ಮಂಗಳವಾರ, ಜನವರಿ 28, 2020
20 °C

ಸಂಗೀತ ಶಿಕ್ಷಣಕ್ಕೆ ರೆಹಮಾನ್‌ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಗೀತ ಶಿಕ್ಷಣಕ್ಕೆ ರೆಹಮಾನ್‌ ಒತ್ತಾಯ

‘ಭಾರತದಲ್ಲಿ ಮಕ್ಕಳಿಗೆ ಸರಿಯಾದ ಸಂಗೀತ ಶಿಕ್ಷಣ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಸುಸಜ್ಜಿತ ಸಂಗೀತ ಶಾಲೆಗಳ ಅಗತ್ಯವಿದೆ’ ಎಂದು ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ ಅಭಿಪ್ರಾಯಪಟ್ಟಿದ್ದಾರೆ.ಅಮೆರಿಕದಲ್ಲಿ ನೆಲೆಸಿರುವ ರೆಹಮಾನ್ ಇತ್ತೀಚೆಗೆ ಮಳಿಗೆಯೊಂದರ ಉದ್ಘಾಟನೆಗೆ ಭಾರತಕ್ಕೆ ಬಂದಿದ್ದರು. ‘ಸಂಗೀತ ಶಿಕ್ಷಣ ಎಂದರೆ ಪಾಠದ ಒತ್ತಡ ಮರೆಸುವ ಪಠ್ಯೇತರ ಚಟುವಟಿಕೆ ಎಂಬ ನಂಬಿಕೆ ಇದೆ. ಆದರೆ ಮಗುವೊಂದು ಸಂಗೀತದಲ್ಲಿ ಆಸಕ್ತಿ ಹೊಂದಿದೆ ಎಂದರೆ ಅದಕ್ಕೆ ಪರಿಪೂರ್ಣವಾದ ಸಂಗೀತ ಶಿಕ್ಷಣದ ಅವಶ್ಯಕತೆ ಇರುತ್ತದೆ. ಅದನ್ನು ನಾವು ಪೂರೈಸಬೇಕಿದೆ. ಸಂಗೀತ ಶಿಕ್ಷಣ ಬಹುಮುಖ್ಯ ಎಂಬ ಸಂಗತಿ ಭಾರತೀಯ ಪೋಷಕರಿಗೆ ಅರ್ಥವಾಗಬೇಕಿದೆ’ ಎನ್ನುವುದು ರೆಹಮಾನ್‌ ಅವರ ಅಭಿಪ್ರಾಯ.ರೆಹಮಾನ್‌ ಅವರು 2008ರಲ್ಲಿ ‘ಕೆ.ಎಂ. ಮ್ಯೂಸಿಕ್‌ ಕನ್ಸರ್ವೇಟರಿ’ ಎಂಬ ಸಂಗೀತ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಇದೀಗ ಇದೇ ಮಾದರಿಯ ಶಾಲೆಗಳನ್ನು ದುಬೈ, ಮಲೇಷ್ಯಾದಲ್ಲೂ ಆರಂಭಿಸುವ ಇರಾದೆ ಅವರದ್ದು.‘ಸಂಗೀತ ಶಾಲೆ ಸ್ಥಾಪಿಸಿ ಅಲ್ಲಿ ಒಬ್ಬರನ್ನು ಕೂರಿಸಿದರೆ ಉದ್ದೇಶ ಈಡೇರುವುದಿಲ್ಲ. ಸ್ಥಾಪಿಸಿದವರಿಗೆ ಸ್ವತಃ ತಾವೇ ಕಲಿಸುವ ಮನಸ್ಸೂ ಇರಬೇಕು. ಸಂಗೀತದ ವಿದ್ಯಾರ್ಥಿಗಳಿಗೆ ನಾವು ಸದಾ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಅಲ್ಲಿನ ಆಗುಹೋಗುಗಳ ಕುರಿತ ಮಾಹಿತಿಯೂ ಇರಬೇಕು. ಇದು ನನ್ನ ಉದ್ದೇಶ.ಮಕ್ಕಳನ್ನು ಮನೆಯಲ್ಲಿ ಹೇಗೆ ಎಚ್ಚರದಿಂದ ನೋಡಿಕೊಳ್ಳುತ್ತೇವೆಯೋ ಹಾಗೆಯೇ ಸಂಗೀತ ಶಾಲೆಯಲ್ಲೂ ನೋಡಿಕೊಳ್ಳುವ ಅಗತ್ಯವಿದೆ’ ಎಂದು ಸಂಗೀತ ಶಾಲೆಯ ರೂಪುರೇಷೆಯನ್ನು ರೆಹಮಾನ್‌ ವಿವರಿಸಿದ್ದಾರೆ.

ಪ್ರತಿಕ್ರಿಯಿಸಿ (+)