ಸಾಧ್ಯತೆ ಇದೆ ಎನ್ನುತ್ತಾರೆ ನಾಗರಿಕರು.

 

ಪ್ರತಿಕ್ರಿಯಿಸಿ (+)