ಶನಿವಾರ, ಜೂನ್ 19, 2021
27 °C

ಸಕಲ ಸೌಕರ್ಯದ ಐಷಾರಾಮಿ ಪ್ರಚಾರ ವಾಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಮೊದಲೆಲ್ಲ ರಾಜಕಾರಣಿಗಳು ತೆರೆದ ವಾಹನಗಳಲ್ಲಿ ಚುನಾವಣಾ ಪ್ರಚಾರ ಅಭಿಯಾನ ಕೈಗೊಳ್ಳುತ್ತಿದ್ದರು. ಇಂದಿನ ರಾಜಕಾರಣಿಗಳು ಈ ವಿಚಾರದಲ್ಲಿ ಸಂಪೂರ್ಣ ಭಿನ್ನವಾ­ಗಿದ್ದಾರೆ.ತಂತ್ರಜ್ಞಾನ ಬದಲಾದಂತೆ ರಾಜಕಾರಣಿಗಳ ಪ್ರಚಾರ ವೈಖರಿಯೂ ಬದಲಾಗಿದೆ. ಇದಕ್ಕೆ ತಮಿಳುನಾಡಿನಲ್ಲಿ ಸಾಕಷ್ಟು ತಾಜಾ ಉದಾಹರಣೆ ಸಿಗುತ್ತವೆ. ಅತ್ಯಾಧುನಿಕ, ಸುಸಜ್ಜಿತ ವಾಹನ­ಗಳಲ್ಲಿ ಇಲ್ಲಿನ ರಾಜಕಾರಣಿಗಳು ಪ್ರಚಾರ ಕೈಗೊಳ್ಳಲು ಉತ್ಸುಕರಾ­ಗಿದ್ದಾರೆ. ಎಲ್ಲ  ರೀತಿಯ ಗ್ಯಾಜೆಟ್‌, ಅಂತರ್ಜಾಲ ಸಂಪರ್ಕ ಇರುವ ಲ್ಯಾಪ್‌­ಟಾಪ್‌,  ಟೆಲಿವಿಷನ್ (ಡಿಟಿಎಚ್) ಮತ್ತಿತರ  ಸೌಲಭ್ಯಗಳು ಇವರ ಪ್ರಚಾರ ವಾಹನದಲ್ಲಿರುತ್ತವೆ.  ಈ ವಾಹನಗಳು ಸಂಚಾರಿ ಐಷಾರಾಮಿ ಹೋಟೆಲ್‌ನಂತೆ ಇರುತ್ತವೆ.ಚುನಾವಣಾ ಪ್ರಚಾರದ ಅಗತ್ಯಗಳಿಗೆ ತಕ್ಕಂತೆ ವಾಹನಗಳನ್ನು ಪರಿವರ್ತಿಸಲು ಹೆಸರಾದ ಚೆನ್ನೈ ಮತ್ತು ಕೊಯಿಮತ್ತೂ­ರುಗಳಲ್ಲಿ ಈ ರೀತಿಯ ವಿಶೇಷ ವಾಹನ­ಗಳ ನಿರ್ಮಾಣ ಜೋರಾಗಿ ಸಾಗಿದೆ.  ವಿವಿಧ ರಾಜಕಿಯ ಪಕ್ಷಗಳಿಂದ ಸಾಕಷ್ಟು ಬೇಡಿಕೆಯೂ ಬರುತ್ತಿದೆ.

ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಗಾಲಿ ಕುರ್ಚಿಯಲ್ಲಿ ಕುಳಿತೇ ಪ್ರಚಾರ  ನಡೆಸಲು ಬಯಸಿದ್ದಾರೆ. ಅದಕ್ಕಾಗಿ ಅತ್ಯಾಧುನಿಕ ತಂತ್ರ­ಜ್ಞಾನದ ವಿಶೇಷ ವಾಹನ ಜರ್ಮನಿಯಿಂದ ತರಿಸಿಕೊಳ್ಳಲಾಗಿದೆ.ಮುಖ್ಯಮಂತ್ರಿ ಜಯಲಲಿತಾ ಬಳಸುವ ವಾಹನ­ದಲ್ಲಿ ಉಡುಪು ಬದಲಾಯಿಸಲು ಪ್ರತ್ಯೇಕ ಕೋಣೆ, ಚಿಕ್ಕ ಸೋಫಾ, ಆರಾಮ ಕುರ್ಚಿ, ಮಲಗುವ ಕೋಣೆ ಹಾಗೂ ಶೌಚಾಲಯಗಳೆಲ್ಲವೂ ಇರಲಿವೆ.‘ಗ್ರಾಹಕರ ಅಭಿರುಚಿ, ಅವಶ್ಯಕತೆಗೆ ತಕ್ಕಂತೆ ಐಷಾರಾಮಿ ವಾಹನ ಪರಿವರ್ತಿಸಲಾಗುತ್ತದೆ. ಇದಕ್ಕೆ 20–30 ದಿನಗಳು ಬೇಕಾಗುತ್ತವೆ’ ಎಂದು ಕೊಯಿ­ಮತ್ತೂರಿನ ಕೋಯಾಸ್‌ ಅಂಡ್‌ ಸನ್ಸ್‌ ಪರಿವರ್ತನಾ ಡಿಪೋದ ಪಿ.ವಿ.ಮಹಮ್ಮದ್‌ ಅವರು ಹೇಳುತ್ತಾರೆ.‘ಈ ವಾಹನಗಳ ಪರಿವರ್ತನೆಗೆ ರೂ ಎರಡು ಲಕ್ಷದಿಂದ ರೂ 20 ಲಕ್ಷಗಳ ವರೆಗೂ ವೆಚ್ಚ ತಗುಲುತ್ತದೆ’ ಎಂದು ಪುದುಪೆಟ್‌ನಲ್ಲಿರುವ ಕೆ.ಎಸ್‌.ಪಿ.ಮೋಟಾರ್ಸ್‌ನ ಮೆಕ್ಯಾನಿಕ್‌ ಎಂ.ಶೇಖರ್‌ ಹೇಳುತ್ತಾರೆ.ಈ ರೀತಿ ಪರಿವರ್ತಿಸಿದ ವಾಹನಗಳಲ್ಲಿ ಪ್ರಚಾರಕರು ಆಹಾರ ಸೇವನೆ, ವಿಶ್ರಾಂತಿ ಹಾಗೂ ಮುಂದಿನ ಪ್ರಚಾರಕ್ಕೆ ಸಿದ್ಧತೆ ನಡೆಸಿಕೊಳ್ಳುವ ಎಲ್ಲ ಅವಕಾಶಗಳು ಇರುತ್ತವೆ.ಕರುಣಾನಿಧಿ ಅವರ ಪುತ್ರ ಸ್ಟಾಲಿನ್‌ ಕೂಡ ಐಷಾರಾಮಿ ವಾಹನದ ಮೋಹಕ್ಕೆ ಸಿಲುಕಿದ್ದಾರೆ. ಮಾರ್ಚ್‌ 14ರಿಂದ ಅವರು ಇಂತಹುದೇ ವಾಹನದಲ್ಲಿ ಕನ್ಯಾಕುಮಾರಿಯಿಂದ ಪ್ರಚಾರ  ಆರಂಭಿಸಲಿದ್ದಾರೆ.‘ಈ ವಾಹನಗಳು ಹವಾ ನಿಯಂತ್ರಿತ­ವಾಗಿರಲಿದ್ದು, ಯಾಂತ್ರೀಕೃತ ಮೇಜು–ಕುರ್ಚಿಗಳೂ ಇರಲಿವೆ. ವಾಹನದ ಮೇಲ್ಛಾವಣಿ­ಯನ್ನು ತೆರೆದು ಕುರ್ಚಿಯ ಸಹಾಯ­ದಿಂದ ವಾಹನದ ಮೇಲ್ಭಾಗಕ್ಕೆ ಬಂದು ಪ್ರಚಾರ ಕೈಗೊಳ್ಳಲೂ ಸಾಧ್ಯ’ ಎಂದು ಪುದುಪೆಟ್‌ನಲ್ಲಿರುವ ಕೆ.ಎಸ್‌.ಪಿ.ಮೋಟಾರ್ಸ್‌ನ ಮೆಕ್ಯಾನಿಕ್‌ ಎಂ.ಶೇಖರ್‌ ವಿವರಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.