ಷೇರುಪೇಟೆ ಸೂಚ್ಯಂಕ ದಾಖಲೆ ಜಿಗಿತ

ಮುಂಬೈ(ಪಿಟಿಐ): ದೇಶದ ಪ್ರಮುಖ ಷೇರುಪೇಟೆಯಲ್ಲಿ ಸೋಮವಾರ ಅಭೂತಪೂರ್ವ ಜಿಗಿತ. ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್ಇ) ಸಂವೇದಿ ಸೂಚ್ಯಂಕ, ಇದೇ ಮೊದಲ ಬಾರಿಗೆ 22 ಸಾವಿರ ಅಂಶಗಳ ಗಡಿ ದಾಟಿ 22,024 ಅಂಶಗಳ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿತ್ತು. ನಂತರ 21,934 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು.
ಸೋಮವಾರದ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ ಗಳಿಸಿದ್ದ ಕೇವಲ 15 ಅಂಶಗಳೇ ಆಗಿದ್ದರೂ, ಅದು ಪ್ರಪ್ರಥಮ ಬಾರಿಗೆ 22 ಅಂಶಗಳಾಚೆಗೆ ಇಣುಕಿ ನೋಡಿದ್ದು ಷೇರುಪೇಟೆಯ ಪಾಲಿಗೆ ರೋಮಾಂಚನದ ಕ್ಷಣವಾಗಿತ್ತು.
ಪ್ರಮುಖ ಸರಕು ಉತ್ಪಾದನಾ ಕಂಪೆನಿಗಳ ಷೇರು, ರಿಯಲ್ ಎಸ್ಟೇಟ್ ಉದ್ಯಮ, ಬ್ಯಾಂಕಿಂಗ್ ಮತ್ತು ತೈಲ ಶುದ್ಧೀಕರಣ ಕ್ಷೇತ್ರದ ಕಂಪೆನಿಗಳ ಷೇರುಗಳು ದಿನದ ವಹಿವಾಟಿನಲ್ಲಿ ಮೇಲ್ಮುಖವಾಗಿ ಸಾಗಿದವು. ಐ.ಟಿ, ಔಷಧ ತಯಾರಿಕೆ ಮತ್ತು ತಂತ್ರಜ್ಞಾನ ಹಾಗೂ ಲೋಹ ಉದ್ಯಮ ವಲಯದ ಕಂಪೆನಿಗಳ ಷೇರುಗಳ ಮಾತ್ರ ಸಾಧನೆ ತೋರಲಾರದೆ ಸೊರಗಿದವು.
ಎಚ್ಡಿಎಫ್ಸಿ ಬ್ಯಾಂಕ್, ಎಲ್ ಅಂಡ್ ಟಿ, ರಿಲಯನ್ಸ್ ಇಂಡಸ್ಟ್ರೀಸ್ ಲಿ., ಮಹೀಂದ್ರಾ ಅಂಡ್ ಮಹೀಂದ್ರಾ, ಎಸ್ಬಿಐ, ಮಾರುತಿ ಸುಜುಕಿ, ಹಿಂದೂಸ್ತಾನ್ ಯುನಿಲಿವರ್ ಲಿ. ಹೆಚ್ಚಿನ ಲಾಭ ಮಾಡಿಕೊಂಡವು.
ಟಿಸಿಎಸ್, ಇನ್ಫೊಸಿಸ್, ಟಾಟಾ ಮೋಟಾರ್ಸ್, ಐಟಿಸಿ, ಸನ್ ಫಾರ್ಮಾ, ಐಸಿಐಸಿಐ ಬ್ಯಾಂಕ್, ಡಾ. ರೆಡ್ಡೀಸ್, ಗೇಲ್ ಇಂಡಿಯಾ, ಟಾಟಾ ಸ್ಟೀಲ್, ವಿಪ್ರೊ, ಕೋಲ್ ಇಂಡಿಯಾ ಕಂಪೆನಿ ಷೇರುಗಳು ಕುಸಿತ ಕಂಡವು.
ಇನ್ನೊಂದೆಡೆ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್ಎಸ್ಇ) ‘ನಿಫ್ಟಿ’ಯೂ 10.60ರಷ್ಟು ಅಲ್ಪ ಸಾಧನೆ ತೋರಿ 6,537.25 ಅಂಶಗಳಷ್ಟು ಮೇಲ್ಮಟ್ಟದಲ್ಲಿ ವಹಿವಾಟಿಗೆ ಕೊನೆ ಹೇಳಿತು. ಅದಕ್ಕೂ ಮುನ್ನ ವಹಿವಾಟಿನ ಒಂದು ಹಂತದಲ್ಲಿ 6,562.20 ಅಂಶ ಗಳವರೆಗೂ ಏರಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.