ಬುಧವಾರ, ಜನವರಿ 29, 2020
27 °C

ಸಂತ್ರಸ್ತರ ಮನೆ ಬಿರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ: ತಾಲ್ಲೂಕಿನಲ್ಲಿ ಭೀಮಾ ಪ್ರವಾಹಕ್ಕೆ ಒಳಗಾದ 14 ಗ್ರಾಮಗಳಲ್ಲಿ  ಭೂಸೇನಾ ನಿಗಮ ಮತ್ತು ಇನ್ಫೋಸಿಸ್ ಸಂಸ್ಥೆಯ ಮೂಲಕ ಮನೆ ನಿರ್ಮಾಣ ಮಾಡಲಾಗಿದೆ.  ಇವುಗಳಲ್ಲಿ  ಕೆಲವು ಮನೆಗಳು ಬಿರುಕು ಬಿಟ್ಟಿವೆ. ಸಂತ್ರಸ್ತರು ಮನೆ ಸಿಕ್ಕರೂ ಸಂಕಟಪಡುವಂತಾಗಿದೆ.   ಭೂ ಸೇನೆ ನಿಗಮ ಮತ್ತು ಇನ್ಫೋಸಿಸ್ ಸಂಸ್ಥೆ 800 ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ಕೆಲವು ಮನೆಗಳು ವಾಸವಾಗುವ ಮೊದಲೇ ಅಲ್ಲಲ್ಲಿ ಬಿರುಕು ಬಿಡುತ್ತಿವೆ. ಕೂಡಿಗನೂರು ಗ್ರಾಮ ಸೇರಿದಂತೆ ಘತ್ತರಗಿ, ಹಾವಳಗಾ, ಹಿಂಚಗೇರಾ, ಭೋಸಗಾ, ಘೂಳನೂರ, ತೆಲ್ಲೂರ, ಶಿವಪೂರ, ಉಡಚಾಣ ಗ್ರಾಮಗಳಲ್ಲಿ ಮನೆಗೆ ಹಾಕಿರುವ ಮೇಲ್ಛಾವಣಿ  ಜೋತು ಬಿದ್ದಿವೆ. ಇನ್ನೂ ಕೆಲವು ಕಡೆ ಮನೆಗಳಿಗೆ ತಳಪಾಯ ಸರಿ ಹಾಕದ ಕಾರಣ  ಬಿರುಕು ಬಿಟ್ಟಿವೆ. ಹೀಗಾಗಿ ಅಂತಹ  ಮನೆಗಳಲ್ಲಿ  ವಾಸ ಮಾಡುವುದು ಹೇಗೆ? ಎಂಬ ಪ್ರಶ್ನೆ ಸಂತ್ರಸ್ತರು ಕೇಳುತ್ತಾರೆ.ಸರ್ಕಾರ  ಪ್ರತಿ ಮನೆಗೆ ಸುಮಾರು 1.20 ಲಕ್ಷ ರೂಪಯಿ ವೆಚ್ಚ ಮಾಡಿದೆ. ಪ್ರತಿ ವರ್ಷ ಭೀಮಾ ಪ್ರವಾಹ ಪ್ರವಾಹ ಬಂದಾಗ ಜನರು ಗುಳೆ ಹೋಗುತ್ತಿದ್ದರು. ಆತಂಕದಲ್ಲಿ ಜೀವನ ಸಾಗಿಸುತ್ತಿದ್ದರು. ಈಗ ಸರ್ಕಾರ ಮನೆ ಮಂಜೂರು ಮಾಡಿದ್ದರಿಂದ, ಅವರ ಆತಂಕ ದೂರಾಗಿದೆ ಎಂದು ಭಾವಿಸಿದರೆ ಸುಳ್ಳು ಎನ್ನುತ್ತಾರೆ ಅಲ್ಲಿನ ನಿವಾಸಿಗಳು.ಮನೆ ನಿರ್ಮಿಸಿದರೂ ಸಂತ್ರಸ್ತರಿಗೆ ಪ್ರಯೋಜನವಾಗಿಲ್ಲ. ಭೂಸೇನೆ ನಿಗಮ ಮತ್ತು ಇನ್ಫೋಸಿಸ್ ಸಂಸ್ಥೆ  ಉಪ ಗುತ್ತಿಗೆದಾರರಿಗೆ ಮನೆ ಕಟ್ಟಲು ನೀಡಿದ್ದರಿಂದ ಹೀಗಾಗಿದೆ ಎಂದು ಸಂತ್ರಸ್ತರು ದೂರಿದ್ದಾರೆ.ಮನೆಗಳಿಗೆ ನಿರ್ಮಾಣ ಮಾಡಿರುವ ರಸ್ತೆ, ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಚರಂಡಿ ನೀರು ಹರಿದು ಹೋಗುವ ಯಾವ ಯೋಜನೆಯೂ ಇಲ್ಲ. ಚರಂಡಿ ನೀರು ಹರಿದು ಹೋಗದೆ ಸಂಗ್ರಹವಾಗುತ್ತದೆ. ಹೀಗಾಗಿ ಮತ್ತಷ್ಟು ಪರಿಸರ ಹಾಳಾಗುತ್ತದೆ. ಸರ್ಕಾರ ಅದಕ್ಕಾಗಿ ಉದ್ಯೋಗ ಖಾತರಿಯಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿದರೂ ಪ್ರಯೋಜನವಾಗಿಲ್ಲ.  ಸಮರ್ಪಕವಾದ ಮೇಲ್ವಿಚಾರಣೆ ಇಲ್ಲದ ಪರಿಣಾಮ   ಕಳಪೆ ಮನೆ ನಿರ್ಮಾಣವಾಗಿದೆ ಎಂದು ನಿರಾಶ್ರಿತರು ಆರೋಪಿಸುತ್ತಾರೆ.ಶಾಸಕ ಮಾಲೀಕಯ್ಯಾ ಗುತ್ತೇದಾರ ಅವರು ಒಂದು ವಾರದ ಹಿಂದೆ ಪ್ರವಾಹ ಸಂತ್ರಸ್ತರಿಗೆ ಮನೆಗಳ ಹಕ್ಕು ಪತ್ರಗಳನ್ನು ವಿತರಣೆ ಮಾಡಿದ್ದಾರೆ. ವಿತರಣೆ ಮಾಡುವ ಸಂದರ್ಭದಲ್ಲಿ ಸಾಕಷ್ಟು ಕಡೆ ಭೂಸೇನಾ ನಿಗಮದವರು ಕಳಪೆ ಮಟ್ಟದ ಮನೆಗಳನ್ನು ನಿರ್ಮಾಣ ಮಾಡಿದ ಬಗ್ಗೆ ದೂರು ನೀಡಿದ್ದಾರೆ. ಅದಕ್ಕಾಗಿ ಶಾಸಕರು ಕಳಪೆ ಮನೆಗಳನ್ನು ದುರಸ್ತಿ ಮಾಡುವವರೆಗೆ ಮನೆಗಳ ಹಕ್ಕು ಪತ್ರಗಳನ್ನು ನೀಡುವುದಿಲ್ಲ ಎಂದು ಭೂಸೇನೆ ನಿಗಮ  ಅಧಿಕಾರಿಗಳಿಗೆ ತಾಕೀತು  ಮಾಡಿದ್ದಾರೆ.

 

ಪ್ರತಿಕ್ರಿಯಿಸಿ (+)