ಮಂಗಳವಾರ, ಜೂನ್ 22, 2021
27 °C

ಷರೀಫ್‌ ಮನವೊಲಿಕೆಗೆ ಸಿದ್ದರಾಮಯ್ಯ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೋಕಸಭಾ ಚುನಾ­ವ­ಣೆಗೆ ಟಿಕೆಟ್‌ ನಿರಾಕರಿಸಿ­ರು­ವು­ದರಿಂದ ಕಾಂಗ್ರೆಸ್‌ ನಾಯಕರ ವಿರುದ್ಧ ಮುನಿಸಿ­ಕೊಂಡಿರುವ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್‌ ಷರೀಫ್‌ ಅವರನ್ನು ಸೋಮ­ವಾರ ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ದ­ರಾಮಯ್ಯ ಮನ­ವೊಲಿಕೆ ಯತ್ನ ಮಾಡಿ­ದರು. ಆದರೆ, ಗುಟ್ಟು ಬಿಟ್ಟುಕೊಡದ ಷರೀಫ್‌ ಮೆಕ್ಕಾ ಯಾತ್ರೆಯ ಬಳಿಕವೇ ನಿರ್ಧಾರ ಪ್ರಕ­ಟಿ­ಸು­ವುದಾಗಿ ಹೇಳಿದ್ದಾರೆ.ವಾರ್ತಾ ಸಚಿವ ಆರ್‌.ರೋಷನ್‌ ಬೇಗ್‌ ಅವರೊಂದಿಗೆ ಇಲ್ಲಿನ ಕೋಲ್ಸ್‌ ಪಾರ್ಕ್‌ನಲ್ಲಿರುವ ಷರೀಫ್‌  ನಿವಾಸಕ್ಕೆ ಸಂಜೆ ಭೇಟಿ ನೀಡಿದ ಸಿದ್ದ­ರಾ­ಮಯ್ಯ,  ಮಾತುಕತೆ ನಡೆಸಿ­ದರು. ಲೋಕ­­ಸಭಾ ಚುನಾವಣೆಗೆ ಟಿಕೆಟ್‌ ನೀಡದಿರುವ ಪಕ್ಷದ ನಿರ್ಧಾರ­ವನ್ನು ಕಡೆಗಣನೆ ಎಂಬುದಾಗಿ ಭಾವಿಸ­ದಂತೆ ಸಮಾ­ಧಾನ­­­ಪಡಿಸಲು ಪ್ರಯತ್ನಿಸಿ­ದರು. ಪಕ್ಷ  ತೊರೆಯುವ ನಿರ್ಧಾರ ಕೈಗೊಳ್ಳ­ದಂತೆಯೂ ಮನವಿ ಮಾಡಿದರು.ನಗರದ ಖಾಸಗಿ ಹೋಟೆಲ್‌ ಒಂದ­ರಲ್ಲಿ ಸೋಮವಾರ ಬೆಳಿಗ್ಗೆ ಮುಸ್ಲಿಂ ಧಾರ್ಮಿಕ ಮುಖಂಡರ ಸಭೆ ನಡೆಸಿದ ಷರೀಫ್‌, ಮುಂದಿನ ರಾಜಕೀಯ ನಡೆ ಕುರಿತು ಸಮಾಲೋಚಿ­ಸಿದರು. ಬೆಂಗ­ಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಚುನಾ­ವಣೆ ಎದುರಿಸುವ ಆಕಾಂಕ್ಷಿ­ಯಾ­ಗಿದ್ದ ತಮಗೆ ಪಕ್ಷದ ಮುಖಂಡರು ಟಿಕೆಟ್‌ ನಿರಾಕರಿಸಿದ್ದರಿಂದ ಬೇಸರ­ವಾ­ಗಿದೆ ಎಂದು ಅವರು ಈ ಸಂದರ್ಭ­ದಲ್ಲಿ ಹೇಳಿಕೊಂಡಿದ್ದಾರೆ. ಜೆಡಿಎಸ್‌ ಪಕ್ಷ­ದಿಂದ ಆಹ್ವಾನ ಬಂದಿರುವ ವಿಚಾರ­­ವನ್ನೂ  ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.ಮುಂದಿನ ರಾಜಕೀಯ ನಡೆಯ ವಿಷಯದಲ್ಲಿ ದುಡುಕಿನ ನಿರ್ಧಾರ­ವನ್ನು ಕೈಗೊಳ್ಳದಂತೆ ಧಾರ್ಮಿಕ ಮುಖಂಡರು ಷರೀಫ್‌ ಅವರಿಗೆ ಸಲಹೆ ಮಾಡಿದ್ದಾರೆ. ಕಾಂಗ್ರೆಸ್‌ ತೊರೆಯುವ ವಿಷಯದಲ್ಲಿ ಪುನಃ ಪರಿಶೀಲನೆ ನಡೆಸಿ ನಿರ್ಣಯಕ್ಕೆ ಬರುವಂತೆ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.ಬಳಿಕ ಪತ್ರಕರ್ತರ ಜೊತೆ ಮಾತ­ನಾಡಿದ ಷರೀಫ್‌, ‘ಜಾತ್ಯತೀತ ಶಕ್ತಿ­ಗಳನ್ನು ಬಲಪಡಿಸುವ ಬಗ್ಗೆ ಸಭೆ­ಯಲ್ಲಿ ತೀರ್ಮಾನ ಕೈಗೊಳ್ಳ­ಲಾಗಿದೆ. ನಾನು ಮೆಕ್ಕಾ ಯಾತ್ರೆ ಬಳಿಕವೇ ಮುಂದಿನ ರಾಜಕೀಯ ನಿರ್ಧಾರ­­ವನ್ನು ಪ್ರಕಟಿಸುತ್ತೇನೆ’ ಎಂದರು.ಮುಖ್ಯಮಂತ್ರಿಯವರ ಭೇಟಿ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿಯವರ ಬಂದು, ಹೋದರು. ಅವರ ಜೊತೆ ನಡೆದ ಸಭೆಯ ವಿವರಗಳನ್ನು ಮಾಧ್ಯಮ­ಗಳಿಗೆ ಬಹಿರಂಗ­ಪಡಿಸಲು ನಾನು ಇಚ್ಛಿ­ಸುವುದಿಲ್ಲ’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.