ಭಾನುವಾರ, ಜೂಲೈ 12, 2020
29 °C

ಸಂವಿಧಾನವನ್ನೇ ಒಲ್ಲದ ಪ್ರವೃತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |
ಡಾ. ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದ ದಿನದಿಂದಲೂ ಪಟ್ಟಭದ್ರ ಆಸಕ್ತಿಗಳು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ವಿರೋಧವನ್ನು ದಾಖಲಿಸುತ್ತಲೇ ಬಂದಿವೆ. ಒಂದು ಹಂತದಲ್ಲಿ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಲೇ ಇಲ್ಲ ಎಂದು ಹೇಳುವವರೆಗೂ ಅವರ ವಿರೋಧ ದಾಖಲಾಗಿದೆ. ಅಂಬೇಡ್ಕರ್ ಭಾಗವಹಿಸಿದ್ದ ಸಂವಿಧಾನ ರಚನಾ ಸಮಿತಿಯ ಸಭೆಗಳ ಕಲಾಪಗಳ ಸುದೀರ್ಘ ಭಾಗಗಳಲ್ಲಿನ ಒಂದು ಅಕ್ಷರವನ್ನೂ ಓದದವರು ಮಾತ್ರ ಈ ರೀತಿ ವಿರೋಧ ವ್ಯಕ್ತಪಡಿಸಲು ಸಾಧ್ಯ.ಡಾ.ಅಂಬೇಡ್ಕರ್ ಸಂವಿಧಾನ ರಚನೆಯನ್ನು ಕೈಗೊಂಡು ಸಂವಿಧಾನದ ಕರಡುಪ್ರತಿಯನ್ನು ಸರ್ಕಾರಕ್ಕೆ ಸಲ್ಲಿಸಿದ ದಿನದಿಂದ ಇಂದಿನವರೆಗೂ ಯಥಾಸ್ಥಿತಿವಾದಿಗಳು ಸಂವಿಧಾನವನ್ನು ಅಸ್ಪೃಶ್ಯತೆಯಿಂದಲೇ ನೋಡುತ್ತಿರುವುದಕ್ಕೆ ಕಳೆದ 60 ವರ್ಷಗಳಲ್ಲಿನ ಅನೇಕ ಘಟನಾವಳಿಗಳು ಸಾಕ್ಷಿಯಾಗಿವೆ. ದೇಶದ ಸಂವಿಧಾನದ ಅಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿ ಹೈಕೋರ್ಟ್ ನ್ಯಾಯಮೂರ್ತಿಗಳು, ಮುಖ್ಯ ನ್ಯಾಯಮೂರ್ತಿಗಳು ಮತ್ತು ರಾಜ್ಯಪಾಲರಾಗಿದ್ದವರೇ ಸಂವಿಧಾನದ ಆಶಯಗಳಾದ ಪರಿಶಿಷ್ಟಜಾತಿ, ವರ್ಗ ಹಾಗೂ ಹಿಂದುಳಿದ ವರ್ಗಗಳಿಗೆ ನೀಡಬೇಕಾದ ಮೀಸಲಾತಿಯನ್ನು ವಿರೋಧಿಸುತ್ತಾ ಈಗಲೂ ಅನೇಕ ಪ್ರಕರಣಗಳಲ್ಲಿ ವಾದ ಮಂಡಿಸುವುದನ್ನು ಕಂಡಿದ್ದೇವೆ. ಅಂತೆಯೇ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ರ ವಿರುದ್ಧ ಸಂಘ ಪರಿವಾರದ ಪ್ರಮುಖರಾದ ಅರುಣ್ ಶೌರಿಯವರು ಬರೆದ ‘ವರ್ಷಿಪಿಂಗ್ ದ ಫಾಲ್ಸ್ ಗಾಡ್ಸ್’ ಎಂಬ ಪುಸ್ತಕದಲ್ಲಿನ ಯಾವುದೇ ಆಪಾದನೆಗಳನ್ನು ಈ ದಿನದವರೆಗೂ ಯಾವೊಬ್ಬ ಸಂಘ ಪರಿವಾರದ ನಾಯಕನೂ ಅಲ್ಲಗಳೆದಿಲ್ಲ ಎನ್ನುವುದು ಕೂಡಾ ನಿಜ.ಕರ್ನಾಟಕದ ಬಿಜೆಪಿ ಸರ್ಕಾರ ತನ್ನ ಆಗಮನದಿಂದಲೂ ಸತತವಾಗಿ ಸಂವಿಧಾನದ ಆಶಯಗಳಿಗೆ ತಣ್ಣೀರೆರಚುತ್ತಲೇ ಬರುತ್ತಿದೆ. ಇದಕ್ಕೆ ಉದಾಹರಣೆಯಾಗಿ ಸಂವಿಧಾನಬದ್ಧವಾದ ಅಧಿಕಾರವನ್ನು ಹೊಂದಿರುವ ರಾಜ್ಯಪಾಲರ ಮೇಲೆ ಕರ್ನಾಟಕದ ಬಿಜೆಪಿ ಸರ್ಕಾರ ಸತತವಾಗಿ ಸಮರ ಸಾರಿರುವುದನ್ನು ಈ ದಿನದಲ್ಲೂ ಕಾಣುತ್ತಿದ್ದೇವೆ. ಸರ್ಕಾರವೊಂದರ ಭ್ರಷ್ಟಾಚಾರ, ಅದಕ್ಷತೆ, ಸ್ವಜನಪಕ್ಷಪಾತ ಮತ್ತು ದಿಕ್ಕುತಪ್ಪಿದ ಕಾನೂನಿನ ಆಡಳಿತದಿಂದಾಗಿ ಎಲ್ಲವೂ ಅಸ್ತವ್ಯಸ್ತವಾಗಿರುವಾಗ ಸಂವಿಧಾನ ಅನುಷ್ಠಾನದ ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜ್ಯಪಾಲರು ಯಾವುದೇ ಪ್ರಶ್ನೆಯನ್ನು ಮಾಡಬಾರದು ಹಾಗೂ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಬಯಸುವುದು ಒಂದು ಫ್ಯಾಸಿಸ್ಟ್ ಧೋರಣೆಯ ಸರ್ಕಾರಕ್ಕೆ ಮಾತ್ರ ಸಾಧ್ಯ. ರಾಜ್ಯದ ಮುಖ್ಯಮಂತ್ರಿಗಳು ಮತ್ತು  ಮಂತ್ರಿಗಳು ಕಳೆದ ಎರಡೂವರೆ ವರ್ಷಗಳಿಂದ ಒಂದಲ್ಲ ಒಂದು ಹಗರಣಗಳಲ್ಲಿ ಸಿಕ್ಕಿಬೀಳುತ್ತಲೇ ಇದ್ದಾರೆ. ಅಕ್ರಮಗಣಿ, ಕೆಐಎಡಿಬಿ ಭೂ ಸ್ವಾಧೀನ ಹಗರಣ, ಬಿಡಿಎ ನಿವೇಶನಗಳ ಹಂಚಿಕೆ ಮೊದಲಾದ ಹಗರಣಗಳ ವಿರುದ್ಧ ರಾಜ್ಯಪಾಲರಾಗಲಿ ಅಥವಾ ಲೋಕಾಯುಕ್ತರಾಗಲೀ ದನಿಯೆತ್ತಿದರೆ ಅವರನ್ನು ಕೀಳುಭಾಷೆಯಲ್ಲಿ ಹೀಯಾಳಿಸಲು ಕೂಗುಮಾರಿಗಳ ಒಂದು ಪಡೆಯನ್ನೇ ಸರ್ಕಾರ ಇಟ್ಟುಕೊಂಡಿದೆ. ಲೋಕಾಯುಕ್ತರು ಮನನೊಂದು ರಾಜೀನಾಮೆ ನೀಡಿದ ಪ್ರಕರಣ, ನಂತರ ಸರ್ಕಾರ ತನ್ನ ಮುಖ ಉಳಿಸಿಕೊಳ್ಳಲು ಲೋಕಾಯುಕ್ತರ ರಾಜೀನಾಮೆ ವಾಪಸು ಪಡೆಯುವಂತೆ ಓಲೈಸಿದ ಪ್ರಹಸನಗಳು ಇದಕ್ಕೆ ಸಾಕ್ಷಿಯಾಗಿವೆ.ಸಂವಿಧಾನದತ್ತವಾಗಿ ತಮಗೆ ಸಿಕ್ಕ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಪ್ರಾಥಮಿಕ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾದ ಪರಿಸ್ಥಿತಿ ಒದಗಿದ ಸಚಿವರಾಗಿದ್ದ ರಾಮಚಂದ್ರಗೌಡ ಹಾಗೂ ಕಟ್ಟಾ ಸುಬ್ರಮಣ್ಯನಾಯ್ಡು ಅವರ ಪ್ರಕರಣಗಳು ಇನ್ನೂ ಜೀವಂತವಾಗಿವೆ. ಹೀಗಿದ್ದರೂ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು, ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತದ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡಿರುವದಕ್ಕೆ ಪ್ರಾಥಮಿಕ ಸಾಕ್ಷ್ಯಾಧಾರಗಳಿದ್ದರೂ ರಾಜೀನಾಮೆ ನೀಡದೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿರುವುದು ಸಂವಿಧಾನಕ್ಕೆ ಬಗೆಯುತ್ತಿರುವ ದ್ರೋಹವೆನಿಸುತ್ತದೆ. ಸಂವಿಧಾನದತ್ತ ಅಧಿಕಾರವನ್ನು ಹೊಂದಿದ ಸಭಾಧ್ಯಕ್ಷರನ್ನು ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಲು ಬಳಸಿಕೊಂಡಿದ್ದು ಹಾಗೂ ವಿಧಾನಸಭೆಯಲ್ಲಿ ಚರ್ಚೆಯೇ ಇಲ್ಲದೆ, ಏಕಮುಖವಾಗಿ ತನ್ನ ಬಹುಮತವನ್ನು ಸಾಬೀತುಪಡಿಸಿಕೊಂಡ ಪ್ರಹಸನಗಳು ಖಂಡಿತವಾಗಿಯೂ ಸಂವಿಧಾನ ವಿರೋಧಿ ಕ್ರಿಯೆಗಳೇ ಆಗಿವೆ. ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದ ಕಲಾಪಗಳಲ್ಲಿ ವಿರೋಧಪಕ್ಷಗಳ ವಿರೋಧದ ನಡುವೆಯೂ ಏಕಪಕ್ಷೀಯವಾಗಿ ಅನೇಕ ಮಸೂದೆಗಳನ್ನು ಚರ್ಚೆ ಇಲ್ಲದೆಯೇ ಅಂಗೀಕರಿಸಿದ್ದು ಕೂಡಾ ಸಂವಿಧಾನ ವಿರೋಧಿ ಕೃತ್ಯವೇ ಆಗಿದೆ.ಸಂವಿಧಾನದತ್ತವಾಗಿ ಅಧಿಕಾರ ಪಡೆದ ರಾಜ್ಯಪಾಲರು ಮತ್ತು ಲೋಕಾಯುಕ್ತರ ಸ್ಥಿತಿಗತಿಗಳೇ ಈ ರೀತಿಯದಾದರೆ ಇನ್ನು ಮಾನವಹಕ್ಕುಗಳ ಆಯೋಗದ ಸ್ಥಿತಿ ಚಿಂತಾಜನಕ. ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಗೆ ಸಿಕ್ಕಿ ಬದುಕುಗಳನ್ನು ಕಳೆದುಕೊಂಡ ಜನರಿಗೆ ಎರಡು ವರ್ಷವಾದರೂ ಪುನರ್ವಸತಿ ಕಲ್ಪಿಸಲಾರದ ಸರ್ಕಾರದ ಕರ್ತವ್ಯಲೋಪದ ವಿರುದ್ಧ ಧ್ವನಿಯೆತ್ತಿದ ಕಾರಣಕ್ಕೆ ನ್ಯಾಯಮೂರ್ತಿ ಎಸ್.ಆರ್.ನಾಯಕ್ ವಿರುದ್ಧ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಬಿಜೆಪಿ ಸರ್ಕಾರದ ದೆಹಲಿಯ ಪ್ರತಿನಿಧಿ ಅತ್ಯಂತ ನಿಕೃಷ್ಟವಾಗಿ ಮತ್ತು ವೈಯಕ್ತಿಕವಾಗಿ ವಾಗ್ದಾಳಿ ಮಾಡಿದರು. ಬೆಂಗಳೂರಿನ ಭಿಕ್ಷುಕರ ಪುನರ್ವಸತಿ ನಿಲಯದಲ್ಲಿ ಭಿಕ್ಷುಕರು ಪ್ರಾಣಿಗಳಂತೆ ನೂರಾರು ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾಗ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರಕ್ಕೆ ಸಲಹೆ ನೀಡಿದ್ದು ಕೂಡಾ ಮಾನವ ಹಕ್ಕುಗಳ ಆಯೋಗದ ನ್ಯಾಯಮೂರ್ತಿಗಳ ‘ಅಪರಾಧ’ವಾಗಿ ಹೋಯಿತು.‘ಮಂಡಲ್ ಪ್ರಕರಣ’ ಎಂದೇ ಪ್ರಖ್ಯಾತವಾದ ಇಂದ್ರ ಸಹಾನಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಎಲ್ಲಾ ರಾಜ್ಯಗಳಲ್ಲೂ ಹಾಗೂ ದೇಶದ ಕೇಂದ್ರಸ್ಥಾನದಲ್ಲಿ ‘ಶಾಶ್ವತ ಹಿಂದುಳಿದ ವರ್ಗಗಳ ಆಯೋಗ’ವನ್ನು ರಚಿಸಬೇಕೆಂದು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಲಾಯಿತು. ಆದರೆ ಬಿಜೆಪಿ ಸರ್ಕಾರ ಬಂದ ದಿನದಿಂದಲೂ ಹಿಂದುಳಿದ ವರ್ಗಗಳ ಆಯೋಗದ ಕೆಲಸಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಅಡ್ಡಿ ಆತಂಕಗಳನ್ನು ಸೃಷ್ಟಿಸುತ್ತಲೇ ಹೋಯಿತು. ಒಂದು ಹಂತದಲ್ಲಿ ಆಯೋಗವನ್ನು ವಿಸರ್ಜಿಸಬೇಕೆಂದು ಹೊರಟಾಗ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಸುಪ್ರೀಂಕೋರ್ಟ್ ಮೊರೆ ಹೋಗಿ ತಮ್ಮ ಸ್ಥಾನಮಾನ ಉಳಿಸಿಕೊಳ್ಳಬೇಕಾಯಿತು. ಅಂತೆಯೇ ಆಯೋಗದ ಜಾತಿವಾರು ಸಮೀಕ್ಷೆಯನ್ನು ನಡೆಸಲು ಕೂಡಾ ಸರ್ಕಾರ ಸಹಕರಿಸಲಿಲ್ಲ. ಮತ್ತೊಂದು ಹಂತದಲ್ಲಿ ಆಯೋಗದ ಅಧ್ಯಕ್ಷರು ಹೊಂದಿದ್ದ ಹೈಕೋರ್ಟ್ ನ್ಯಾಯಮೂರ್ತಿಯ ಸ್ಥಾನಮಾನವನ್ನು ರದ್ದುಪಡಿಸಿ, ಆ ಸ್ಥಾನವನ್ನು ಮಂತ್ರಿಯ ಸ್ಥಾನಮಾನಕ್ಕೆ ಇಳಿಸಲಾಯಿತಲ್ಲದೆ, ಅದು ಸಂಪುಟ ದರ್ಜೆಯದೇ ಅಥವಾ ರಾಜ್ಯ ದರ್ಜೆಯದೇ ಎಂಬುದನ್ನು ನಿರ್ಧರಿಸಲಿಲ್ಲ.ಇದೇ ರೀತಿ ಚರ್ಚುಗಳ ಮೇಲಿನ ದಾಳಿ ಕುರಿತಂತೆ ನೇಮಕಗೊಂಡ ನ್ಯಾಯಮೂರ್ತಿ ಸೋಮಶೇಖರ್ ಆಯೋಗ ತನ್ನ ಮಧ್ಯಂತರ ತೀರ್ಪನ್ನು ನೀಡಿ ಸಂಘ ಪರಿವಾರದ ಸಂಘಟನೆಗಳೇ ದಾಳಿಗೆ ಕಾರಣವೆಂದು ಮೇಲ್ನೋಟಕ್ಕೆ ತಿಳಿದು ಬಂದಿರುವುದನ್ನು ಪ್ರಕಟಿಸಿದ ನಂತರ ನ್ಯಾಯಮೂರ್ತಿ ಸೋಮಶೇಖರ್ ಅವರ ಮೇಲೂ ಟೀಕಾ ಪ್ರಹಾರ ನಡೆಸಲಾಯಿತು. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರಿಗೆ ಕಚೇರಿ ನೀಡದೆ, ಪೀಠೋಪಕರಣ ಒದಗಿಸದೆ ಕಾಡಿದ್ದು ಜಗಜ್ಜಾಹೀರಾಗಿದೆ.ಇದರ ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಅತೀ ಕಡಿಮೆ ಗೌರವ ಧನವನ್ನು ನಿಗದಿಗೊಳಿಸಿ ಅವಮಾನ ಮಾಡಲಾಗಿದೆ.  ಅಲ್ಪಸಂಖ್ಯಾತ ವರ್ಗಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ಸರ್ಕಾರ ಕಾಲ್ಚೆಂಡಿನಂತೆ ಬಳಸಲಾಗುತ್ತಿದೆ. ಸಂವಿಧಾನದತ್ತ ಕಾರ್ಯವ್ಯಾಪ್ತಿಯುಳ್ಳ ಸಂಸ್ಥೆಗಳನ್ನು  ಬಿಜೆಪಿ ಸರ್ಕಾರ ಯಾವ ರೀತಿಯಲ್ಲಿ ‘ಗೌರವಿಸುತ್ತಿದೆ’ ಎಂಬುದಕ್ಕೆ ಇವೆಲ್ಲ ಉದಾಹರಣೆಗಳು. ಇನ್ನು ಈ ಸರ್ಕಾರ ವಿರೋಧ ಪಕ್ಷಗಳನ್ನು ಹಾಗೂ ವಿರೋಧಪಕ್ಷದ ನಾಯಕರನ್ನು ನಡೆಸಿಕೊಳ್ಳುತ್ತಿರುವ ರೀತಿ ಕೂಡಾ ಸಾಂವಿಧಾನಿಕ ಆಶಯಗಳ ನಿರಾಕರಣೆಯ ಕಾರ್ಯಸೂಚಿಯ ಭಾಗವೇ ಆಗಿರುವಂತಿದೆ.

ಡಾ. ಸಿ. ಎಸ್.ದ್ವಾರಕಾನಾಥ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.