ಭಾನುವಾರ, ಮೇ 22, 2022
21 °C

ಸಂಚಲನ ಮೂಡಿಸಿದ ತಾಜಾ ಬಂಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಟಾ: ಮಳೆ ಗಣನೀಯವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕಳೆದ ಎರಡು ಮೂರು ದಿವಸಗಳಿಂದ ಕುಮಟಾ ಮಾರುಕಟ್ಟೆಗೆ ದೋಣಿಯಲ್ಲಿ ಹಿಡಿದ ತಾಜಾ ಬಂಗಡೆ ಆಗಮಿಸುತ್ತಿರುವುದು ಮೀನು ತಿನ್ನುವವರಲ್ಲಿ ಸಂಚಲನ ಮೂಡಿಸಿದೆ.ಮಳೆ ಕಡಿಮೆಯಾದ ಅವಕಾಶ ಬಳಸಿಕೊಂಡು 10 ಎಚ್‌ಪಿ ವರೆಗಿನ ಎಂಜಿನ್ ಹೊಂದಿರುವ ದೋಣಿಗಳವರು ಸಮುದ್ರಕ್ಕೆ ಇಳಿದು ಬಂಗಡೆ, ದೋಡಿ, ಬೆಳ್ಳಂಜಿ ಮೀನು ತರುತ್ತಿದ್ದಾರೆ. ಹಸಿರು ಮಿಶ್ರಿತ ಮಿರಮಿರನೆ ಮಿಂಚುವ  ತಾಜಾ ಬಂಗಡೆ  ಮಳೆಗಾಲದಲ್ಲಿ ಅತ್ಯಂತ ರುಚಿಕರವಾಗಿರುತ್ತದೆ. ಜುಲೈ, ಆಗಸ್ಟ್ ತಿಂಗಳಲ್ಲಿ ಬರುವ ಬಂಗಡೆ ಬಹಳ ದಿವಸಗಳ ನಂತರ ಈ ವರ್ಷ ಬರುವ ಮೊದಲ ಬಂಗಡೆ ಯಾಗಿರುವುದರಿಂದ ಅದಕ್ಕೆ ಸಹಜವಾಗಿ ಬೇಡಿಕೆ ಹೆಚ್ಚಿದೆ.

ಮಳೆಗಾಲದಲ್ಲಿ ಬಂಗಡೆ  ಬರುವಾಗ ಬೇರೆ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗದಿರುವುದೂ ಬೇಡಿಕೆಗೆ ಇನ್ನೊಂದು ಕಾರಣವಾಗಿದೆ. ಸೋಮವಾರ  ಕೆಲವರು ಮೀನು ತಿನ್ನುವ ದಿನವಲ್ಲದ್ದರಿಂದ ಸಂಜೆ ವೇಳೆಗೆ ಬಂಗಡೆ ನೂರು ರೂಪಾಯಿಗೆ ನಾಲ್ಕರಂತೆ ಮಾರಾಟವಾಯಿತು. ರಾತ್ರಿ ಎಂಟು ಗಂಟೆಯ ಹೊತ್ತಿಗೆ ಅದು ಎಂಟಕ್ಕೆ ಏರಿತು.

ಮಂಗಳವಾರ ಹೆಚ್ಚಾಗಿ ಎಲ್ಲರೂ ಮೀನು ತಿನ್ನುವ ವಾರವಾಗಿರುವುದರಿಂದ ಹಾಗೂ ಬೆಳಿಗ್ಗೆ  ಹೆಚ್ಚಿನ ಪ್ರಮಾಣದಲ್ಲಿ ಬಂಗಡೆ ಮಾರುಕಟ್ಟೆಗೆ ಬಂದಿದ್ದರಿಂದ 100 ರೂಪಾಯಿಗೆ ಆರರಂತೆ ಹಾಗೂ ಸಂಜೆಯಾಗುತ್ತಿದ್ದಂತೆಯೇ ಎಂಟರಂತೆ ಮಾರಾಟವಾಗಿದೆ.ಮಾರುಕಟ್ಟೆಗೆ ಬಂಗಡೆ ಬರತೊಡಗಿದಂತೆ ಕಚೇರಿ, ಪೇಟೆ, ರಸ್ತೆಯಲ್ಲಿ  ಜನರಿಗೆ  ಮಾರುಕಟ್ಟೆಗೆ ಬಂದ ಬಂಗಡೆ  ಪ್ರಮಾಣ, ಅದರಲ್ಲಿ  ದರದಲ್ಲಾದ ಏರಿಳಿತ ಬಗ್ಗೆಯೇ ಚರ್ಚೆ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.