ಶನಿವಾರ, ಜನವರಿ 18, 2020
26 °C
ರಾಸು ಮಾಲೀಕರಿಗೆ ಪರಿಹಾರಧನ ವಿತರಣೆ

ಸಂತ್ರಸ್ತರಿಗೆ ರಾಸು ನೀಡಲು ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ:  ಬರದ ನಡುವೆಯೂ ಜಿಲ್ಲೆಯ ರೈತರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ರೈತರು ಪ್ರಯತ್ನಿಸುತ್ತಿದ್ದು, ಅವರಿಗೆ ಸೂಕ್ತ ರೀತಿ ಪ್ರೋತ್ಸಾಹ ಸಿಗುವ ಅಗತ್ಯವಿದೆ ಎಂದು ಶಾಸಕ ಡಾ. ಕೆ.ಸುಧಾಕರ್‌ ತಿಳಿಸಿದರು.ನಗರದಲ್ಲಿ ಸೋಮವಾರ ಕೋಲಾರ­–­­ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಸಹಯೋಗದಲ್ಲಿ ಪಶು­ಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಸು­ಗಳನ್ನು ಕಳೆದುಕೊಂಡ ರೈತರಿಗೆ ಪರಿಹಾರ ಧನದ ಚೆಕ್‌ಗಳನ್ನು ವಿತರಿಸಿ ಮಾತನಾಡಿದರು.ಕಾಲುಬಾಯಿ ರೋಗವು ದಕ್ಷಿಣ ಭಾರತದ ರಾಜ್ಯಗಳಲ್ಲಿ ವ್ಯಾಪಿಸಿದ್ದರೂ ನಮ್ಮ ರಾಜ್ಯದಲ್ಲಿ ಮಾತ್ರವೇ ರಾಜ್ಯ ಸರ್ಕಾರದ ವತಿಯಿಂದ ಪರಿಹಾರ ಧನ ನೀಡಲಾಗುತ್ತಿದೆ ಎಂದರು.ಪಶುವೈದ್ಯರ ಸೂಚನೆ ಮೇರೆಗೆ ನಿಯಮಿತವಾಗಿ ಲಸಿಕೆ ಹಾಕಿಸಿದ್ದಲ್ಲಿ, ರಾಸುಗಳು ದೀರ್ಘಕಾಲದವರೆಗೆ ಆರೋಗ್ಯಯುತವಾಗಿ ಬದುಕುತ್ತವೆ. ರೈತರು ಇವುಗಳ ಬಗ್ಗೆ ಮುಂಜಾಗ್ರತೆ ವಹಿಸಬೇಕು ಎಂದು ಅವರು ತಿಳಿಸಿದರು.ಕರ್ನಾಟಕ ಹಾಲು ಮಹಾಮಂಡಳಿ ನಿರ್ದೇಶಕ ಕೆ.ವಿ.ನಾಗರಾಜ್‌ ಮಾತ­ನಾಡಿ, ಕಾಲುಬಾಯಿ ರೋಗವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು ಪರಿಹಾರ ಧನದ ಬದಲು ರಾಸುಗಳನ್ನೇ ನೀಡಲು ಆಸಕ್ತಿ ತೋರಿದೆ. ಇದಕ್ಕಾಗಿ ಕೇಂದ್ರವು ಸುಮಾರು ₨ 28 ಕೋಟಿ ವೆಚ್ಚ ಮಾಡಲಿದ್ದು, ಇದರ ಬಗ್ಗೆ ಕೇಂದ್ರ ಸಚಿವ ಶರದ್‌ಪವಾರ್‌ ಜೊತೆ ಮಾತುಕತೆ ನಡೆಸಲಾಗಿದೆ ಎಂದರು.ಪರಿಹಾರ ಧನ ವಿತರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕರ್ನಾಟಕ ಹಾಲು ಮಹಾಮಂಡಳಿಯ ಸಹಕಾರ ಕೋರಿದ್ದರಿಂದ ಮಂಡಳಿ ವತಿಯಿಂದ ಸುಮಾರು 1.44 ಕೋಟಿ ರೂಪಾಯಿಯಷ್ಟು ಹಣ ಬಿಡುಗಡೆ ಮಾಡಲಾಗಿದೆ.ಇನ್ನೂ 46 ಲಕ್ಷ ರೂಪಾಯಿ ಬಿಡುಗಡೆಯಾಗಬೇಕಿದೆ. ಕೋಲಾರ–ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಮತ್ತು ಮಂಡಳಿ ಸಿಬ್ಬಂದಿ ತಮ್ಮ 3 ದಿನಗಳ ವೇತನ ಸಂಗ್ರಹಿಸಿ 7.65 ಲಕ್ಷ ರೂಪಾಯಿಗಳಷ್ಟು ಹಣ ಇದಕ್ಕೆ ವಿನಿಯೋಗಿಸಿದ್ದಾರೆ ಎಂದು ಅವರು ತಿಳಿಸಿದರು.ಪಶುಪಾಲನೆ ಮತ್ತು ಪಶು­ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಲ್.ಪ್ರಕಾಶ್‌ ಮಾತನಾಡಿದರು.

ಜಿ.ಪಂ.ಅಧ್ಯಕ್ಷ ಎಸ್.ಎನ್.ಚಿನ್ನಪ್ಪ ಅಧ್ಯಕ್ಷತೆ ವಹಿಸಿ­ದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಕೇಶವರೆಡ್ಡಿ, ಮುಖಂಡ ಪ್ರಕಾಶ್‌ರೆಡ್ಡಿ, ಕೋಲಾರ–ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ. ರವಿಶಂಕರ ಹೆಗಡೆ, ಉಪವ್ಯವಸ್ಥಾಪಕ ಡಾ. ಪಾಪೇಗೌಡ, ಪಶುವೈದ್ಯಕೀಯ ಇಲಾಖೆ ವೈದ್ಯರಾದ  ಡಾ. ವಿ.ಗೋವಿಂದಪ್ಪ, ಡಾ. ಆನಂದ ರೆಡ್ಡಿ, ಡಾ. ಕೃಷ್ಣಾರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)