ಶನಿವಾರ, ಜನವರಿ 18, 2020
20 °C

ಸಂಪೂರ್ಣ ಸಾಕ್ಷರತೆ ಸಾಧಿಸಲು ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ಭಾರತ ಪ್ರಪಂಚದಲ್ಲೇ ಅತಿವೇಗವಾಗಿ ಪ್ರಗತಿ ಪಥದಲ್ಲಿ ಸಾಗುತ್ತಿರುವ ದೇಶವಾಗಿದ್ದು, ಶೇ. 100ರಷ್ಟು ಸಾಕ್ಷರತೆ ಸಾಧಿಸುವುದರಿಂದ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.

ಪಟ್ಟಣದಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸರ್ಕಾರ ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡಿದ್ದು, ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮದ ಮೂಲಕ ಹಳ್ಳಿಗಾಡಿನ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿದೆ. ರಾಜ್ಯ ಸರ್ಕಾರವೂ ಶಿಕ್ಷಣಕ್ಕಾಗಿ ವರ್ಷಕ್ಕೆ ರೂ 12 ಸಾವಿರ ಕೋಟಿ ಖರ್ಚು ಮಾಡುತ್ತಿದ್ದು, ಸಾಕ್ಷರತೆ ಸಾಧಿಸಲು ಪ್ರಯತ್ನಿಸುತ್ತಿದೆ ಎಂದರು.ಮೂರೂವರೆ ವರ್ಷಗಳಲ್ಲಿ ತಾಲ್ಲೂಕು ಇನ್ನಿಲ್ಲದ ಅಭಿವೃದ್ಧಿ ಕಂಡಿದೆ. ಸುಮಾರು ರೂ 450 ಕೋಟಿ ವೆಚ್ಚದಲ್ಲಿ ಶಾಲಾ-ಕಾಲೇಜು, ರಸ್ತೆ, ಆಸ್ಪತ್ರೆ, ಕುಡಿಯುವ ನೀರಿನ ಯೋಜನೆಗಳು ಮತ್ತಿತರ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದಿದೆ. ನಿಸ್ವಾರ್ಥದಿಂದ ಕೆಲಸ ಮಾಡಿದರೆ ಮಾತ್ರ ನಿರೀಕ್ಷಿತ ಸಾಧನೆ ಮಾಡಬಹುದಾಗಿದ್ದು, ಎಲ್ಲರೂ ರಾಷ್ಟ್ರೀಯ ಭಾವೈಕ್ಯ ಹೊಂದಬೇಕು ಎಂದರು.ತಹಶೀಲ್ದಾರ್ ಬಿ.ಬಿ. ಸರೋಜಾ ಮಾತನಾಡಿ, ದೇಶದಲ್ಲಿ ಇನ್ನೂ ಹಸಿವು, ಬಡತನ, ಅನಕ್ಷರತೆ, ಭಯೋತ್ಪಾದನೆಯಂತಹ ಪಿಡುಗುಗಳು ಜೀವಂತವಾಗಿವೆ. ಎಲ್ಲರೂ ಸುಶಿಕ್ಷಿತರಾಗುವ ಮೂಲಕ ದೇಶದ ಪ್ರಗತಿಗೆ ಶ್ರಮಿಸಬೇಕು ಎಂದರು.

ನಿವೃತ್ತ  ಶಿಕ್ಷಕ ಬಾಬೂರಾವ್ ಅವರನ್ನು ಸನ್ಮಾನಿಸಲಾಯಿತು.

ಜಿ.ಪಂ. ಸದಸ್ಯ ಪಿ.ಆರ್. ಶಿವಕುಮಾರ್, ತಾ.ಪಂ. ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷೆ ಪಾರ್ವತಮ್ಮ, ರವಿ, ಕೃಷ್ಣಮೂರ್ತಿ, ಪ.ಪಂ. ಅಧ್ಯಕ್ಷೆ ಗೀತಾಕೃಷ್ಣಮೂರ್ತಿ, ಲಿಂಗರಾಜು, ಚನ್ನಕೇಶವ, ಕೆ.ಸಿ. ರಮೇಶ್, ಡಾ.ಎನ್.ಬಿ. ಸಜ್ಜನ್ ಇದ್ದರು.

ಅಸಮಾನತೆ ಹೋಗಲಾಡಿಸಿ

ಧರ್ಮಪುರ: ಸಾಮಾಜಿಕ ಅಸಮಾನತೆ ಹೋಗಲಾಡಿಸುವುದರ ಮೂಲಕ ದೇಶದಲ್ಲಿ ತಾಂಡವಾಡುತ್ತಿರುವ ಭಯೋತ್ಪಾದನೆ ಕಿತ್ತೊಗೆಯಬೇಕು ಎಂದು ಧರ್ಮಪುರ ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಎಸ್. ನರೇಂದ್ರಪ್ಪ ಹೇಳಿದರು.

ಇಲ್ಲಿನ ಪಂಚಲಿಂಗೇಶ್ವರ ಪದವಿಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗಣ ರಾಜ್ಯೋತ್ಸವ ಕಾರ್ಯಕ್ರದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಗಣರಾಜ್ಯೋತ್ಸವ ಬರೀ ಆಚರಣೆಗೆ ಸೀಮಿತವಾಗಿರದೆ, ಗುಣ ರಾಜ್ಯಗಳಾಗುವುದರ ಮೂಲಕ ಸಾಮಾಜಿಕ ಸಾಮರಸ್ಯವನ್ನು ಬಿತ್ತಬೇಕು. ಬಡತನ, ದಾರಿದ್ರ್ಯ, ನಿರುದ್ಯೋಗ ಸಮಸ್ಯೆ ಹೋಗಲಾಡಿಸುವಂತಾಗಬೇಕು ಎಂದರು.

ಪ್ರಾಂಶುಪಾಲ ಬಿ. ಶ್ರೀನಿವಾಸ್, ಉಪನ್ಯಾಸಕ ಬೊಪ್ಪಣ್ಣ, ಎಂ.ಎನ್. ರಂಗಸ್ವಾಮಿ, ವಿದ್ಯಾರ್ಥಿ ಚಿದಾನಂದ ಮಾತನಾಡಿದರು.

ಧರ್ಮಪುರ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ರಜಾಕ್ ಉರ್‌ರೆಹಮಾನ್, ಖಜಾಂಚಿ ಕಣುಮಪ್ಪ, ಬಸವರಾಜು, ತಿಪ್ಪೇಸ್ವಾಮಿ, ಗ್ರಾ.ಪಂ. ಸದಸ್ಯರಾದ ಹುಸೇನ್‌ಬೀ, ಅಮಾನುಲ್ಲಾ, ರಂಗಮ್ಮ, ಕೆ. ಪಾಂಡುರಂಗಪ್ಪ, ಲಕ್ಷ್ಮಿಕಾಂತ್ ಇದ್ದರು.

ಇಲ್ಲಿನ ಗ್ರಾ.ಪಂ.ನಲ್ಲಿ ಅಧ್ಯಕ್ಷೆ ಲಕ್ಷ್ಮೀದೇವಿ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಬುಡೇನ್, ಸದಸ್ಯರಾದ ಅಮಾನುಲ್ಲಾ, ರಂಗಮ್ಮ, ಹುಸೇನ್‌ಬೀ, ಗೋವಿಂದಪ್ಪ, ಹನುಮಂತರಾಯ, ರಾಜು, ಪ್ರಭುಪಟೇಲ್, ಪಿಡಿಒ ಶ್ರೀನಿವಾಸ್, ಕಾರ್ಯದರ್ಶಿ ಕಸ್ತೂರಿನಾಯ್ಕ ಇದ್ದರು.ದೇವರಕೊಟ್ಟ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-ಎಸ್‌ಡಿಎಂಸಿ ಅಧ್ಯಕ್ಷ ಮಂಜೇಶ್ ಧ್ವಜಾರೋಹಣ ನೆರವೇರಿಸಿದರು. ಕರವೇ ಹೋಬಳಿ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ನಾಗರಾಜು, ರುದ್ರೇಶ್, ಲಕ್ಷ್ಮಮ್ಮ, ಮುಖ್ಯ ಶಿಕ್ಷಕ ನಾರಾಯಣಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷೆ ಜಯಮ್ಮ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ಪ್ರತಿಕ್ರಿಯಿಸಿ (+)