ಮಂಗಳವಾರ, ಮೇ 18, 2021
22 °C

ಸಂದರ್ಶನ: ಅನಾಥ ಶವಗಳ ಸಂಸ್ಕಾರ: ಛಲ ಬಿಡದ ತ್ರಿವಿಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮುಖ್ಯಮಂತ್ರಿಗಳ ಪ್ರಶಸ್ತಿ ಪದಕ ಹಾಗೂ ಕೆಂಪೇಗೌಡ ಪ್ರಶಸ್ತಿ ಪದಕಗಳೆರಡನ್ನೂ ಜೀವನೋಪಾಯಕ್ಕಾಗಿ ತಲಾ ಒಂಬತ್ತು ಸಾವಿರ ರೂಪಾಯಿಗಳಿಗೆ ಮಾರಿದೆ. ಆದರೆ, ನಾನು ಮತ್ತು ನನ್ನ ಕುಟುಂಬಕ್ಕೆ ಅನ್ನ ಕೊಡುವ ಈ ವಾಹನವನ್ನು ಯಾವುದೇ ಕಾರಣಕ್ಕೂ ಮಾರುವುದಿಲ್ಲ~.- ಇದು ಕಳೆದ 44 ವರ್ಷಗಳಿಂದ 77,882 ಅನಾಥ ಶವಗಳ ಸಂಸ್ಕಾರ ನಡೆಸಿರುವ `ತ್ರಿವಿಕ್ರಮ ಮಹದೇವ~ ಅವರ ಮನದಾಳದ ಮಾತು.ಮಹಾದೇವ ಅವರ ಸಾಮಾಜಿಕ ಕಳಕಳಿ ಹಾಗೂ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್‌ಎಫ್‌ಸಿ) ಸೋಮವಾರ ಉದಾರವಾಗಿ ನೀಡಿದ ಮಾರುತಿ ಓಮ್ನಿ ವಾಹನವನ್ನು ಸ್ವೀಕರಿಸಿದ ನಂತರ ಅವರು ತಮ್ಮ ಅನಿಸಿಕೆ ಹಂಚಿಕೊಂಡರು. ಅವರೊಂದಿಗೆ ನಡೆಸಿದ ಮಾತುಕತೆ ವಿವರ ಇಲ್ಲಿದೆ.

 

ಕೆಎಎಸ್ ಅಧಿಕಾರಿಯಾಗುವ ಬಯಕೆ
`ನನಗೆ ಕೆಎಎಸ್ ಅಧಿಕಾರಿಯಾಗುವ ಬಯಕೆಯಿದೆ. ಭವಿಷ್ಯದಲ್ಲಿ ಯಾವುದೇ ವೃತ್ತಿ ಮಾಡಿದರೂ ಪ್ರತಿ ದಿನ ಅಪ್ಪನ ಜತೆ ಮೂರ‌್ನಾಲ್ಕು ಶವಗಳ ಸಂಸ್ಕಾರ ಮಾಡುತ್ತೇನೆ. ಯಾವ ಕೆಲಸಕ್ಕೆ ಸೇರಿದರೂ ಈ ವೃತ್ತಿ ಬಿಡುವುದಿಲ್ಲ. ಈ ಕೆಲಸ ಮಾಡುವುದಕ್ಕೆ ನನಗೆ ಸಂಕೋಚ ಅಥವಾ ಕೀಳರಿಮೆ ಯಾವುದೂ ಇಲ್ಲ~ ಎಂದು ತ್ರಿವಿಕ್ರಮ ಮಹದೇವ ಅವರ ಪುತ್ರ, ಸ್ನಾತಕೋತ್ತರ ಪದವೀಧರ (ಎಂ.ಎಸ್.ಡಬ್ಲ್ಯು.) ಪ್ರವೀಣ್ ಪ್ರತಿಕ್ರಿಯೆ ನೀಡಿದರು.

* ಕೆಎಸ್‌ಎಫ್‌ಸಿಯು ದಾನದ ರೂಪದಲ್ಲಿ ವಾಹನ ನೀಡಿರುವುದಕ್ಕೆ ಏನನ್ನಿಸುತ್ತಿದೆ?

`ನನಗೆ ಹಲವು ಸಂಘ-ಸಂಸ್ಥೆಗಳಿಂದ ಅನೇಕ ಪ್ರಶಸ್ತಿ ಹಾಗೂ ಗೌರವಗಳು ಸಿಕ್ಕಿವೆ. ಆದರೆ, ನನ್ನ ಸೇವೆಯನ್ನು ಗುರುತಿಸಿ ಕೆಎಸ್‌ಎಫ್‌ಸಿ ವಾಹನ ನೀಡಿದ್ದರ ಜತೆಗೆ ಸನ್ಮಾನ ನೀಡಿರುವುದು ಚಿನ್ನದ ಪದಕ ಪಡೆದಕ್ಕಿಂತಲೂ ಹೆಚ್ಚಿನ ಖುಷಿ ಸಿಕ್ಕಿದೆ.* ನಿಮ್ಮ ಬದುಕಿನ ಜಟಕಾ ಬಂಡಿ ಹೇಗೆ ಸಾಗುತ್ತಿದೆ?


ನಾನು ನನ್ನ ಕುಟುಂಬದೊಂದಿಗೆ ರಾಜರಾಜೇಶ್ವರಿ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದೇನೆ. ಮಗನನ್ನು ದಾನಿಗಳೇ ಸಹಾಯ ಮಾಡಿ ಎಂ.ಎಸ್. ಡಬ್ಲ್ಯು.ವರೆಗೆ ಓದಿಸಿದ್ದಾರೆ. ನಾನು ಮಗನ ಶಿಕ್ಷಣಕ್ಕಾಗಿ ಯಾವುದೇ ಶಾಲೆ- ಕಾಲೇಜಿನಲ್ಲಿ ಒಂದೇ ಒಂದು ರೂಪಾಯಿ ಶುಲ್ಕ ಕಟ್ಟಿಲ್ಲ. ಸದ್ಯಕ್ಕೆ ದೇವರ ದಯೆಯಿಂದ ಸಂತೋಷದಿಂದ ಜೀವನ ಸಾಗಿಸುತ್ತಿದ್ದೇನೆ.* ನೀವು ಶವ ಸಂಸ್ಕಾರ ಮಾಡಿದವರ ಪೈಕಿ ಪ್ರಮುಖ ವ್ಯಕ್ತಿಗಳ ಹೆಸರು ಜ್ಞಾಪಿಸಿಕೊಳ್ಳುತ್ತೀರಾ?


ಅಯ್ಯೋ, ಅಂತಹವರ ಹೆಸರು ಬಹಳಷ್ಟಿವೆ. ರಾಜೀವ್‌ಗಾಂಧಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಿವರಸನ್ ಕೂಡ ಒಬ್ಬ ಅನಾಥ. ನಟ ಅಮಿತಾಬ್ ಬಚ್ಚನ್ ಬೆಂಗಳೂರಿನಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆಸಿದಾಗ ಸಾವನ್ನಪ್ಪಿದ ಸಬ್ ಇನ್ಸ್‌ಪೆಕ್ಟರ್ ಶವವನ್ನೂ ನಾನೇ ಸಂಸ್ಕಾರ ಮಾಡಿದೆ. ಅದು ಸಬ್ ಇನ್ಸ್‌ಪೆಕ್ಟರ್ ಶವ ಎಂಬುದು ತಡವಾಗಿ ಗೊತ್ತಾಯಿತು. ಇಂತಹ ಪ್ರಕರಣಗಳು ಅದೆಷ್ಟೋ?* ನಗರದ ಸ್ಮಶಾನಗಳಲ್ಲಿ ವೈದ್ಯಕೀಯ ಕಾಲೇಜುಗಳ ಪ್ರಾಯೋಗಿಕ ಪರೀಕ್ಷೆಗಾಗಿ ಶವಗಳನ್ನು ಅಗೆದು ತೆಗೆಯಲಾಗುತ್ತಿದೆ ಎಂಬ ಆರೋಪಗಳಿವೆಯಲ್ಲಾ?

 ಖಂಡಿತಾ ಇಲ್ಲ. ಮೊದಲು ಈ ರೀತಿಯ ವದಂತಿಗಳಿದ್ದವು. ಅದು ನನ್ನ ಕಿವಿಗೂ ಬಿದ್ದಿತ್ತು. ಈಗಂತೂ ಇಲ್ಲ.* 77 ಸಾವಿರಕ್ಕೂ ಅನಾಥ ಶವಗಳ ಸಂಸ್ಕಾರ ಮಾಡಿದ್ದೀರಿ? ಇದುವರೆಗೆ ನಿಮ್ಮನ್ನು ದೆವ್ವ-ಭೂತ ಕಾಡಿಲ್ಲವೇ?

ನನಗೀಗ 51 ವರ್ಷ. ಕಳೆದ 44 ವರ್ಷಗಳಿಂದ ನಾನು ಈ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನನಗೆ ಒಂದು ದಿನವೂ ದೆವ್ವ- ಪ್ರೇತಾತ್ಮಗಳು ಕಾಡಿಲ್ಲ. ಎಲ್ಲಾದರೂ ದೆವ್ವ ಇದ್ದರೆ ಹೇಳಿ. ನಾನೇ ಹೋಗಿ ಮಾತನಾಡಿಸಿಕೊಂಡು ಬರುತ್ತೇನೆ.ಅನಾಥ ಶವಗಳನ್ನು ನಾನು ಎಂದಿಗೂ ಶವಗಳ ರೂಪದಲ್ಲಿ ಮಣ್ಣು ಮಾಡುವುದಿಲ್ಲ. ದೇವಸ್ಥಾನದಲ್ಲಿ ಹೇಗೆ ದೇವರ ವಿಗ್ರಹಗಳಿಗೆ ಪೂಜೆ ಮಾಡಲಾಗುತ್ತದೆಯೋ ಅದೇ ರೀತಿ ಮಣ್ಣು ಮಾಡುವಾಗಲೂ ಶವಗಳಿಗೆ ಪೂಜೆ ಸಲ್ಲಿಸಿ ಸಂಸ್ಕಾರ ಮಾಡಲಾಗುತ್ತದೆ. ಒಂದು ವೇಳೆ ಯಾರಾದರೂ ಅನಾಥ ಶವಗಳ ಬಗ್ಗೆ ಕೀಳಾಗಿ ಭಾವಿಸಿದ್ದರೆ ಅದು ಅವರ ತಪ್ಪು.* ನಗರದಲ್ಲಿ ಸ್ಮಶಾನಗಳ ಕೊರತೆ ಬಗ್ಗೆ ಏನು ಹೇಳುತ್ತೀರಿ?


ಹೌದು. ಒಂದೇ ಕಡೆ ಮೂರ‌್ನಾಲ್ಕು ಶವಗಳ ಸಂಸ್ಕಾರ ಮಾಡುತ್ತಿದ್ದೇನೆ. ಒಂದು ಹೆಣ ಹೂತ ಜಾಗದಲ್ಲಿಯೇ ಅಗೆದು ಒಂದರ ಮೇಲೊಂದು ಶವ ಸಂಸ್ಕಾರ ಮಾಡುತ್ತಿರುವುದಕ್ಕೆ `ಕರುಳು ಚುರ್~ ಅನಿಸುತ್ತೆ.* ಬಾಡಿಗೆ ಮನೆಯಲ್ಲಿ ವಾಸವಿದ್ದೀರಿ? ಸರ್ಕಾರದಿಂದ ಇನ್ನೇನಾದರೂ ನೆರವು ಬಯಸುತ್ತೀರಾ?

ನನಗೆ ದಾನಿಗಳು ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ ಮಾಡುತ್ತಲೇ ಇದ್ದಾರೆ. ಇನ್ನು ಮುಂದೆಯೂ ಸಹಾಯ ಸಿಗಲಿದೆ ಎಂಬ ವಿಶ್ವಾಸವಿದೆ.ಒಂದು ವೇಳೆ ದೇವರು-ಜನ ಕೈಬಿಟ್ಟರೂ ಸಂಸ್ಕಾರ ಮಾಡಿದ 77 ಸಾವಿರಕ್ಕೂ ಅಧಿಕ ಆತ್ಮಗಳು ಕೈಬಿಡುವುದಿಲ್ಲ ಎಂಬ ದೃಢ ನಂಬಿಕೆಯಿದೆ.ಕೆಎಸ್‌ಎಫ್‌ಸಿ ವ್ಯವಸ್ಥಾಪಕ ನಿರ್ದೇಶಕ ಮದನ್ ಗೋಪಾಲ್, ಕಾರ್ಯನಿರ್ವಾಹಕ ನಿರ್ದೇಶಕ ಎನ್.ಆರ್. ಶ್ರೀಧರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.