ಮಂಗಳವಾರ, ಆಗಸ್ಟ್ 11, 2020
27 °C

ಸಚಿವ, ಅಧಿಕಾರಿಗಳಿಗೆ ಬರದ ಛಾಯೆಯ ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಚಿವ, ಅಧಿಕಾರಿಗಳಿಗೆ ಬರದ ಛಾಯೆಯ ದರ್ಶನ

ಮೈಸೂರು: ಜಿಲ್ಲೆಯಲ್ಲಿ ಬರ ತಾಂಡವವಾಡುತ್ತಿದೆ. ಮುಂಗಾರು ಕೈ ಕೊಟ್ಟಿರುವುದರಿಂದ ಹಾಕಿದ ಬೆಳೆಗಳು ಒಣಗಿ ನಿಂತಿವೆ. ರೈತರ ಮೊಗದಲ್ಲಿ ಕಾರ್ಮೋಡ ಕವಿದಿದೆ. ಮಳೆ ಬಾರದ ಹಿನ್ನೆಲೆಯಲ್ಲಿ ರೈತರು ಹೊಲದತ್ತ ಮುಖ ಮಾಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ    ಎಸ್.ಎ.ರಾಮದಾಸ್ ಮತ್ತು ಅಧಿಕಾರಿಗಳ ತಂಡ ಶನಿವಾರ ಹುಣಸೂರು ತಾಲ್ಲೂಕಿನ ಕೆಲ ಗ್ರಾಮಗಳಿಗೆ ಭೇಟಿ ನೀಡಿದಾಗ ಬರದ ಛಾಯೆಯ ದರ್ಶನವಾಯಿತು.ರೈತರ ಹೊಲಗಳಿಗೆ ಸಚಿವರು, ಅಧಿಕಾರಿಗಳು ಭೇಟಿ ನೀಡಿದಾಗ ಬೆಳೆ ಸಿಗದೆ ಕಂಗಾಲಾದ ರೈತರು ತಮ್ಮ ಅಳಲು ತೋಡಿಕೊಂಡರು. ಒಣಗಿ ನಿಂತ ಬೆಳೆಯತ್ತ ಬೊಟ್ಟು ಮಾಡಿ ತೋರಿಸಿದರು. ಅಧಿಕಾರಿಗಳೊಂದಿಗೆ ಬೆಳೆ ಪರಿಶೀಲನೆ ಮಾಡಿದ ರಾಮದಾಸ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆಯ ನುಡಿಗಳನ್ನಾಡುತ್ತಾ ರೈತರನ್ನು ಸಂತೈಸಿದರು.ಹುಣಸೂರು ತಾಲ್ಲೂಕಿನ ಹುಲ್ಲೇನಹಳ್ಳಿಗೆ ಸಚಿವರು ಮೊದಲು ಭೇಟಿ ನೀಡಿದಾಗ ಜೋಳದ ಬೆಳೆ ಒಣಗಿ ನಿಂತಿತ್ತು. ಜೋಳದ ತೆನೆಯೊಂದನ್ನು ಕೈಗೆತ್ತಿಕೊಂಡ ಸಚಿವರು ಕೃಷಿ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡರು. ನಂತರ ಸಚಿವರ ಪಯಣ ಬಿಳಿಕೆರೆಯತ್ತ ಹೊರಟಿತು.ಸುಮಾರು 13 ಎಕರೆ ವ್ಯಾಪ್ತಿಯ ಬಿಳಿಕೆರೆ 76 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಹಿಂದೆ ನೀರು ಒದಗಿಸುತ್ತಿತ್ತು. ಆದರೆ ಕೆರೆ 13 ವರ್ಷಗಳಿಂದ ಬತ್ತಿದೆ. ಲಕ್ಷ್ಮಣತೀರ್ಥ ನದಿಯಿಂದ ನೀರು ಹರಿಸಲು ಉದ್ದೇಶಿಸಿರುವ ಏತ ನೀರಾವರಿ ಯೋಜನೆ ನೆನೆಗುದಿಗೆ ಬಿದಿದ್ದೆ. ಅಲ್ಲದೆ ಕೆರೆ ಅಂಗಳಕ್ಕೆ ತ್ಯಾಜ್ಯ ನೀರನ್ನು ಬಿಡಲಾಗುತ್ತಿದೆ. ಗ್ರಾಮಸ್ಥರು ಕೆರೆ ಅಂಗಳವನ್ನು ಶೌಚಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಕೆರೆಗೆ ಕಾಯಕಲ್ಪ ಒದಗಿಸುವ ನಿಟ್ಟಿನಲ್ಲಿ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿದರು.ಒಣಗಿದ ನೆಲಗಡಲೆ: ಹುಣಸೂರು ತಾಲ್ಲೂಕಿನ ಯಲಚವಾಡಿ ಗೇಟ್ ಮುಖ್ಯರಸ್ತೆ ಬದಿಯಲ್ಲಿದ್ದ ಹೊಲದಲ್ಲಿ ಒಣಗಿದ್ದ ನೆಲಗಡಲೆಯನ್ನು ಕಂಡು ಸಚಿವರ ಕಾರು ನಿಂತಿತು. ಹೊಲದಲ್ಲಿದ್ದ ರೈತ ಮಹಿಳೆ ರಾಜಮ್ಮ ಅವರ ಕಷ್ಟವನ್ನು ಸಚಿವರು ವಿಚಾರಿಸಿದರು. `ರೂ.22 ಸಾವಿರ ಖರ್ಚು ಮಾಡಿ 3 ಎಕರೆ ಪ್ರದೇಶದಲ್ಲಿ ಅಲಸಂದೆ, ಕಡಲೆ ಹಾಕಿದ್ದೆವು.

ಆದ್ರೆ ಮಳೆ ಬರದೆ ಬೆಳೆ ಒಣಗೈತೆ. ನಮ್ಮ ಕಷ್ಟ ಕೇಳೋರೆ ಇಲ್ಲ. ಸರ್ಕಾರದಿಂದ ಸಹಾಯ ಮಾಡ್ಬೇಕು~ ಎಂದು ಅವಲತ್ತುಕೊಂಡರು. ಮುಂದಿನ ಗ್ರಾಮ ಚಲ್ಲಹಳ್ಳಿಯಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ರೈತರು ಸಚಿವರು ಮತ್ತು ಅಧಿಕಾರಿಗಳೆದುರು ತಮ್ಮ ಕಷ್ಟ ತೋಡಿಕೊಂಡರು.ಸಮಸ್ಯೆಗಳ ಬಿಚ್ಚಿಟ್ಟ ಗ್ರಾಮಸ್ಥರು: ಚಲ್ಲಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ರೈತರು ಮತ್ತು ಗ್ರಾಮಸ್ಥರು ಸಚಿವರು ಮತ್ತು ಅಧಿಕಾರಿಗಳ ತಂಡ ಬರುವುದನ್ನೇ ಎದುರು ನೋಡುತ್ತಿದ್ದರು. ಚಿಕ್ಕದಾಗಿ ಏರ್ಪಡಿಸಿದ್ದ ಸಭೆಯಲ್ಲಿ ಗ್ರಾಮಸ್ಥರು ದೂರುಗಳ ಸುರಿಮಳೆಗರೆದರು. ಚಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಹಾಹಾಕಾರ ಸಾಕಷ್ಟಿದೆ. ಮೂರು ದಿನಕ್ಕೆ 4 ಬಿಂದಿಗೆ ನೀರು ಸಿಕ್ಕರೆ ನಮ್ಮ ಪುಣ್ಯ. ಗ್ರಾಮದಲ್ಲಿ ಒಟ್ಟು 10 ಬೋರ್‌ವೆಲ್‌ಗಳು ಇದ್ದು, ನಾಲ್ಕು ಮಾತ್ರ ಕೆಲಸ ಮಾಡುತ್ತಿವೆ. ಒಂದು ಬೋರ್‌ನ್ನು ಟ್ಯಾಂಕ್‌ಗೆ ಸಂಪರ್ಕ ಕಲ್ಪಿಸಲಾಗಿದೆ. ಅಲ್ಲದೆ ಟ್ಯಾಂಕ್ ಸಹ ಸೋರುತ್ತಿದೆ. ದನಗಳಿಗೆ ಕುಡಿಯುವ ನೀರಿಲ್ಲ. ಕೆರೆ ಹೂಳೆತ್ತಿಲ್ಲ. 9 ಹಳ್ಳಿಗಳ ಕೆರೆ ಹೂಳೆತ್ತಲು ಗ್ರಾಮ ಪಂಚಾಯಿತಿಯಲ್ಲಿ ಇರುವ ಹಣ ಸಾಲುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಬೇಕು ಎಂದು ಒತ್ತಾಯಿಸಿದರು.ಚಲ್ಲಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಯ ಕೊರತೆ ಇದೆ. ಹೆಚ್ಚುವರಿ ಕೊಠಡಿಗಳ ಅಗತ್ಯವಿದೆ. ಶಿಕ್ಷಕರು ಸರಿಯಾಗಿ ಬರುತ್ತಿಲ್ಲ. ಮಕ್ಕಳಿಗೆ ಶಿಕ್ಷಣ ದೊರಕುತ್ತಿಲ್ಲ. ಇದರಿಂದ ಪಟ್ಟಣದ ಕಾನ್ವೆಂಟ್ ಮೊರೆ ಹೋಗುತ್ತಿದ್ದಾರೆ ಎಂದು ದೂರಿದರು. ಗ್ರಾಮಸ್ಥರ ದೂರನ್ನು ಆಲಿಸಿದ ಸಚಿವರು ಮಾತನಾಡಿ, `ಗ್ರಾಮದಲ್ಲಿರುವ ನೀರಿನ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲಾಗುವುದು. ಕೆರೆಗಳ ಹೂಳೆತ್ತಲು ಕ್ರಿಯಾ ಯೋಜನೆ ರೂಪಿಸಲಾಗುವುದು. ಶಾಲಾ ಕೊಠಡಿಗಳ ಕೊರತೆ ನೀಗಿಸಲು ಹೆಚ್ಚುವರಿ ಎರಡು ಕೊಠಡಿಗಳನ್ನು ನೀಡಲಾಗುವುದು~ ಎಂದು ತಿಳಿಸಿದರು.ಹುಣಸೂರು ಶಾಸಕ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್,    ಉಪ ವಿಭಾಗಾಧಿಕಾರಿ ಬಸವರಾಜು, ಜಿಲ್ಲಾ ಪಂಚಾಯಿತಿ ಸದಸ್ಯೆ ಪುಷ್ಪಾವತಿ ಅಮರ್‌ನಾಥ್, ಹುಣಸೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ, ಜಿಲ್ಲಾ     ಕೃಷಿ ಅಧಿಕಾರಿ ಕೆ.ಆರ್.ಕೃಷ್ಣಯ್ಯ ಇತರೆ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.