ಸಂತಪುರ: ನೀಗದ ನೀರಿನ ಸಮಸ್ಯೆ

ಔರಾದ್: ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರದಲ್ಲಿ ಒಂದಾದ ಸಂತಪುರದ ಕೆಲ ಗಲ್ಲಿಗಳಲ್ಲಿ ನೈರ್ಮಲ್ಯ ಸಮಸ್ಯೆ ಎದುರಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜಲ ನಿರ್ಮಲ ಯೋಜನೆ ಕಾಮಗಾರಿ ಆದರೂ ಕುಡಿಯುವ ನೀರಿನ ಬವಣೆ ಮಾತ್ರ ತಪ್ಪಿಲ್ಲ.
ದಲಿತ ಸಮುದಾಯದವರು ವಾಸಿಸುವ ಗಲ್ಲಿಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಆದ್ಯತೆ ನೀಡದೇ ಇರುವುದರಿಂದ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಇರುವ ಚರಂಡಿ ಗಳಲ್ಲಿ ಹೂಳು ತುಂಬಿಕೊಂಡಿದ್ದು, ಕೊಳಚೆ ನೀರು ಸುಗಮವಾಗಿ ಹರಿದು ಹೋಗುತ್ತಿಲ್ಲ. ಮಳೆಯಾದರೆ ಇಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.
ಹಲವು ವರ್ಷಗಳ ಹಿಂದೆ ನಿರ್ಮಿಸಲಾದ ಚರಂಡಿಗಳು ಹಾಳಾಗಿವೆ. ಕೆಲವರು ತಮ್ಮ ಮನೆ ಮುಂದಿನ ಚರಂಡಿಯನ್ನುಮುಚ್ಚಿ ಹಾಕಿದ್ದಾರೆ. ಇರುವ ಕೆಲವು ಚರಂಡಿಗಳಲ್ಲಿ ಹೂಳು ತೆಗೆಯಲಾಗಿಲ್ಲ. ಇದರಿಂದಾಗಿ ಜನ ಅನಾರೋಗ್ಯದ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.
‘ಗ್ರಾಮದ ಸಮಸ್ಯೆಗಳನ್ನು ಪಿಡಿಒ ಗಮನಕ್ಕೆ ತರಲಾಗಿದೆ. ಆದರೆ, ಸಮಸ್ಯೆ ಬಗೆಹರಿದಿಲ್ಲ’ ಎಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವಿಠಲ ಮರೆಪ್ಪ ಅಸಹಾಯಕತೆ ವ್ಯಕ್ತಪಡಿಸಿದರು.
‘ಗಲ್ಲಿಗೆ ಹಲವು ತಿಂಗಳಿನಿಂದ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಒಂದು ಕಿ.ಮೀ. ದೂರದಿಂದ ಕುಡಿಯಲು ನೀರು ತರಬೇಕಾಗಿದೆ. ತೆರೆದ ಬಾವಿಯಿದ್ದು, ಸುತ್ತಲೂ ಹೊಲಸು ನಾರುತ್ತಿದೆ. ಬಾವಿ ಸ್ವಚ್ಛಗೊಳಿಸುವಂತೆ ಪಂಚಾಯಿತಿಗೆ ಕೇಳಿದರೆ ಬಜೆಟ್ ಇಲ್ಲ ಎನ್ನುತ್ತಾರೆ’ ಎಂದು ಸ್ಥಳೀಯರಾದ ಸಿದ್ದಮ್ಮ ಬೇಸರ ವ್ಯಕ್ತಪಡಿಸಿದರು.
‘ಮಳೆಗಾಲ ಇದ್ದರೂ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಇದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜಲನಿರ್ಮಲ ಯೋಜನೆಯಡಿ ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆ ಕಾರ್ಯಗತವಾಗಿದೆ. ಆದರೆ ಒಮ್ಮೆಯೂ ಜನರಿಗೆ ಇದರಿಂದ ನೀರು ಪೂರೈಸಲಾಗಿಲ್ಲ’ ಎಂದು ಸಂತಪುರ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಸಿದ್ದಯ್ಯ ಸ್ವಾಮಿ ದೂರಿದರು.
‘15 ದಿನಗಳಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಬಹುತೇಕ ಎಲ್ಲ ಕೆರೆ, ಹಳ್ಳಗಳಲ್ಲಿ ನೀರು ಬಂದಿದೆ. ಹೀಗಾಗಿ ಜಲ ನಿರ್ಮಲ ಯೋಜನೆ ಕಾಮಗಾರಿ ಜಾರಿ ಮಾಡಿ ಸಂತಪುರ ಜನರಿಗೆ ಮಾಂಜ್ರಾ ನದಿ ನೀರು ಪೂರೈಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
*
ನಿರಂತರ ಮಳೆ ಮತ್ತು ಕಾರ್ಮಿಕರ ಕೊರತೆಯಿಂದ ಸ್ವಚ್ಛತಾ ಕಾರ್ಯ ಕುಂಠಿತಗೊಂಡಿದೆ. ಮಳೆ ಕಡಿಮೆಯಾದ ತಕ್ಷಣ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು. ವಾರದೊಳಗೆ ಜನರಿಗೆ ಜಲ ನಿರ್ಮಲ ಯೋಜನೆ ನೀರು ಪೂರೈಸಲಾಗುವುದು
-ಶಿವಕುಮಾರ ಘಾಟೆ,
ಪಿಡಿಒ, ಸಂತಪುರ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.