ಬುಧವಾರ, ಮೇ 12, 2021
24 °C

ಸಚಿವರೇ ಕುಂಭಕರ್ಣ ನಿದ್ದೆ ಬಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಷ್ಮೇಶ್ವರ: ಈ ಬಾರಿ ರಾಜ್ಯದ 123 ತಾಲ್ಲೂಕುಗಳಲ್ಲಿ ಭೀಕರ ಬರಗಾಲ ಎದುರಾಗಿದ್ದು ಇದರಿಂದ ಜನತೆಯನ್ನು ಪಾರು ಮಾಡುವ ಸಲುವಾಗಿ ಸಚಿವರು, ಶಾಸಕರು ಕುಂಭಕರ್ಣ ನಿದ್ದೆಯಿಂದ ಹೊರಬಂದು ಜನತೆಯ ಸಮಸ್ಯೆ ಪರಿ ಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡ ಬೇಕು~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.ಶಿರಹಟ್ಟಿ ತಾಲ್ಲೂಕಿನ ಮಜ್ಜೂರು ಗ್ರಾಮದ ಕೆರೆ ಬಯಲಿನಲ್ಲಿ ನಿರ್ಮಿಸಿ ರುವ ಗೋಶಾಲೆಗೆ ಬುಧವಾರ ಭೇಟಿ ನೀಡಿದ ಅವರು ಸಾರ್ವಜನಿಕರನ್ನು ಉದ್ಧೇಶಿಸಿ ಮಾತನಾಡಿದರು.ಬರಗಾಲವನ್ನು ಯುದ್ಧದೋಪಾದಿ ಯಲ್ಲಿ ಎದುರಿಸಲು ಸರ್ಕಾರ ಮುಂದಾ ಗಿದ್ದು ಇದಕ್ಕೆ ಹಣಕಾಸಿನ ತೊಂದರೆ ಇಲ್ಲ. ಸಂಸದರು ಬರಗಾಲ ನಿರ್ವಹಣೆ ಗಾಗಿ 2,600 ಕೋಟಿ ರೂಪಾಯಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೊದಲಿನ ಕಂತಾಗಿ 500 ಕೋಟಿ ರೂಪಾಯಿ ನೀಡಬೇಕು~ ಎಂದು ಮನವಿ ಮಾಡಿದರು.

 

`ಅಧಿಕಾರಕ್ಕೆ ಅಂಟಿಕೊಂಡ ವ್ಯಕ್ತಿ ನಾನಲ್ಲ. ನನಗೆ ಜನರ ಸೇವೆ ಮುಖ್ಯ. ಅಧಿಕಾರ ಇಲ್ಲದಿದ್ದರೂ ಅವರ ಮನೆ ಬಾಗಿಲಿಗೆ ಬಂದು ಅವರ ಸಮಸ್ಯೆಗಳನ್ನು ಆಲಿಸಿ ಅವುಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡುತ್ತೇನೆ. ದೇಶಕ್ಕೆ ಅನ್ನ ನೀಡುವ ರೈತ ಬರಗಾಲಕ್ಕೆ ಹೆದರಬಾರದು. ಅವರ ಬೆನ್ನ ಹಿಂದೆ ಸರ್ಕಾರ ಇದೆ. ನಾನು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದವನು. ಅವರನ್ನು ಸರ್ಕಾರ ಕೈ ಬಿಡುವುದಿಲ್ಲ.

 

ಹಿಂದೆ ನೆರೆ ಪರಿಸ್ಥಿತಿ ಬಂದಾಗಲೂ ಅದನ್ನು ಸಮರ್ಪಕವಾಗಿ ನಿರ್ವಹಿಸಿದ್ದನ್ನು ರಾಜ್ಯದ ಜನತೆ ಮರೆತಿಲ್ಲ. ಆ ಸಮಯದಲ್ಲಿ 260 ಗ್ರಾಮಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಿ 70 ಸಾವಿರ ಮನೆಗಳನ್ನು ನಿರ್ಮಿಸಿ ನೆರೆ ಸಂತ್ರಸ್ಥರಿಗೆ ವಿತರಿಸಲಾ ಗಿದೆ. ಈಗಲೂ ಸಹ ರಾಜ್ಯ ಸರ್ಕಾರ ಬರಗಾಲವನ್ನು ಸಮರ್ಪಕವಾಗಿ ಎದುರಿಸಲು ಸಿದ್ಧ ಇದ್ದು ಶಾಸಕರು, ಅಧಿಕಾರಿಗಳು ಜನತೆಯ ಸಂಕಷ್ಟ ಪರಿಹರಿಸಲು ಸರ್ಕಾರದೊಂದಿಗೆ ಕೈ ಜೋಡಿಸಬೇಕು~ ಎಂದು ಅವರು ತಿಳಿಸಿದರು.`ಬಿಜೆಪಿ ಸರ್ಕಾರ ರೈತರಿಗೆ ಶೆ.1ರ ದರದಲ್ಲಿ ಸಾಲ ನೀಡಿದೆ. ಅಲ್ಲದೆ 18-19 ಲಕ್ಷ ರೈತರ ಬೋರ್‌ವೆಲ್‌ಗಳಿಗೆ ಉಚಿತ ವಿದ್ಯುತ್ ಒದಗಿಸುವುದರ ಜೊತೆಗೆ ಅವರಿಗೆ ಸಬ್ಸಿಡಿಯಲ್ಲಿ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ನೀಡಿದ್ದನ್ನು ಯಾರೂ ಮರೆಯಬಾರದು. ಕೇವಲ ವಿಧಾನಸೌಧದಲ್ಲಿ ಕುಳಿತು ಸರ್ಕಾರವನ್ನು ಟೀಕಿಸುವ ವಿರೋಧ ಪಕ್ಷದ ನಾಯಕರು ರಾಜ್ಯದ ತುಂಬೆಲ್ಲ ಪ್ರವಾಸ ಕೈಗೊಳ್ಳಲಿ. ಅಂದಾಗ ಅವರಿಗೆ ಸರ್ಕಾರ ಏನು ಮಾಡಿದೆ ಎಂಬುದು ಗೊತ್ತಾಗುತ್ತದೆ~ ಎಂದು ಕುಟುಕಿದರು.

 

ಮಜ್ಜೂರಿನಲ್ಲಿ ಇರುವುದು ಉತ್ತಮ ಗೋಶಾಲೆ ಎಂದು ಬಣ್ಣಿಸಿದ ಅವರು ಇದನ್ನು ಸರಿಯಾಗಿ ನಿರ್ವಹಣೆ ಮಾಡಲು ಶ್ರಮಸುತ್ತಿರುವ ಶಾಸಕ ರಾಮಣ್ಣ ಲಮಾಣಿ ಹಾಗೂ ಅಧಿಕಾರಿ ಗಳಿಗೆ ಅಭಿನಂದನೆ   ತಿಳಿಸಿದರು. ಮಾಜಿ ಸಚಿವ ಸಿ.ಸಿ. ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದರು.ಶಾಸಕರಾದ ರಾಮಣ್ಣ ಲಮಾಣಿ, ಶ್ರೀಶೈಲಪ್ಪ ಬಿದರೂರ, ಸಂಸದ           ಶಿವಕುಮಾರ ಉದಾಸಿ, ವಿಧಾನ ಪರಿಷತ್ ಶಿವರಾಜ ಸಜ್ಜನ, ತಾಲ್ಲೂಕು        ಬಿಜೆಪಿ ಘಟಕದ ಅಧ್ಯಕ್ಷ ಕರಬಸಪ್ಪ ಹಂಚಿ ನಾಳ, ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ, ರಾಮಣ್ಣ ಡಂಬಳ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವನಗೌಡ ಕಂಠಿಗೌಡ್ರ, ಚಂದ್ರಶೇಖರ ಲಮಾಣಿ ಮತ್ತಿತರರು ಹಾಜರಿದ್ದರು.ಮಳೆ ಗಾಳಿಗೆ    ಪರದಾಡಿದ ಜನತೆ

ಲಕ್ಷ್ಮೇಶ್ವರ: ಶಿರಹಟ್ಟಿ ತಾಲ್ಲೂಕಿನ ಮಜ್ಜೂರು ಗೋಶಾಲೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬುಧವಾರ ಸಂಜೆ 4ಕ್ಕೆ ಭೇಟಿ ನೀಡುತ್ತಾರೆ ಎಂದು ತಿಳಿಸಲಾಗಿತ್ತು. ಅಷ್ಟೊತ್ತಿಗಾಗಲೇ ನೂರಾರು ಜನರು ಗೋಶಾಲೆ ಬಯಲಿನಲ್ಲಿ ಸೇರಿದ್ದರು. ಆದರೆ ಸರಿಯಾದ ಸಮಯಕ್ಕೆ ಬಿಎಸ್‌ವೈ ಬರಲಿಲ್ಲ. ಅವರಿಗಾಗಿ ಜನರು, ಕಾರ್ಯಕರ್ತರು, ಪತ್ರಕರ್ತರು, ಅಧಿ ಕಾರಿಗಳು ಕಾದು ಕಾದು ಸುಸ್ತಾಗಿ ಹೋದರು. ಕೊನೆಗೂ ಅವರು ಗೋ ಶಾಲೆಗೆ ಬಂದಾಗ ಸಂಜೆ ಏಳು ಹೊಡೆ ದಿತ್ತು. ಬರೋಬ್ಬರಿ ಮೂರು ತಾಸು ತಡವಾಗಿ ಅವರು ಬಂದರು.ಆದರೆ ಈ ನಡುವೆ ಭೀಕರ ಮಳೆಗಾಳಿ ಬೀಸಿ ಸೇರಿದ್ದ ಜನತೆ ಗಾಬರಿ ಬೀಳುವಂತೆ ಮಾಡಿತು. ಗಾಳಿಯ ರಭಸಕ್ಕೆ ವೇದಿಕೆಯ ಹಿಂದಿನ ಪರದೆ ಹಾರಿ ಕೆಳಗೆ ಬಿತ್ತು. ಆಸನದಲ್ಲಿ ಕುಳಿತಿದ್ದ ಜನರು ಗಾಳಿ ವೇಗ ಹೆಚ್ಚಾಗಿದ್ದನ್ನು ಗಮನಿಸಿ ವೇದಿಕೆಯಿಂದ ಹೊರಗೆ ಓಡಿ ಬಂದರು.ಮೂರು ತಾಸು ತಡವಾಗಿ ಬಂದರೂ ಯಡಿಯೂರಪ್ಪನವರಿಗೆ ಅದ್ದೂರಿ ಸ್ವಾಗತ ದೊರೆಯಿತು. ಐದು ನಿಮಿಷ ದಲ್ಲಿ ಗೋಶಾಲೆ ಪರಿಶೀಲಿಸಿದ ಅವರು ವೇದಿಕೆ ಏರಿ ಹದಿನೈದು ನಿಮಿಷದಲ್ಲಿ ಭಾಷಣ ಮುಗಿಸಿ ನಿರ್ಗಮಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.