ಗುರುವಾರ , ಏಪ್ರಿಲ್ 22, 2021
30 °C

ಸಕಾಲಕ್ಕೆ ಕೈಸೇರದ ಹೊತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪಠ್ಯಪುಸ್ತಕ ಸಂಘದ ನಡುವಿನ ಸಂವಹನದ ಕೊರತೆಯಿಂದ ರಾಜ್ಯದ ವಿವಿಧೆಡೆ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸಮಯಕ್ಕೆ ಸರಿಯಾಗಿ ಪಠ್ಯಪುಸ್ತಕ ಪೂರೈಕೆಯಾಗದೇ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುವಂತಾಗಿದೆ.ಸಾಮಾನ್ಯವಾಗಿ ಪ್ರತಿವರ್ಷ ಆಯಾ ಜಿಲ್ಲೆಗಳ ಬೇಡಿಕೆ (ಡೈಸ್)ಪಟ್ಟಿಯಂತೆ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿಗೆ ಪಠ್ಯಪುಸ್ತಕ ವಿತರಣೆ ನಡೆಯುತ್ತದೆ. ಈ ರೀತಿ ಬೇಡಿಕೆ ಪಟ್ಟಿ ಸಲ್ಲಿಸುವಾಗ ಶೇಕಡ 5ರಿಂದ 10ರಷ್ಟು ಹೆಚ್ಚಿನ ಬೇಡಿಕೆಯನ್ನು ಸಲ್ಲಿಸಲಾಗಿರುತ್ತದೆ. ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರುಪೇರಾಗುವುದರಿಂದ ತುಸು ಹೆಚ್ಚಿನ ಬೇಡಿಕೆಯನ್ನೇ ಸಲ್ಲಿಸಲಾಗಿರುತ್ತದೆ. ಆದರೆ, ಪ್ರಸ್ತಕ ಶೈಕ್ಷಣಿಕ ವರ್ಷದಲ್ಲಿ ಪಠ್ಯಪುಸ್ತಕ ಸಂಘದ ನಿಯಮಾವಳಿ ಪ್ರಕಾರ, ಹೆಚ್ಚಿನ ಬೇಡಿಕೆ ಸಲ್ಲಿಸದೇ, ಹಿಂದಿನ ವರ್ಷದ ವಿದ್ಯಾರ್ಥಿಗಳ ಸಂಖ್ಯೆ ಆಧಾರದಲ್ಲೇ ಡೈಸ್‌ಪಟ್ಟಿ ಕಳುಹಿಸಿ ಎಂದು ನಿರ್ದೇಶಿಸಿದೆ. ಹಾಗಾಗಿ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ ಆರಂಭಗೊಂಡ ಸರ್ಕಾರಿ ಅನುದಾನಿತ ಶಾಲೆಗಳ ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವ ಸರ್ಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕದ ಕೊರತೆ ಉಂಟಾಗಿದೆ.`ಶಿಕ್ಷಣ ಇಲಾಖೆಯಿಂದ ಪಠ್ಯಪುಸ್ತಕ ಸಂಘಕ್ಕೆ ಬೇಡಿಕೆ ಪಟ್ಟಿ ಸಲ್ಲಿಸುವಾಗ ಹಿಂದಿನಂತೆ ಶೇಕಡಾ 5ರಿಂದ 10ರಷ್ಟು ಹೆಚ್ಚಿನ ಬೇಡಿಕೆ ಕಳುಹಿಸಿದ್ದರೆ ಪಠ್ಯಪುಸ್ತಕ ಕೊರತೆ ಉಂಟಾಗುತ್ತಿರಲಿಲ್ಲ. ಆದರೆ, ಪಠ್ಯಪುಸ್ತಕ ಸಂಘ ಹೆಚ್ಚು ಪುಸ್ತಕ ಮುದ್ರಿಸಿದರೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತದೆ ಎಂದು ಸಬೂಬು ನೀಡಿ, ಹಿಂದಿನ ವರ್ಷದ ವಿದ್ಯಾರ್ಥಿಗಳ ಸಂಖ್ಯೆಯನ್ನಷ್ಟೇ ಪರಿಗಣಿಸಿ ಪಠ್ಯಪುಸ್ತಕ ವಿತರಿಸುತ್ತಿದೆ~ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರು.`ವಿಶೇಷವಾಗಿ 5, 6 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಕೊರತೆ ಉಂಟಾಗಿದೆ. ಆಂಗ್ಲ ಮಾಧ್ಯಮದ 6ನೇ ತರಗತಿಯ ಕೋರ್ ವಿಷಯಗಳ ಪಠ್ಯಪುಸ್ತಕಗಳಿಗೆ ಕೊರತೆ ಆಗಿದೆ. ಸಾಮಾನ್ಯವಾಗಿ `ಡೈಸ್~ ಅಕ್ಟೋಬರ್‌ನಲ್ಲೇ ಕಳುಹಿಸುತ್ತೇವೆ. ಆದರೆ, 6ನೇ ತರಗತಿ ಆಂಗ್ಲಮಾಧ್ಯಮ ಪ್ರಸ್ತಕ ಶೈಕ್ಷಣಿಕ ಸಾಲಿನಲ್ಲಿ ಆರಂಭಗೊಂಡಿವೆ. ಹಾಗಾಗಿ `ಡೈಸ್~ ಕಳುಹಿಸಲಾಗಿಲ್ಲ. ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕೊಂದರಲ್ಲೇ ಒಟ್ಟು 11,295 ಪಠ್ಯಪುಸ್ತಕಗಳ ಕೊರತೆ ಉಂಟಾಗಿದೆ. ಅಲ್ಲದೇ, ಈ ಬಾರಿ 5 ಮತ್ತು 8ನೇ ತರಗತಿಗೆ ಹೊಸ ಪಠ್ಯಕ್ರಮ ಅಳವಡಿಸಲಾಗಿದೆ. ಇದೂ ಕೂಡಾ ಸಮಸ್ಯೆಗೆ ಕಾರಣ. ದಾವಣಗೆರೆಯಷ್ಟೇ ಅಲ್ಲ ರಾಜ್ಯದ ಇತರ ಭಾಗಗಳಲ್ಲೂ ಪಠ್ಯಪುಸ್ತಕಗಳ ಇದೆ. ಅನುದಾನರಹಿತ ಶಾಲೆಗಳು ಖರೀದಿಸದೇ ಉಳಿದಿರುವ ಪಠ್ಯಪುಸ್ತಕಗಳು ಗೋದಾಮುಗಳಲ್ಲಿವೆ. ಇದನ್ನೇ ವಿದ್ಯಾರ್ಥಿಗಳಿಗೆ ವಿತರಿಸಬಹುದಾಗಿತ್ತು~ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.

ಏನಂತಾರೆ ಡಿಡಿಪಿಐ?: ದಾವಣಗೆರೆ ಜಿಲ್ಲೆಯ ಕೆಲವೆಡೆ ಪಠ್ಯಪುಸ್ತಕ ಕೊರತೆ ಇರುವುದು ನಿಜ. ಈ ಕುರಿತು ಪಠ್ಯಪುಸ್ತಕ ಸಂಘಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಬಾರದು ಎಂದು ಸಂಘದಿಂದ ಮೌಖಿಕ ಅನುಮತಿ ಪಡೆದು, ಅನುದಾನರಹಿತ ಶಾಲೆಗಳು ಖರೀದಿಸದೇ ಉಳಿದಿರುವ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಡಿಪಿಐ ಬಿ.ಎ. ರಾಜಶೇಖರ ಸ್ಪಷ್ಟನೆ ನೀಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.