ಸಂಪರ್ಕ ನಿರೀಕ್ಷೆಯಲ್ಲಿ ಗ್ರಾಮಸ್ಥರು

ನಾಪೋಕ್ಲು: ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತು, ಬಲಮುರಿ, ಪಾರಾಣೆ ಗ್ರಾಮಗಳ ನಡುವಿನ ಸಂಪರ್ಕಕೊಂಡಿಯಾದ ಮಕ್ಕಿಕಡು ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ.
ಇನ್ನೂ ಒಂದು ಸ್ತಂಭ ಪೂರ್ಣಗೊಳಿಸಿ ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಇಲ್ಲಿನ ಬೇತು ಗ್ರಾಮ ಹಾಗೂ ಬಲಮುರಿ ಗ್ರಾಮಗಳ ನಡುವೆ ಕಕ್ಕಬ್ಬೆ ಹೊಳೆ ಹರಿಯುತ್ತಿದ್ದು ಎರಡು ಗ್ರಾಮಗಳ ನಡುವಿನ ಸಂಪರ್ಕಕ್ಕೆ ಅಡ್ಡಿಯಾಗಿತ್ತು. ನಾಪೋಕ್ಲುವಿನಿಂದ ಬಲಮುರಿ ಗ್ರಾಮಕ್ಕೆ ತೆರಳಲು ಜನರು ಸುತ್ತು ಬಳಸಿ ಸಾಗುತ್ತಿದ್ದರು. ಹೊಳೆ ಸೇತುವೆ ನಿರ್ಮಿಸಿದರೆ ಸಂಪರ್ಕ ಸುಲಭ ಎಂದು ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. ₹ 40 ಲಕ್ಷ ವೆಚ್ಚದ ಯೋಜನೆಯಡಿ ಸೇತುವೆ ನಿರ್ಮಾಣ ವೇನೋ ಆರಂಭಗೊಂಡಿತು. ಸೇತುವೆ ನಿರ್ಮಾಣ ಪಿಲ್ಲರ್ ನಿರ್ಮಾಣ ಸೇರಿದಂತೆ ಭಾಗಶಃ ಕೆಲಸ ಪೂರ್ಣಗೊಂಡಿದ್ದು ಇದೀಗ ಕಾಮಗಾರಿ ಸ್ಥಗಿತಗೊಂಡಿದೆ.
ಸಮೀಪದ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಕೊಳ ಗ್ರಾಮದಲ್ಲಿ ನಿರ್ಮಿಸಲಾದ ಮಾಚಿಕಾಡು ಸೇತುವೆ ಕಾಮಗಾರಿ ಪೂರ್ಣಗೊಳ್ಳದೇ ತಟಸ್ಥ ವಾಗಿದೆ. ಐಕೊಳ ಗ್ರಾಮವನ್ನು ಇಬ್ಬಾಗ ವಾಗಿಸಿ ಹರಿಯುತ್ತಿರುವ ಮುತ್ತಾರು ಮುಡಿ ಕಿರುಹೊಳೆಗೆ ಅಡ್ಡಲಾಗಿ ಮಾಚಿಕಾಡುವಿನಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. ಎರಡು ವರ್ಷಗಳ ಹಿಂದೆ ಆರಂಭಗೊಂಡ ಸೇತುವೆ ಕಾಮಗಾರಿ ಶೇ 90ರಷ್ಟು ಭಾಗ ಪೂರ್ಣಗೊಂಡಿದ್ದು ಇನ್ನುಳಿದ ಭಾಗವು ಅಪೂರ್ಣ ಸ್ಥಿತಿಯಲ್ಲಿದೆ.
ಸೇತುವೆ ನಿರ್ಮಿಸುವಂತೆ ಈ ವ್ಯಾಪ್ತಿಯ ಜನರ ಮನವಿಗೆ ಸ್ಪಂದನೆ ದೊರಕಿತಾದರೂ ಎರಡು ವರ್ಷಗಳಿಂದ ಪೂರ್ಣಗೊಳ್ಳದ ಸೇತುವೆಯಿಂದ ಗ್ರಾಮಸ್ಥರಿಗೆ ಪ್ರಯೋಜನವಿಲ್ಲದಾಗಿದೆ.
ಇನ್ನು ನಾಪೋಕ್ಲು– ಭಾಗಮಂಡಲ ನಡುವಿನ ದೊಡ್ಡ ಪುಲಿಕೋಟು, ಪೇರೂರು, ಸಣ್ಣ ಪುಲಿಕೋಟು, ಅಯ್ಯಂಗೇರಿ, ಕೋರಂಗಾಲ ಗ್ರಾಮಗಳ ಜನತೆ ಪ್ರತಿ ವರ್ಷ ಮಳೆಗಾಲದಲ್ಲಿ ಹಲವು ಸಮಸ್ಯೆಗಳಿಗೆ ಸಿಲುಕುತ್ತಾರೆ. ಭಾಗಮಂಡಲ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದಾಗ ಪ್ರವಾಹ ಬಂದು ಈ ಗ್ರಾಮಗಳು ದ್ವೀಪಗಳಾಗುತ್ತವೆ. ವಾಹನ ಸಂಪರ್ಕಗಳಿಲ್ಲದೇ ಅತ್ತ ಭಾಗಮಂಡಲಕ್ಕೂ ಇತ್ತ ನಾಪೋಕ್ಲು ವಿಗೂ ತೆರಳಲಾಗದೇ ತೊಂದರೆ ಅನುಭವಿಸುತ್ತಾರೆ.
ಬಲ್ಲಮಾವಟಿ ಮತ್ತು ಪುಲಿಕೋಟು ಗ್ರಾಮಗಳ ಮಧ್ಯೆ ಹರಿಯುವ ತಂಡ್ರ ಹೊಳೆ ನೀರಿನ ಪ್ರವಾಹ ಸೇತುವೆ ಮೇಲಿನಿಂದ ಹರಿಯುವುದೇ ಇದಕ್ಕೆ ಕಾರಣ. ಪ್ರಸ್ತುತ ಇರುವ ಸೇತುವೆಯು ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಲ್ಪಟ್ಟಿದ್ದು, ಶಿಥಿಲಾವಸ್ಥೆ ತಲುಪಿದೆ. ಇಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಒತ್ತಾಯ ಮಾಡುತ್ತಲೇ ಬಂದಿದ್ದು ಸೇತುವೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿದ್ದು ಬಿಟ್ಟರೆ ಬೇರೇನೂ ಆಗಿಲ್ಲ. ನಾಪೋಕ್ಲು– ಭಾಗಮಂಡಲ ನಡುವಿನ ತಂಡ್ರಹೊಳೆಗೆ ಶೀಘ್ರವೇ ಸೇತುವೆ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂಬುದು ಗ್ರಾಮಸ್ಥರ ಆಗ್ರಹ. ದೋಣಿಕಡು ಎಂಬಲ್ಲಿ ಕಾವೇರಿ ಹೊಳೆ ಕ್ರಮಿಸಲು ಗ್ರಾಮಸ್ಥರಿಗೆ ದೋಣಿಯೇ ಗತಿ.
ಇಲ್ಲೂ ಅಷ್ಟೇ. ಸೇತುವೆ ನಿರ್ಮಿಸಬೇಕೆಂಬ ಗ್ರಾಮಸ್ಥರ ಬೇಡಿಕೆ ಈಡೇರಿಲ್ಲ. ಗ್ರಾಮ–ಗ್ರಾಮಗಳ ನಡುವಿನ ಸಂಪರ್ಕ ನಿರೀಕ್ಷೆಯಲ್ಲಿ ಗ್ರಾಮಸ್ಥರು ದಿನಕಳೆಯುತ್ತಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.